ಕನ್ನಡ ಮತ್ತು ತುಳು ಚಿತ್ರರಂಗದ ಹಿನ್ನೆಲೆ ಗಾಯಕರು ಮತ್ತು ಸಂಗೀತ ನಿರ್ದೇಶಕರು. ರಾಘವ ಆಚಾರ್ಯ ಹಾಗೂ ಮೀರಾ ಇವರ ಪುತ್ರರಾಗಿ ಜನಿಸಿದ ಡಾಕ್ಟರ್ ನಿತಿನ್ ಆಚಾರ್ಯ ಅವರು ತಮ್ಮ ದಂತ ವೈದ್ಯಕೀಯ ಪದವಿಯನ್ನು ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇಲ್ಲಿ ಪಡೆದು 2009ನೇ ಇಸವಿಯಿಂದ ಕೆ.ಸಿ.ರೋಡಲ್ಲಿ ತಮ್ಮದೇ ಆದ ಮೀರಾ ಡೆಂಟಲ್ ಕ್ಲಿನಿಕ್ ಅನ್ನು ನಡೆಸುತ್ತಿದ್ದಾರೆ.
ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಇವರು ತಮ್ಮ ಸಂಗೀತ ಶಿಕ್ಷಣವನ್ನು ಸಾಂಪ್ರದಾಯಿಕವಾಗಿ ಪಡೆದವರಲ್ಲ. ಸಂಗೀತದ ಬಗೆಗಿನ ಅಪಾರವಾದ ಆಸಕ್ತಿ ಗುರುವಿಲ್ಲದೆ ಕಲಿಕೆಯ ಕಡೆಗೆ ಸೆಳೆಯಿತು. ಎ.ಆರ್. ರಹಮಾನ್, ಚಿತ್ರ, ಎಸ್.ಪಿ.ಬಿ.ಯವರು ಇವರ ಮಾನಸ ಗುರುಗಳು ಎಂದರೆ ತಪ್ಪಾಗದು.
ಆರಂಭದಲ್ಲಿ ಇವರ ಪ್ರತಿಭೆಗೆ ಇವರೇ ಕಲ್ಪಿಸಿಕೊಂಡ ವೇದಿಕೆ ‘band aid’ ಎನ್ನುವ ಫ್ಯೂಶನ್ ಬ್ಯಾಂಡ್ ನ ಮುಖಾಂತರ ಇಡೀ ಕರ್ನಾಟಕದಾದ್ಯಂತ ಬೇರೆ ಬೇರೆ ವೇದಿಕೆಗಳಲ್ಲಿ ಸಂಗೀತಪ್ರಿಯರ ಮನಗೆದ್ದ ಇವರಿಗೆ ಕನ್ನಡಿಗರ ಜನಮಾನಸವನ್ನು ತಲುಪಲು ಸಿಕ್ಕ ಅದ್ಭುತ ಅವಕಾಶ ಟಿವಿ9 ಚಾನೆಲ್ ನಡೆಸಿಕೊಡುತ್ತಿದ್ದ ವಾಯ್ಸ್ ಆಫ್ ಬೆಂಗಳೂರು ಕಾರ್ಯಕ್ರಮ. ಇದರ ಸೀಸನ್ 5 ಕಾರ್ಯಕ್ರಮದಲ್ಲಿ ಗೆದ್ದು ಕರ್ನಾಟಕ ಅಷ್ಟೇ ಅಲ್ಲ ಹೊರ ರಾಜ್ಯ, ಹೊರ ದೇಶಗಳ ಪ್ರೇಕ್ಷಕರ ಪ್ರೀತಿಗೆ ಪಾತ್ರರಾದರು.
ತಮ್ಮ ಸಂಗೀತದ ಪಯಣದ ನಡುವೆ ಅದೆಷ್ಟೋ ಜನ ಸಂಗೀತ ಕ್ಷೇತ್ರದ ದಿಗ್ಗಜರ ಮೆಚ್ಚುಗೆ ಪ್ರಾಪ್ತವಾಯಿತು. ಸಂಗೀತ ಸಂಯೋಜಕರಾದ ಅನು ಮಲ್ಲಿಕ್, ಹಂಸಲೇಖ, ವಿ. ಮನೋಹರ್, ಅರ್ಜುನ್ ಜನ್ಯ, ವೀರ ಸಮರ್ಥ್, ಗಾಯಕ ರಾಜೇಶ್ ಕೃಷ್ಣನ್, ಖ್ಯಾತ ಬರಹಗಾರರಾದ ಜಯಂತ್ ಕಾಯ್ಕಿಣಿ ಇವರಿಂದ ಸಿಕ್ಕ ಪ್ರಶಂಸೆ ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಬೇಕೆಂಬ ಹಂಬಲವನ್ನು ಹುಟ್ಟು ಹಾಕಿತ್ತು.
