ಮುಂಬಯಿ : 2016ರಿಂದ ಜಾಗತಿಕ ಮಟ್ಟದಲ್ಲಿ ಕನ್ನಡ ಕವನ ಸ್ಪರ್ಧೆ, ಕಥಾ ಸ್ಪರ್ಧೆ ಹಾಗೂ ಏಕಾಂಕ ನಾಟಕ ರಚನಾ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಖ್ಯಾತಿ ಮುಂಬಯಿ ಮೈಸೂರು ಅಸೋಸಿಯೇಷನ್ನಿನದು. 2023ರಲ್ಲಿ ನಡೆಸಿದ ಏಕಾಂಕ ನಾಟಕ ರಚನಾ ಸ್ಪರ್ಧೆಗೆ 39 ನಾಟಕಗಳು ಬಂದಿದ್ದು, ಅದರಲ್ಲಿ ಬಹುಮಾನ ವಿಜೇತರಿಗೆ ಮೇ 28ರಂದು ಮುಂಬಯಿಯ ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ‘ಬಹುಮಾನ ವಿತರಣಾ ಸಮಾರಂಭ’ ಯಶಸ್ವಿಯಾಗಿ ಸಂಪನ್ನಗೊಂಡಿತು.
ನಾಟಕ ರಚನಾ ಸ್ಪರ್ಧೆಯ ತೀರ್ಪು ಎರಡು ಸುತ್ತಿನಲ್ಲಿ ನಡೆದಿದ್ದು, ಮೊದಲ ಸುತ್ತಿನ ತೀರ್ಪುಗಾರರಾಗಿ ಖ್ಯಾತ ರಂಗ ಕರ್ಮಿ ಶ್ರೀಮತಿ ಅಹಲ್ಯಾ ಬಳ್ಳಾಲ್ ಇವರು ಮೈಸೂರು ಅಸೋಸಿಯೇಷನ್ನಿನ ಕೇಳಿಕೆಯಂತೆ 39 ನಾಟಕಗಳಲ್ಲಿ 10 ನಾಟಕಗಳನ್ನು ಆಯ್ಕೆ ಮಾಡಿದರು. ಎರಡನೆಯ ಸುತ್ತಿನ ತೀರ್ಪುಗಾರರಾಗಿ ಖ್ಯಾತ ಚಲನಚಿತ್ರ ನಟರಾದ ಶ್ರೀ ಶ್ರೀನಿವಾಸ ಪ್ರಭು ಅವರು ಅಸೋಸಿಯೇಷನ್ನಿನ ಕೇಳಿಕೆಯಂತೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ನಾಟಕಗಳನ್ನು ಆಯ್ಕೆ ಮಾಡಿರುತ್ತಾರೆ. ಅದರಂತೆ ಡಾ. ಶ್ರೀ ಬೇಲೂರು ರಘುನಂದನ್ ಬೆಂಗಳೂರು ಇವರ ‘ಶರ್ಮಿಷ್ಠೆ’ ನಾಟಕಕ್ಕೆ ಪ್ರಥಮ, ಶ್ರೀಮತಿ ವಿನುತಾ ಸುಧೀಂದ್ರ ಹಂಚಿನಮನಿ ಧಾರವಾಡ ಇವರ ‘ಪರಿತ್ಯಕ್ತೆ’ ನಾಟಕಕ್ಕೆ ದ್ವಿತೀಯ ಹಾಗೂ ತೃತೀಯ ಸ್ಥಾನ ಇಬ್ಬರಿಗೆ ಹಂಚಿಹೋಗಿದೆ. ಶ್ರೀಮತಿ ಅಭಿಲಾಷಾ ಎಸ್. ಉಡುಪಿ ಇವರ ‘ಭೀಷ್ಮಾವಲೋಕನ’ ಮತ್ತು ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲ ಇವರ ‘ಚೇಕತ್ತಿ’ ನಾಟಕಗಳು ತೃತೀಯ ಸ್ಥಾನವನ್ನು ಪಡೆದಿವೆ.