ಬೆಂಗಳೂರು : ‘ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ’ ಮತ್ತು ಕಲಾ ಪೋಷಕ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ‘ಮೋಹನ ತರಂಗಿಣಿ ಸಂಗೀತ ಸಭಾ’ ಇದರ ಅಮೃತ ಮಹೋತ್ಸವ ಸಾಂಸ್ಕೃತಿಕ ಸಂಗೀತ ಸಂಭ್ರಮವು ದಿನಾಂಕ 18-02-2023ರಿಂದ 07-05-2023ರವರೆಗೆ ಕರ್ನಾಟಕ ಸಂಗೀತ ತ್ರಿಮೂರ್ತಿಗಳ ಹಾಗೂ ಕನಕ ಪುರಂದರ ಸಂಗೀತೋತ್ಸವ ಅಂಗವಾಗಿ ನಡೆಯುತ್ತಿರುವ 75ನೇ ವಾರ್ಷಿಕೋತ್ಸವಕ್ಕೆ 75 ಕಾರ್ಯಕ್ರಮಗಳ ‘ಮಂಗಳ ಸಂಗೀತ ನೃತ್ಯ ಧಾರೆ’ ಎಂಬ ಕಾರ್ಯಕ್ರಮವು ಕಲಾಗ್ರಾಮ ಸಮುಚ್ಛಯ ಭವನ, ಮಲ್ಲತ್ತ ಹಳ್ಳಿ, ಬೆಂಗಳೂರಿನಲ್ಲಿ ನಡೆಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮೋಹನ ತರಂಗಿಣಿ ಸಂಗೀತ ಸಭಾ ಬೆಂಗಳೂರು ಇದರ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀದೇವಿ ಮೋಹನ ಕುಮಾರ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎಸ್. ಮೋಹನ ಕುಮಾರರೊಂದಿಗೆ ರಾಜ್ಯದ ಎಲ್ಲಾ ಸಂಗೀತ ಸಭಾದ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು ಸೇರಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟಿನ ಪ್ರೊ. ವಿ ಅರವಿಂದ ಹೆಬ್ಬಾರ್ ಮಾತನಾಡಿ, “ವಿದ್ವಾನ್ ಮೋಹನ ಕುಮಾರ ಬಹಳ ವರ್ಷಗಳಿಂದ ನನ್ನ ಸ್ನೇಹಿತರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಪೂರ್ವವಾದದ್ದು, ತೆರೆಮರೆಯಲ್ಲಿದ್ದು ಸೇವೆ ಸಲ್ಲಿಸುತ್ತಿರುವ ಸಂಗೀತಗಾರರನ್ನು ಮತ್ತು ಸಂಗೀತ ಸಭಾದ ಮುಖ್ಯಸ್ಥರನ್ನು ಕರೆಯಿಸಿಕೊಂಡು ಗೌರವಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಉತ್ತಮ ನಾಗಸ್ವರ ಕಲಾವಿದರೂ, ಹಾಡುಗಾರರೂ ಆಗಿರುವ ಮೋಹನ ಕುಮಾರ ಮಾಡಿದ ಈ ಕೆಲಸ ನನಗೆ ಸಂತೋಷ ಕೊಟ್ಟಿದೆ” ಎಂದರು.
ಶ್ರೀ ವಿದ್ಯಾಗಣಪತಿ ಸೇವಾ ಸಂಘ ಶಿವಮೊಗ್ಗ ಇದರ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಎಚ್.ಆರ್. ಮಾತನಾಡಿ “ಮೋಹನ ಕುಮಾರ ಅತ್ಯಂತ ಕಷ್ಟದಲ್ಲಿ ಭದ್ರಾವತಿಯಲ್ಲಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿ, ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರಾವತಿಯಿಂದ ರಾಜ್ಯದ ಹಲವು ಕಡೆ ಸಂಗೀತ ವಿದ್ಯಾಲಯದ ಶಾಲೆಗಳನ್ನು ಸ್ಥಾಪನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕಲಾಕ್ಷೇತ್ರಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಹೆಚ್ಚು ಪಾಲು ಕಲಾವಿದರನ್ನು ಪ್ರೋತ್ಸಾಹಿಸುವ ಈ ಕಾಲಘಟ್ಟದಲ್ಲಿ ಇವರು ಕಲೆಯನ್ನು ಪ್ರೋತ್ಸಾಹಿಸುವ ಸಂಘಟಕರನ್ನು ಗುರುತಿಸಿ ಗೌರವಿಸುವುದು ಸಂತೋಷ ತಂದಿದೆ.” ಎಂದರು.
ಕರ್ನಾಟಕ ಕಲಾಶ್ರೀ ಎಂ.ಆರ್. ಸತ್ಯ ನಾರಾಯಣ ರಾವ್, ಅಧ್ಯಕ್ಷರು ಗಿರಿನಗರ ಸಂಗೀತ ಸಭಾ ಟ್ರಸ್ಟ್ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಅಂದು ನಡೆದ ವಿದುಷಿ ಎಂ.ಎಸ್. ವಿದ್ಯಾಲಕ್ಷ್ಮಿಯವರು ಪ್ರಸ್ತುತ ಪಡಿಸಿದ ತ್ರಿಮೂರ್ತಿಗಳ ಕೃತಿ ‘ನೃತ್ಯ ವೈಭವ’ ಕಾರ್ಯಕ್ರಮವು ಒಂದು ಗಂಟೆಯ ಕಾಲ ನಡೆದು ಜನಮನ ಸೂರೆಗೊಂಡಿತು ಎಂದು ಭರತನಾಟ್ಯ ಕಾರ್ಯಕ್ರಮ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿ ಎಳವೆಯಲ್ಲಿಯೇ ನೃತ್ಯದಲ್ಲಿ ವೇದಿಕೆಯ ಮೇಲೆ ತೋರಿದ ಕಲಾ ಪ್ರೌಢಿಮೆಯ ಪ್ರಭುತ್ವವನ್ನು ಶ್ಲಾಘಿಸಿದರು. ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆಯುವ ‘ಮೋಹನ ತರಂಗಿಣಿ ಸಂಗೀತ ಸಭಾ’ವನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವ ಮತ್ತು ಸಂಗೀತ ಕ್ಷೇತ್ರದಲ್ಲಿ ಮಾಡಿದ ನಿರಂತರ ಹಾಗೂ ಅಪೂರ್ವ ಸೇವೆಗಾಗಿ ಪ್ರಶಸ್ತಿ ಪುರಸ್ಕೃತ ಬೇರೆ ಬೇರೆ ಸಂಗೀತ ಸಭಾದ ಗಣ್ಯರೆಲ್ಲ ಸೇರಿ ಶ್ರೀಮತಿ ಲಕ್ಷ್ಮೀದೇವಿ ಮೋಹನ ಕುಮಾರರನ್ನು ಗೌರವಿಸಿ ಶುಭ ಹಾರೈಸಿದರು.
ಗುರು ವಿದ್ವಾನ್ ಕೀರ್ತಿಶೇಷ ಶ್ರೀ ಕೆ. ಮಂಜಪ್ಪನವರ ಕೃತಿಗಳ ರಚಿತ ಸಂಗೀತ ನಿರ್ದೇಶಕ ವಿದ್ವಾನ್ ಶ್ರೀ ಎಂ. ಎಸ್. ತ್ಯಾಗರಾಜ ಸಂಗೀತ ನಿರ್ದೇಶನದ ‘ದಾಸ ಮಂಜು ದಾಸ’ ಧ್ವನಿ ಸುರುಳಿ ಬಿಡುಗಡೆಯು ಇದೇ ಸಂದರ್ಭದಲ್ಲಿ ನಡೆಯಿತು.