ಈ ಟಿವಿಯವರು ನಡೆಸಿಕೊಡುತ್ತಿದ್ದ ಎಸ್.ಪಿ.ಬಿ. ಅವರ ಸಾರಥ್ಯದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಾಡುವ ಅವಕಾಶ, ಸುವರ್ಣ ಚಾನೆಲ್ ಅವರ ಕಾನ್ಫಿಡೆಂಟ್ ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ವಿಶೇಷ ಗೌರವದ ನೆಲೆಯಲ್ಲಿ ಭಾಗವಹಿಸಿದ್ದು ವೃತ್ತಿ ಬದುಕಿನ ಮರೆಯಲಾಗದ ಕ್ಷಣಗಳು ಎಂದು ನಿತಿನ್ ಆಚಾರ್ಯ ನೆನಪಿಸಿ ಕೊಲ್ಲುತ್ತಾರೆ.
ವಿನಯ್ ರಾಜಕುಮಾರ್ ಅಭಿನಯದ ಅನಂತ ವರ್ಸಸ್ ನುಸ್ರತ್, ಗಲ್ಲಿ ಬೇಕರಿ, ಕ್ರಾಂತಿವೀರ, ಪರಮಾವತಾರಿ ಶ್ರೀ ಕೃಷ್ಣ, ಮಹಾನಾಯಕ ಅಂಬೇಡ್ಕರ್, ಪ್ರೊ ಕಬಡ್ಡಿ ಟೈಟಲ್ ಸೋಂಗ್, ಸರಯು, ರಾಗ ಅನುರಾಗ, ಉದಯ ಟಿ.ವಿ.ಯ ಕನ್ನಡ ಸೀರಿಯಲ್ ಜೋ ಜೋ ಲಾಲಿ, ಶ್ರೀ ದಯಾನಂದ ಕತ್ತಲ್ ಸಾರ್ ಇವರ ಮುಂಜಾನೆಯ ಕಾರ್ಯಕ್ರಮ ‘ಬೊಳ್ಳಿ ಬೊಲ್ಪು’ ಇವುಗಳಿಗೆಲ್ಲಾ ಯಶಸ್ವಿ ಹಿನ್ನೆಲೆ ಗಾಯನ ಡಾ. ನಿತಿನ್ ರದ್ದು, ಇವರ ಸಂಗೀತ ನಿರ್ದೇಶನದ ಕಾರ್ಯವೂ ಅಮೋಘವಾದುದು. ‘ಹ್ಯಾಕ್’ ಕನ್ನಡ ಚಲನಚಿತ್ರ ಮತ್ತು ‘ಲಾಸ್ಟ್ ಫ್ಲೈಟ್’ ಆಲ್ಬಂ ಹಾಡಿಗೆ ಸಂಗೀತ ನಿರ್ದೇಶನ, ರೈಟ್ ಬುಕ್ಕ ಲೆಫ್ಟ್, ಬೊಳ್ಳಿಲು ತುಳು ಸಿನೇಮಾಕ್ಕೆ ಸಂಗೀತ ನಿರ್ದೇಶನವನ್ನು ಎಲ್ಲರೂ ಮೆಚ್ಚುವಂತೆ ಮಾಡಿದ್ದಾರೆ. ನಿರಂತರ ಸತ್ತ ಕೊನೆ, ಕಗ್ಗಂಟು, ಮಾ, ಸುಳಿಗೆ ಸಿಕ್ಕಿದಾಗ ಕಿರು ಚಿತ್ರಗಳಿಗೆ ಹಿನ್ನೆಲೆ ಗಾಯನ ಸಂ ಯೋಜಕ ರಾಗಿ ಕೆಲಸ ಮಾಡಿದ ಖ್ಯಾತಿ ಇವರದ್ದು.