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೆಸರಾಂತ ಬಾಲಕಲಾವಿದ ಮಾಸ್ಟರ್ ಗೋಕುಲ ಸಹೃದಯ ಇವರಿಂದ ಡಾ. ಬೇಲೂರು ರಘುನಂದನ್ ರಚಿಸಿ, ಶ್ರೀ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶಿಸಿದ ‘ಚಿಟ್ಟೆ’ ಎಂಬ ವಿಶೇಷ ಏಕವ್ಯಕ್ತಿ ಅಭಿನಯದ ಕನ್ನಡ ನಾಟಕವು ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಚಿಟ್ಟೆ ನಾಟಕದ ಬಗ್ಗೆ :
ಬಣ್ಣಬಣ್ಣದ ಕನಸು ಕಾಣುವ ಸತ್ಯಕ್ಕೆ ಹತ್ತಿರವಾದ ಎಳಸು ಭಾವನೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಪುಟ್ಟ ಬಾಲಕ ಗೋಕುಲ ಸಹೃದಯ ಮುಂಬಯಿ ಮನಸುಗಳಲ್ಲಿ ಮನಸಿನ ಕನಸಿನ ಭಾವನೆಗಳನ್ನು ಬಿತ್ತರಿಸಿ ಮತ್ತೆ ಹಾರಿ ಹೋಗಿದ್ದಾನೆ ಆ ಭಾವನೆಗಳ ಚಿಟ್ಟೆ ಮುಂಬಯಿಗರ ಮನಸಿನಲ್ಲಿ ಹಾಗೇ ಹಾರಲು ಶುರುಮಾಡಿದೆ. ಇದಕ್ಕೆ ಕಾರಣ ಆ ನಾಟಕದ ವಿಷಯ, ನಟನೆ ಮತ್ತು ಪರಿಕರ. ಚಿಟ್ಟೆಗಳ ಜತೆ ಮಾತು, ಕೆರೆಗಳ ಸಂಗ ಮುನಿಸು, ಅಮ್ಮನ ಪ್ರೀತಿ, ಅಪ್ಪನ ಬವಣೆ, ಎಳಸು ಕನಸುಗಳು, ಭಯ ಭಕ್ತಿ, ಅರ್ಥವಾಗದ ಬದುಕಿನ ದಾರಿ ಇವೆಲ್ಲವನ್ನು ಈ ಪೋರ ಪೂರ್ತಿಯಾಗಿ ಪೋಣಿಸಿ ಬಣ್ಣಿಸಿ ಉಣಬಡಿಸಿದ್ದಾನೆ. ಹಸಿವು ಯಾಕಾಗುತ್ತೆ ಅನ್ನುವ ಈ ಕಂದನ ಪ್ರಶ್ನೆಗೆ ಮುಂಬಯಿ ಕನ್ನಡಿಗರೇ ಸಾಕ್ಷಿ. ಈ ಹಸಿವೇ ಸಾವಿರ ಮೈಲು ದೂರದ ಮುಂಬಯಿಯನ್ನು ತುಳು-ಕನ್ನಡಿಗರಿಗೆ ಪರಿಚಯಿಸಿದ್ದು ಎಂದರು ತಪ್ಪಾಗಲಾರದು. ಈ ಪುಟ್ಟ ಬಾಲಕ ಎಲ್ಲರ ಮನಸಿಗೆ ತುಂಬಾ ಹತ್ತಿರವಾಗಿ ಬಿಟ್ಟಿದ್ದಾನೆ.
