ಮಂಗಳೂರು: ಮಂಗಳೂರಿನ ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ರಾಮಕೃಷ್ಣ ಮಠದ ಸಹಯೋಗದೊಂದಿಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿನ ವಿವೇಕಾನಂದ ಸಭಾಂಗಣದಲ್ಲಿ ರಾಜ್ಯದ ಹೆಸರಾಂತ ಗಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ನರಸಿಂಹ ನಾಯಕ್ ಅವರಿಂದ ಹರಿದಾಸ ಕೃತಿ ಕೀರ್ತನೆಗಳ ಗಾಯನ ‘ದಾಸ ಗಾನಾಮೃತ’ ಕಾರ್ಯಕ್ರಮವು ದಿನಾಂಕ : 16-06-2023ರಂದು ಸಂಜೆ ನಡೆಯಿತು.
ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉದ್ಘಾಟಿಸಿದರು. ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಗುರುರಾಜ್ ಅವರು ಸ್ವಾಗತಿಸಿದರು. ಕೊಂಚಾಡಿ ಗುರುದತ್ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪುತ್ತೂರು ನರಸಿಂಹ ನಾಯಕ್ ಅವರು ಕೀರ್ತನೆ ಹಾಡುವ ಮುನ್ನ ಕೃತಿ ರಚನೆಗಾರರ ಹಾಗೂ ಕೃತಿಯ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು. ತಬಲಾದಲ್ಲಿ ರಾಜೇಶ್ ಭಾಗವತ್ ಹಾಗೂ ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಮತ್ತು ತಾಳದಲ್ಲಿ ವಿಶ್ವಾಸ್ ಪ್ರಭು ಸಾತ್ ನೀಡಿ ಸಹಕರಿಸಿದರು. ವಿದ್ಯಾರಾವ್ ಅವರು ನಿರೂಪಿಸಿ, ಸಂಜನಾ ಮೂರ್ತಿ ವಂದಿಸಿದರು.