ರಂಗ ಚಿನ್ನಾರಿ ಕಾಸರಗೋಡು(ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಕಾಸರಗೋಡು ಚಿನ್ನಾ ಅವರ ಸಂಚಾಲಕತ್ವದಲ್ಲಿ , ಕಾಸರಗೋಡು ಕನ್ನಡ ಹಬ್ಬದ ಪ್ರಯುಕ್ತ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಸಭಾಂಗಣದಲ್ಲಿ, ಕಾಟುಕುಕ್ಕೆ ಭಜನಾ ಟ್ರಸ್ಟ್ (ರಿ) ಪ್ರಾಯೋಜಕತ್ವದಲ್ಲಿ ತಾರೀಖು 26.06.23 ಶನಿವಾರದಂದು ಸಾಯಂಕಾಲ 5.30ರಿಂದ ಶ್ರದ್ಧಾ ನಾಯರ್ಪಳ್ಳ ಹಾಗೂ ಮೇಧಾ ನಾಯರ್ಪಳ್ಳ ಸಹೋದರಿಯರಿಂದ ‘ಕರ್ಣಾವಸಾನ’ ಕಥಾನಕದ ಗಮಕ ವಾಚನ ವ್ಯಾಖ್ಯಾನ ಹಾಗೂ ಕಲಾರತ್ನ ಶ್ರೀ ಶಂ.ನಾ.ಅಡಿಗ ಇವರಿಂದ ‘ಶ್ರೀ ಸುಬ್ರಹ್ಮಣ್ಯ ಮಹಿಮೆ ಎಂಬ ಹರಿಕಥೆ ಕಾರ್ಯಕ್ರಮ ಜರಗಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಮಧುಸೂದನ ಪುಣಿಚಿತ್ತಾಯರು ನೆರವೇರಿಸಿದರು. ಅಧ್ಯಕ್ಷತೆಯನ್ನು ಆಡಳಿತ ಮೊಕ್ತೇಸರರಾದ ತಾರಾನಾಥ್ ರೈ ಪಡ್ಡಂಬೈಲು ಗುತ್ತು ವಹಿಸಿದ್ದರು. ಗಡಿಪ್ರದೇಶದಲ್ಲಿ ಕನ್ನಡ ಕುಂಠಿತವಾಗುತ್ತಿರುವ ಇಂತಹ ಸಂದರ್ಭದಲ್ಲಿ ರಂಗ ಚಿನ್ನಾರಿಯು ಮಾಡುತ್ತಿರುವ ಈ ಕನ್ನಡ ಹಬ್ಬದ ಉತ್ಸವವು ನಿಜಕ್ಕೂ ಶ್ಲಾಘನೀಯ. ಇವರ ನಿರಂತರವಾದ ಕನ್ನಡ ಚಟುವಟಿಕೆಗಳು ಇತರರಿಗೆ ಮಾದರಿಯಾಗಬೇಕೆಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ವಿದ್ಯಾಸಂಸ್ಥೆಯ ಮೆನೇಜರ್ ಆದ ಶ್ರೀ ಪುರುಷೋತ್ತಮ ಭಟ್ ಅವರು ತಿಳಿಸಿದರು. ರಂಗಕರ್ಮಿ, ರೂವಾರಿ ಶ್ರೀ ಕಾಸರಗೋಡು ಚಿನ್ನಾ ಅವರು ಪ್ರತಿ ವರ್ಷವೂ ಕೂಡ ಕನ್ನಡ ಹಬ್ಬವನ್ನು ಏರ್ಪಡಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದೂ, ಹಳ್ಳಿಗಳಲ್ಲಿ ಕನ್ನಡ ಇನ್ನೂ ಜೀವಂತವಾಗಿದ್ದುಕೊಂಡು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕೂಡ ಪ್ರಾಮಾಣಿಕವಾದಂತಹ ಕೆಲಸವನ್ನು ಮಾಡಬೇಕೆಂದು ಅವರು ಕನ್ನಡಿಗರಲ್ಲಿ ವಿನಂತಿ ಮಾಡಿಕೊಂಡರು.. ವೇದಿಕೆಯಲ್ಲಿ ಶ್ರೀ ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ಭಜನಾ ಟ್ರಸ್ಟಿನ ನಿರ್ದೇಶಕರಾದ ಹರಿದಾಸ ಶ್ರೀ ರಾಮಚಂದ್ರ ಮಣಿಯಾಣಿ ಸ್ವಾಗತಿಸಿ, ಸಂಕೀರ್ತನಾಕಾರರಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ವಂದನಾರ್ಪಣೆಗೈದರು. ಗಾಯಕ ಶ್ರೀ ಕಿಶೋರ್ ಪೆರ್ಲ ಅವರು ಕಾರ್ಯಕ್ರಮ ನಿರ್ವಹಿಸಿದರು.