ಬೆಂಗಳೂರು: ನೃತ್ಯರಂಗದಲ್ಲಿ ಎಲೆಮರೆಯ ಕಾಯಿಯಂತೆ ನಿಷ್ಠೆಯಿಂದ ಬದ್ಧತೆಯಿಂದ ಸಾಧನಗೈಯುತ್ತಿರುವ ಶ್ರೀ ‘ಶಾರದ ನೃತ್ಯಾಲಯ’ದ ನಾಟ್ಯಗುರು ವಿದುಷಿ. ಬಿ. ಎಸ್. ಇಂದು ನಾಡಿಗ್ ಇವರ ಅತ್ಯುತ್ತಮ ಕಲಾಮೂಸೆಯಲ್ಲಿ ರೂಪುಗೊಂಡಿರುವ ಕಲಾಶಿಲ್ಪ ವಿದುಷಿ. ಶ್ರೀಯಾ ಕಸ್ತೂರಿ ಪ್ರತಿಭಾವಂತ ಕಲಾವಿದೆ. ಶ್ರೀಮತಿ ಗೋದಾವರಿ ಮತ್ತು ಸುದರ್ಶನ್ ಕಸ್ತೂರಿಯವರ ಪುತ್ರಿಯಾದ ಶ್ರೀಯಾ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಪರಿಶ್ರಮ ಹೊಂದಿದ್ದು, ಸಂಸ್ಕಾರವಂಥ ಕುಟುಂಬದ ಹಿನ್ನಲೆಯುಳ್ಳವಳು. ಸತತ ಹದಿನಾರು ವರ್ಷಗಳ ನೃತ್ಯಾಭ್ಯಾಸದಿಂದ ಹದಗೊಂಡಿರುವ ಶ್ರೀಯಳ ಕಲಾಪ್ರತಿಭೆ ಇದೀಗ ಕಲಾರಾಧಕರ ಸಮ್ಮುಖ ಅನಾವರಣಗೊಳ್ಳುವ ಸುಸಮಯ ಒದಗಿದೆ. ಇದೇ ತಿಂಗಳ 9 ಭಾನುವಾರದಂದು ಸಂಜೆ 6 ಗಂಟೆಗೆ ಎ.ಡಿ.ಎ. ರಂಗಮಂದಿರದಲ್ಲಿ ಶ್ರೀಯಾ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾಳೆ. ಅವಳ ಕಲಾಸೊಬಗನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸುಸ್ವಾಗತ.
ಬೆಂಗಳೂರಿನ ಶ್ರೀಮತಿ ಗೋದಾವರಿ ಮತ್ತು ಸುದರ್ಶನ್ ಎಸ್. ಕಸ್ತೂರಿ ಅವರ ಸುಪುತ್ರಿ ಶ್ರೀಯಾಗೆ ಬಾಲ್ಯದಿಂದ ನೃತ್ಯಾಸಕ್ತಿ. ಏಳನೆಯ ವಯಸ್ಸಿಗೇ ಭರತನಾಟ್ಯ ಕಲಿಯಲಾರಂಭಿಸಿದಳು. ಮೊದಲ ಗುರು ಸವಿತಾ ಅರುಣ್. ಅನಂತರ ಹೆಚ್ಚಿನ ಮಾರ್ಗದರ್ಶನಕ್ಕೆ, ನೃತ್ಯಾರಾಧನೆಗೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಉತ್ತಮ ಪಂಕ್ತಿಯ ಗುರು ಇಂದು ನಾಡಿಗ್ ಇವಳ ನೃತ್ಯಗುರುಗಳಾದರು. ಆಸಕ್ತಿ-ಬದ್ಧತೆಗಳಿಂದ ಇವರಲ್ಲಿ ನೃತ್ಯ ಕಲಿತು, ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ನೃತ್ಯಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳಿಂದ ಮೂರುಹಂತಗಳಲ್ಲೂ ‘ಡಿಸ್ಟಿಂಕ್ಷನ್’ ಪಡೆದ ಹಗ್ಗಳಿಕೆ ಇವಳದು.
ಓದಿನಲ್ಲೂ ಜಾಣೆಯಾದ ಶ್ರೀಯಳ ಬಾಲ್ಯದ ಶಾಲಾಭ್ಯಾಸ ಸೇಂಟ್ ತೆರೆಸಾಸ್ ಗರ್ಲ್ಸ್ ಸ್ಕೂಲ್, ಹೈಸ್ಕೂಲ್ ಶ್ರೀ ಸರಸ್ವತಿ ವಿದ್ಯಾ ಮಂದಿರದಲ್ಲಿ. ವಿಜಯಾ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ಇವಳು, ಶಾಲಾ- ಕಾಲೇಜಿನ ಎಲ್ಲ ನೃತ್ಯ ಸ್ಪರ್ಧೆ ಮತ್ತು ಅಂತರ ಕಾಲೇಜು ಸ್ಪರ್ಧೆಗಳಲ್ಲೂ ಬಹುಮಾನಗಳನ್ನು ಪಡೆಯುತ್ತಿದ್ದುದು ಗಮನೀಯ. ಬಹುಮುಖ ಆಸಕ್ತಿಯನ್ನು ಹೊಂದಿದ್ದ ಈಕೆ, ವಿದ್ವಾನ್ ತಿರುಮಲೆ ಶ್ರೀನಿವಾಸ್ ಮತ್ತು ವಿದುಷಿ ನಾಗರತ್ನ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿತಳು. ಓದುವ ಉತ್ತಮ ಹವ್ಯಾಸವುಳ್ಳ ಶ್ರೀಯಳಿಗೆ ನಮ್ಮ ಭಾರತೀಯ ಪುರಾಣ, ಇತಿಹಾಸ, ಸತ್ಪುರುಷರ ಚರಿತ್ರೆಗಳನ್ನು ಓದುವ ಅಭಿರುಚಿ ಮತ್ತು ರಂಗೋಲಿ ಇತರ ಕಲೆಗಳಲ್ಲೂ ಆಸಕ್ತಿ. ನಾಡಿನಾದ್ಯಂತ ನೃತ್ಯ ಪ್ರದರ್ಶನ ನೀಡಿರುವ ಇವಳು, ಹಂಪಿ ಉತ್ಸವ, ಪದ್ಮಾವತಿ ಅಮ್ಮಾವರಿ ಬ್ರಹ್ಮೋತ್ಸವ, ಗುರು ಪಾದಕಾ ಪೂಜಾ, ಮೈಸೂರು ದಸರಾ ಉತ್ಸವಗಳಲ್ಲಿ ಭಾಗವಹಿಸಿರುವ ಹೆಮ್ಮೆ. ಶ್ರೀನಿವಾಸ ಕಲ್ಯಾಣ, ಸ್ನೋ ವೈಟ್ ಮತ್ತು ಏಳುಜನ ಕುಳ್ಳರು , ವೇಲಾಪುರಿ ವೈಭವ, ಮೋಹಿನಿ ಭಸ್ಮಾಸುರ, ಸಿಂಧೂರ ಗಣಪ ಮುಂತಾದ ನೃತ್ಯರೂಪಕಗಳಲ್ಲಿ ಭಾಗವಹಿಸಿರುವ ಅನುಭವ. ಪ್ರಸ್ತುತ ಶ್ರೀ ಚರಣ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಉದ್ಯೋಗಸ್ಥಳಾಗಿರುವ ಇವಳಿಗೆ ನೃತ್ಯರಂಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಆಕಾಂಕ್ಷೆ.
- ವೈ.ಕೆ.ಸಂಧ್ಯಾ ಶರ್ಮ
- ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.