ದಿವಂಗತರಾದ ಶ್ರೀ ರಾಮಚಂದ್ರ ಉಡುಪ ಮತ್ತು ಶ್ರೀಮತಿ ವಾಗ್ದೇವಿಯಮ್ಮ ಅವರ ಮಗಳಾಗಿ ಜನಿಸಿದ ರತೀದೇವಿಯವರು ಅದಮಾರಿನ ಪದವಿ ಪೂರ್ವ ವಿದ್ಯಾ ಸಂಸ್ಥೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಕೂಡಲೇ ವಿವಾಹವಾಯಿತು. ಇವರ ಪತಿ ದಿವಂಗತ ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಮದುವೆಯಾದ ಎರಡೂವರೆ ವರ್ಷದೊಳಗೆ ನಿಧನರಾದರು. ಎರಡು ಪುಟ್ಟ ಗಂಡು ಮಕ್ಕಳ ತಾಯಿಯಾದ ರತೀದೇವಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ಗಂಡನ ಮನೆಯಿಂದ ತಿರಸ್ಕೃತರಾದ ರತೀದೇವಿ ಎದೆಗುಂದಲಿಲ್ಲ. ಹೆತ್ತವರು, ಸೋದರ, ಸೋದರಿಯರು ನೀಡಿದ ಪ್ರೋತ್ಸಾಹದಿಂದ ಮತ್ತೆ ಶಿಕ್ಷಣವನ್ನು ಮುಂದುವರಿಸಿದರು. ವೈದ್ಯಕೀಯ ಶಿಕ್ಷಣದ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು, ಗೆದ್ದೇ ಗೆಲ್ಲುತ್ತೇನೆಂಬ ಛಲವನ್ನು ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡು ಪಿ.ಯು.ಸಿ. ಪರೀಕ್ಷೆ ತೇರ್ಗಡೆ ಹೊಂದಿದ ಕೂಡಲೇ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ಸೇರಿ ವೈದ್ಯಕೀಯ ವಿದ್ಯೆಯನ್ನು ಪೂರೈಸಿ, ಮುಂದೆ ಸ್ತ್ರಿರೋಗ ತಜ್ಞೆಯಾಗಿ ಅವರು ಮಾಡಿದ ಸಾಧನೆ ಅತ್ಯಂತ ಶ್ಲಾಘನೀಯ.
ವೈದ್ಯ ವೃತ್ತಿಯಲ್ಲಿದ್ದ ಅನೇಕರು ಕನ್ನಡದಲ್ಲಿ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ. ಆದರೆ ಡಾ. ರತೀದೇವಿಯವರ ಸಾಹಿತ್ಯ ಕೃಷಿಯ ಸಾಧನೆ ಭಿನ್ನವಾಗಿಯೂ, ವಿಶಿಷ್ಟವಾಗಿಯೂ ಗಮನಾರ್ಹವಾಗಿದೆ. ಮಹಿಳೆಯರ ಮನದಲ್ಲಿರುವ ಮೌಢ್ಯಗಳನ್ನು ಕಳೆದು ಅರಿವು ಮೂಡಿಸುವುದಕ್ಕಾಗಿ ಹಲವಾರು ಕೃತಿಗಳನ್ನು ರಚಿಸಿ ಉಚಿತವಾಗಿ ಹಂಚಿದ ಶ್ರೇಯಸ್ಸು ಅವರಿಗಿದೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ಮಾತಿನಂತೆ ಸಮಾಜಕ್ಕಾಗಿ ತನ್ನ ಸೇವೆಯನ್ನು ಅರ್ಪಿಸಿ ಕೃತಾರ್ಥರಾಗಿದ್ದಾರೆ. ಹಿರಿಯ ನಾಗರಿಕರಿಗೆ ದೇವಸ್ಥಾನಗಳ ಸಂದರ್ಶನಕ್ಕೆ ಅನುಕೂಲವಾಗಲೆಂದು ಗಾಲಿ ಕುರ್ಚಿಯ ಸೌಕರ್ಯಗಳನ್ನು ಕೊಡಿಸುವುದಕ್ಕಾಗಿ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಅದನ್ನು ದೊರಕಿಸಿ ಕೊಡುವುದಕ್ಕೆ ಪ್ರಯತ್ನಿಸಿದ್ದಾರೆ. ತಾನು ಹೆರಿಗೆ ಮಾಡಿಸಿದ ಬಡ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ಮತ್ತು ಶಿಶುವಿನ ರಕ್ಷಣೆಗಾಗಿ ಎಲ್ಲಾ ರೀತಿಯ ಸಹಾಯವನ್ನು ನೀಡಿ ಪೋಷಿಸಿದ ಅವರ ಮಾತೃ ಹೃದಯದ ಆಸರೆಯನ್ನು ಪಡೆದ ಅದೆಷ್ಟೋ ಮಂದಿ ಈಗಲೂ ಸ್ಮರಿಸುತ್ತಿದ್ದಾರೆ. ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳನ್ನು ಹೆರಿಗೆ ಮಾಡಿಸಿದ ಡಾ. ರತೀದೇವಿಯವರು ತಮ್ಮ ವೃತ್ತಿ ಜೀವನದ ಅಪೂರ್ವ ಕ್ಷಣವೆಂದು ನಂಬಿದ್ದಾರೆ. ಆ ಕುಟುಂಬದ ಯೋಗಕ್ಷೇಮಕ್ಕಾಗಿ ಮಕ್ಕಳ ಪಾಲನೆ ಪೋಷಣೆಗಾಗಿ ಡಾ. ರತೀದೇವಿಯವರು ತೋರಿದ ಕಾಳಜಿಯು ಅಮೋಘವಾಗಿದೆ. ರಾಜ್ಯಾದ್ಯಂತ ಅವರನ್ನು ಗೌರವಿಸುವ ಒಂದು ದೊಡ್ಡ ಅಭಿಮಾನಿ ಬಳಗವಿದೆ. ಜಾತಿ, ಪಂಥ ವರ್ಣ, ವರ್ಗ ಭೇದವಿಲ್ಲದೆ ಅವರನ್ನು ಪ್ರೀತಿಸಿ ಅವರಿಗೆ ‘ಮೇರು’ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿ ಧನ್ಯರಾಗಿದ್ದಾರೆ. ಈ ಗ್ರಂಥದ ಸಂಪಾದಕರಾಗಿ ಶ್ರಮಿಸಿದ ಬೈಕಾಡಿ ಜನಾರ್ದನ ಆಚಾರ್ ಮತ್ತು ಕೆ.ಎ. ರೋಹಿಣಿಯವರನ್ನು ಈ ಕ್ಷಣದಲ್ಲಿ ನೆನಪಿಸಿಕೊಳ್ಳುತ್ತೇನೆ.
