ಡಾ. ಲಕ್ಷ್ಮೀ ರೇಖಾ ಅರುಣ್ – ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಿರುವ ದಂತವೈದ್ಯೆ ಹಾಗೂ ಭರತನಾಟ್ಯ ಕಲಾವಿದೆ
ಲಕ್ಷ್ಮೀ ರೇಖಾ ಅವರು ಮೂಲತಃ ಬೆಂಗಳೂರಿನವರು. ಶ್ರೀ ಜನಾರ್ದನ ಅಯ್ಯಂಗಾರ್ ತಂದೆ, ಶ್ರೀಮತಿ ಅಮೃತ ನಳಿನಿ ತಾಯಿ. ಸಾಮಾನ್ಯ ಶಿಕ್ಷಣ ಹಾಗೂ ಕಲಾಸಕ್ತಿ ತಾಳಿದ್ದು ಚಿಕ್ಕಪ್ಪ ಎ.ಶ್ರೀಕಾಂತ್ ಹಾಗೂ ಚಿಕ್ಕಮ್ಮ ಕಾಂತಿಮತಿಯವರ ಮನೆಯಲ್ಲಿದ್ದು ಬೆಳೆದಾಗ.
ಕಲಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ತುಡಿತವೊಂದು ಹುಟ್ಟಿತೆಂದರೆ ಅದೇ ಮುಂದೆ ನಾವು ಅತಿಯಾಗಿ ಪ್ರೀತಿಸುವ, ನಮಗೆ ಭಾವಸೌಖ್ಯವೊದಗಿಸುವ, ನಮ್ಮನ್ನು ಕಾಡುವ, ಕೆಣಕುವ, ಸವಾಲಾಗುವ, ಹಳತೊಂದನ್ನು ಹುಡುಕುವ, ಹೊಸತೊಂದನ್ನು ಸೃಜಿಸುವ ವಿದ್ಯಮಾನವಾಗಿ ನಿರಂತರವಾಗಿ ಅರಳುತ್ತಾ ಸಾಗುತ್ತದೆ. ಸುಖವೋ ದುಃಖವೋ, ಮೇಲೋ ಕೆಳಗೋ, ಹಿಂದೆಯೋ ಮುಂದೆಯೋ ಎಲ್ಲ ಅನುಭವಗಳನ್ನು ಎದುರಿಸಲು ನಮ್ಮನ್ನು ಪ್ರೇರೇಪಿಸುತ್ತದೆ.
ಅಂಥ ತುಡಿತವೊಂದನ್ನು ಒಪ್ಪಿ ಅಪ್ಪಿ ಪ್ರೀತಿಸಿದವರಿಂದಲೇ ಕಲೆಯ ವಿಕಸನ ಸಾಧ್ಯವಾಗಿದೆ. ಜೀವನದ ಈ ರೀತಿಯ ಆಯಾಮವನ್ನು ಕಾಣಿಸುವ ಕಲಾ ಸಾಧಕರಲ್ಲಿ ಡಾ. ಲಕ್ಷ್ಮೀ ರೇಖಾ ಅರುಣ್ ಒಬ್ಬರು. ಶಾಲೆ ಕಾಲೇಜಿನ ವಿದ್ಯಾರ್ಥಿ ಜೀವನವು ದಂತ ವೈದ್ಯಕೀಯ ಪದವಿಯೆಡೆಗೆ ಕೊಂಡೊಯ್ದರೂ ಕಲೆಯ ತುಡಿತವು ಆ ದಾರಿಯನ್ನು ಬದಲಿಸುವಂತೆ ಬಲವಾಗಿ ಪ್ರೇರೇಪಿಸಿತು.
ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಕಲಾವಿದೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ, ಕರ್ನಾಟಕ ಕಲಾತಿಲಕ, ನಾಟ್ಯರಾಣಿ ಶಾಂತಲಾ ಪುರಸ್ಕೃತೆ ಹಿರಿಯ ಗುರು ಡಾ. ವಸುಂಧರಾ ದೊರೆಸ್ವಾಮಿಯವರ ನಿಡುಗಾಲದ ಶಿಷ್ಯೆ. ದೀರ್ಘಕಾಲದ ಶಿಷ್ಯವೃತ್ತಿಯನ್ನು ವಹಿಸಿ ತನ್ನ ಗುರುವಿನಿಂದ ಪಡೆಯಬಹುದಾದಂಥ ಎಲ್ಲ ಬಗೆಗಿನ ಜ್ಞಾನ, ಕೌಶಲ್ಯಗಳೊಂದಿಗೆ, ದಕ್ಷತೆ, ಕ್ಷಮತೆ, ಪರಿಶ್ರಮ, ಶ್ರದ್ಧೆ, ಬದ್ಧತೆಗಳನ್ನು ಮೈಗೂಡಿಸಿಕೊಂಡ ಅನನ್ಯ ಕಲಾವಿದೆ.