ಬಿಗ್ ಎಫ್ ಎಂ ರೆಡ್ ಎಫೆಮ್ ರೇಡಿಯೋ ಮಿರ್ಚಿ ಎಫ್ ಎಂ ಕಂಪನಿಗಳಿಗೆ ಜಿಂಗಲ್ಸ್ ಗಳನ್ನು ಕೂಡ ಕಂಪೋಸ್ ಮಾಡಿದ್ದಾರೆ. ifssb 2022 ಕಿರು ಚಿತ್ರದ ‘ಸತ್ತ ಕೊನೆ’ ಕಿರು ಚಿತ್ರದ ಸಂಗೀತ ನಿರ್ದೇಶನಕ್ಕೆ ಬೆಸ್ಟ್ ಕಂಪೋಸರ್ ಪ್ರಶಸ್ತಿ ಲಭಿಸಿದೆ. ರೆಡ್ ಎಫ್ ಎಂ ತುಳು ಫಿಲ್ಮ್ ಅವಾರ್ಡ್ಸ್ ಅಲ್ಲಿ ಉತ್ತಮ ಸಂಗೀತ ನಿರ್ದೇಶಕ ಕ್ಯಾಟಗರಿಗೆ ನಾಮಿನೇಟ್ ಆಗಿದ್ದು ಹಾಗೂ ಮುಕ್ತ ಟಿವಿ ಚಾನಲ್ ಅವರ ಬೆಸ್ಟ್ ಬ್ಯಾಗ್ರೌಂಡ್ ಕಾಂಪೋಸರ್ ಪ್ರಶಸ್ತಿಗೆ ನಾಮಿನೇಟ್ ಕೂಡ ಆಗಿದ್ದಾರೆ
ಗಾಯಕರಾಗಿ ಸಂಗೀತ ನಿರ್ದೇಶಕರಾಗಿ, ಬ್ಯಾಕ್ ಗ್ರೌಂಡ್ ಸ್ಕೋರ್ ಕಂಪೋಸರ್ ಆಗಿ, ಸ್ಯಾಂಡಲ್ ವುಡ್ coastal ವುಡ್ ಹಾಗೂ ಕನ್ನಡ ಕಿರುತೆರೆ ಲೋಕದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ತುಳುನಾಡಿನ ಕರಾವಳಿ ಕರ್ನಾಟಕದ ಸೋನು ನಿಗಮ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿರುವ ಡಾಕ್ಟರ್ ನಿತಿನ್ ಆಚಾರ್ಯ ಅವರ ಧ್ವನಿ ಮಾಧುರ್ಯ ಕಂಠಸಿರಿಗೆ ಮನ ಸೋಲದವರೇ ಇಲ್ಲ
ಪತ್ನಿ ದಂತ ವೈದ್ಯೆ ಡಾಕ್ಟರ್ ಪೂಜಾ ನಿತಿನ್ ಆಚಾರ್ಯ ಹಾಗೂ ಪುತ್ರ ಮಾಸ್ಟರ್ ನಿರ್ವಾಣ್ ಇವರನ್ನೊಳಗೊಂಡ ಪುಟ್ಟ ಸಂಸಾರ ಇವರದ್ದು. ತನ್ನದೇ ಆದ ಯೂಟ್ಯೂಬ್ ಚಾನೆಲ್ ಮುಖಾಂತರ ಸಂಗೀತ ಲೋಕದಲ್ಲಿ ಹೊಸ ಪ್ರಯೋಗಗಳ ಮುಖಾಂತರ ಅಭಿಮಾನಿಗಳನ್ನು ತಲುಪುತ್ತಿರುವ ಡಾಕ್ಟರ್ ನಿತಿನ್ ಆಚಾರ್ಯ ಇವರಿಗೆ ಸಂಗೀತ ಶಾರದೆ ಮನದುಂಬಿ ಹರಸಲಿ ಎಂಬ ಶುಭ ಹಾರೈಕೆಗಳೊಂದಿಗೆ ರೂವಾರಿ ತಂಡ.
- ಆರ್.ಜೆ. ನಯನಾ
ಆರ್.ಜೆ. ನಯನಾ ಇವರು ಮೂಲತಃ ಕುಂದಾಪುರದವರು. ಪ್ರಸ್ತುತ ಮಂಗಳೂರಿನ ಬಿಗ್ ಎಫ್.ಎಂ.ನಲ್ಲಿ ‘ಕುಡ್ಲ ಮೋರ್ನಿಂಗ್ಸ್’ ನಡೆಸಿಕೊಡುತ್ತಾ ಇದ್ದಾರೆ. ಈ ಮೊದಲು ರೇಡಿಯೋ ಮಿರ್ಚಿ, ರೆಡ್ ಎಫ್.ಎಂ. ಹಾಗೂ ಸ್ಪಂದನ ಟಿವಿಗಳಲ್ಲಿ ಆರ್.ಜೆ. ಹಾಗೂ ವಿ.ಜೆ. ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.
1 Comment
Thank you for this informative article that encourages us to strive harder in the future. 🙏🏼
Grateful to Rathnavathi ma’am and her team for their hard work.