ಮಕ್ಕಳ ರಂಗಭೂಮಿಯಲ್ಲಿ ಇದೊಂದು ಹೊಸ ಪ್ರಯೋಗ. ಇಂಥಹ ಪ್ರಯೋಗಗಳು ತುಂಬಾ ವಿರಳ. ದೇಶದ ಎಲ್ಲ ಭಾಷೆಯನ್ನು ತಗೊಂಡರೂ ಚಿಟ್ಟೆ ಪ್ರಯೋಗ ಒಂದು ದಾಖಲೆ ನಿರ್ಮಿಸಿದೆ. ಸದ್ಯದಲ್ಲೇ ನೂರನೇ ಪ್ರದರ್ಶನ ಕಾಣಲಿದೆ. ಇನ್ನೊಂದು ಖುಷಿಯ ವಿಷಯ ಅಂದರೆ ರಂಗಭೂಮಿ ಕಡೆ ಮಕ್ಕಳು ಹೆಜ್ಜೆ ಹಾಕಿದ್ದು ಕೂಡಾ ಮುಂದಿನ ಪೀಳಿಗೆಗೆ ಒಂದು ದೊಡ್ಡ ಅಡಿಪಾಯ. ಆ ಕ೦ದನ ಆಸಕ್ತಿ ಸ್ಟೇಜ್ ಮೇಲಿನ ಪ್ರೀತಿ, ಹೆಮ್ಮೆ ಗೌರವ ಎಷ್ಟು ಇದೆ ಎಂಬುದು ಅವನ ನಟನೆಯಲ್ಲೇ ಗೊತ್ತಾಗುತ್ತೆ. ನಿರರ್ಗಳ ಮಾತು, ಬ್ಲಾಕಿಂಗ್ ಜತೆ ನಟನೆ, ತುಂಬಾ ಹಿಡಿತದ ಚಲನೆಗಳು, ನಿರ್ದೇಶಕರನ್ನು – ನಾಟಕವನ್ನು ಗೆಲ್ಲಿಸಿದೆ. ಒಂದಷ್ಟು ಸೆಟ್ಟಿಂಗ್ ಇಲ್ಲದೆ ಸಾಂಕೇತಿಕ ಪ್ರಾಪರ್ಟಿ ಕೂಡ ಸ್ಟೇಜ್ಗೆ ಗೆ ಇನ್ನು ಹೆಚ್ಚಿನ ಮೆರುಗನ್ನು ನೀಡಿದೆ. ಲೈಟಿಂಗ್ ನಲ್ಲಿ ಹೊಸ ಗಿಮಿಕ್ಸ್ ರಂಜಿಸಿತು. ಅಲ್ಲಿಯೂ ಬಣ್ಣದ ಬೆಳಕುಗಳು ಮಾತಾಡಿದವು, ಒಟ್ಟಿನಲ್ಲಿ ಮು೦ಬಯಿ ಕಲಾಭಿಮಾನಿಗಳಿಗೆ ಇದೊಂದು ಅಪೂರ್ವ ಅನುಭವನ್ನು ನೀಡಿತು.
ಈಗಿನ ಮಕ್ಕಳ ಸ್ಕೂಲ್ ಟೆಫಿನ್‌ಗೆ ಒಂದಲ್ಲ ಎರಡೆರಡು ತಿಂಡಿ ಮಾಡಿಕೊಡ್ತಾರೆ. ಈ ಮಧ್ಯೆ ಈಗಿನ ಮಕ್ಕಳಿಗೆ ಹಸಿವು ಅಂದರೇನು ಅಂತ ನಿಜವಾದ ಅರ್ಥ ಗೊತ್ತಿರುವುದು ಕಷ್ಟ. ಆದರೆ ಹೊಟ್ಟೆಗೆ ಹಿಟ್ಟಿಲ್ಲದ ಮನೆಯ ಮಗುವಿಗೆ ಸ್ಕೂಲ್ ನಲ್ಲಿ ಬಹುಮಾನದ ರೂಪದಲ್ಲಿ ಟಿಫನ್ ಬಾಕ್ಸ್ ಸಿಕ್ಕಾಗ ನೋಡಿ ಖುಷಿ ಪಡುವ ಬದಲು ಮನಸಲ್ಲಿ ನೋವು ಅವರಿಸಿ ಬಿಡುತ್ತೆ, ಚಿಟ್ಟೆಯ ಕಂಗಳಲ್ಲಿ ಕಣ್ಣೀರ ಬರಿಸುತ್ತೆ. ಕಾರಣ ಇಷ್ಟೇ ಟಿಫನ್ ಬಾಕ್ಸ್ ಹಾಕಿಕೊಡಲು ಅನ್ನದ ಅಗುಳೇ ಇಲ್ಲ. ಸ್ವತಃ ಕಂದಮ್ಮನೇ ಊಟ ಮಾಡಿ ನಾಲ್ಕು ದಿನವಾಗಿದೆ. ಇನ್ನು ಟಿಫಿನ್‌ಗೆ ತುಂಬಿಸೋದು ದೂರದ ಮಾತು. ಆದರು ಅಮ್ಮ ಎನ್ನುವ ದೇವರು ಒಂದಿನ ಟಿಫಿನ್ ತುಂಬಿಸಿ ಕೊಡ್ತೀನಿ ಅನ್ನುವ ಭರವಸೆಯನ್ನು ಮಗನ ಮನಸಲ್ಲಿ ಮೂಡಿಸಿಬಿಡುತ್ತಾಳೆ. ಪ್ರಸ್ತುತ ಹಸಿವೆ ಕಾಣದ ಕೂಸು ಹಸಿವನ್ನು ಅನುಭವಿಸಿ ಅಭಿನಯಿಸಿದ್ದು – ನಿಜಕ್ಕೂ ಸೈ ಅನಿಸಿದೆ.
