ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ‘ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ’ಗೆ ನಾಡಿನ ಹಿರಿಯ ಶಿಕ್ಷಣ ತಜ್ಞ, ಲೇಖಕ, ಜನಪದ ವಿದ್ವಾಂಸ, ಅಂಕಣಕಾರರಾದ ಡಾ. ತೇಜಸ್ವಿ ಕಟ್ಟೀಮನಿ ಅವರು ಆಯ್ಕೆಯಾಗಿದ್ದಾರೆ.
ನಾಲ್ವಡಿಯವರು ನಾಡಿನ ಅಭ್ಯುದಯದ ಕನಸು ಕಂಡವರು. ಅವರ ಆಶಯದಂತೆ ನಾಡಿನಲ್ಲಿ ಕೈಗಾರಿಕಾ ಕ್ಷೇತ್ರ, ಕೃಷಿ, ನೀರಾವರಿ, ವಿದ್ಯುಚ್ಛಕ್ತಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ, ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಕ್ಷೇತ್ರ, ನೀರಿನ ಸೌಕರ್ಯ, ಸಾರಿಗೆ ಸೌಲಭ್ಯ, ವ್ಯಾಪಾರ ಸೇರಿದಂತೆ ನಾಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡಿರುವ ಗಣ್ಯರೊಬ್ಬರಿಗೆ ಪ್ರತಿ ವರ್ಷ ಈ ಪ್ರಶಸ್ತಿಯನ್ನುನೀಡುತ್ತಾ ಬಂದಿದೆ. ಪ್ರಸ್ತುತ ‘ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ’ಯನ್ನು ನೀಡಬೇಕು ಎನ್ನುವ ಮೂಲ ಆಶಯ ಈ ದತ್ತಿ ಪ್ರಶಸ್ತಿಯದ್ದಾಗಿದೆ. ಪ್ರಶಸ್ತಿಯು ರೂ.51,000 ನಗದು, ಸ್ಮರಣಿಕೆ, ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ.
ಇದುವರೆಗೂ ನಾಡಿನ 13 ಜನ ಗಣ್ಯರಿಗೆ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದ್ದು ಈ ಬಾರಿಯ ಆಯ್ಕೆ ಸಮಿತಿಯು 2023ನೆಯ ಸಾಲಿನ ಈ ಪ್ರಶಸ್ತಿಗೆ ಡಾ. ತೇಜಸ್ವಿ ಕಟ್ಟೀಮನಿ ಅವರನ್ನು ಆಯ್ಕೆಮಾಡಿದೆ. ಶ್ರೀಯುತರು ಮೂಲತಃ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದವರು ಮತ್ತು ಕೇಂದ್ರಿಯ ಬುಡಕಟ್ಟು ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದು ಈಗಾಗಲೇ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.
ರಿವಾಯತ ಪದಗಳು, ಜ್ಯೋತಿಬಾ ಫುಲೆ (ರೇಖಾಚಿತ್ರ), ಮುಂಗಾರು ಮಳೆ, ಮಂಡಲ ವರದಿ : ಒಂದು ಅಧ್ಯಯನ, ಹುಡುಗಿ ಪ್ರೀತಿಸುವುದೇ ಹೀಗೆ (ಮೂಲ ಕವಿತೆಗಳ ಸಂಗ್ರಹ), ಕತ್ತಲೆಯ ಅಳಿವಿನಾಚೆ (ಲೇಖನಗಳ ಸಂಗ್ರಹ), ಕನ್ನಡದಿಂದ ಹಿಂದಿಗೆ ಅನುವಾದಿತ : ಪಿ. ಲಂಕೇಶರ ಕಥಾ ಸಾಹಿತ್ಯ, ಅನುವಾದಕ್ಕೆ ವಿವಿಧ ಆಯಾಮ, ವಸ್ತುನಿಷ್ಠ ಹಿಂದಿ ಪ್ರತಿಯೋಗಿತಾ, ಜಲಗೀತ, ಸೃಷ್ಟಿ ಔರ್ ದೃಷ್ಟಿ, ಹಿಂದಿಯಿಂದ ಕನ್ನಡಕ್ಕೆ: ಗಾಂವ್ ಗಲಿ (ಸಿದ್ಧಲಿಂಗ್ಯ ಅವರ ಆತ್ಮಕಥೆಯ ಹಿಂದಿ ಅವತರಣಿಕೆ) ಜಂಗಲ್ ಕೀ ಮೋಹಿನಿ, ಡಾ. ಬುದ್ದಣ್ಣ ಹಿಂಗಮಿರೆ ಅವರ ಕಾವ್ಯ ನಾಟಕ ಸೇರಿ ಕನ್ನಡ, ಇಂಗ್ಲಿಷ್ ಹಾಗೂ ಗುಜರಾತಿ ಹೀಗೆ ಇತರೆ ಭಾಷೆಗಳ ಕೃತಿಗಳನ್ನು ಭಾಷಾಂತರಿಸಿದ ಇವರು ಬಹುಮುಖ ಕೊಡುಗೆಯನ್ನು ನಾಡಿಗೆ ನೀಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.