ಆಹ್ವಾನಿತ ಕಲಾವಿದರಿಂದ ನಡೆದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ
ಶ್ರೀಮತಿ ಲತಾ ಜಮಖಂಡಿ
ಶ್ರೀಮತಿ ಲತಾ ಜಮಖಂಡಿಯವರು ಸದ್ಯ 75ರ ವಯಸಿನಲ್ಲಿ ಸಂಗೀತ ಕಲಿತು ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂಬೈನಲ್ಲಿ 4 ವರುಷ ಹಾಗೂ ಕಿರ್ಲೋಸ್ಕರ್ ಇಲೆಕ್ಟ್ರಿಕ್ ಕಂಪನಿಯಲ್ಲಿ 24 ವರುಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಎರಡು ಬಾರಿ ಕಂಪನಿಯ ಉತ್ತಮ ಆಡಳಿತಾಧಿಕಾರಿ ಎಂಬ ಪ್ರಶಸ್ತಿ ಪಡೆದಿದ್ದಾರೆ. ನಿವೃತ್ತಿ ಹೊಂದುವವರೆಗೂ ಕಂಪನಿಯ ಮಾಸ ಪತ್ರಿಕೆ ‘ಪ್ರಗತಿ’ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಹುಬ್ಬಳ್ಳಿಯ ಪ್ರತಿಷ್ಟಿತ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಖ್ಯಾತಿ ಇವರದ್ದು. ಇವರ ಸೇವಾ ಮನೋಭಾವನೆಗೆ ಜಿಲ್ಲಾ ಮತ್ತು ರಾಷ್ಟ್ರಮಟ್ಟದಲ್ಲಿ 23 ಪ್ರಶಸ್ತಿಗಳು ಸಂದಿವೆ. ಇವರ ಅಧ್ಯಕ್ಷತೆಯಲ್ಲಿ, ಪರಿಸರ ಸಂರಕ್ಷಣೆಗೆ ಸಂಬಂಧಪಟ್ಟಂತೆ 21 ಚಿಕ್ಕ ಮಕ್ಕಳಿಂದ ತಯಾರಾದ ‘ಮೂಗಾಯಣ’ ನಾಟಕ ಹುಬ್ಬಳ್ಳಿಯಲ್ಲಿ 5 ಬಾರಿ, ಧಾರವಾಡದಲ್ಲಿ 2 ಬಾರಿ, ಸರಕಾರದ ಕರೆಯ ಮೇರೆಗೆ ಬೀದರ್ ಹಾಗೂ ಬಸವ ಕಲ್ಯಾಣದಲ್ಲಿಯೂ ಪ್ರದರ್ಶನಗೊಂಡಿತು.
ಹುಬ್ಬಳ್ಳಿಯ ಪ್ರತಿಷ್ಟಿತ ಕರ್ನಾಟಕ ಶಾಸ್ತ್ರೀಯ ಸಂಗೀತ ‘ಗಾನಸುಧಾ ಸಭಾ’ದ ವಿವಿಧ ಹುದ್ದೆಗಳನ್ನು ಸ್ವೀಕರಿಸಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ತಿಂಗಳಿಗೆ ಒಂದು ಕರ್ನಾಟಕ ಶಾಸ್ತ್ರೀಯ ಸಂಗಿತ ಕಚೇರಿಯನ್ನು ನಡೆಸುತ್ತಾ ಬಂದು, ಇಲ್ಲಿವರೆಗೆ ಸುಮಾರು 500ಕ್ಕಿಂತಲೂ ಹೆಚ್ಚು ಕಚೇರಿಗಳನ್ನು ನಡೆಸಿದ ಕಲಾರಾಧಕರು. ವರುಷಕೊಮ್ಮೆ ಸಂಗೀತೋತ್ಸವನ್ನು ಅದ್ದೂರಿಯಿಂದ ಆಚರಿಸುವ ಮೂಲಕ ಪುರಂದರ ದಾಸ ಮತ್ತು ತ್ಯಾಗರಾಜರ ಆರಾಧನೆಯನ್ನು ಹಮ್ಮಿಕೊಂಡಿದ್ದಾರೆ. ಹುಬ್ಬಳ್ಳಿಯ ಎಲ್ಲ ಸಂಗೀತ ಗುರುಗಳು ತಮ್ಮ ಶಿಷ್ಯರೊಂದಿಗೆ ಪಾಲ್ಗೊಂಡು ದಾಸರ ಕೃತಿಗಳು ಹಾಗೂ ಪಂಚರತ್ನ ಕೀರ್ತನೆಗಳನ್ನು ಹಾಡಿ ಸೇವೆ ಸಲ್ಲಿಸುವ ಮೂಲಕ ಸಾರ್ಥಕತೆಯನ್ನು ಕಂಡಿದ್ದಾರೆ.
ಶ್ರೀಮತಿ ಲತಾ ಜಮಖಂಡಿಯವರಿಗೆ ಹಾಡುವುದರೊಂದಿಗೆ ಅಭಿನಯಿಸುವ ಆಸಕ್ತಿಯೂ ಇದೆ. ರೋಟರಿಯಿಂದ ‘ಎಕ್ಸಲೆನ್ಸ್ ಸರ್ವೀಸ್ ಅವಾರ್ಡ್’, ‘ಕಿತ್ತೂರ ಚೆನ್ನಮ್ಮಶ್ರೀ’ ಪ್ರಶಸ್ತಿ, ‘ಬಸವ ಶ್ರೀ’ ಪ್ರಶಸ್ತಿ, ಹುಬ್ಬಳ್ಳಿಯ ಜಂಟ್ಸ್ ಇಂಟರ್ನ್ಯಾಷನಲ್ ಕ್ಲಬ್ ನವರಿಂದ ‘ವುಮನ್ ಅಚೀವರ್’ ಅವಾರ್ಡ್. ಹೀಗೆ ಇವರಿಗೆ ಸಂಘ ಸಂಸ್ಥೆ, ವಿಶ್ವವಿದ್ಯಾಲಯ, ಮಹಿಳಾ ಮಂಡಳಿಗಳಿಂದ ಹೀಗೆ ಹಲವಾರು ಪ್ರಶಸ್ತಿಗಳೊಂದಿಗೆ ಸನ್ಮಾನದ ಗೌರವವೂ ದೊರಕಿದೆ.
‘ಗಾನ ಸುಧಾ’ದ ಬಗ್ಗೆ ಎರಡು ಮಾತು :
ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ ಶಾಸ್ತ್ರೀಯ ಸಂಗೀತದ ತೊಟ್ಟಿಲು. ಇದರಲ್ಲಿ ಹಿಂದೂಸ್ಥಾನಿ ಸಂಗೀತದ್ದೇ ಸಿಂಹಪಾಲು. ಕರ್ನಾಟಕ ಸಂಗೀತ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತಾಸಕ್ತರು ಕರ್ನಾಟಕ ಸಂಗೀತದ ಸೊಗಡನ್ನು ಉತ್ತರ ಕರ್ನಾಟಕದ ಸಂಗೀತಾಭಿಮಾನಿಗಳೂ ಸವಿಯಬೇಕೆಂಬ ಉದ್ದೇಶದಿಂದ ಕರ್ನಾಟಕ ಸಂಗೀತಕ್ಕೆ ಮೀಸಲಾದ ಒಂದು ಸಂಸ್ಥೆಯನ್ನು 1982ರಲ್ಲಿ ಹುಟ್ಟು ಹಾಕಿದರು. ಗಾನ ಸುಧಾ ಖಾಸಗಿ ಸಂಗೀತ ಕಛೇರಿಗಳಿಂದ ಪ್ರಾರಂಭವಾಗಿ ವೇದಿಕೆಯ ಸಂಗೀತ ಕಛೇರಿಗಳಿಗೆ ಅಡಿಯಿಟ್ಟಿದ್ದು ಈಗ ಇತಿಹಾಸ. ನಿರಂತರವಾಗಿ ಕಳೆದ ನಲವತ್ತು ವರ್ಷಗಳಿಂದ ಪ್ರತೀ ತಿಂಗಳು ಸಂಗೀತ ಕಾರ್ಯಕ್ರಮ ನಡೆಸಲಾಗುತ್ತಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಸುಪ್ರಸಿದ್ಧ ಮೇರು ಕಲಾವಿದರು ಈ ವೇದಿಕೆಯಲ್ಲಿ ಜನತೆಗೆ ಕರ್ನಾಟಕ ಸಂಗೀತದ ರಸ ದೌತಣವನ್ನು ನೀಡಿದ್ದಾರೆ. ಬರಿಯ ಗಾಯನ ಮಾತ್ರವಲ್ಲದೆ ತಂತಿವಾದ್ಯ ಮತ್ತು ತಾಳವಾದ್ಯ ಇತ್ಯಾದಿ ಸಂಗೀತ ಪರಿಕರಗಳ ಕಛೇರಿಗಳಿಗೂ ವೇದಿಕೆ ಸಾಕ್ಷಿಯಾಗಿದೆ. ಪ್ರತಿ ವರ್ಷ ವಾರ್ಷಿಕೋತ್ಸವದಲ್ಲಿ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತದ ಜುಗಲ್ ಬಂದಿಯ ಕಛೇರಿ ನಡೆಸುವುದು ಸಂಸ್ಥೆಯ ಹೆಗ್ಗಳಿಕೆ.
