ಮುಡಿಪು : ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ನೀಡುವ ಅಭಿನವ ವಾಲ್ಮೀಕಿ, ‘ಅಂಬುರುಹ ಯಕ್ಷಸದನ ಪ್ರಶಸ್ತಿ’ಯನ್ನು ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಹಾಸ್ಯ ಕಲಾವಿದ ಹಾಸ್ಯ ಚಕ್ರವರ್ತಿ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ದಿನಾಂಕ 21-06-2023 ಬುಧವಾರ ಪೂಂಜರ ಸ್ವಗೃಹ ಬೊಟ್ಟಿಕೆರೆಯ ಅಂಬುರಹದಲ್ಲಿ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನವು ಈ ಹಿಂದೆ 2021ರಲ್ಲಿ ಛಂದೋವಾರಿಧಿ ಚಂದ್ರ ಗಣೇಶ ಕೊಲೆಕಾಡಿ, 2022ರಲ್ಲಿ ರಂಗ ನಾಯಕ ಕುರಿಯ ಗಣಪತಿ ಶಾಸ್ತ್ರಿಯವರಿಗೆ ಅಂಬುರುಹ ಯಕ್ಷಸದನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಯರಾಮ ಆಚಾರ್ಯ ಅವರು, “ಪುರುಷೋತ್ತಮ ಪೂಂಜರ ಪ್ರಶಸ್ತಿ, ಅವರ ಸ್ನೇಹ ನನಗೆ ದೊರಕಿರುವುದು ನನ್ನ ಭಾಗ್ಯ. ಪೂಂಜರ ಪ್ರಸಂಗದ ಪದ್ಯಗಳಿಗೆ ಅರ್ಥ ಹೇಳಲು ಬೇರೆ ಸಾಹಿತ್ಯ ಅಗತ್ಯವೆನಿಸದು. ಅವರ ಸಾಹಿತ್ಯ ಶ್ರೀಮಂತಿಕೆಯೇ ಓರ್ವ ಕಲಾವಿದನ್ನು ಬೆಳೆಸುತ್ತದೆ. ಯಕ್ಷಗಾನ ಲೋಕದ ಸವ್ಯಸಾಚಿಯಾದ ಪುರುಷೋತ್ತಮ ಪೂಂಜರು ಇನ್ನೂ ಬಾಳಿ ಬೆಳಗಬೇಕಿತ್ತು. ಇನ್ನಷ್ಟು ಅವರ ಪ್ರಸಂಗ ಸಾಹಿತ್ಯ ಯಕ್ಷಗಾನ ಲೋಕವನ್ನು ಅರಳಿಸಬೇಕಿತ್ತು. ‘ಮಾತೆ ಜಾನಕಿಯೆನ್ನ ಕಾವ್ಯ ನಾಯಕಿ’ ಇದು ಪುರುಷೋತ್ತಮ ಪೂಂಜರು ಬರೆದ ಮಾನಿಷಾದ ಪ್ರಸಂಗದ ಸಾಲು. ಮಾನಿಷಾದ ಪ್ರಸಂಗ ಬರೆಯುವ ವೇಳೆ ಪೂಂಜರಿಗೆ ಬಲಗೈ ನೋವು ಹೆಚ್ಚಾದಾಗ ಪ್ರಸಂಗಕ್ಕೆ ಲಿಪಿಕಾರನಾಗಿ ನೀವು ನನಗೆ ಸಹಾಯ ಮಾಡಬೇಕು ಎಂದು ಪೂಂಜರು ನನ್ನಲ್ಲಿ ವಿನಂತಿಸಿಕೊಂಡರು. ಗಣೇಶ್ ಪ್ರಸಾದ್ ಲಾಡ್ಜ್ ನಲ್ಲಿ ಪೂಂಜರು ಪ್ರಸಂಗದ ಸಾಲನ್ನು ಹೇಳುತ್ತಾ ಹೋದಂತೆ ನಾನು ಬರೆಯುತ್ತಾ ಹೋದೆ. ಒಂದು ಸಾಲು ಅವರು ಹೇಳಿ ನಾನು ಬರೆದು ಮುಗಿಸಿದ ಕ್ಷಣಾರ್ಧದಲ್ಲೇ ಇನ್ನೊಂದು ಸಾಲು ಛಂದೋಬದ್ಧವಾಗಿ ನಿರರ್ಗಳವಾಗಿ ಹೊರಬಂದು ಬಿಡುತ್ತಿತ್ತು. ಅದೆಂಥ ವಿದ್ವತ್ತು… ಪೂಂಜರಿಗೆ ಪೂಂಜರೇ ಸಾಟಿ” ಎಂದರು.