ಭರತನಾಟ್ಯವೆಂಬ ಪ್ರದರ್ಶನಕಲೆಯಲ್ಲಿ ಕಲಾತ್ಮಕವಾಗಿ, ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ, ಸಂಶೋಧನಾತ್ಮಕವಾಗಿ ತೊಡಿಗಿಸಿಕೊಂಡು ಸಾಧನೆಯ ಪಥದಲ್ಲಿ ಸಾಗುತ್ತಿರುವ ಅಪೂರ್ವ ಕಲಾವಿದೆ. ಬೆಂಗಳೂರಿನ ಸಂಜಯನಗರದ ಸುಸಜ್ಜಿತ ಕಲಾಮಂದಿರಲ್ಲಿ ‘ಕಲೆಯ ಪ್ರಸರಣ’ ಹಾಗೂ ‘ಕೆಲೆಯ ಕಲಿಕೆ ಎಲ್ಲರಿಗೂ’ ಎಂಬ ಧ್ಯೇಯಹೊತ್ತು ‘ಲಾಸ್ಯ ಅಕಾಡೆಮಿ ಆಫ್ ಡಾನ್ಸ್’ ಎಂಬ ನೋಂದಾಯಿತ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ಹದಿನೈದು ವರ್ಷಗಳಿಂದ ಮುನ್ನಡೆಸುತ್ತಿದ್ದಾರೆ.
ಒಂದೊಮ್ಮೆ ದಂತಚಿಕಿತ್ಸಾ ವಿದ್ಯೆಯು ವೃತ್ತಿಯಾಗಿದ್ದು, ಅದೀಗ ಪ್ರವೃತ್ತಿಯಾಗಿದೆ. ಸಮಾಜ ಸೇವೆಯ ಮೊಗ ಪಡೆದಿದೆ. ಅಗತ್ಯವಿರುವವರಿಗೆ ಉಚಿತವಾಗಿ ಸಲಹೆ ನೀಡುತ್ತಿದ್ದಾರೆ. ಭರತನಾಟ್ಯ ಶಿಕ್ಷಣ, ಪ್ರದರ್ಶನ, ಅಧ್ಯಯನ, ಸಂಶೋಧನೆ, ಸಂಯೋಜನೆ, ಸಂಘಟನೆ ಇದೀಗ ವೃತ್ತಿಯಾಗಿದೆ.
ಶಿಕ್ಷಕಿಯಾಗಿ ಲಕ್ಷ್ಮೀರೇಖಾ: ಭರತನಾಟ್ಯವೆಂಬ ನೃತ್ಯಕಲೆಯನ್ನು ಸಮಗ್ರವಾಗಿ ತಿಳಿಸಿಕೊಟ್ಟು, ವಿದ್ಯಾರ್ಥಿಗಳಾಗಿ ಬರುವವರ ಸಾಮರ್ಥ್ಯ, ಯೋಗ್ಯತೆಗನುಗುಣವಾಗಿ ಅಧ್ಯಾಪನ ನಡೆಸುತ್ತಿರುವ ಗುರು.
ನರ್ತಕಿಯಾಗಿ : ಪ್ರಸಿದ್ಧ ಸಂಗೀತಗಾರ ಚಿತ್ರವೀಣಾ ಡಾ. ಎನ್.ರವಿಕಿರಣ್ ಅವರು ನೃತ್ಯಕ್ಕಾಗಿ ರಚಿಸಿದ ಬಂಧಗಳಿಗೆ ರಂಗಲೇಖ ನೀಡಿ ಅವರೆದುರೇ ನರ್ತಿಸಿ ವಿಶೇಷವಾಗಿ ಗುರುತಿಸಲ್ಪಟ್ಟಿದ್ದಾರೆ. ಬೆಂಗಳೂರಿನ ಮೂವತ್ತು ಕಲಾವಿದರನ್ನೊಳಗೊಂಡು ವಿ. ಪುಲಕೇಶಿ ಕಸ್ತೂರಿಯವರೊಂದಿಗೆ ‘ಆಳ್ವಾರ್ ದರ್ಶನಂ’ ಎಂಬ ನೃತ್ಯರೂಪಕವೊಂದನ್ನು ಸಂಯೋಜಿಸಿ ಪ್ರದರ್ಶಿಸಿರುತ್ತಾರೆ. ಈ ಪ್ರದರ್ಶನದಿಂದ ಕೋಲಾರದ ಸುತ್ತಲಿನ ಹಳ್ಳಿಯವರಿಗೆ ಕಟ್ಟಬೇಕಾದ ಸಮುದಾಯ ಭವನಕ್ಕಾಗಿ ನಿಧಿಸಂಗ್ರವಾಯಿತು. ಶ್ರೀಕೃಷ್ಣದೇವರಾಯ ಬರೆದ ಬೃಹತ್ ಗ್ರಂಥ ‘ಅಮುಕ್ತಮಾಲ್ಯದ’ವನ್ನು ಆಧರಿಸಿದ ನೃತ್ಯರೂಪಕ, ‘ಅಂಬ’ ಎಂಬ ನೃತ್ಯರೂಪಕಗಳನ್ನು ಸಂಯೋಜಿಸಿ ಪ್ರದರ್ಶಿಸಿದ್ದಾರೆ.
ಅಧ್ಯಾಪಕಿಯಾಗಿ: ಭರತನಾಟ್ಯದ ಕಲಿಕೆಯನ್ನು ವ್ಯವಸ್ಥಿತವಾಗಿಸಲು ಅಗತ್ಯವಿರುವ ಯೋಗ, ಸಂಗೀತ, ಹಾಗೂ ಇತರ ವಿಷಯಗಳನ್ನು ಸಮಗ್ರವಾಗಿ ತಿಳಿದುಕೊಂಡು ಅಧ್ಯಯನದ ದೃಷ್ಟಿಯಿಂದ ತನ್ನ ಪ್ರತಿ ಹಜ್ಜೆಗಳನ್ನು ಮುಂದಿಡುತ್ತಿದ್ದಾರೆ. ಅದಕ್ಕಾಗಿ ತನ್ನೊಂದಿಗೆ ನುರಿತ ಅಧ್ಯಾಪಕವೃಂದವನ್ನೂ ಸಜ್ಜುಗೊಳಿಸಿದ್ದಾರೆ.
ಸಂಶೋಧಕಿಯಾಗಿ: ನೂಪುರ ಭ್ರಮರಿ ಪತ್ರಿಕೆಯ ನೃತ್ಯಶಿಲ್ಪಯಾತ್ರಾ 2022ರ ಅಂಗವಾಗಿ ‘ವಿಜಯನಗರದ ವಾಸ್ತುಶಿಲ್ಪ ಹಾಗೂ ಶಿಲ್ಪಗಳಲ್ಲಿ ಸೀರೆ- ಪರಸ್ಪರ ಕ್ರಿಯಾತ್ಮಾಕ ಅಧ್ಯಯನ’ ಎಂಬ ವಿಷಯದ ಕುರಿತು ಸಂಶೋಧನೆಯನ್ನು ನಡೆಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ತತ್ಸಂಬಂಧೀ ಕಲಾಕೃತಿಗಳು G20-2023ರ ವೇದಿಕೆಯಲ್ಲಿ ಪದರ್ಶನ ಕಂಡಿವೆ. ಸಂಯೋಜಕಿ-ಸಂಘಟಕಿಯಾಗಿ ನಿರಂತರ ನೃತ್ಯೋತ್ಸವಗಳನ್ನು ಆಯೋಜಿಸುತ್ತಿದ್ದಾರೆ.