ಡಾ. ಗಂಗೂಬಾಯಿ ಹಾನಗಲ್ ಅವರು ಗಾನಸುಧಾ ಸಂಸ್ಥೆಯ ಆರಂಭಿಕ ಪೋಷಕರಾಗಿದ್ದು, ಅವರ ಮಾತೃಶ್ರೀ ಕರ್ಣಾಟಕ ಸಂಗೀತ ಕಲಾವಿದರಾದ ದಿವಂಗತ ಅಂಬಾಬಾಯಿ ಅವರ ಸ್ಮರಣಾರ್ಥವಾಗಿ ಒಂದು ಕಛೇರಿಯನ್ನು ಪ್ರತೀ ವರ್ಷ ಆಯೋಜಿಸುತ್ತಾ ಬಂದಿದೆ. ಶ್ರೀ ದಾಶರಥಿ ಅವರು ತಮ್ಮ ಪತ್ನಿಯಾದ ದಿವಂಗತ ಶ್ರೀಮತಿ ಶಾಂತಾ ಮತ್ತು ಶ್ರೀಮತಿ ಹೇಮಲತಾ ಸಂಪತ್ ಅವರು ತಮ್ಮ ಪತಿ ಶ್ರೀ ಸಂಪತ್ ಅವರ ಸ್ಮರಣಾರ್ಥ ಕಾರ್ಯಕ್ರಮ ನಡೆಯುತ್ತದೆ.
ಎರಡು ಸಾವಿರ ಇಪ್ಪತ್ತರಿಂದ ವಾರ್ಷಿಕ ಸಂಗೀತೋತ್ಸವದಲ್ಲಿ ಗಾನಸುಧಾ ಸಂಸ್ಥೆಯ ವತಿಯಿಂದ ಒಬ್ಬ ಕರ್ನಾಟಕ ಸಂಗೀತ ದಿಗ್ಗಜರನ್ನ ಗುರುತಿಸಿ ರಾಜ್ಯಮಟ್ಟದ ಗಾನಸುಧಾ ಪ್ರಶಸ್ತಿಯನ್ನು ನೀಡಿ ಗೌರವಿಸುವ ಪರಂಪರೆಯನ್ನು ಹಮ್ಮಿಕೊಂಡಿದ್ದು, 2023 ಗಾನಸುಧಾ ಪ್ರಶಸ್ತಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಶೈಲಿಯಿಂದ ನಾಡಿಗೆ ಚಿರಪರಿಚಿರಾದಂತಹ’ ಗಾನಕಲಾಶ್ರೀ’ ವಿದುಷಿ ಶ್ರೀಮತಿ ಕಲಾವತಿ ಅವಧೂತ ಇವರಿಗೆ ಸೇರಿದೆ. ‘ಗಾನ ಸುಧಾ’ದ ಸರ್ವತೋಮುಖ ಅಭಿವೃದ್ದಿಗೆ ಸರ್ವರ ಸಹಕಾರದಿಂದ ದುಡಿಯುವುದೇ ಶ್ರೀಮತಿ ಲತಾ ಜಮಖಂಡಿಯವರ ಧ್ಯೇಯವಾಗಿದೆ.
ಶ್ರೀ ಎಸ್.ಎನ್. ರಾಮ್ ಪ್ರಸಾದ್
ಶ್ರೀ ಎಸ್.ಎನ್. ರಾಮ್ ಪ್ರಸಾದ್ ಇವರು ಶ್ರೀ ಎಸ್.ವಿ. ನಾರಾಯಣ ಸ್ವಾಮಿ ಮತ್ತು ಶ್ರೀಮತಿ ಎಸ್.ಎನ್. ನರಸಮ್ಮ ಇವರ 5 ಮಂದಿ ಮಕ್ಕಳಲ್ಲಿ ಹಿರಿಯರು. ನಾಲ್ಕು ಗಂಡು ಮಕ್ಕಳೊಂದಿಗೆ ಜನಿಸಿದ ಒಬ್ಬರೇ ಸಹೋದರಿ ಅನುರಾಧಾ ಮಧುಸೂದನ್ ವೀಣೆ ಕಲಾವಿದೆಯಾಗಿದ್ದಾರೆ. 1939ರಲ್ಲಿ ಶ್ರೀ ಎಸ್.ವಿ. ನಾರಾಯಣ ಸ್ವಾಮಿಯವರು ಸ್ಥಾಪಿಸಿದ ಶ್ರೀ ರಾಮ ಸೇವಾ ಮಂಡಳಿಯ ಉಪಶಾಖೆಯಾಗಿ ಅಕ್ಟೋಬರ್ 2001ರಲ್ಲಿ ಶ್ರೀ ಎಸ್.ವಿ. ನಾರಾಯಣ ಸ್ವಾಮಿಯವರ ಸ್ಮರಣಾರ್ಥ ಎಸ್.ವಿ.ಎನ್. ಸಂಗೀತ ಅಕಾಡಮಿ ಬೆಂಗಳೂರಿನಲ್ಲಿ ಆರಂಭವಾಯಿತು. ಶ್ರೀ ರಾಮ್ ಪ್ರಸಾದ್ ಆಡಳಿತ ನಿರ್ವಾಹಕರಾಗಿದ್ದು, ಇವರ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕ್ರಮಗಳೂ ನಡೆಯುತ್ತಿವೆ.
ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್.)ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿದ್ದು, ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುವ ಇವರು ಎಸ್.ವಿ.ಎನ್. ಸಂಗೀತ ಅಕಾಡಮಿಯ ಕಡೆ ಪೂರ್ಣ ಗಮನವಿಟ್ಟಿದ್ದಾರೆ. ನಮ್ಮ ದೇಶದ ಮಹಾನ್ ಕಲೆಯಾದ ಸಂಗೀತದ ಅಮೂಲ್ಯ ಪರಂಪರೆಯನ್ನು ಭವಿಷ್ಯದ ರಕ್ಷಕರಾದ ಯುವ ಜನತೆಯತ್ತ ಕೊಂಡೊಯ್ಯುವುದೇ ಈ ಸಂಸ್ಥೆಯ ಉದ್ದೇಶವಾಗಿದೆ. ಪ್ರತಿಷ್ಟಿತ ಸಂಗೀತಗಾರರನ್ನು ಆಹ್ವಾನಿಸಿ ಸಂಗೀತ ಕಲಾಸಕ್ತರಿಗೆ ಸಂಗೀತ ರಸದೌತಣ ಉಣ ಬಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖ್ಯಾತ ಕಲಾವಿದರನ್ನು ಕರೆಸಿ ‘ಎಸ್.ವಿ. ನಾರಾಯಣ ಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿ’ಯೊಂದಿಗೆ ರೂ.50,000 ನಗದು ನೀಡಿ ಗೌರವಿಸಿದ ಖ್ಯಾತಿ ಇವರದು. ಪ್ರಸ್ತುತ ಈ ಸಂಸ್ಥೆಯ ಅಧ್ಯಕ್ಷ ಡಾ. ಎ. ರವೀಂದ್ರ, ಉಪಾಧ್ಯಕ್ಷರಾಗಿ ಡಾ. ಬಾಲಮಣಿ, ಆಡಳಿತ ನಿರ್ವಾಹಕರಾಗಿ ಶ್ರೀ ಎಸ್.ಎನ್. ರಾಮ್ ಪ್ರಸಾದ್, ಕಾರ್ಯದರ್ಶಿಯಾಗಿ ಎಸ್.ಎನ್. ವೆಂಕಟೇಶ್ ಪ್ರಸಾದ್ ಇವರೆಲ್ಲರೂ ಆಡಳಿತ ನಿರ್ವಾಹಕ ಶ್ರೀ ಎಸ್.ಎನ್. ರಾಮ್ ಪ್ರಸಾದ್ ರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದ್ದಾರೆ. ಈಗಾಗಲೇ ವಜ್ರ ಮಹೋತ್ಸವದ ಸಂಭ್ರಮವನ್ನು ಆಚರಿಸಿದ ಈ ಸಂಸ್ಥೆ ಪ್ರತಿ ಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಿಸುತ್ತಾ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ಎತ್ತರಕ್ಕೆ ಬೆಳೆದು ಸನಾತನ ಸಂಸ್ಕೃತಿಯನ್ನು ಬಿಂಬಿಸುತ್ತಾ ಮುಂದುವರಿಯುತ್ತಿರುವುದು ಶ್ಲಾಘನೀಯ.
