ವೇದಿಕೆ ಏರಿದರೆ ಈಕೆ ಜಿಂಕೆಯಂತೆ ಚುರುಕು. ನವಭಾವಗಳ ನವರಸಗಳ ಪ್ರದರ್ಶನಕ್ಕೆ ಪ್ರೇಕ್ಷಕರ ಕರತಾಡನವೇ ಧ್ವನಿಯಾಗುವುದು. ವೃತ್ತಿಯಲ್ಲಿ ವೈದ್ಯೆಯಾದರೂ ಜನ್ಮತಃ ಕಲಾವಿದೆ ಅಂದರೂ ತಪ್ಪಲ್ಲ. ಡಾ. ರಚನಾ ಸೈಪಂಗಲ್ಲು ಹುಟ್ಟಿ ಬೆಳೆದದ್ದು ಶಾಂತಿಯಡಿ ಎಂಬ ಹಳ್ಳಿ ಮನೆಯಲ್ಲಾದರೂ ಬಾಲ್ಯದಲ್ಲೇ ನೃತ್ಯದಲ್ಲಿ ಒಲವು ಕಂಡವಳು. ರಚನಾಳ ಆಸಕ್ತಿಗೆ ಅಪರಿಮಿತ ಪ್ರೋತ್ಸಾಹದೊಂದಿಗೆ ವೇದಿಕೆ ಕಲ್ಪಿಸಿ ಕೊಟ್ಟವರು ಅವಳ ಹೆತ್ತವರಾದ ಕಾಸರಗೋಡಿನ ಬದಿಯಡ್ಕದ ಪ್ರಸಿದ್ಧ ವ್ಯಾಪಾರಿ ಶ್ರೀನಿವಾಸ್ ರಾವ್ ಹಾಗೂ ನಿವೃತ್ತ ಅಧ್ಯಾಪಿಕೆ ಶ್ರೀಮತಿ ಪುಷ್ಪ ರಾಜೀವಿಯವರು. ಸಹೋದರ ರೋಷನ್ ಕಿರಣ್ ಸೇರಿದಂತೆ ಕುಟುಂಬದ ಎಲ್ಲರ ಪ್ರೋತ್ಸಾಹ ಈ ಕಲಾವಿದೆಗೆ ಉತ್ತಮ ವೇದಿಕೆಗಳನ್ನು ಒದಗಿಸಿ ಕೊಟ್ಟದ್ದು ಸುಳ್ಳಲ್ಲ.
ಡಾ. ರಚನಾ ಸೈಪಂಗಲ್ಲು ತನ್ನ ಆರರ ವಯಸ್ಸಿನಲ್ಲೇ ಶಾಲಾ ಕಲೋತ್ಸವಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಿಟ್ಟಿಸಿಕೊಂಡವಳು. ಮುಂದೆ ನೃತ್ಯ ಶಿಕ್ಷಕ ಗೋವಿಂದ ಪೈ ಪುರಸ್ಕೃತ ನಾಟ್ಯ ನಿಲಯಂ ಶ್ರೀ ಬಾಲಕೃಷ್ಣ ಮಂಜೇಶ್ವರ ಇವರಲ್ಲಿ ನೃತ್ಯಾಭ್ಯಾಸ ಆರಂಭಿಸಿ ಅವರ ಪ್ರೋತ್ಸಾಹದಿಂದಲೇ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದವಳು. ಕಲಿಕೆಯಲ್ಲೂ ಹಿಂದಿಲ್ಲದ ಈಕೆ ಮುಂದೆ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಹುಟ್ಟಿದೂರನ್ನು ಬಿಡಬೇಕಾದ ಪರಿಸ್ಥಿತಿ ಬಂದಾಗಲೂ ನೃತ್ಯ ಕಲೆ ಇವಳ ಕೈ ಬಿಡಲಿಲ್ಲ. ಭಾರತೀಯ ವಾಯು ಸೇನೆಯಲ್ಲಿ ಇಂಟರ್ನಲ್ ಮೆಡಿಸಿನ್ ಸ್ಪೆಷಲಿಸ್ಟ್ ಆಗಿರುವ ಪತಿ ಡಾ. ಯಶಸ್ ಸೈಪಂಗಲ್ಲು ಇವಳ ನೃತ್ಯಾಸಕ್ತಿಗೆ ಬೆಂಬಲ ನೀಡಿದರೂ ಆಗಾಗ್ಗೆ ವರ್ಗಾವಣೆಗೊಳ್ಳುವ ವೃತ್ತಿಯಲ್ಲಿರುವ ಕಾರಣ ಸತಿಯಾದ ರಚನಳಿಗೂ ದೊರಕಿದ ನೃತ್ಯ ವೇದಿಕೆಗಳನ್ನು ಕೈ ಬಿಡುವಂತಹ ಅನಿವಾರ್ಯತೆ ಬಂದಿತ್ತು. ಮಗಳು ಇಶಾನ್ವಿ ಹುಟ್ಟಿದ ಮೇಲಂತೂ ತನ್ನ ನೃತ್ಯದಾಸೆಯನ್ನು ಮನದಲ್ಲೇ ಮುಚ್ಚಿಟ್ಟು ಮುಂದಿನ ಭರವಸೆಯ ದಿನಗಳಿಗಾಗಿ ಕಾಯುತ್ತಿದ್ದಾಳೆ.
