ಮೈಸೂರು: ಕರ್ನಾಟಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ಗುರು ಶ್ರೀ ಕೆ.ವಿ ಸುಬ್ಬಣ್ಣನವರ ನೆನಪಿನಲ್ಲಿ, ತಿಂಗಳಿಡೀ ನಟನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಇದೇ 08-07-2023 ಮತ್ತು 09-07-2023ರಂದು ಸಂಜೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಬೆಂಗಳೂರು ಸಹಯೋಗದಲ್ಲಿ ‘ಮೂಲಂ 2023’ (ದಿ ರೂಟ್ಸ್) ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ನೃತ್ಯೋತ್ಸವವನ್ನು ಆಯೋಜಿಸಲಾಗಿದೆ.
08-07-2023ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿನ್ನೆಲೆ ಗಾಯಕಿ, ಸಂಗೀತ ಸಂಯೋಜಕಿ ಮತು ಕವಯಿತ್ರಿ ಶ್ರೀಮತಿ ಹೆಚ್ ಆರ್ ಲೀಲಾವತಿ ಹಾಗೂ ರಂಗಕರ್ಮಿ ಶ್ರೀ ಮಂಡ್ಯ ರಮೇಶ್ ಭಾಗವಹಿಸಲಿರುವರು. ಕಾರ್ಯಕ್ರಮದ ಎರಡೂ ದಿನ ನೃತ್ಯ, ಸಂಗೀತ ಮತ್ತು ರಂಗಭೂಮಿಗಳಲ್ಲಿ ಗುರು-ಶಿಷ್ಯರ ನಡುವಿನ ಅನುಬಂಧ, ಪರಂಪರೆ ಮತ್ತು ತಲೆಮಾರುಗಳ ನಡುವಿನ ವ್ಯತ್ಯಾಸ, ಬೆಳವಣಿಗೆ ಮತ್ತು ಪ್ರಸ್ತುತಿ ಇವುಗಳ ಕುರಿತಾಗಿ ಅವಲೋಕಿಸಲು ವಿಚಾರ ಸಂಕಿರಣದ ಜೊತೆಗೆ ಪ್ರಾತ್ಯಕ್ಷಿಕೆ ನಡೆಯಲಿದೆ.
ದಿನಾಂಕ 08-07-2023ರಂದು ಮುಂಬೈನವರಾದ ಶ್ರೀಮತಿ ದಿವ್ಯ ವಾರಿಯರ್, ಶ್ರೀಮತಿ ನಮ್ರತಾ ಮೆಹತಾ ಮತ್ತು ಪವಿತ್ರ ಕೃಷ್ಣ ಭಟ್ ವಿಚಾರ ಸಂಕಿರಣದದಲ್ಲಿ ಭಾಗವಹಿಸಲಿದ್ದು, ಮೋಹಿನಿ ಅಟ್ಟಂ, ಒಡಿಸ್ಸಿ ಮತ್ತು ಭರತನಾಟ್ಯಂ ನೃತ್ಯ ಪ್ರಕಾರಗಳ ಪ್ರದರ್ಶನ ನಡೆಯಲಿದೆ.
ದಿನಾಂಕ 09-07-2023ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರಸ್ವತಿ ಸಮ್ಮಾನ್ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಖ್ಯಾತಿಯ ಕಾದಂಬರಿಕಾರರಾದ ಡಾ. ಎಸ್. ಎಲ್. ಭೈರಪ್ಪ ಹಾಗೂ ನೃತ್ಯಾಲಯ ಟ್ರಸ್ಟ್ ಮೈಸೂರಿನ ನಿರ್ದೇಶಕರಾದ ಡಾ. ತುಳಸೀ ರಾಮಚಂದ್ರ ಭಾಗವಹಿಸಲಿರುವರು. ಪದ್ಮಶ್ರೀ ಪುರಸ್ಕೃತೆ ದೆಹಲಿಯ ಶ್ರೀಮತಿ ಗೀತಾ ಚಂದ್ರನ್, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ವೈಜಯಂತಿ ಕಾಶಿ ಮತ್ತು ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಶಾಶ್ವತಿ ಸೇನ್ ವಿಚಾರ ಸಂಕಿರಣದದಲ್ಲಿ ಭಾಗವಹಿಸಲಿದ್ದು, ಭರತನಾಟ್ಯಂ, ಕೂಚಿಪುಡಿ ಮತ್ತು ಕಥಕ್ ನೃತ್ಯ ಪ್ರಕಾರಗಳ ಪ್ರದರ್ಶನ ನಡೆಯಲಿದೆ. ಈ ಎರಡೂ ದಿನಗಳ ಕಾರ್ಯಕ್ರಮಗಳು ಶ್ರೀಮತಿ ವೈಜಯಂತಿ ಕಾಶಿಯವರ ನೇತೃತ್ವದಲ್ಲಿ ನಡೆಯಲಿದೆ.