ಶ್ರೀ ಸಿ. ಆರ್. ಭಾಷ್ಯಂ
ಸಿ. ಆರ್. ಭಾಷ್ಯಂ ಇವರ ತಾಯಿ ಪಿಟೀಲು ಹಾಗೂ ಹಾರ್ಮೋನಿಯಂ ನುಡಿಸುವವರಾಗಿದ್ದು, ಸೋದರ ಮಾವ ವಿ|| ಟಿ.ಎಸ್. ತಾತಾಚಂದ್ ಸಹ ವೃತ್ತಿಯಲ್ಲಿ ಪಿಟೀಲು ವಾದಕರಾಗಿದ್ದರು. ಸಂಗೀತ ಪರಂಪರೆಯಿಂದ ಬಂದ ಸಿ.ಆರ್. ಭಾಷ್ಯಂ ಬಾಲ್ಯದಲ್ಲಿ ಕೆಲ ಸಮಯ ಕರ್ನಾಟಕ ಸಂಗೀತವನ್ನು ಕಲಿತು ನಂತರ ಲಲಿತ ಸಂಗೀತದತ್ತ ಆಸಕ್ತಿ ಹೊಂದಿ ಹಲವಾರು ವರುಷಗಳ ಕಾಲ ವಾದ್ಯ ವೃಂದಗಳೊಂದಿಗೆ ಭಾವಗೀತೆ, ಚಿತ್ರಗೀತೆ ಹಾಗೂ ಭಕ್ತಿಗೀತೆಗಳನ್ನು ಹಾಡುತ್ತ ನೂರಾರು ಕಾರ್ಯಕ್ರಮಗಳನ್ನು ಅನೇಕ ವೇದಿಕೆಗಳಲ್ಲಿ ನೀಡಿದ್ದಾರೆ. ಕೆಲವು ಧ್ವನಿ ಸುರುಳಿಗಳಿಗೆ ಸಂಗೀತ ಸಂಯೋಜನೆ ಮಾಡಿದ ಅನುಭವವು ಇವರಿಗಿದೆ.
ನಾಡಿನ ಪ್ರಸಿದ್ಧ ಸಭೆಗಳಾದ ಮಲ್ಲೇಶ್ವರಂ ಸಂಗೀತ ಸಭಾ, ನಾದ ಜ್ಯೋತಿ ಸಂಗೀತ ಸಭಾ, ರಾಮ ಮಂದಿರಗಳಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಸುಮಾರು 30 ವರುಷಗಳಲ್ಲಿ ಅನೇಕ ಸಂಗೀತ ಸಮ್ಮೇಳನ ಹಾಗೂ ಸಂಗೀತ ಶಿಬಿರಗಳನ್ನು ಆಯೋಜಿಸಿದ ಅನುಭವವನ್ನು ಹೊಂದಿದ್ದಾರೆ. ಇನ್ನೂ ಹಲವು ಸಂಘ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಗೀತ ಕ್ಷೇತ್ರದ ಸೇವೆ ಗೈಯುತ್ತಿದ್ದಾರೆ.
ಶ್ರೀ ಸುಬ್ರಮಣ್ಯ ಶಾಸ್ತ್ರಿ
ಶ್ರೀಯುತ ರಾಮ್ ಶಾಸ್ತ್ರಿಗಳು ಮತ್ತು ಶ್ರೀಮತಿ ಗೌರಮ್ಮನವರ ಪುತ್ರನಾದ ಶ್ರೀ ಸುಬ್ರಮಣ್ಯ ಶಾಸ್ತ್ರಿಗಳ ಕುಟುಂಬದಲ್ಲಿ ಎಲ್ಲರೂ ಸಂಗೀತ ಕಲಿಯುತ್ತಿದ್ದ ಕಾರಣ ಬಾಲ್ಯದಿಂದಲೇ ಸಂಗೀತವನ್ನು ಕೇಳುತ್ತಾ ಬೆಳೆದರು. ವಿದ್ಯಾರ್ಥಿಯಾಗಿರುವಾಗ ಸಿತಾರ್ ವಾದನವನ್ನು ಅಭ್ಯಾಸ ಮಾಡಿ ಕಾರ್ಯಕ್ರಮವನ್ನು ಕೊಟ್ಟಿದ್ದರು. ಇವರು ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡು ಮನೆ ಜವಾಬ್ದಾರಿಯೊಂದಿಗೆ ಶ್ರೀ ವಿದ್ಯಾಗಣಪತಿ ಸೇವಾ ಸಂಘದಲ್ಲಿ ಸುಮಾರು 40 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವಿ. ತನ್ನ ಅವಧಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನೀಡಿದ ಇವರಿಗೆ ಜನರ ಅಭಿಮಾನದ ಪ್ರೋತ್ಸಾಹಕ ನುಡಿಯೇ ಪ್ರೇರಣೆಯಾಗಿದೆ.
ಸದಾ ಶಾಸ್ತ್ರೀಯ ಸಂಗೀತ ಕೇಳುತ್ತಾ ಇರುವ ಇವರು ಸಂಗೀತ ವಿದ್ವಾಂಸರನ್ನು ತುಂಬಾ ಗೌರವಿಸುತ್ತಾರೆ. ಯಾವ ಸಂಗೀತ ವಿದ್ವಾಂಸರಿಗೆ ಯಾವ ಪಕ್ಕವಾದ್ಯಬೇಕೆಂದು ತಿಳಿದು ಕಾರ್ಯಕ್ರಮದ ವ್ಯವಸ್ಥೆ ಮಾಡುವ ಕಾರಣ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಆದುದರಿಂದಲೇ ಎಲ್ಲಾ ವಿದ್ವಾಂಸರ ಪ್ರೀತಿ ಗೌರವಾದರಗಳನ್ನು ಇವರು ಪಡೆದಿದ್ದಾರೆ.
ವಿದ್ವಾನ್ ಎಂ. ಅನಂತ
ವಿದ್ವಾನ್ ಎಂ. ಅನಂತರವರು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ, ಸೇವೆ ಸಲ್ಲಿಸಿರುವ ನಿರ್ಮಲ ಹೃದಯಿಗಳು ಮತ್ತು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಸಂಗೀತ ಕಲಾ ಶಾರದೆಯ ಸೇವೆ ಮಾಡುತ್ತಿರುವ ಇವರು ಹುಟ್ಟು ಹಾಕಿದ್ದು ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್ (ರಿ.). ನಾಡಿನ ಕಲೆ, ಸಂಗೀತ, ಸಂಸ್ಕೃತಿಯ ಅಭಿವೃದ್ಧಿಗೆ ಇದು ರಾಜ್ಯದ ಯಾವುದೇ ಪ್ರಸಿದ್ಧ ಸಭಾಗಳು ಹೊರ ರಾಜ್ಯದ ಅದರಲ್ಲೂ ಮುಖ್ಯವಾಗಿ ತಮಿಳುನಾಡು, ಸಂಗೀತಗಾರರಿಗೆ ಆದ್ಯತೆ ನೀಡುತ್ತಿರುವ ಸಂದರ್ಭದಲ್ಲಿ ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್ (ರಿ.) ಕರ್ನಾಟಕದ ಕಲಾವಿದರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡುತ್ತಾ ಬಂದಿರುವುದು ಗಮನಾರ್ಹ. ನಾಡಿನ, ಸಂಗೀತ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯರನ್ನು ಪ್ರತಿ ವರ್ಷ ನಡೆಯುವ ಸಂಗೀತೋತ್ಸವ ಹಾಗೂ ಶ್ರೀ ಶಂಕರ ಜಯಂತಿ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸುವ ಮಹತ್ತರ ಕಾರ್ಯವನ್ನು ಟ್ರಸ್ಟ್ ಮಾಡುತ್ತಾ ಬಂದಿದೆ.
