ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಡಾ. ಹೆಚ್. ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್. ಇಂದಿರಾ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 16-06-2023ನೇ ಶುಕ್ರವಾರದಂದು ಪರಿಷತ್ತಿನ ಶ್ರೀ ಕೃಷ್ಣರಾಜ ಮಂದಿರದಲ್ಲಿ ನಡೆಯಿತು. 2023ನೆಯ ಸಾಲಿನ ಈ ಪ್ರಶಸ್ತಿಯನ್ನು ವಿಶೇಷ ದೃಷ್ಟಿ ಚೇತನ ಲೇಖಕರಾದ ಉಡುಪಿಯ ಶ್ರೀಮತಿ ಸೌಮ್ಯ ಪುತ್ರನ್ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿ “ಶೇ 7.5ರಷ್ಟು ದೃಷ್ಟಿ ವೈಕಲ್ಯ ಇರುವ ಸೌಮ್ಯ ಅದರ ನಡುವೆಯೂ ನಿರಂತರವಾಗಿ ಜೀವನ ನಿರ್ವಹಿಸುತ್ತ ಸಾಗಿದ್ದು ಶ್ಲಾಘನೀಯ. ಈಗ ದೃಷ್ಟಿ ವೈಕಲ್ಯದಿಂದಾಗಿ ಸ್ವತಃ ಬರೆಯಲು ಸಾಧ್ಯವಾಗದೆ, ಆಧುನಿಕ ತಂತ್ರಜ್ಞಾನದ ಅನುಸಾರ ಧ್ವನಿ ಮುದ್ರಿಸಿ, ಇನ್ನೊಬ್ಬರಿಂದ ಬರೆಯಿಸಿ, ಮತ್ತೆ ಮತ್ತೆ ಓದಿಸಿ, ಅದನ್ನು ಸರಿಪಡಿಸಿಕೊಳ್ಳುತ್ತಾರೆ. ಈ ಕಾರ್ಯದಲ್ಲಿ ಅವರ ಕಾರ್ಯತತ್ಪರತೆ, ಪರಿಶ್ರಮ, ತಾಳ್ಮೆ, ಸಹನೆಯನ್ನು ಗೌರವಿಸಲೇಬೇಕು” ಎಂದರು.
ಪ್ರಶಸ್ತಿ ಪ್ರಧಾನ ಮಾಡಲು ಆಗಮಿಸಿದ ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಶ್ರೀ ಚಿರಂಜೀವಿ ಸಿಂಗ್ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ತನ್ನ ರಚನಾತ್ಮಕ ಕಾರ್ಯಗಳಿಂದ ಜನರ ಹತ್ತಿರಕ್ಕೆ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಷತ್ತು ಜನ ಸಾಮಾನ್ಯರ ಪರಿಷತ್ತು ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿಶೇಷ ಚೇತನ ಇರುವವರಿಗೆ ಗೌರವ ನೀಡುವ ಮೂಲಕ ಕನ್ನಡದ ಸೇವೆಯಲ್ಲಿ ತೊಡಗಿಕೊಂಡಿದೆ. ಸಾಹಿತ್ಯವನ್ನು ದೃಷ್ಟಿಯ ಪ್ರತೀಕವಾಗಿ ಬಳಸಿಕೊಳ್ಳುವ ಮೂಲಕ ಲೇಖಕಿ ಸೌಮ್ಯ ಪುತ್ರನ್ ಅವರು ಅನಿಕೇತನದ ದಾರಿಯನ್ನು ತುಳಿಯುತ್ತಿದ್ದಾರೆ” ಎಂದು ಹೇಳಿದರು.
ದತ್ತಿ ದಾನಿಗಳಾದ ಡಾ. ಎಚ್. ವಿಶ್ವನಾಥ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತಿಗೆ ನಾನೂ ಏನಾದರೂ ಕೊಡುಗೆ ಕೊಡಬೇಕು ಎಂಬ ಹಿನ್ನೆಲೆಯಲ್ಲಿ ಚಿಂತನೆ ಮಾಡಿದಾಗ ದತ್ತಿ ನೀಡುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಳಿಲು ಸೇವೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದೆ. ಅದರಲ್ಲಿಯೂ ದೃಷ್ಟಿ ದಿವ್ಯಾಂಗ ಚೇತನ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಮುಂದಾದೆ. ಅದಕ್ಕೆ ಪರಿಷತ್ತು ಸ್ಪಂದಿಸಿ ಯೋಗ್ಯರಿಗೆ ಪ್ರಶಸ್ತಿ ಪ್ರಧಾನ ಮಾಡುತ್ತಿದೆ” ಎಂದರು.
ಪ್ರಶಸ್ತಿ ಸ್ವಿಕರಿಸಿದ ಲೇಖಕಿ ಶ್ರೀಮತಿ ಸೌಮ್ಯ ಪುತ್ರನ್ ಅವರು ಬದುಕಿನಲ್ಲಿ ಕಳೆದುಕೊಂಡಿರುವ ಬಗ್ಗೆ ಚಿಂತೆ ಮಾಡುವ ಬದಲು ಉಳಿಸಿಕೊಂಡಿರುವ ಬಗ್ಗೆ ಹೆಮ್ಮೆ ಪಡಬೇಕು. ಮನುಷ್ಯ ಯಾವುದೇ ಕಾರಣಕ್ಕೂ ಸಮಸ್ಯೆಗಳನ್ನು ಸವಾಲಾಗಿಸಿಕೊಳ್ಳದೆ ಸಾಮರ್ಥ್ಯವಾಗಿಸಿಕೊಳ್ಳಬೇಕು. ವಿಶೇಷ ಚೇತನರಿಗೆ ಅನುಕಂಪದ ಅವಶ್ಯಕತೆ ಇಲ್ಲವೇ ಇಲ್ಲ. ಬದಲಿಗೆ ಅದರ ಗೌರವ ಸಿಕ್ಕರೆ ಅವರೇ ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಶ್ರೀ ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಡಾ. ಪದ್ಮಿನಿ ನಾಗರಾಜು ವಂದಿಸಿದರು.