ಬಿರಿಯಾನಿಯ ಪರಿಮಳದಲ್ಲೇ ಹೊಟ್ಟೆ ತುಂಬಿಸುವಾಗ ಹೊಟ್ಟೆ ಚುರ್ ಅನ್ನೋದು ಸಹಜ. ತನ್ನ ತಂಗಿಗೆ ಹಾಲೂಂತ ನೀರೇ ಕುಡಿಸಿ ನಿದ್ದೆ ಬರಿಸಿದ್ದು, ಪಾಪ ಆ ಪಾಪುಗೆ ಹಾಲಿನ ಪರಿಚಯವೇ ಇಲ್ಲಲ್ವಾ ಹಸಿವಿಗೇ ನೀರಾದರೇನು ಹಾಲಾದರೇನು, ನಮ್ಮ ದೇಶದಲ್ಲಿ ಈಗಲೂ ಹಸಿವಿನಿಂದ ಸಾಯುವ – ಜನರ ಸಂಖ್ಯೆ ಕಡಿಮೆ ಏನಿಲ್ಲಾ. ಇದನ್ನೆಲ್ಲಾ ಅರಿತ ಕಥೆಗಾರರು ತುಂಬಾ ನಾಜೂಕಾಗಿ ಈ ನಾಟಕವನ್ನು ಪೋಣಿಸಿಕೊಟ್ಟಿದ್ದಾರೆ. ವಿರಳ ವಿಷಯವನ್ನು ಸರಳವಾಗಿ ಕಟ್ಟಿಕೊಟ್ಟು ಮಕ್ಕಳ ಭಾಷೆಯನ್ನೇ ಉಪಯೋಗಿಸಿ ಗೋಕುಲನನ್ನು ಇನ್ನಷ್ಟು ಹತ್ತಿರ ಆಗಿಸಿದ್ದಾರೆ. ಮನಸಿನ ಭಾವನೆಗಳನ್ನು ಕಟ್ಟಿ ಕೊಡುವಲ್ಲಿ ಒಂದು ಯಶಸ್ವಿ ಪ್ರಯೋಗವಿದು. ನಿರ್ದೇಶಕರು ಇಲ್ಲಿ ತನ್ನದೇ ಛಾಪನ್ನು ಮೂಡಿಸಿ ಬಿಟ್ಟಿದ್ದಾರೆ. ಕಥೆಯ ಮಧ್ಯೆ ಬರುವ ಹಾಡುಗಳು, ಆಲಾಪಗಳು, ಸಂಗೀತದ ತುಣುಕುಗಳು ನಾಟಕವನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ. ಕನಸು ಮನಸು, ಋಣ ಶಿಕ್ಷಣ, ಆಸೆ ಆಕಾಂಕ್ಷೆ, ಪ್ರೀತಿ ನೀತಿ, ಸಂಸಾರ, ಹಸಿವು, ಕಲೆ, ಬೆಲೆ ಇವೆಲ್ಲವನ್ನು ‘ಚಿಟ್ಟೆ’ ವೇದಿಕೆಯ ಮೇಲೆ ತಂದು ಮುಂಬಯಿ ಕಲಾಭಿಮಾನಿಗಳಿಗೆ ಅದರ ರುಚಿಯನ್ನು ಉಣಬಡಿಸಿದೆ.
- ಲೇಖನ: ಸೂರಿ ಮಾರ್ನಾಡ್