ಸಂಗೀತದ ವಿವಿಧ ಪ್ರಕಾರಗಳು, ವಾದ್ಯ ಮತ್ತು ತಾಳವಾದ್ಯ ಕಛೇರಿ, ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹಕ ಕಛೇರಿ, ಮಹಿಳಾ ಸಂಗೀತ ಕಲಾವಿದರಿಗೆ ವಿಶೇಷ ಪ್ರೋತ್ಸಾಹ, ಪ್ರತಿ ವರ್ಷ ಶ್ರೀ ತ್ಯಾಗರಾಜರ ಹಾಗೂ ಶ್ರೀ ಪುರಂದರ ದಾಸರ ಆರಾಧನೆ, ಒಂದು ವಾರಗಳ ಕಾಲ ಸಂಗೀತೋತ್ಸವ ಹಾಗೂ ಪ್ರತಿ ವರ್ಷ ವಾರ್ಷಿಕೋತ್ಸವಗಳನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ಕಳೆದ 40 ವರ್ಷಗಳಿಂದಲೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿರುವ ವಿದ್ವಾನ್ ಎಂ. ಅನಂತ್ ಇವರನ್ನು 31ನೇ ಯುವ ಸಂಗೀತ ವಿದ್ವಾಂಸರ ಸಮ್ಮೇಳನದಲ್ಲಿ ‘ಗಾನಕಲಾ ಸೇವಾಶ್ರೀ’ ಎಂಬ ಬಿರುದನ್ನಿತ್ತು ಅದರಾಭಿಮಾನಗಳಿಂದ ಗೌರವಿಸಿದ್ದು ಸಂಗೀತ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗೆ ಸಿಕ್ಕ ಗೌರವ.
ತಬಲಾ ವಿದ್ವಾನ್ ಎನ್.ಎಸ್. ಗುಂಡಾಶಾಸ್ತ್ರಿ
ಅರಗದ ಶ್ರೀ ಸುಬ್ರಹ್ಮಣ್ಯ ಜೋಯಿಸ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಸುಪುತ್ರರಾದ ಗುಂಡಾಶಾಸ್ತ್ರಿಗಳು ವಿದ್ವತ್ ಪರೀಕ್ಷೆಯಲ್ಲಿ ಎರಡನೇ ಶ್ರೇಣಿ ಪಡೆದಿದ್ದು, ಜೊತೆಯಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನದಲ್ಲೂ ಪರಿಣಿತರು ಮತ್ತು ಹಾರ್ಮೋನಿಯಂ ವಾದನದಲ್ಲೂ ಸಿದ್ಧಹಸ್ತರು. ಹಿಂದೂಸ್ಥಾನನೀ ಸಂಗೀತ ಕ್ಷೇತ್ರದ ದಿಗ್ಗಜರುಗಳೆಂದೆನಿಸಿದ ಸಂಗೀತ ಮಹಾ ಮಹೋಪಾಧ್ಯಾಯ ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿ ಹಾಗೂ ಪಂಡಿತ ಶೇಷಗಿರಿ ಹಾನಗಲ್ ಇವರ ಸಂಗೀತ ಮತ್ತು ತಬಲಾ ಗುರುಗಳು.
ತಮ್ಮ ಗುರುಗಳಾದ ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿಗಳವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗುರುವಂದನೆ ರೂಪದಲ್ಲಿ ಶಾಸ್ತ್ರಿಗಳು 05-02-1984ರಂದು ಹುಟ್ಟು ಹಾಕಿದ ಸಂಸ್ಥೆ ‘ಸಂಗೀತ ಕೃಪಾ ಕುಟೀರ’. ಇದು ಸಂಗೀತ ಕ್ಷೇತ್ರಕ್ಕೆ ಗುಂಡಾಶಾಸ್ತ್ರಿಗಳು ನೀಡಿರುವ ಅಮೂಲ್ಯ ಕಾಣಿಕೆ. ಈಗ 40ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
ಗುರುಕುಲದಂತಿರುವ ‘ಸಂಗೀತ ಕೃಪಾ ಕುಟೀರ’ದಲ್ಲಿ ಸುಮಾರು 300ಕ್ಕೂ ಹೆಚ್ಚು ತಬಲಾ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಸಂಗೀತ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ‘ಸ್ನೇಹ ಸಮ್ಮಿಲನ’ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗುವಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ರೂಪಕಗಳನ್ನು, ಸಂಗೀತ ಸ್ಪರ್ಧೆಗಳನ್ನು ನಡೆಸುತ್ತಾ ಆ ಮೂಲಕ ಹಲವಾರು ಕ್ಷೇತ್ರಗಳಲ್ಲಿ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟು ತುಂಬು ಮನಸ್ಸಿನಿಂದ ವಿದ್ಯಾರ್ಥಿಗಳನ್ನು ಆಶೀರ್ವದಿಸುತ್ತಿರುವ ಆದರ್ಶ ವ್ಯಕ್ತಿತ್ವ ವಿದ್ವಾನ್ ಗುಂಡಾಶಾಸ್ತ್ರಿಗಳದ್ದು.
ಶ್ರೀ ಐಯ್ಯನಾರ್ ಪ್ರೌಢ ಸಂಗೀತ ಕಲಾ ಶಾಲೆಯ 58ನೇ ವಾರ್ಷಿಕೋತ್ಸವದಲ್ಲಿ, ಕಲ್ಲೂರು ಮಹಾಲಕ್ಷ್ಮಿ ತಬಲಾ ವಿದ್ಯಾಲಯದ ವತಿಯಿಂದ, ಪಂಡಿತ್ ನಂದಕುಮಾರ್ ಕುರುಡಿ ಮತ್ತು ಶಿಷ್ಯವೃಂದದಿಂದ ಹಾಗೂ ಹಲವು ಸಂಗೀತ ಸಂಸ್ಥೆಗಳು ತಮ್ಮ ವಾರ್ಷಿಕೋತ್ಸವ ಸಂದರ್ಭದಲ್ಲಿ ಮತ್ತು ಗುರು ಗುಂಡಾಶಾಸ್ತ್ರಿಗಳ ಶಿಷ್ಯವೃಂದ ಗೌರವ ಪೂರ್ವಕವಾಗಿ ಇವರನ್ನು ಸನ್ಮಾನಿಸಿದ್ದಾರೆ. ಇವರಿಗೆ ದೊರೆತ ಪ್ರಶಸ್ತಿಗಳೂ ಹಲವಾರು – ‘ನಾದಶ್ರೀ’ ಪ್ರಶಸ್ತಿ. ‘ತಬಲಾ ನಾದ ಸಾಧಕ’ ಪ್ರಶಸ್ತಿ, ‘ಕನ್ನಡ ಕಣ್ಮಣಿ’ ಪ್ರಶಸ್ತಿ. ಇಂಟರ್ನ್ಯಾಷನಲ್ ಆಚೀವರ್ಸ್ ಕೌನ್ಸಿಲ್ ಯು.ಎಸ್.ಎ.ರವರಿಂದ ‘ಡಾಕ್ಟರ್ ಆಫ್ ಮ್ಯೂಜಿಕ್’ (ತಬ್ಲಾ) ಪ್ರಶಸ್ತಿ, “ನಾದ ಕಲಾ ಸಿಂಧೂರ’ ಪ್ರಶಸ್ತಿ, ‘ಮಂಜುದಾಸ’ ಪ್ರಶಸ್ತಿ. ಇವೆಲ್ಲವೂ ವಿದ್ವಾನ್ ಎನ್.ಎಸ್. ಗುಂಡಾ ಶಾಸ್ತ್ರಿಗಳು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗೆ ದೊರೆತ ಪ್ರತಿಫಲ.
ಶ್ರೀ ಬಿ.ಸಿ. ಜಯರಾಂ
ಚಿಕ್ಕಮಗಳೂರಿನ ಶ್ರೀ ಬಿ.ಸಿ. ಜಯರಾಂ ಇವರು ಶ್ರೀ ಬಿ. ಚಂದ್ರಶೇಖರಯ್ಯ ಮತ್ತು ಶ್ರೀಮತಿ ಸುಂದರಮ್ಮ ಇವರ ಸುಪುತ್ರ. ಸಾಮಾಜಿಕ ಸೇವೆಗಳ ವಿವಿಧ ಸಂಘಟನೆಗಳಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿವಂತರು. ಚಿಕ್ಕಮಗಳೂರಿನ ಮನೋರಂಜಿನಿ ಸಂಗೀತ ಮಹಾವಿದ್ಯಾಲಯ ಟ್ರಸ್ಟ್ (ರಿ.) ಇದರ ಸ್ಥಾಪಕ ಅಧ್ಯಕ್ಷರಾದ ಇವರು ಒಬ್ಬ ಉತ್ತಮ ಕ್ರಿಕೆಟ್ ಆಟಗಾರನಾಗಿದ್ದು, ಚಿಕ್ಕಮಗಳೂರಿನ ಒಂದು ಕ್ರಿಕೆಟ್ ಕ್ಲಬ್‌ನ ಕ್ಯಾಪ್ಟನ್ ಆಗಿ ಸುಮಾರು 15 ವರ್ಷ ಸೇವೆ ಸಲ್ಲಿಸಿದ್ದಾರೆ.
ಖ್ಯಾತ ಗಾಯಕರಾಗಿದ್ದ ಡಾ. ಪಿ.ಬಿ. ಶ್ರೀನಿವಾಸರನ್ನು ಗೌರವಿಸುವುದರೊಂದಿಗೆ ಅನೇಕ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜನಪರ ಕಾರ್ಯಗಳ ಪರವಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ. ಹಲವಾರು ಸಂಗೀತ ಕಲಾವಿದರನ್ನು ಬರಮಾಡಿಕೊಂಡು ಗೌರವಿಸಿ ಸನ್ಮಾನಿಸಿರುವುದು, ಶ್ರೀ ಪುರಂದರದಾಸರ ಹಾಗೂ ಶ್ರೀ ತ್ಯಾಗರಾಜರ ಆರಾಧನಾ ಕಾರ್ಯಕ್ರಮ ಪುನಃ ಪ್ರಾರಂಭಕ್ಕೆ ಸಹಕರಿಸಿರುವುದು ಶ್ಲಾಘನೀಯ.
ಶ್ರೀಮತಿ ಅಪರ್ಣಾ ಜಯರಾಂ
ಶ್ರೀಮತಿ ಅಪರ್ಣಾ ಜಯರಾಂ ದಿ. ಡಾ. ಕೆ. ಸುಬ್ಬಣ್ಣ ಮತ್ತು ಶ್ರೀಮತಿ ಶಾರದಾ ಸುಬ್ಬಣ್ಣ ಇವರು ಸುಪುತ್ರಿ. ಶ್ರೀಯುತ ಬಿ.ಸಿ. ಜಯರಾಂ ಇವರ ಧರ್ಮಪತ್ನಿಯಾದ ಇವರು ತಮ್ಮ ಏಳನೇ ವರ್ಷದ ಎಳವೆಯಲ್ಲಿಯೇ ಕರ್ನಾಟಕ ಶಾಸ್ತ್ರೀಯ ಗಾಯನದ ತರಬೇತಿ ಪಡೆದರು. ವಿದುಷಿ ಶ್ರೀಮತಿ ನಾಗರತ್ನಮ್ಮ, ವಿದುಷಿ ಶುಭಾಂಗಿ ಗೊರೂರ್ ಮತ್ತು ವಿದ್ವಾನ್ ಶ್ರೀ ಬಿ.ಎನ್.ಎಸ್. ಮುರಳಿ ಇವರು ಇವರ ಪ್ರತಿಭೆಗೆ ನೀರೆರೆದು ಪೋಷಿಸಿದವರು.
1998ರಲ್ಲಿ ‘ಮನೋರಂಜಿನಿ ಸಂಗೀತ ಮಹಾ ವಿದ್ಯಾಲಯ’ ಎಂಬ ಕರ್ನಾಟಕ ಶಾಸ್ತ್ರೀಯ ಸಂಗೀತ ಶಾಲೆಯನ್ನು ಚಿಕ್ಕಮಗಳೂರಿನಲ್ಲಿ ಆರಂಭಿಸಿದರು. ಪ್ರತೀ ವರ್ಷ ನಡೆಯುವ ಸಂಗೀತ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರಸ್ತುತಿಯ ಮೂವರಲ್ಲಿ ಒಬ್ಬರು ಈ ಸಂಸ್ಥೆಯವರಾಗಿರುತ್ತಾರೆ.
ಖ್ಯಾತ ಬರಹಗಾರರಾದ ವಿದ್ವಾನ್ ಶ್ರೀ ಕೆ.ಪಿ. ರತ್ನಾಕರ ಭಟ್ಟ ಮತ್ತು ಶ್ರೀ ಬಿ.ಸಿ. ಜಯರಾಂ ಇವರು ಭಗವದ್ಗೀತೆಯನ್ನು ಆಧರಿಸಿ 3 ಭಾಷೆಗಳಲ್ಲಿ ಬರೆದ ‘ಗೀತ ಗಾಯನ ಯಜ್ಞ’ ಎಂಬ ಕಾರ್ಯಕ್ರಮವನ್ನು ಅನೇಕ ಭಾರಿ ಪ್ರಸ್ತುತ ಪಡಿಸಿದ್ದಾರೆ. ಶ್ರೀ ತ್ಯಾಗರಾಜರ ‘ಪಂಚ ರತ್ನ’ ಕೃತಿಗಳನ್ನು ಹಾಡುವ ಕಾರ್ಯಾಗಾರವನ್ನು ನಿರಂತರವಾಗಿ ನಡೆಸುತ್ತಾ ಬಂದಿರುತ್ತಾರೆ.
‘ಮನೋರಂಜಿನಿ ಸಂಗೀತೋತ್ಸವ’ ಎಂಬ 5 ದಿನಗಳ ಕಾರ್ಯಕ್ರಮದಲ್ಲಿ 10 ವಿವಿಧ ತಂಡಗಳ ಸಂಗೀತಗಾರರನ್ನು ಆಹ್ವಾನಿಸಿ, ಪ್ರತೀದಿನ ಕಲಾಸಕ್ತರಿಗೆ ಸಂಗೀತ ಕಛೇರಿ, ಶಾಸ್ತ್ರೀಯ ಸಂಗೀತದ ಜ್ಞಾನಾಭಿವೃದ್ಧಿಗಾಗಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕಾರ್ಯಾಗಾರ, ಗಮಕ ಕಲೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಸಂಗೀತೋತ್ಸವದಲ್ಲಿ ಗಮಕ ಕಾರ್ಯಕ್ರಮ, ನಾದಸ್ವರ ಕಲಾವಿದರಿಗೆ ಗೌರವಾರ್ಪಣೆ ಮಾಡಿದ ಹೆಗ್ಗಳಿಕೆ ಇವರದು. ಕಳೆದ 25 ವರ್ಷಗಳಿಂದ ಪುರಂದರ ದಾಸ ಮತ್ತು ಶ್ರೀ ತ್ಯಾಗರಾಜ ಸ್ವಾಮಿಯ ಆರಾಧನೋತ್ಸವವನ್ನು ಸಾಂಪ್ರದಾಯಿಕವಾಗಿ ನಡೆಸುತ್ತಾ ಬಂದಿದ್ದಾರೆ.
ಶ್ರೀ ಎಸ್. ಗಣೇಶ್ ಪ್ರಸಾದ್
ಶ್ರೀ ಎಸ್. ಗಣೇಶ್ ಪ್ರಸಾದ್ ಇವರು ಸಂಗೀತಗಾರರ ವಂಶದಿಂದಲೇ ಬಂದವರು. ಖ್ಯಾತ ಸಂಗೀತಗಾರ ಹಾಗೂ ವಾಗ್ಗೇಯಕಾರರಾದ ಕೊಳತ್ತೂರು ರಾಮಕೃಷ್ಣ ಶಾಸ್ತ್ರಿಗಳ ಮೊಮ್ಮಗನಾದ ಇವರು ಪ್ರಸಿದ್ಧ ಸಂಗೀತಗಾರರೂ ಹಾಗೂ ವಾಗ್ಗೇಯಕಾರರೂ ಆದ ಶ್ರೀಯುತ ಸತ್ಯನಾಥ್ ಹಾಗೂ ಶ್ರೀಮತಿ ಲೀಲಾವತಿಯವರ ಸುಪುತ್ರ. ಅವರ ಸಹೋದರಿ ಸಂಗೀತ ಚೂಡಾಮಣಿ ಮನೆಯಲ್ಲಿಯೇ ಡಾ. ನಾಗವಲ್ಲಿ ನಾಗರಾಜ್ ರವರ ಮಾರ್ಗದರ್ಶನದಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದ ಕಾರಣ ಮನೆಯಲ್ಲಿ ಸದಾ ಸಂಗೀತದ್ದೇ ವಾತಾವರಣ ಇರುತ್ತಿತ್ತು.
