ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾಷಾ ಶಾಸ್ತ್ರಜ್ಞರಿಗಾಗಿ ಮೀಸಲಿಟ್ಟಿರುವ ʻಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ವಿದ್ವತ್ ಪ್ರಶಸ್ತಿʼಯನ್ನು ಪ್ರಕಟಿಸಲಾಗಿದ್ದು. 2022 ಹಾಗೂ 2023ನೆಯ ಸಾಲಿನ ಪ್ರಶಸ್ತಿಗಾಗಿ ಭಾಷಾಶಾಸ್ತ್ರದ ಮೂಲಕ ನಾಡಿನಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.ಈ ಪ್ರಶಸ್ತಿಯು ಹಿರಿಯ ಭಾಷಾಶಾಸ್ತ್ರಜ್ಞರಿಗೆ ನೀಡುವ ಅತೀ ಮಹತ್ವವಾದ ಪುರಸ್ಕಾರವಾಗಿದ್ದು ಇದಕ್ಕೆ ಅವರ ಅಭಿಮಾನಿಗಳು ಹಾಗೂ ಬಂಧುಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿದ್ದಾರೆ. ಪ್ರಶಸ್ತಿಯು 10,000/-(ಹತ್ತು ಸಾವಿರ)ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಹಳೆಗನ್ನಡ ಸಾಹಿತ್ಯ, ಛಂದಸ್ಸು, ವ್ಯಾಕರಣ, ನಿಘಂಟು ರಚನೆ, ಗ್ರಂಥ ಸಂಪಾದನೆ, ಅನುವಾದ, ಭಾಷಾ ಶಾಸ್ತ್ರ ಶಾಸ್ತ್ರಸಾಹಿತ್ಯ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಿಗಾಗಿಯೇ ಈ ಪ್ರಶಸ್ತಿಯನ್ನು ದತ್ತಿ ದಾನಿಗಳು ಮೀಸಲಿಟ್ಟಿದ್ದು ಅದರಂತೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧಕರಿಗೆ ನೀಡುತ್ತಾ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಕನ್ನಡ ಸಾರಸ್ವತಲೋಕದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿರುವ ಭಾಷಾಶಾಸ್ತ್ರಜ್ಞರನ್ನು ಗುರುತಿಸಿ ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ ವಿದ್ವತ್ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಸಮಿತಿ ರಚನೆ ಮಾಡಿದೆ. ಇದುವರೆಗೆ ಕರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಯಾವುದೇ ಕರ‍್ಯಕ್ರಮ ನಡೆಯದೇ ಇರುವ ಹಿನ್ನೆಲೆಯಲ್ಲಿ ಎರಡು ಸಾಲಿನ ಪ್ರಶಸ್ತಿಯ ಪ್ರಕಟಣೆ ಬಾಕಿ ಇದ್ದು ಈಗ ಈ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.
2022ನೆಯ ಸಾಲಿನ ಪ್ರಶಸ್ತಿಯನ್ನು ಹಿರಿಯ ಭಾಷಾಶಾಸ್ತ್ರಜ್ಞೆ ಮೈಸೂರಿನ ಡಾ. ವೈ. ಸಿ. ಭಾನುಮತಿ ಹಾಗೂ 2023ನೆಯ ಪ್ರಶಸ್ತಿಗಾಗಿ ಭಾಷಾಶಾಸ್ತ್ರಜ್ಞ ಪ್ರೊ. ಜಿ. ಅಶ್ವತ್‌ನಾರಾಯಣ ಅವರನ್ನು ಸಮಿತಿ ಆಯ್ಕೆಮಾಡಿರುತ್ತದೆ. ಈ ಬಾರಿ ಆಯ್ಕೆಯಾಗಿರುವ ಡಾ. ವೈ. ಸಿ. ಭಾನುಮತಿ ಹಾಗೂ ಪ್ರೊ. ಜಿ. ಅಶ್ವತ್‌ನಾರಾಯಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ʻಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ಅವರ ಮಗಳಾದ ಶ್ರೀಮತಿ ಟಿ.ವಿ.ಚಿತ್ಕಲಾ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿಗೆ ಪ್ರೊ ಜಿ. ಅಶ್ವತ್‌ನಾರಾಯಣ ಹಾಗೂ ಡಾ. ವೈ. ಸಿ.ಭಾನುಮತಿ ಅವರು ಆಯ್ಕೆ
Previous Articleಮನೆ ಮನೆ ಗಮಕದಲ್ಲಿ – ‘ರುಕ್ಮಿಣಿ ವಿಜಯ’
Next Article ಕಪ್ಪಣ್ಣ ಅಂಗಳದಲ್ಲಿ 70ನೇ ಸರಣಿ ಕಾರ್ಯಕ್ರಮ ‘ಆಲಾಪ್’