ಶಿರ್ವ : ದಿನಾಂಕ 28-06-2023ರಂದು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಜರುಗಿದ ನಂದಳಿಕೆ ಚಾವಡಿ ಅರಮನೆ ಸರಳ ಎಸ್. ಹೆಗ್ಡೆಯವರು ಬರೆದ ‘ಸತ್ಯಮಾಲೋಕಂದ ಸಿರಿ’ ಎಂಬ ಪುಸ್ತಕವನ್ನು ವಿಜಯಾ ಬ್ಯಾಂಕ್‌ನ ವಿಶ್ರಾಂತ ಪ್ರಬಂಧಕ ಭುವನ ಪ್ರಸಾದ್ ಹೆಗ್ಡೆ ಲೋಕಾರ್ಪಣೆಗೊಳಿಸಿ, ಮಾತನಾಡುತ್ತಾ “ಸಿರಿಗಳ ಪಾಡ್ದನವು ಕಥೆಯ ರಚನೆಗೆ ಸಹಕಾರಿಯಾಗಿದೆ. ನಂದಳಿಕೆ ಸಿರಿ ಜಾತ್ರೆಗೆ ಪ್ರಸಿದ್ಧವಾಗಿರುವ ಸ್ಥಳ. ಇಲ್ಲಿಯ ಸಿರಿಗಳ ಕಥೆಗಳನ್ನು ಪುಸ್ತಕ ರೂಪದಲ್ಲಿ ಬರೆದಿರುವುದು ಅಭಿನಂದನಾರ್ಹವಾಗಿದೆ. ಮುಂದಿನ ಜನಾಂಗಕ್ಕೆ ಸ್ಥಳದ ಮಹತ್ವ ಹಾಗೂ ಇತಿಹಾಸ ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ” ಎಂದು ಹೇಳಿದರು.
ಮುಖ್ಯ ಆತಿಥಿಯಾಗಿ ಭಾಗವಹಿಸಿದ್ದ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅರುಣ್ ಕುಮಾರ್, ಎಸ್.ಆರ್. ಮಾತನಾಡಿ, “ಸತ್ಯಮಾಲೋಕಂದ ಸಿರಿ ಪುಸ್ತಕದಲ್ಲಿ ಶ್ರೀಮಂತ ತುಳುನಾಡ ಸಂಸ್ಕೃತಿಯನ್ನು ತೆರೆದಿಡಲಾಗಿದೆ. ಕುಂದಾಪುರದಿಂದ ಹಿಡಿದು ಉಜಿರೆಯವರೆಗಿನ ಶ್ರೀಮಂತ ತುಳುನಾಡು ಸಿರಿಗಳ ಆರಾಧನೆಯ ಕಥೆಗಳು ಯುವ ಜನಾಂಗಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಇಡೀ ತುಳುನಾಡಿನಲ್ಲಿ ಸುಮಾರು 75 ಕಡೆಗಳಲ್ಲಿ ಸಿರಿ ಆರಾಧನೆ ನಡೆಯುತ್ತದೆ. ಇದು ತುಳುನಾಡಿನ ಇತಿಹಾಸವಾಗಿದೆ. ಈ ಕೃತಿ ಮತ್ತೊಮ್ಮೆ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಟ್ಟಿ ಕೊಟ್ಟ ಕೃತಿಯಾಗಿದೆ” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, “ಕೃತಿ ಬರೆಯಲು ಇಚ್ಚಾಶಕ್ತಿ, ಶ್ರದ್ಧೆಯೇ ಮುಖ್ಯವಾಗಿದೆ. ತುಳುನಾಡು ದೈವಗಳ ನಾಡು, ಸಿರಿಗಳ ಕಾರ್ಣಿಕದ ಮೂಲಕ ಸಂಸ್ಕೃತಿಯ ಶ್ರೀಮಂತಿಕೆ ತೋರಿಸುತ್ತದೆ. ಈ ಕೃತಿಯು ಒಂದು ಇತಿಹಾಸವಾಗಿದೆ” ಎಂದರು.
ಲೇಖಕಿ ಸರಳಾ ಎಸ್. ಹೆಗ್ಡೆ ಮಾತನಾಡಿ, :ಪಾಡ್ದಾನಗಳಲ್ಲಿ ಒಂದು ರೀತಿಯ ಕಥೆಯಾದರೆ ಕೃತಿಗಳಲ್ಲಿ ಮತ್ತೊಂದು ರೀತಿಯಲ್ಲಿದೆ. ಅಲ್ಲದೆ ಒಬ್ಬರಿಂದ ಇನ್ನೊಬ್ಬರಿಗೆ ಸಿರಿ ಕಥೆಗಳು ಭಿನ್ನವಾಗಿರುತ್ತದೆ ಅದನ್ನು ಕ್ರೋಢೀಕರಿಸಿ ಪುಸ್ತಕ ಬರೆಯಲಾಗಿದೆ” ಎಂದರು.
ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಹರೀಶ್ ತಂತ್ರಿ ಮಾತನಾಡಿ, “ಪುಸ್ತಕಗಳನ್ನು ಬರೆಯುವುದು ಅಷ್ಟೊಂದು ಸುಲಭದ ಮಾತಲ್ಲ. ಬರೆಯಲು ಮನಸ್ಸು ಹಾಗೂ ತಾಳ್ಮೆ ಅತೀ ಮುಖ್ಯ, ಜೊತೆಗೆ ಮಾಹಿತಿಯೂ ಬೇಕಾಗುತ್ತದೆ. ಹೀಗಿದ್ದಾಗ ಒಂದು ಸುಂದರ ಕೃತಿಯನ್ನು ರಚಿಸಲು ಸಾಧ್ಯವಾಗುತ್ತದೆ. ಸಿರಿಯ ಕಥೆಯನ್ನು ಬರೆಯಲು ದೇವರ ಅನುಗ್ರಹ ಹಾಗೂ ಹಿರಿಯರ ಆಶಿರ್ವಾದ ಲೇಖಕರ ಮೇಲಿತ್ತು” ಎಂದರು.
ಕವತ್ತಾರು ದೇವಾಲಯದ ಅರ್ಚಕ ವಿಷ್ಣು ರಾಜ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಚಾವಡಿ ಅರಮನೆ ಸುಂದರರಾಮ ಹೆಗ್ಡೆ, ಆಶಾ ಸುಹಾಸ್ ಹೆಗ್ಡೆ, ಡಾ. ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು. ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಸ್ವಾಗತಿಸಿ, ಸೀತಾರಾಂ ಭಟ್ ಕಾರ್ಯಕ್ರಮ ನಿರೂಪಿಸಿ, ಸುಧಾಕರ್ ರಾವ್ ವಂದಿಸಿದರು.