ಶ್ರೀಯುತ ಎಸ್. ಗಣೇಶ್ ಪ್ರಸಾದರು ತಮ್ಮ ಮನೆತನದ ಸಂಗೀತ ಪರಂಪರೆಯನ್ನು ಪೋಷಿಸುತ್ತಾ ಕಲಾ ಪೋಷಕರಾಗಿ ಮುಂದುವರೆಸುತ್ತಾ ಬಂದಿರುತ್ತಾರೆ. ಅವರು ಬೆಂಗಳೂರಿನ ಪ್ರತಿಷ್ಟಿತ ಸಂಗೀತ ಸಭೆಗಳಾದ ವಿಜಯನಗರ ಸಂಗೀತ ಸಭೆಯ ಅಧ್ಯಕ್ಷರು ಹಾಗೂ ಗಿರಿನಗರ ಸಂಗೀತ ಸಭೆಯ ಉಪಾಧ್ಯಕ್ಷರಾಗಿ ಅತ್ಯಂತ ಉತ್ತಮ ಮಟ್ಟದ ಕಛೇರಿಗಳನ್ನು ಆಯೋಜಿಸುತ್ತಾ ತಮ್ಮನ್ನು ಕಲಾಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಮಾತ್ರವಲ್ಲದೆ ಇತರ ಸಂಘಟನೆಗಳು ಸಂಗೀತ ಕಾರ್ಯಕ್ರಮ ಆಯೋಜಿಸುವಾಗ ಗಣೇಶ್ ಪ್ರಸಾದರ ಸಹಕಾರ ಇದ್ದೇ ಇರುತ್ತದೆ.
ಕರ್ನಾಟಕ ಕಲಾಶ್ರೀ ಎಂ.ಆರ್. ಸತ್ಯನಾರಾಯಣ
ಶ್ರೀ ಎಂ.ಆರ್. ಸತ್ಯನಾರಾಯಣ ಇವರು ನಾಡಿನ ಹೆಸರಾಂತ ಗಮಕಿ ಎಂ. ರಾಘವೇಂದ್ರ ರಾವ್ ಇವರ ಸುಪುತ್ರ. ಬೆಂಗಳೂರು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕರೂ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರೂ ಆದ ಇವರು ರಾಜೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಉಡುಪಿಯ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಸ್ವರಕಲಾ ಗೌರವ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಕುಂದಾಪುರ ಇವು ಇವರ ಸಂಗೀತ ಮತ್ತು ಸಾಹಿತ್ಯದ ಕೃಷಿಗೆ ಸಂದ ಗೌರವ.
ಕನ್ನಡ ಕವಿ ಶ್ರೇಷ್ಠರ ಕಾವ್ಯಗಳ ವಾಚನ, ‘ಪಂಪ ಕಾವ್ಯ ವೈಭವ’ ಎಂಬ ಗಮಕ ನೃತ್ಯ ರೂಪಕದ ರಚನೆ-ನಿರ್ದೇಶನ, ಆಕಾಶವಾಣಿಯಲ್ಲಿ ಕಾವ್ಯವಾಚನ, ಸಂಗೀತ ನೃತ್ಯ ಅಕಾಡೆಮಿಯ ಸದಸ್ಯನಾಗಿ ಸೇವೆ. ಇವರ ಸಂಪಾದಕತ್ವದಲ್ಲಿ ಹಲವು ಪುಸ್ತಕಗಳ ಪ್ರಕಟಣೆ. ಇದು ಇವರ ಪ್ರತಿಭೆ ಹೊರಹೊಮ್ಮಲು ಸಿಕ್ಕ ಅವಕಾಶ. ದೂರದರ್ಶನ ಚಂದನ ವಾಹಿನಿಯ ಕಾವ್ಯ ಸಂಪುಟವೆಂಬ ದೀರ್ಘ ಸರಣಿಯ ರೂವಾರಿ ಹಾಗೂ ಸರಣಿ ಗಾಯಕ. ಅನೇಕ ಕನ್ನಡ ಅಧ್ಯಾಪಕರಿಗಾಗಿ ಗಮಕ ಕಲಾ ಶಿಕ್ಷಣ ಶಿಬಿರದ ಆಯೋಜನೆ ಮಾತ್ರವಲ್ಲದೆ ದ್ರೌಪದಿ ಸ್ವಯಂವರ ಎಂಬ ಧ್ವನಿ ಸುರುಳಿಯೂ ಬಿಡುಗಡೆಯಾಗಿದೆ.
ನೃತ್ಯ ರೂಪಕಗಳ ನಿರ್ಮಾತೃವಾಗಿ ಸುಮಾರು 17 ನೃತ್ಯ ರೂಪಕಗಳ ರಚನೆ ಮಾಡಿದ ಗೌರವ ಇವರಿಗಿದೆ. ಆಕಾಶವಾಣಿಗಾಗಿ ನಿರ್ಮಿಸಿದ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳು : ವಾಚನ ಸಾಹಿತ್ಯಾಧಾರಿತ ‘ಅಮೃತ ಸಿಂಚನ’, ‘ದಾಸಾಮೃತ’, ‘ಲೋಕೋಕ್ತಿ’ ಇತ್ಯಾದಿ ಇವರು ನಿರ್ಮಿಸಿದ ವಿಶಿಷ್ಟ ಕಾರ್ಯಕ್ರಮಗಳು. ಇವುಗಳೊಂದಿಗೆ ಕಾಸರಗೋಡಿನಲ್ಲಿ ಕನ್ನಡ ಭಾಷಾ ಶಿಬಿರ, ಗಮಕಿ ಎಂ. ರಾಘವೇಂದ್ರ ರಾವ್ ಬಗ್ಗೆ ಸಾಕ್ಷ್ಯಚಿತ್ರ, ನಾಟಕಗಳ ನಿರ್ದೇಶನ ಇವುಗಳು ಇವರಿಗೆ ಗೌರವ ತಂದು ಕೊಟ್ಟ ಕಾರ್ಯಕ್ರಮಗಳು.
ಡಾ. ಪ್ರಕಾಶ್ ಶೆಣೈ
1992ರಲ್ಲಿ ಪ್ರಾರಂಭಗೊಂಡ ಕಾರ್ಕಳದ ಶಾಸ್ತ್ರೀಯ ಸಂಗೀತ ಸಭಾ (ರಿ.) ಇದರ ಸ್ಥಾಪಕ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳಿಂದ ಶಾಸ್ತ್ರೀಯ ಸಂಗೀತದ ಸೇವೆಯನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದವರು ಕಾರ್ಕಳದ ಡಾ. ಪ್ರಕಾಶ್ ಶೆಣೈಯವರು. ವೃತ್ತಿಯಲ್ಲಿ ಖ್ಯಾತ ವೈದ್ಯರಾದ ಇವರು ಬಾಲ್ಯದಿಂದಲೇ ಸಂಗೀತಾಸಕ್ತರಾಗಿದ್ದು ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ, ಹಾರ್ಮೋನಿಯಂ ಹಾಗೂ ತಬ್ಲಾ ವಾದನಗಳ ಅಭ್ಯಾಸ ನಡೆಸಿದ್ದಾರೆ. ಶಾಸ್ತ್ರೀಯ ಸಂಗೀತದ ವಿಭಿನ್ನ ಪ್ರಕಾರಗಳನ್ನು ಕಾರ್ಕಳ ಆಸುಪಾಸಿನ ಸಂಗೀತಾಭಿಮಾನಿಗಳಿಗೆ ಪರಿಚಯಿಸಿದ ಇವರು ಹಲವಾರು ಅಂತರಾಷ್ಟ್ರೀಯ ಖ್ಯಾತಿಯ ಗಾಯಕರನ್ನು, ವಾದಕರನ್ನೂ ತಮ್ಮ ಸಭಾದ ಮೂಲಕ ಕರಾವಳಿಗೆ ಪರಿಚಯಿಸಿದ್ದಾರೆ.
ಈವರೆಗೆ ಸಭಾದ ಆಶ್ರಯದಲ್ಲಿ 500ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. 1000ಕ್ಕೂ ಮಿಕ್ಕಿ ಯುವ ಕಲಾವಿದರು ತಮ್ಮ ಪ್ರತಿಭೆ ತೋರುವಲ್ಲಿ ಶ್ರಮ ವಹಿಸಿದ್ದಾರೆ. ಹಲವಾರು ಉಪನ್ಯಾಸ, ಪ್ರಾತ್ಯಕ್ಷಿಕೆ ಅಹೋರಾತ್ರಿ ಸಂಗೀತೋತ್ಸವ, ಯುವ ಪ್ರತಿಭೆಗಳಿಗಾಗಿ ‘ಕಲಾ ಸಾಧನಾ’, ಪ್ರತಿ ವರ್ಷ ಕನಿಷ್ಟ 2-3 ದಿನ ರಾಷ್ಟ್ರೀಯ ಸಂಗೀತೋತ್ಸವ ನಿರಂತರವಾಗಿ ನಡೆಯುತ್ತಾ ಬಂದಿದೆ. ಶಾಸ್ತ್ರೀಯ ಸಂಗೀತ ಸಭಾದ ಪಂಚಮೋತ್ಸವ, ದಶಮನೋತ್ಸವ, ಸತತ ನಾಲ್ಕು ವರ್ಷಗಳ ಕಾಲ ತಾಟಕ ಸಂಗೀತ ಮಹೋತ್ಸವ, ರಜತ ಮಹೋತ್ಸವದ ಅಂಗವಾಗಿ 6 ದಿನಗಳ ರಾಷ್ಟ್ರೀಯ ಸಂಗೀತ ಮಹೋತ್ಸವಗಳ ಯಶಸ್ಸಿನಲ್ಲಿ ಇವರು ಸೂತ್ರದಾರರು.