ಭರತನಾಟ್ಯ ಹಾಗೂ ಕೂಚುಪುಡಿಗಳಲ್ಲಿ ಪರಿಣಿತಳಾದ ಈಕೆಗೆ ಮೋಹಿಯಾಟ್ಟಮ್, ಜಾನಪದ ನೃತ್ಯಗಳಲ್ಲೂ ಆಸಕ್ತಿ ಬಹಳ. ವಿವಿಧ ನೃತ್ಯ ಪ್ರಾಕಾರಗಳನ್ನು ಹಲವಾರು ವೇದಿಕೆಗಳಲ್ಲಿ ಪ್ರದರ್ಶಿಸಿ ಸೈ ಅನ್ನಿಸಿಕೊಂಡ ಈಕೆ ಪ್ರಸ್ತುತ ಮೂಡಬಿದ್ರೆಯ ಆಳ್ವಾಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ನಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ವಿಷಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾಳೆ. ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ನೃತ್ಯ ಪರೀಕ್ಷೆಗಳಿಗೂ ಪರೀಕ್ಷಕಳಾಗಿ ಅನುಭವ ಹೊಂದಿದ ಈಕೆ ಉತ್ತಮ ನೃತ್ಯಗಾತಿ ಎನ್ನುವುದರಲ್ಲಿ ಎರಡು ಮಾತಿಲ್ಲ. 2004ರಲ್ಲಿ ಜಿಲ್ಲಾ ಕಲೋತ್ಸವದಲ್ಲಿ ಕಲಾ ತಿಲಕ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಈಕೆ ನಮ್ಮೂರಿನ ಪ್ರತಿಭೆ ಅನ್ನೋ ಹೆಮ್ಮೆ.
ಒಟ್ಟಿನಲ್ಲಿ ನಮ್ಮೂರ ಕನ್ನಡದ ನೃತ್ಯ ಕಲಾವಿದೆಯೊಬ್ಬಳು ಈ ರೀತಿ ಜನ ಮನ್ನಣೆ ಪಡೆಯುತ್ತಿರುವುದು ಮೆಚ್ಚುಗೆಯ ವಿಷಯ. 2008ರಲ್ಲೇ ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದವಳಿಗೆ ಹಲವಾರು ವೇದಿಕೆಗಳು ಕೈ ಬೀಸಿ ಕರೆದಿದ್ದು, ಆಕೆಯ ನೃತ್ಯ ಪ್ರಾವೀಣ್ಯತೆಗೆ ಇನ್ನಷ್ಟು ಅವಕಾಶಗಳು ಸಿಗುವಂತಾಗಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆ. ಮಾವ ಜಗದೀಶ್ ಸೈಪಂಗಲ್ಲು ಹಾಗೂ ಅತ್ತೆ ನಳಿನಿ ಸೈಪಂಗಲ್ಲು ಸೊಸೆ ರಚನಾಳ ಕಲಾಸಕ್ತಿಗೆ ಇನ್ನಷ್ಟು ಪ್ರೋತ್ಸಾಹ ನೀಡುತ್ತಿದ್ದು, ಇವಳ ನೃತ್ಯಾಭಿರುಚಿಗೆ ಪೂರಕವಾದಂತಿದೆ. ಎಲ್ಲರ ಪ್ರೋತ್ಸಾಹ ಈಕೆಯಲ್ಲಿ ಇನ್ನಷ್ಟು ಸ್ಫೂರ್ತಿ ತುಂಬುವಂತಾಗಲಿ ಎಂದು ಹಾರೈಸೋಣ. ಕಲಾಪ್ರಪಂಚಕ್ಕೆ ಇವಳ ಸೇವೆ ಇನ್ನಷ್ಟು ಲಭಿಸುವಂತಾಗಲಿ. ಇವರಿಗೆ ಕಲಾ ಸೇವೆ ಮಾಡಲು ನಾಟ್ಯ ಶಾರದೆಯ ಕೃಪಾ ಕಟಾಕ್ಷ ಡಾ. ರಚನಾ ಇವರತ್ತ ಇರಲೆಂಬ ಶುಭಾಶಯಗಳೊಂದಿಗೆ ರೂವಾರಿ ತಂಡ.
- ನಳಿನಿ ಸೈಪಂಗಲ್ಲು
ನಳಿನಿ ಸೈಪಂಗಲ್ಲು ಇವರು ಶ್ರೀ ಸತ್ಯನಾರಾಯಣ ಹೈಸ್ಕೂಲ್ ಪೆರ್ಲದ ನಿವೃತ್ತ ಅಧ್ಯಾಪಿಕೆ. ಪ್ರಸ್ತುತ ಕರಾಡ ವಾಣಿ ಮಾಸ ಪತ್ರಿಕೆಯ ಉಪ ಸಂಪಾದಕಿ, ನಾಲಂದಾ ಮಹಾವಿದ್ಯಾಲಯ ಪೆರ್ಲದ ಆಡಳಿತ ಮಂಡಳಿಯ ಸದಸ್ಯೆ ಹಾಗೂ ಪೆರ್ಲದ ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷೆ.