ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ರಂಗಸ್ಪಂದನ ಮಂಗಳೂರು ಮತ್ತು ಬೈಕಾಡಿ ಪ್ರತಿಷ್ಠಾನ ವತಿಯಿಂದ ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಸಭಾಂಗಣದಲ್ಲಿ ಸಾಂಸ್ಕೃತಿಕ ರಂಗ ದಿಬ್ಬಣ -3 ನೃತ್ಯ, ಸಂಗೀತ ಸಿಂಚನ ಕಾರ್ಯಕ್ರಮ ದಿನಾಂಕ 18-06-2023ರಂದು ಜರಗಿತು.
ಸಂಗೀತ ಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ್ ಶ್ರೀ ಲಕ್ಷಣ ಅಮೀನ್ ಮಾತನಾಡಿ “ಇಂದಿನ ಯುವಜನತೆಗೆ ಸಾಂಸ್ಕೃತಿಕ ಕಲೆಯನ್ನು ಪಸರಿಸಲು ಸಾಂಸ್ಕೃತಿ ರಂಗ ದಿಬ್ಬಣ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಸಂಸ್ಥೆಗಳ ಆಶ್ರಯದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ಮೂಡಿಬರಲಿ” ಎಂದು ಹೇಳಿದರು.
ಮನಪಾ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ಯ ಮಾತನಾಡಿ, “ವಿದ್ಯಾರ್ಥಿಗಳು ಶಿಕ್ಷಣದ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬೇಕು” ಎಂದರು.
ಧಾರ್ಮಿಕ, ಸಾಂಸ್ಕೃತಿಕ ಚಿಂತಕರೂ, ಹಿರಿಯರೂ ಆದ ಶ್ರೀ ಮಾಧವ ಸುವರ್ಣ ಮಾತನಾಡುತ್ತಾ “ಜೀವನದ ಮೌಲ್ಯಗಳನ್ನು ತಲೆತಲಾಂತರಗಳಿಂದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪ ಇತ್ಯಾದಿ ಪ್ರಕಾರಗಳು ಜನಾಂಗ-ಜನಾಂಗ ನಿರ್ಮಾಣ ಮಾಡಿಕೊಳ್ಳಲು ನಮ್ಮ ಹಿರಿಯರು ಕಂಡುಕೊಂಡ ಮಾರ್ಗ. ಇಂಥಹಾ ಸುಸಂಸ್ಕೃತ ಮತ್ತು ಶ್ರೇಷ್ಠವಾದ ಪದ್ಧತಿಯನ್ನು ಅಳವಡಿಸಿದ ಕಾರಣ, ಅಂದಿನಿಂದ ಇಂದಿನವರೆಗೂ ಆ ಮೌಲ್ಯಗಳು ಉಳಿದುಕೊಂಡಿವೆ. ಪಂಚಭೂತಗಳನ್ನು ಪೂಜಿಸಿಕೊಂಡು ಬಂದ ನಮ್ಮ ಹಿರಿಯರು ಬಹಳ ಮುಗ್ಧರು ಹಾಗೂ ನಿಸ್ವಾರ್ಥಿಗಳಾಗಿದ್ದರು. ಆದ್ದರಿಂದಲೇ ನಮ್ಮ ಸಂಸ್ಕೃತಿ ಗಟ್ಟಿಯಾಗಿದೆ” ಎಂದು ಹೇಳಿದರು.
ಬೈಕಾಡಿ ಪ್ರತಿಷ್ಠಾನದ ವತಿಯಿಂದ ನೀಡಿದ ಕಾರ್ಯಕ್ರಮದಲ್ಲಿ ರತ್ನಕಲಾಲಯದ ನಿರ್ದೇಶಕಿ ಅಕ್ಷತಾ ಬೈಕಾಡಿಯವರ ಮಾರ್ಗದರ್ಶನದಲ್ಲಿ ಪುಟಾಣಿಗಳು ನೀಡಿದ ಭಾರತಾಂಬೆ ಹಾಗೂ ಜನಪದ ನೃತ್ಯ ಹಾಗೂ ಸ್ವತಃ ಅಕ್ಷತಾ ಬೈಕಾಡಿಯವರೇ ಪ್ರಸ್ತುತ ಪಡಿಸಿದ ಶಾಸ್ತ್ರೀಯ ನೃತ್ಯ, ಟೀಂ ಉಪಾಸನದ ನಿರ್ದೇಶಕಿ ಪ್ರತೀಕ್ಷಾ ಪ್ರಭು ಇವರ ತಂಡ ನೀಡಿದ ಜನಪದ ನೃತ್ಯ, ಮಧುರ ಕಂಠದ ಕುಮಾರಿ ನಿರೀಕ್ಷಾ ರಾಜೇಶ್ವರಿ ಪ್ರಸ್ತುತ ಪಡಿಸಿದ ಭಕ್ತಿ ಭಾವಗೀತೆಗಳು ಹಾಗೂ ‘ಕಲಾಶ್ರೀ ಪುರಸ್ಕಾರ’ ಪಡೆದ ಶ್ರೀ ಗುರುಪ್ರಸಾದ್ ನೀಡಿದ ಬಬ್ಬಲ್ ಶೋ ಇವೆಲ್ಲವೂ ಅಮೋಘವಾಗಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.
ಕೆನರಾ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಮಾಧವ ಸುವರ್ಣ, ಬೈಕಾಡಿ ಪ್ರತಿಷ್ಠಾನದ ಅಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಉಪಸ್ಥಿತರಿದ್ದರು. ರಂಗಸ್ಪಂದನ ಮಂಗಳೂರು ಸಂಚಾಲಕ ವಿ.ಜಿ. ಪಾಲ್ ಸ್ವಾಗತಿಸಿದರು. ರೇಖಾ ಬಿ. ಬೈಕಾಡಿ ನಿರೂಪಿಸಿದರು.