ಇವರ ಸಂಗೀತಾಸಕ್ತಿ ಗುರುತಿಸಿ ಹಲವು ಸಂಘಟನೆಗಳು ಇವರನ್ನು ಸನ್ಮಾನಿಸಿವೆ. ಇವರ ಪುತ್ರಿ ಕು. ಮಹಾಲಕ್ಷ್ಮೀ ಶೆಣೈ ಈಗಾಗಲೇ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಖ್ಯಾತ ಗಾಯಕಿಯಾಗಿರುತ್ತಾರೆ.
ನಿತ್ಯಾನಂದ ರಾವ್
ಪಿ. ನಿತ್ಯಾನಂದ ರಾವ್ 1993ರಲ್ಲಿ ಮಂಗಳೂರಿನಲ್ಲಿ ಸಂಗೀತ ಪರಿಷತ್ತಿನ ಸ್ಥಾಪನೆ ಮಾಡಿ 2004ರಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡೆಮಿಯನ್ನು ಪ್ರಾರಂಭಿಸಿ ಸಂಗೀತ ಸಂಬಂಧಿ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ನಿರಂತರ ಸಂಗೀತ ಕಛೇರಿಗಳು, ಯುವ ಕಲಾವಿದರಿಗೆ ಪ್ರಶಸ್ತಿಗಳು ಹಾಗೂ ಹಿರಿಯ ಸಾಧಕರಿಗೆ ಸನ್ಮಾನ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ವಿಶೇಷ ಸಾಧನೆಗಳು. 1983ರಿಂದ ಮಡದಿ ಕೃಷ್ಣಕುಮಾರಿ ಹಾಗೂ ಮಕ್ಕಳ ಜೊತೆ ಸುರತ್ಕಲ್ ನಲ್ಲಿ ವಾಸಿಸುತ್ತಿರುವ ಇವರು ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಮೂಲಕ ಕೋವಿಡ್ ಸಂದರ್ಭದಲ್ಲಿ ಫೇಸ್ಬುಕ್ ಮೂಲಕ 1000ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ಆಯೋಜಿಸಿ ಕಲಾವಿದರಿಗೆ ಆರ್ಥಿಕವಾಗಿಯೂ ಸಹಾಯ ಮಾಡಿರುವುದು ಪ್ರಶಂಸನೀಯ.
ಎಲೆಕ್ಟ್ರಿಕಲ್ ಡಿಪ್ಲೋಮಾದಲ್ಲಿ ತರಬೇತಿ ಪಡೆದ ಇವರು ಅತ್ತೆ ಶ್ರೀದೇವಿ ಮತ್ತು ಪಡುಬಿದ್ರೆ ಸುಬ್ರಾಯ ಮಾಣಿ ಭಾಗವತರಿಂದ ಸಂಗೀತ ಮತ್ತು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮತ್ತು ದೀವಾಣ ಭೀಮ ಭಟ್ ಇವರಿಂದ ಯಕ್ಷಗಾನ ಭಾಗವತಿಕೆಯನ್ನು ಅಭ್ಯಾಸ ಮಾಡಿದ್ದಾರೆ. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಮೂಲಕ ಸಂಗೀತದ ಬೇರೆ ಬೇರೆ ಮಜಲುಗಳನ್ನು ಕಲಾಸಕ್ತರಿಗೆ ಪರಿಚಯಿಸುವುದರೊಂದಿಗೆ ಶಾಸ್ತ್ರೀಯ ಸಂಗೀತವನ್ನು ತನ್ನದೇ ಆದ ರೀತಿಯಲ್ಲಿ ಉಳಿಸಿ ಬೆಳೆಸಿ ಪರಿಶುದ್ಧ ರೀತಿಯಲ್ಲಿ ಮುಂದಿನ ಪೀಳಿಗೆಗೆ ತಲುಪಿಸುವ ಇವರ ಪ್ರಯತ್ನ ಅಮೋಘವಾದುದು.
ಪ್ರೊ. ಅರವಿಂದ ಹೆಬ್ಬಾರ್
ಪ್ರೊ. ಅರವಿಂದ ಹೆಬ್ಬಾರ್ ಇವರು ವೃತ್ತಿಯಲ್ಲಿ ಕಾಲೇಜಿನಲ್ಲಿ ಉಪನ್ಯಾಸ ಮಾಡುವ ಪ್ರೊಫೆಸರ್ ಆಗಿದ್ದರೂ ಸಂಗೀತ ಅವರ ಪ್ರವೃತ್ತಿ. ಅವರ ಪುತ್ರಿ ರಂಜನಿ ಹೆಬ್ಬಾರ್ ಇಹವನ್ನು ತ್ಯಜಿಸುವವರೆಗೂ (2013) ಒಬ್ಬ ಉತ್ತಮ ಸಂಗೀತ ಕಲಾವಿದೆಯಾಗಿದ್ದಳು. 2014ರಲ್ಲಿ ಶ್ರೀ ಅರವಿಂದ ಹೆಬ್ಬಾರ್ ಮಗಳ ಸ್ಮರಣಾರ್ಥ ‘ರಂಜನಿ ಮೆಮೋರಿಯಲ್ ಟ್ರಸ್ಟ್’ ಆರಂಭಿಸಿ ಸಂಗೀತಾಸಕ್ತ ಯುವ ಪೀಳಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರು ‘ರಾಗ ಧನ’ದ ಸ್ಥಾಪಕ ಕಾರ್ಯದರ್ಶಿಯಾಗಿದ್ದಾರೆ. ಒಬ್ಬ ಉತ್ತಮ ಸಂಗೀತ ಸಂಯೋಜಕರಾಗಿ 150ಕ್ಕೂ ಹೆಚ್ಚು ದಾಸರ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಇವರು ಸಂಗೀತದ ಮೇಲೆ ಹಲವಾರು ಕೃತಿ ರಚನೆ ಮಾಡುವುದರೊಂದಿಗೆ ವಿಮರ್ಶೆಗಳನ್ನು ಮಾಡಿದ್ದಾರೆ.
ಹಲವಾರು ಪ್ರತಿಷ್ಟಿತ ಸಂಘಟನೆಗಳು ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋದ ಅನುಭವ ಇವರಿಗಿದೆ. ‘ಸಂಗೀತ ಶಾಸ್ತ್ರ ರೂಪ ರಂಜನಿ’, ಪುರಂದರೋಪ ನಿಷತ್’, ‘ವಿಮರ್ಶೆಯ ಹರಿತ’, ‘ಪರಿಸರ ವಿಜ್ಞಾನ’ ಇತ್ಯಾದಿ ಇವರು ಬರೆದ ಕೃತಿಗಳು. ಶ್ರೀ ಸುಬ್ರಹ್ಮಣ್ಯ ಲಲಿತ ಕಲಾ ಅಕಾಡಮಿ ‘ಲಲಿತ ಕಲಾಶ್ರಯ’ ಮತ್ತು ‘ಉತ್ತಮ ಸಂಘಟಕ ಪ್ರಶಸ್ತಿ’ ನೀಡಿ ಗೌರವಿಸಿದೆ. ಸಂಗೀತ, ಸಾಹಿತ್ಯ, ಸಂಘಟನೆ ಇತ್ಯಾದಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅನೇಕ ಸಂಘಟನೆಗಳು ಈ ಬಹುಮುಖ ಪ್ರತಿಭೆಯ ಶ್ರೀ ಅರವಿಂದ ಹೆಬ್ಬಾರರನ್ನು ಗೌರವದಿಂದ ಪುರಸ್ಕರಿಸಿರುವುದು ಇವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.