ಮಂಗಳೂರು : ನಗರದ ಕೊಡಿಯಾಲ್ ಬೈಲ್ ಭಗವತಿ ನಗರದಲ್ಲಿರುವ ಮಹಾಲಸಾ ಕಾಲೇಜ್ ಆಫ್ ವಿಶುವಲ್ ಆರ್ಟ್ ವಾರ್ಷಿಕೋತ್ಸವ ಮತ್ತು ಇನ್ ಸ್ಪೈಯರ್ ಚಿತ್ರಕಲೆ ಪ್ರದರ್ಶನ ದಿನಾಂಕ 14-06-2023ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ಚಿತ್ರಕಲೆ ಎಂಬುದು ನಮ್ಮ ಮನಸ್ಸಿನ ಭಾವನೆಗಳನ್ನು ಬಣ್ಣ ತುಂಬಿ ಅತ್ಯಂತ ಅದ್ಭುತವಾಗಿ ಜಗತ್ತಿಗೆ ಅರ್ಪಣೆ ಮಾಡುವ ಒಂದು ವಿಶೇಷದ ಕಾಣಿಕೆ. ಇಲ್ಲಿಯ ಕಲಾಕೃತಿಗಳನ್ನು ಗಮನಿಸುವಾಗ ಎಲ್ಲವೂ ಭಾರತೀಯ ಜನ ಜೀವನವನ್ನು ಪ್ರತಿ ಬಿಂಬಿಸುವ ರೀತಿಯಲ್ಲಿ ಚಿತ್ತಾರಗೊಂಡಿದೆ. ಹಾಗಾಗಿ ನಮ್ಮ ಪರಂಪರೆಯನ್ನು ಜ್ಞಾಪಿಸುವ ನಿಮ್ಮೆಲ್ಲರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮಹಾಲಸಾ ಸಂಸ್ಥೆಯ ಒಬ್ಬ ವಿದ್ಯಾರ್ಥಿನಿಯು ಮಾಡಿದ ಒಂದು ಕಲಾಕೃತಿ ರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಪ್ರದರ್ಶನಗೊಂಡಿದೆ. ಈ ಸಂಸ್ಥೆ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದರಿಂದಲೇ ಇದು ಸಾಧ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿ.ವಿ.ಯ ಮ್ಯಾನೇಜ್ಮೆಂಟ್ ಸೆಂಟರ್ ಆಫ್ ಆರ್ಟ್ ಕಾಲೇಜಿನ ನಿರ್ದೇಶಕರಾದ ಡಾ. ಶ್ರೀಧರ್ ಮತ್ತು ಅರೆನಾ ಆ್ಯನಿಮೇಷನ್ ಬೆಂಗಳೂರು ಇದರ ನಿರ್ದೇಶಕರಾದ ಶ್ರೀ ಬಿ.ಎಸ್. ಶ್ರೀನಿವಾಸ ಇವರು ‘ಅಚೀವ್ ಮೆಂಟ್ ರೆಕಾರ್ಡ್ ಬುಕ್’, ‘ವರ್ಕ್ ಶಾಪ್ ಬುಕ್’ ಹಾಗೂ ‘ಫೋರ್ಟ್ ಪೋಲಿಯೋ’ ಕೃತಿಗಳನ್ನು ಬಿಡುಗಡೆಗೊಳಿಸಿದರು. ಮಹಾಲಸಾ ಶಿಕ್ಷಕ ಸಮಿತಿ ನಿರ್ದೇಶಕ ಬಾಬು ರಾವ್ ಅಧ್ಯಕ್ಷತೆ ವಹಿಸಿದ್ದರು.