ಡಾ. ರತೀದೇವಿಯವರು 2003ರಲ್ಲಿ ತಮ್ಮ ಆತ್ಮಕಥಾನಕವನ್ನು ‘ಎಚ್ಚೆತ್ತ ಮಹಿಳೆ’ ಎಂಬ ಕೃತಿಯಲ್ಲಿ ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ತನ್ನ ಜೀವನದ ಮೇಲಿನ ವಿಧಿಯ ಕ್ರೂರ ಅಟ್ಟಹಾಸದ ಸವಾಲನ್ನು ಎದುರಿಸಿ ಗೆಲ್ಲಲು ಆತ್ಮಾಭಿಮಾನ ಮತ್ತು ಛಲದ ಬಲದಿಂದ ಶಿಕ್ಷಣವನ್ನು ಪಡೆದುದೇ ಕಾರಣವೆಂದು ಈ ಕೃತಿಯಲ್ಲಿ ಸುಂದರವಾಗಿ ಹೇಳಿದ್ದಾರೆ. ಆ ಬಳಿಕ ಅವರು ಮಹಿಳೆಯರ ಸ್ವಾಸ್ಥ್ಯಕ್ಕಾಗಿ ಬರೆದ ಕೃತಿಗಳು ಹಲವಾರು ಮಹಿಳೆಯರ ಅರಿವನ್ನು ಹೆಚ್ಚಿಸಿದೆ. ಜಾರುವ ಗರ್ಭಕೋಶ ಮತ್ತು ಪರಿಸರದ ಭಾಗಗಳು, ಮಹಿಳೆಯರನ್ನು ಕಾಡುವ ಫೈಬ್ರಾಯ್ಡ್ ಗೆಡ್ಡೆಗಳು, ಗರ್ಭಕೋಶದ ದ್ವಾರದ ಕ್ಯಾನ್ಸರ್ ಮತ್ತು ತಡೆಹಿಡಿಯುವ ಹೊಸ ವಿಧಾನಗಳು, ಗರ್ಭಸ್ರಾವದ ಕಾರಣಗಳು ಮತ್ತು ಚಿಕಿತ್ಸೆ, ಮುಟ್ಟಿನ ಮುಸ್ಸಂಜೆಯಲ್ಲಿ, ಮಾರಣಾಂತಿಕ ಗರ್ಭಾವಸ್ಥೆ ಮತ್ತು ಪರಿಹಾರದ ದಾರಿಗಳು, ವೈದ್ಯಕೀಯ ಗರ್ಭಪಾತದ ನೂತನ ಗುಳಿಗೆಗಳ ಸಾದಕ ಬಾಧಕಗಳು, ಸಹಜ ಹೆರಿಗೆ ಮತ್ತು ಸಿಸೇರಿಯನ್ ಹೆರಿಗೆ, (ಇದು ಸ್ವಂತ ಕೈ ಬರಹದ ವಿಶಿಷ್ಟ ಕೃತಿ), ಗರ್ಭ ನಿರೋಧಕ ವಿಧಾನಗಳು, ಬಹು ಭ್ರೂಣಗಳ ಬಸಿರು ಬಾಣಂತನ, ಬಂಜೆತನ ಕಾರಣಗಳು ಮತ್ತು ಚಿಕಿತ್ಸಾ ವಿಧಾನಗಳು, ಜಾಗತೀಕರಣ ಮತ್ತು ಸ್ತ್ರೀ ಸ್ವಾಸ್ಥ್ಯ ಸಮಸ್ಯೆಗಳು, ಏಡ್ಸ್ – ಎಡೊಲೆಸೆಸ್ಸ್ ಎಂಬ ಇಂಗ್ಲೀಷ್ ಕೃತಿ, ಹೀಗೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲವೂ ಅವರ ವೃತ್ತಿ ಜೀವನದ ಅನುಭವ ಮತ್ತು ಅಧ್ಯಯನಗಳಿಂದ ಮೂಡಿ ಬಂದಿವೆ. ಇಂತಹ ಅಪೂರ್ವ ಲೇಖಕಿಯೂ, ಪ್ರಸೂತಿ ತಜ್ಞೆಯೂ ಆಗಿರುವ ಡಾ. ರತೀದೇವಿಯವರಿಗೆ ಶಿರಬಾಗಿ ನಮಿಸುತ್ತಾ ಈ ದಿನದಂದು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ವೈದ್ಯೆಯಾಗಿ ಮಹಿಳೆಯರ ಬಗ್ಗೆ ಕಾಳಜಿಯಿಂದ ಹಲವಾರು ಕೃತಿಗಳನ್ನು ರಚನೆ ಮಾಡಿ ಆರೋಗ್ಯ ಕಾಪಾಡುವಲ್ಲಿ ಸಹಕರಿಸಿದ ಡಾ. ರತೀದೇವಿಯವರಿಗೆ ರೂವಾರಿ ತಂಡ ಶುಭಾಶಯಗಳು.
