ಬೆಂಗಳೂರು: ದೇಶದ ವಿವಿಧ ಭಾಷೆಗಳ ಸಮಗ್ರ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗ ಸಾಹಿತಿಗಳಿಗೆ ಕೊಡಮಾಡುವ 2022 ಹಾಗೂ 2023ನೇ ಸಾಲಿನ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು ರೂಪಾಯಿ 10,000/-(ಹತ್ತು ಸಾವಿರ) ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್(ರಿ) ನವರು ಈ ದತ್ತಿ ನಿಧಿಯನ್ನು ಕನ್ನಡಿಗರ ಸಾರ್ವಭೌಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ.
2022ನೆಯ ಸಾಲಿನ ಈ ಪ್ರಶಸ್ತಿಯನ್ನು ಮಂಡ್ಯದ ಶ್ರೀಮತಿ ಗುಣಸಾಗರಿ ನಾಗರಾಜ್ ಹಾಗೂ 2023ನೆಯ ಸಾಲಿನ ಪುರಸ್ಕಾರಕ್ಕೆ ಚಿಕ್ಕಮಗಳೂರಿನ ಶ್ರೀಮತಿ ಡಿ.ಎನ್.ಗೀತಾ ಇವರನ್ನು ಆಯ್ಕೆ ಸಮಿತಿ ಆಯ್ಕೆಮಾಡಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಈ ದತ್ತಿ ಪ್ರಶಸ್ತಿಯುನ್ನು ಕಳೆದ 13 ವರ್ಷಗಳಿಂದ ನಿರಂತರವಾಗಿ ನೀಡುತ್ತಾ ಬಂದಿದೆ. ದಾನಿಗಳ ಮೂಲ ಉದ್ದೇಶದಂತೆ ದೇಶದ ವಿವಿಧ ಭಾಷೆಗಳ ಸಮಗ್ರ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗ ಸಾಹಿತಿಯೊಬ್ಬರನ್ನು ಗುರುತಿಸಿ ಈ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದುವರೆಗೆ ರಾಜ್ಯದ 13 ಹಿರಿಯ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಈ ಬಾರಿ ಆಯ್ಕೆಯಾಗಿರುವ ಮಂಡ್ಯದ ಶ್ರೀಮತಿ ಗುಣಸಾಗರಿ ನಾಗರಾಜ್ ಹಾಗೂ ಚಿಕ್ಕಮಗಳೂರಿನ ಶ್ರೀಮತಿ ಡಿ.ಎನ್.ಗೀತಾ ಇವರಿಬ್ಬರನ್ನೂ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಸಮಸ್ತ ಕನ್ನಡಿಗರ ಪರವಾಗಿ ಅಭಿನಂದಿಸಿದ್ದಾರೆ.
ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳ ಪರವಾಗಿ ಶ್ರೀಮತಿ ವರದಾ ಶ್ರೀನಿವಾಸ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.