ಅಂಬುರುಹ ಯಕ್ಷಸದನ ಪ್ರತಿಷ್ಠಾನದ ಟ್ರಸ್ಟಿ, ತಾಳಮದ್ದಳೆ ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಇವರು ಬಂಟ್ವಾಳ ಜಯರಾಮ ಆಚಾರ್ಯ ಬಗ್ಗೆ ಅಭಿನಂದನಾ ನುಡಿಗಳನ್ನಾಡಿ “ಪೂಂಜರಂತೆ ಬಂಟ್ವಾಳ ಜಯರಾಮ ಆಚಾರ್ಯರೂ ಶ್ರೇಷ್ಠ ಕಲಾವಿದರು, ಅವರ ಕಲಾಲೋಕದ ಪಯಣವೇ ಅಧ್ಯಯನ ಯೋಗ್ಯವಾದದ್ದು. ಪೂಂಜರು ಮಾನಿಷಾದ ಪ್ರಸಂಗ ಬರೆಯುವ ವೇಳೆ ಬರವಣಿಗೆಯಲ್ಲಿ ಸಹಕಾರ ನೀಡಿದ ಬಂಟ್ವಾಳ ಜಯರಾಮ ಆಚಾರ್ಯರ ಒಡನಾಟ ಪ್ರತಿಷ್ಠಾನಕ್ಕೊಂದು ಹೆಮ್ಮೆ” ಎಂದರು.
ಪ್ರತಿಷ್ಠಾನದ ಅಧ್ಯಕ್ಷೆಯಾದ ಶೋಭಾ ಪುರುಷೋತ್ತಮ ಪೂಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ರಾಜಾರಾಮ ಹೊಳ್ಳ ಕೈರಂಗಳ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ದೀವಿತ್ ಎಸ್.ಕೆ. ಪೆರಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪ್ರಶಸ್ತಿಯು ರೂ.10 ಸಾವಿರ ನಗದು, ಪ್ರಶಸ್ತಿ ಪತ್ರ ಸಹಿತ ಸ್ಮರಣಿಕೆಗಳನ್ನು ಒಳಗೊಂಡಿತ್ತು.
ಸಭಾ ಕಾರ್ಯಕ್ರಮದ ಬಳಿಕ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ‘ಕಲಿಕೀಚಕ’ ಅಖ್ಯಾನದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ರಾಜಾರಾಮ ಹೊಳ್ಳ ಕೈರಂಗಳ, ದೇವೀಪ್ರಸಾದ ಆಳ್ವ ತಲಪಾಡಿ, ಲೋಕೇಶ್ ಕಟೀಲು, ಮಯೂರ ನಾಯ್ಗ ಮಾಡೂರು, ಯಜ್ಞೇಶ್ ರೈ ಕಟೀಲು ಮತ್ತು ರಜತ್ ಈಶ್ವರಮಂಗಲ, ಅರ್ಥಧಾರಿಗಳಾಗಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಬಂಟ್ವಾಳ ಜಯರಾಮ ಆಚಾರ್ಯ, ಸದಾಶಿವ ಆಳ್ವ ತಲಪಾಡಿ, ಆನಂದ ಸರ್ಕುಡೇಲು, ಗಣೇಶ ಕಾವ, ಹರಿಶ್ಚಂದ್ರ ನಾಯ್ಗ ಮಾಡೂರು, ಗಣೇಶ ಕುಂಜತ್ತೂರು ಮತ್ತು ದೀವಿತ್ ಎಸ್.ಕೆ. ಪೆರಾಡಿ ಭಾಗವಹಿಸಿದ್ದರು.