ಶ್ರೀಮತಿ ಬಿ.ಎಂ. ರೋಹಿಣಿ
ರೋಹಿಣಿ ಪರಿಚಯ : ಹೊಸ ವಿಚಾರ, ಆಲೋಚನೆಗಳಿಗೆ ಸದಾ ತೆರೆದುಕೊಳ್ಳುವ ಸರಳ ಸ್ವಭಾವದ ಬಿ.ಎಂ.ರೋಹಿಣಿಯವರು ಬಂಟ್ವಾಳದ ತುಂಬೆಯ ಕಾಣೆಮಾರಿನಲ್ಲಿ ತಾಯಿ ದೇವಕಿ ಮತ್ತು ತಂದೆ ಕೊಗ್ಗಪ್ಪ ಅವರ ಸುಪುತ್ರಿ. ಬಡತನದಲ್ಲಿ ಛಲದಿಂದ ಓದು ಮುಗಿಸಿ ಶಾಲಾ ಶಿಕ್ಷಕಿಯಾಗಿ ಅಪಾರ ಸಾಧನೆ ಮಾಡಿದವರು.
ಪ್ರಕಟಿತ ಕೃತಿಗಳು
ಕರ್ತವ್ಯ , ಗರಿಕೆಯ ಕುಡಿಗಳು, ಒಂದು ಹಿಡಿ ಮಣ್ಣು ಇವರ ಕಥಾ ಸಂಕಲನಗಳು. ಸ್ತ್ರೀ-ಸಂವೇದನೆ, ಸ್ತ್ರೀ ಶಿಕ್ಷಣ ಸಂಸ್ಕೃತಿ ,ಸ್ತ್ರೀ ಭಿನ್ನ ಮುಖಗಳು , ಸಾಮಾಜಿಕ ತಲ್ಲಣಗಳು, ಆರಾಧನಾ ರಂಗದಲ್ಲಿ ಸ್ತ್ರೀ , ಪ್ರತಿಸ್ಪಂದನ ಮತ್ತು ಸಮೀಕ್ಷೆ ಅವರ ಲೇಖನ/ವಿಮರ್ಶಾ ಕೃತಿಗಳು.
ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆ ವಿಶಿಷ್ಟ. ಅವಿವಾಹಿತ ಮಹಿಳೆ- ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಮಾಸ್ತಿಕಲ್ಲುಗಳು-ವೀರಗಲ್ಲುಗಳು, ದಕ್ಷಿಣಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ, ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರ ಗುತ್ತು ಮನೆಗಳ ಅಧ್ಯಯನ ಇವು ಇತರರೊಂದಿಗೆ ಸೇರಿ ನಡೆಸಿದ ಸಂಶೋಧನಾ ಅಧ್ಯಯನಗಳು. ವೇಶ್ಯಾವಾಟಿಕೆಯ ಕಥೆ-ವ್ಯಥೆ (2022) ಅವರದೇ ಸಂಶೋಧನಾ ಕೃತಿ. ‘ಅಧ್ಯಾಪಕಿಯ ಅಧ್ವಾನಗಳು ‘ಅನುಭವ ಕಥನ. ‘ನಾಗಂದಿಗೆಯೊಳಗಿನಿಂದ’ ಜೀವನ ಕಥನ.
ಎಪ್ಪತ್ತೊಂಬತ್ತರ ಹರೆಯದಲ್ಲೂ ಓದು, ಸಂಶೋಧನೆ, ಸಂಘಟನೆ, ಸಮಾಲೋಚನೆಗಳಲ್ಲಿ ಕ್ರಿಯಾಶೀಲರಾಗಿರುವ ರೋಹಿಣಿಯವರನ್ನು ಹಲವು ಸಂಘ ಸಂಸ್ಥೆಗಳು ಗೌರವಿಸಿವೆ.