ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರವರೆಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಇಂತಹ ಶ್ರೀಮಂತ ಕಲೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿರುವ ಕಲಾವಿದ ನವೀನ ಎನ್ ಜೆ.
19.03.1996ರಂದು ಜಡೆ ನಾಗರಾಜ ರಾವ್ ಹಾಗೂ ವೀಣಾ ಅವರ ಮಗನಾಗಿ ಜನನ. M.Com ಇವರ ವಿದ್ಯಾಭ್ಯಾಸ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಮೂಲ ಪ್ರೇರಣೆ ಇವರ ತಾಯಿ. ಶ್ರೀ ಗಣಪತಿ ಹೆಗಡೆ ಪುರಪ್ಪೆಮನೆ ಹಾಗೂ ಐನಬೈಲು ಪರಮೇಶ್ವರ ಹೆಗಡೆ ಇವರ ಯಕ್ಷಗಾನ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :-
ಪೂರ್ಣ ಪ್ರಸಂಗದ ಕಥೆ ತಿಳಿದುಕೊಳ್ಳುತ್ತೇನೆ. ಎಲ್ಲಾ ಪಾತ್ರದ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತೇನೆ. ಗೊತ್ತಿಲ್ಲದೆ ಇರುವಂತಹ ವಿಷಯಗಳ ಬಗ್ಗೆ ಹಿರಿಯರ ಬಳಿ ವಿಚಾರವನ್ನು ಮಾಡುತ್ತೇನೆ.
ಕಂಸ ವಧೆ, ಜಾಂಬವತಿ ಕಲ್ಯಾಣ, ಅಕ್ಷಯಾಂಬರ ವಿಲಾಸ ನೆಚ್ಚಿನ ಪ್ರಸಂಗಗಳು.
ಬಾಹುಕ, ಕಲಾಧರ, ಕೃಷ್ಣ, ಹರಿಶ್ಚಂದ್ರ, ದುರ್ಯೋಧನ, ಜಾಂಬವ, ಕಂಸ, ಹನುಮಂತ, ಅರ್ಜುನ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಉತ್ತಮವಾಗಿದೆ.. ಆದರೆ ಕಲಾವಿದರು ಆರೋಗ್ಯದ ಕಡೆ ತುಂಬಾ ಗಮನ ಕೊಡಬೇಕು. ಏಕೆಂದರೆ ಟ್ರಾವೆಲ್ ಮಾಡುವಾಗ ಸಾಕಷ್ಟು ಅಡಚಣೆಗಳು ಆಗುವುದು ಈಗ ಹೆಚ್ಚಾಗಿದೆ. ಹಾಗಾಗಿ ಹುಷಾರಾಗಿರೋದು ಒಳ್ಳೆಯದು.. ಹಾಗೂ ನಮ್ಮ ಯಕ್ಷಗಾನ ಕಲಾವಿದರು ರಾಜ್ಯೋತ್ಸವ ಪ್ರಶಸ್ತಿಗೆ ಸಾಕಷ್ಟು ಜನ ವ್ಯಕ್ತಿಗಳಿದ್ದಾರೆ, ಅವರಿಗೆ ಸರ್ಕಾರದಿಂದ ಮನ್ನಣೆ ಲಭಿಸಬೇಕು.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಪ್ರೇಕ್ಷಕರ ಅಭಿಪ್ರಾಯ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿದೆ ಹೊರತು ಕಲಾವಿದರ ಬಳಿ ಬಂದು ತಮ್ಮ ಅಭಿಪ್ರಾಯವನ್ನು ತಿಳಿಸುವುದು ತುಂಬಾ ಕಡಿಮೆಯಾಗಿ ಹೋಗಿದೆ. ಇದು ಕಲಾವಿದರ ಹಾಗೂ ಸಂಘ ಸಂಸ್ಥೆಗಳು ಅಥವಾ ಮೇಳದ ಮೇಲೆ ಪರಿಣಾಮ ಬೀರುತ್ತದೆ. ಇದು ಒಳ್ಳೆಯದಲ್ಲ. ಕಲಾವಿದರು ಮಾಡುವ ಒಳ್ಳೆಯ ಕೆಲಸ ಆಗಿರಲಿ, ಏನಾದರೂ ಲೋಪದೋಷಗಳಿರಲಿ ಅದನ್ನು ಕಲಾವಿದರ ಬಳಿ ಬಂದು ಹೇಳುವುದು ಉತ್ತಮ. ಯಾಕಂದರೆ ಅದು ಕಲಾವಿದನಿಗೆ ಸರಿಪಡಿಸಿಕೊಳ್ಳುವುದಕ್ಕೆ ಒಂದು ಅವಕಾಶವಿರುತ್ತದೆ. ಆದರೆ ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಕಲಾವಿದರಿಗೆ ಅವಮಾನಿಸುವುದು ಒಳ್ಳೆಯದಲ್ಲ. ಇದು ನನ್ನ ಅಭಿಪ್ರಾಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ :-
ಯೋಜನೆಗಳು ಏನೆಂದರೆ ಯಕ್ಷಗಾನ ಕಲೆಯು ನಿರಂತರವಾಗಿ ಸಾಗುತ್ತಿರಬೇಕು. ನನ್ನಿಂದಾಗುವ ಯಕ್ಷಗಾನ ಸೇವೆ ನಿರಂತರವಾಗಿ ನಡೆಯುತ್ತಾ ಬರುತ್ತದೆ. ಸಾಧ್ಯವಾದರೆ ಸಾಕಷ್ಟು ಮಕ್ಕಳಿಗೆ ಯಕ್ಷಗಾನ ಕಲೆಯನ್ನು ಹೇಳಿಕೊಡುವುದು.. ಅದರ ಪ್ರಾಮುಖ್ಯತೆಯನ್ನು ತಿಳಿಸುವುದು..
ಕಳೆದ ಹದಿನಾರು ವರ್ಷಗಳಿಂದ ವೇಷ ಮಾಡುವ ಜೊತೆಗೆ ಚಂಡೆಯನ್ನು ಕೂಡ ಬಾರಿಸುತ್ತೇನೆ. ನನ್ನ ಗುರುಗಳು ಇಲ್ಲದ ಸಮಯದಲ್ಲಿ ಸಾಕಷ್ಟು ಸ್ಕೂಲ್, ಕಾಲೇಜುಗಳಿಗೆ ಯಕ್ಷಗಾನ ನೃತ್ಯವನ್ನು ಹೇಳಿಕೊಡುವುದಕ್ಕೆ ಹೋಗುತ್ತೇನೆ ಹಾಗೂ ವೇಷವನ್ನು ಕಟ್ಟುವುದಕ್ಕೆ ಹೋಗುತ್ತೇನೆ
ಹಾಗೂ ಯಕ್ಷಗಾನ ಹಾಡಿಗೆ ಕಾಲೇಜುಗಳಲ್ಲಿ ಆಗುವಂತಹ ಕಾರ್ಯಕ್ರಮಗಳಿಗೆ ನೃತ್ಯ ಸಂಯೋಜಕನಾಗಿ ಹೋಗಿರುತ್ತೇನೆ.
ಆರನೇ ತರಗತಿಯಲ್ಲಿ ಇರುವಾಗ ನನ್ನ ತಾಯಿಯ ಬಲವಂತಕ್ಕಾಗಿ ಯಕ್ಷಗಾನ ಕಲೆಗೆ ಸೇರ್ಪಡೆಯಾದ ನಾನು ಒಂದು ವರ್ಷ ಕಳೆಯುವ ಮೊದಲೇ ಯಕ್ಷಗಾನವನ್ನು ಬಿಟ್ಟು ಬೇರೆ ಯಾವ ಕಲೆಗೂ ನಾನು ಹೋಗುವುದಕ್ಕೆ ಬಯಸಲಿಲ್ಲ. ಯಾಕೆಂದರೆ ಯಕ್ಷಗಾನ ಕಲೆಯು ಸಾಕಷ್ಟು ರೀತಿಯಲ್ಲಿ ನನ್ನನ್ನು ಸೆಳೆದುಕೊಂಡಿದೆ (ಕಳೆದ 17 ವರುಷಗಳ ಯಕ್ಷಗಾನದ ಅನುಭವ ನನಗೆ ಇದೆ). ಹಾಗೆ ಸಾಕಷ್ಟು ವರ್ಷವೇ ಕಳೆದು ಹೋಯಿತು. ಇವತ್ತಿಗೂ ನಾನು ಯಕ್ಷಗಾನ ಕಲೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇನೆ. ಅದು ಮುಂದೆ ನಿರಂತರವಾಗಿಯೂ ಸಾಗುತ್ತದೆ ಎಂದು ಹೇಳಲು ಬಯಸುತ್ತೇನೆ.
ಸೀತೂರು, ಗುತ್ಯಮ್ಮ ಮೇಳ, ಹಾರೆಗೊಪ್ಪ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ (ಕಲಾವಿದರಿಗೆ ಹೆಚ್ಚು ಕಲಿಕೆಗೆ ಉತ್ತಮವಾದ ರಂಗ).
ಹಾಗೆ ಇತರೆ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಹೋಗುತ್ತೇನೆ.
“ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ”, ಹಾಗೆ ಸಾಕಷ್ಟು ಸಂಘ ಸಂಸ್ಥೆಯಲ್ಲಿ ಪ್ರಶಸ್ತಿಗಳು ದೊರಕಿದೆ.
ಯಕ್ಷಗಾನ (ವೇಷ ಹಾಗೂ ಚಂಡೆ, ಮೇಕಪ್ ಮಾಡುವುದು, ನೃತ್ಯ ಹೇಳಿಕೊಡುವುದು), ಮಿಮಿಕ್ರಿ, ಪೈನ್ಟಿಂಗ್, ಕ್ರಾಫ್ಟ್ ಮಾಡುವುದು, ಟ್ರಾವೆಲಿಂಗ್, ಗಿಡ ನೆಡುವುದು, ಫೋಟೋಗ್ರಾಫಿ, ಮೋಟಿವೇಶನ್ ಸ್ಪೀಕರ್ ಮಾಡುವುದು ಇವರ ಹವ್ಯಾಸಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು