ಕಾಸರಗೋಡು: ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಸ್ಥೆಯಾದ ರಂಗ ಚಿನ್ನಾರಿ ಇದರ ಅಂಗಸಂಸ್ಥೆಯಾದ ನಾರಿಚಿನ್ನಾರಿಯ 6ನೇ ಸರಣಿ ಕಾಯ೯ಕ್ರಮ ‘ಗಾನಯಾನ’ವು ದಿನಾಂಕ 17-06-2023 ರಂದು ಸಂಗೀತ ಶಿಕ್ಷಕರಾದ ಉಷಾ ಈಶ್ವರ ಭಟ್ ದಂಪತಿಯ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡಮಿಯ ಮಾಜಿ ವಿಭಾಗ ಮುಖ್ಯಸ್ಥರಾದ ಡಾ. ರೇಖಾ ರೈ “ಇಂದಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿ ಸದಭಿರುಚಿಯ ಕಲೆಯೂ, ಕಲಾವಿದರೂ ಬೆಳೆಯುವಂತೆ ಮಾಡುವ ನಾರಿಚಿನ್ನಾರಿಯ ಪ್ರಯತ್ನ ಶ್ಲಾಘನೀಯ” ಎಂದರು.
ಶುಭಾಶಂಸನೆಗೈದ ಖ್ಯಾತ ನೇತ್ರ ತಜ್ಞೆ, ಡಾ.ಸುಮತಿ ಗಣೇಶ್ ಅವರು “ನಾರಿಚಿನ್ನಾರಿ ಸಂಘಟನೆಯ ಭಾಗವಾಗಿರುವುದಕ್ಕೆ ಹಷ೯ವನ್ನು ವ್ಯಕ್ತಪಡಿಸಿ, ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮತ್ತಷ್ಟು ಬೆಳೆಯಬೇಕು” ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಪ್ರಸೂತಿ ತಜ್ಞೆ, ವೈದ್ಯೆ ಡಾ.ಯಶೋದಾ ಅವರನ್ನು ಶಾಲು ಹೊದಿಸಿ, ಫಲಪುಷ್ಪಗಳನ್ನು ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ನಾರಿಚಿನ್ನಾರಿಯ ಅಧ್ಯಕ್ಷೆ ಶ್ರೀಮತಿ ಸವಿತಾ ಟೀಚರ್ ಇವರು ಡಾ. ಯಶೋದಾ ಅವರ ಸಾಧನೆಯನ್ನು ಕೊಂಡಾಡಿದರು. ಗೌರವಾಧ್ಯಕ್ಷೆ ಶ್ರೀಮತಿ ತಾರಾ ಜಗದೀಶ್ ಕಾಯ೯ಕ್ರಮದ ಅಧ್ಯಕ್ಷತೆವಹಿಸಿದ್ದರು. ರಂಗ ಚಿನ್ನಾರಿಯ ನಿದೇ೯ಶಕ ಕಾಸರಗೋಡು ಚಿನ್ನಾ ಅವರು ಸಮಯೋಚಿತವಾಗಿ ಮಾತನಾಡಿದರು. ಗಾನ ಯಾನ ಕಾರ್ಯಕ್ರಮವನ್ನು ತಮ್ಮ ನಿವಾಸದಲ್ಲಿ ಏರ್ಪಡಿಸಿದ ಶ್ರೀಮತಿ ಉಷಾ ಈಶ್ವರ ಭಟ್ ದಂಪತಿಯನ್ನು ಈ ಸಂದರ್ಭದಲ್ಲಿ ನಾರಿಚಿನ್ನಾರಿಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾಯ೯ಕ್ರಮದಲ್ಲಿ ಪ್ರೀತ ಸಜಿತ್ (ನೃತ್ಯ), ಶ್ರೀಮತಿ ಶ್ರೀದೇವಿ(ಸುಗಮ ಸಂಗೀತ), ಪ್ರಣಮ್ಯ ಕೆ.ಎಸ್(ಹರಿಕಥೆ), ಪ್ರಭಾ ರಮೇಶ್(ಭಕ್ತಿಗೀತೆ), ದೀಪಾಶ್ರೀ, ದಿವ್ಯಾಶ್ರೀ ಮತ್ತು ಅನಘಾ ಪಿ.ಎಸ್(ಶಾಸ್ತ್ರೀಯ ಸಂಗೀತ), ಧ್ರುವಿ ಕಿರಣ್(ಮಲಯಾಳಂ ಜನಪದ ಗೀತೆ) ಡಾ.ಮಾಯಾ ಮಲ್ಯ(ವಯಲಿನ್), ನೇಹಾ.ಎಸ್(ಕಾವ್ಯ ವಾಚನ), ಉಷಾ ನಾಗೇಶ್ ಚೇನಕ್ಕೋಡು(ಭಾವಗೀತೆ), ಆರ್ಯ ವಿಜಯ್ (ಪಂಚರತ್ನ ಕೀರ್ತನೆ)ಇವುಗಳು ಪ್ರೇಕ್ಷಕರನ್ನು ಆಕರ್ಶಿಸಿದವು.
ಶ್ರೀ ಗೋಪಾಲ ಕೃಷ್ಣ ಸಂಗೀತ ಶಾಲೆಯ ನಿರ್ದೇಶಕರಾದ ವಿದುಷಿ ಉಷಾ ಈಶ್ವರ್ ಭಟ್ ಮತ್ತು ವಿದ್ಯಾರ್ಥಿಗಳಾದ ಪುಷ್ಪಾ, ಸಮನ್ವಿತಾ ಗಣೇಶ್, ಉಷಾ ರವಿಶಂಕರ್ ಭಟ್, ಡಾ.ಶಾರ್ವರಿ ಭಟ್, ಸುರೇಖಾ ಜಯಕುಮಾರ್, ಶ್ರದ್ಧಾ ಸತ್ಯನಾರಾಯಣ, ವಿದ್ಯಾ ನಾಗರಾಜ್ ಭಟ್, ಅರ್ಚನಾ ಶೆಣೈ, ಗಾಯತ್ರಿ ಹರಿಪ್ರಸಾದ್, ವಿಜಯ ಚಂದ್ರಶೇಖರ್, ಡಾ.ಮಾಯಾ ಮಲ್ಯ, ಪ್ರೀತಾ ಸಜಿತ್ ಮುಂತಾದವರು ಭಾಗವಹಿಸಿದರು.
ಶ್ರೀರಂಜಿನಿ ಅವರ ಪ್ರಾಥ೯ನೆಯಿಂದ ಆರಂಭವಾದ ಕಾರ್ಯಕ್ರಮವವನ್ನು ಕಾಯ೯ದಶಿ೯ ದಿವ್ಯಾ ಗಟ್ಟಿಯವರ ಸಂಯೋಜಕತ್ವದಲ್ಲಿ ಬಬಿತಾ ಸತೀಶ್ ನಿರೂಪಿಸಿದರು. ಶ್ರೀಮತಿ ಶ್ಯಾಮಲಾ ರವಿರಾಜ್ ಸ್ವಾಗತಿಸಿ ಶ್ರೀಮತಿ ಪ್ರಮೀಳಾ ಚುಳ್ಳಿಕ್ಕಾನ ಧನ್ಯವಾದವಿತ್ತರು.