ಇವರ ನಿರಂತರ ಕ್ರಿಯಾತ್ಮಕತೆಗೆ ಸಿಕ್ಕಿದ ಪ್ರೋತ್ಸಾಹ ಉತ್ತೇಜನ, ಸನ್ಮಾನಗಳು ಹಲವು – ನೃತ್ಯ ಶಿರೋಮಣಿ, ನೃತ್ಯಯ ಉಪಾಸಕಿ ಎಂಬ ಬಿರುದುಗಳು ಮುಡಿಗೇರಿವೆ. ವೈದ್ಯರ ದಿನದಂದು ಡಾ. ಲಕ್ಷ್ಮೀರೇಖಾ ಅರುಣ್ ಅವರ ವೈದ್ಯಕೀಯ ಜೀವನ ಹಾಗೂ ಕಲಾಜೀವನವನ್ನು ರೂವಾರಿಯ ಓದುಗರಿಗೆ ಹೀಗೆ ಪರಿಚಯಿಸಿ ಲಕ್ಷ್ಮೀರೇಖಾ ‘ಡಾಕ್ಟ್ರಿಗೆ’, ಲಕ್ಷ್ಮೀರೇಖಾ ‘ಡಾನ್ಸ್ ಟೀಚರಿಗೆ’ ಹಾಗೂ ಲಕ್ಷ್ಮೀರೇಖಾ ‘ಕಲಾವಿದೆಗೆ’ ನನ್ನ ಪ್ರೀತಿಪೂರ್ವಕ ಶುಭ -ಆಶಯಗಳನ್ನು ತಿಳಿಸುತ್ತಿದ್ದೇನೆ. ಶುಭವಾಗಲಿ. ನಿಮ್ಮ ಕಲೆ ಬೆಳೆಯಲಿ, ಬೆಳಗಲಿ. ವೈದ್ಯಕೀಯ ವೃತ್ತಿಯ ಜೊತೆಗೆ ನೃತ್ಯ ಶಾರದೆಯ ಸೇವೆಯನ್ನೇ ಪ್ರಧಾನವಾಗಿರಿಸಿಕೊಂಡ ಡಾ. ಲಕ್ಷ್ಮೀ ರೇಖಾ ಅರುಣ್ ಇವರಿಗೆ ರೂವಾರಿ ತಂಡದ ಶುಭ ಹಾರೈಕೆಗಳು.
- ಭ್ರಮರಿ ಶಿವಪ್ರಕಾಶ್
ಭ್ರಮರಿ ಶಿವಪ್ರಕಾಶ್ ಇವರು ನಿರ್ದೇಶಕಿ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಷರಲ್ ಟ್ರಸ್ಟ್, ಮಂಗಳೂರು. ತನ್ನ ಅಧ್ಯಯನ ಆಧಾರಿತ ಸೃಜನಾತ್ಮಕ ನೃತ್ಯ ಹಾಗೂ ನಾಟ್ಯ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಕಲಾವಿದೆ. ಗುರು ಕೆ. ಬಿ ಮಾಧವ ರಾವ್ ಹಾಗೂ ಮೈಸೂರಿನ ಡಾ. ವಸುಂಧರ ದೊರೆಸ್ವಾಮಿಯವರ ಶಿಷ್ಯೆ. ಕಳೆದ ಇಪ್ಪತ್ತೈದು ವರುಷಗಳಿಂದ ಭರತನಾಟ್ಯ ಶಿಕ್ಷಣವನ್ನು ಸಮಗ್ರ ದೃಷ್ಟಿಕೋನದಿಂದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಕ್ಷಕಿ. ಪಾಂಚಾಲಿ, ಊರ್ವಶಿ, ದೇವಯಾನಿ, ದಮಯಂತಿ ಮೊದಲಾದ ಏಕವ್ಯಕ್ತಿ ನೃತ್ಯನಾಟಕಗಳಿಂದ ಚಿರಪರಿಚಿತೆ. ಕುಮಾರವ್ಯಾಸ ನೃತ್ಯಭಾರತ, ವೀಣೆಶೇಷಣ್ಣರ ಕೃತಿಗಳಿಗೆ ನೃತ್ಯ, ಶ್ರೀರಾಮ ನೃತ್ಯನಮನ, ರಾಧೆ ಎಂಬ ಗಾಥೆ ಮೊದಲಾದ ವಸ್ತುಕೇಂದ್ರಿತ ಪ್ರದರ್ಶನಗಳಿಂದ ಅನನ್ಯವಾಗಿ ಗುರುತಿಸಲ್ಪಟ್ಟಿದ್ದಾರೆ. ರಂಗನಿರ್ದೇಶಕ ಉದ್ಯಾವರ ಮಾಧವ ಆಚಾರ್ಯ ಅವರ ಕನ್ನಡ ಸಾಹಿತ್ಯಕೃತಿ ಆಧಾರಿತ ಇಪ್ಪತ್ತಕ್ಕೂ ಮಿಕ್ಕಿ ‘ಸಮೂಹ ರಂಗಪ್ರಯೋಗ’ಗಳಲ್ಲಿ ನೃತ್ಯಸಂಯೋಜಕಿಯಾಗಿ ಮತ್ತು ಕಲಾವಿದೆಯಾಗಿ ದುಡಿದ ಅನುಭವ. ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕಿ ಹಾಗೂ ಸಂಶೋಧನ ನಿರತೆ.