ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ – ಸಾಹಿತ್ಯಿಕ ಸಂಘಟನೆ ‘ರಂಗಸ್ಪಂದನ ಮಂಗಳೂರು’ ಆಶ್ರಯದಲ್ಲಿ ‘ಸಾಂಸ್ಕೃತಿಕ ರಂಗ ದಿಬ್ಬಣ’ ಸರಣಿ ಕಾರ್ಯಕ್ರಮಗಳು ಜೂನ್ 12, 17, 18ರಂದು ನಡೆಯಲಿದೆ.
‘ಸಾಂಸ್ಕೃತಿಕ ರಂಗ ದಿಬ್ಬಣ’ ಎಂಬ ಸರಣಿ ಕಾರ್ಯಕ್ರಮದಲ್ಲಿ ದಿಬ್ಬಣ 1 ಪೌರಾಣಿಕ ತುಳುನಾಟಕ ಜೂನ್ 12ರಂದು ಸಂಜೆ 6 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ರಂಗ ಜ್ಯೋತಿ ಬೆಳಗಿ ಹಿರಿಯ ರಂಗ ನಿರ್ದೇಶಕ ಶ್ರೀ ಕಾಸರಗೋಡು ಚಿನ್ನಾ ಉದ್ಘಾಟಿಸಲಿದ್ದಾರೆ. ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಶ್ರೀ ಪದ್ಮರಾಜ್ ಆರ್. ಹಾಗೂ ನಮ್ಮ ಟಿವಿ ವಾಹಿನಿ ಆಡಳಿತ ನಿರ್ದೇಶಕರಾದ ಡಾ. ಶಿವಚರಣ್ ಶೆಟ್ಟಿಯವರು ಶುಭಾಶಂಸನೆಗೈಯಲಿದ್ದಾರೆ. ಬಳಿಕ ವಿಜಯ ಕುಮಾರ್ ಕೊಡಿಯಾಲಬೈಲ್ ಅವರ “ಶಿವದೂತೆ ಗುಳಿಗೆ” ಎನ್ನುವ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
ದಿಬ್ಬಣ 2 ಯಕ್ಷವೈಭವ ಕಾರ್ಯಕ್ರಮ ಜೂನ್ 17ರಂದು ಸಂಜೆ 5.30ಕ್ಕೆ ಕಾವೂರು ಪದವಿನ ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯಲಿದ್ದು, ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶ್ರೀ ಕುಸುಮಾಕರ್ ಯಕ್ಷಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಸಾಲಿಯಾನ್ ಹಾಗೂ ಕಚ್ಚೂರಮಾಲ್ದಿ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಎಂ.ಸಿ. ಕುಮಾರ್ ಇವರು ಶುಭ ಹಾರೈಸಲಿದ್ದಾರೆ. ಬಳಿಕ ಯಕ್ಷಗಾನ ವೈಭವ, ಕಾವೂರಿನ ಶ್ರೀ ಕಚ್ಚೂರಮಾಲ್ದಿ ಯಕ್ಷಗಾನ ಮಂಡಳಿಯ ಸದಸ್ಯರಿಂದ ಯಕ್ಷ ಗುರು ಡಾ. ದಿನಕರ ಎಸ್. ಪಚ್ಚನಾಡಿ ನಿರ್ದೇಶನದ ‘ಜಾಂಬವತಿ ಕಲ್ಯಾಣ’ ಮತ್ತು ‘ಶ್ರೀ ದೇವಿ ಮಹಿಷ ಮರ್ದಿನಿ’ ಕಥಾ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ.
ದಿಬ್ಬಣ 3 ನೃತ್ಯ ಸಂಗೀತ ಸಿಂಚನ ಕಾರ್ಯಕ್ರಮ ಜೂನ್ 18ರಂದು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ನಡೆಯಲಿದ್ದು, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಲಕ್ಷ್ಮಣ್ ಅಮೀನ್ ಸಂಗೀತ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಸಂಧ್ಯಾ ಮೋಹನ್ ಅಚಾರ್ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಚಿಂತಕರೂ, ಹಿರಿಯರೂ ಆದ ಶ್ರೀ ಮಾಧವ ಸುವರ್ಣ ಇವರು ಶುಭಾಶಂಸನೆಗೈಯಲಿದ್ದಾರೆ. ಬಳಿಕ ಬೈಕಾಡಿ ಪ್ರತಿಷ್ಠಾನದಿಂದ ಚಿಣ್ಣರ ರಂಗು ರಂಗಿನ ವೈವಿಧ್ಯಮಯ ನೃತ್ಯರೂಪಕ ಸಂಗೀತ ರಸಸಂಜೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ರಂಗಸ್ಪಂದನದ ಸಂಚಾಲಕರಾದ ಶ್ರೀ ವಿ.ಜಿ. ಪಾಲ್ ಆತ್ಮೀಯ ಸ್ವಾಗತ ಕೋರಿದ್ದಾರೆ.