ಹಾಸನ ಜಿಲ್ಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಾ 2016ರಲ್ಲಿ ವರ್ಗಾವಣೆಗೊಂಡು ಬೆಳ್ತಂಗಡಿ ತಾಲೂಕಿನ ಬದನಾಜೆ ಶಾಲೆಗೆ ಸೇರಿದೆ. ತೆಂಕಕಾರಂದೂರಿನ ನನ್ನ ಬಂಧುಗಳಾದ ವಿಷ್ಣು ಸಂಪಿಗೆತ್ತಾಯರ ಮನೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ನನ್ನ ತಮ್ಮ ಪ.ರಾ. ಶಾಸ್ತ್ರಿಗಳನ್ನು ಪರಿಚಯಿಸಿದಾಗ ಮೊದಲಿಗೆ ನನಗೆ ತೀರ ಆಶ್ಚರ್ಯವಾಯಿತು, ನಾನು ಚಿಕ್ಕಂದಿನಿಂದಲೂ ಕಥೆಗಳು, ಲೇಖನಗಳನ್ನು ಓದಿಕೊಂಡು ಬಂದಿದ್ದು ಇದೇ ಶಾಸ್ತ್ರಿಗಳು ಬರೆದದ್ದೆ ? ಎಂದು. ನನ್ನ ಕಲ್ಪನೆಯಲ್ಲಿ ಶಾಸ್ತ್ರಿಗಳು ಎಂದರೆ ದೊಡ್ಡ ನಿಲುವಿನ, ಲೇಖಕರು ಧರಿಸುವ ದೊಡ್ಡ ಧಿರಿಸಿನ, ಗಂಭೀರವಾದ ವ್ಯಕ್ತಿತ್ವವುಳ್ಳ, ಸಾಮಾನ್ಯ ಜನರಿಂದ ಒಂದಷ್ಟು ಅಂತರವನ್ನು ಇಟ್ಟುಕೊಂಡವರು ಎಂಬುದಾಗಿತ್ತು. ಆದರೆ ಸಾಮಾನ್ಯ ಫಕೀರರಂತೆ, ಸಣಕಲು ವ್ಯಕ್ತಿತ್ವದ, ಸಾಮಾನ್ಯರಲ್ಲೂ ಸಾಮಾನ್ಯರಂತೆ ಇರುವ, ನಗುಮುಖದಲ್ಲಿ ಜೀವನೋತ್ಸಾಹವನ್ನು ತುಂಬಿಕೊಂಡಿರುವ ಇವರನ್ನು ಕಂಡಾಗ ಹೊಸತೊಂದು ಸಾಹಿತ್ಯ ಲೋಕಕ್ಕೆ ನಾನು ಹೋದಂತೆ ಭಾಸವಾಯಿತು.
ಯಕ್ಷಗಾನ ತಾಳಮದ್ದಳೆ ಮತ್ತು ಗಮಕದ ಕಾರ್ಯಕ್ರಮಗಳಲ್ಲಿ ಪ್ರೊ. ಮಧೂರು ಮೋಹನ ಕಲ್ಲೂರಾಯರ ಜೊತೆಯಾಗಿ ಹಲವಾರು ಕಾರ್ಯಕ್ರಮಗಳೊಂದಿಗೆ ಪಾಲ್ಗೊಂಡು ಸ್ನೇಹಾಚಾರ ಬೆಳೆಯುತ್ತಿದ್ದಾಗ ಅಲ್ಲಿ ಶಾಸ್ತ್ರಿಗಳ ಸಾಂಗತ್ಯ ಹೆಚ್ಚಾಗಿ, ಆತ್ಮೀಯತೆಯು ತಾನೇ ತಾನಾಗಿ ಬೆಳೆಯಿತು. ಶಾಸ್ತ್ರಿಗಳಿಗೆ ಮೊದಲೇ ನನ್ನ ಅಣ್ಣ ಮತ್ತು ತಮ್ಮಂದಿರ ಪರಿಚಯವಿದ್ದುದರಿಂದ ನಾನು ಅವರಿಗೆ ಆತ್ಮೀಯನಾಗಲು ಹೆಚ್ಚು ದಿನ ಬೇಕಾಗಿರಲಿಲ್ಲ. ಯಕ್ಷಗಾನ ತಾಳಮದ್ದಳೆಯಲ್ಲಿ ನನ್ನ ಸಣ್ಣ ಸಣ್ಣ ಪಾತ್ರಗಳ ನಿರ್ವಹಣೆಯನ್ನೂ, ತುಂಬಾ ಚೆನ್ನಾಗಿ ಪಾತ್ರ ಪೋಷಣೆ ಮಾಡಿದ್ದೀರಿ ಎಂದು (ನಾನು ಮುಜುಗರ ಪಟ್ಟುಕೊಳ್ಳುವಷ್ಟು) ಹೊಗಳುತ್ತಾ ಅಲ್ಲಲ್ಲಿ ತಿದ್ದಬಹುದಾದ ಅಂಶಗಳನ್ನು ತಿಳಿಸುತ್ತಾ ನನ್ನನ್ನು ಬೆಳೆಸಿದವರು ಶಾಸ್ತ್ರಿಗಳು. ನನ್ನ ಗಮಕ, ತಾಳಮದ್ದಳೆಯಲ್ಲಿನ ಯಾವುದೇ ರೀತಿಯ ಕಾರ್ಯಗಳನ್ನು, ಪ್ರಯೋಗಗಳನ್ನು ಮುಕ್ತ ಕಂಠದಿಂದ ಶ್ಲಾಘಿಸುವ ಗುಣ ಶಾಸ್ತ್ರಿಗಳದು. ಇವರು ರೇಡಿಯೋ ಕಾರ್ಯಕ್ರಮ ಒಂದರಲ್ಲಿ ಚಿಂತನ ನಡೆಸಿಕೊಡಲು ಮಂಗಳೂರಿಗೆ ಹೋದಾಗ ಆಕಾಶವಾಣಿಯ ಸೂರ್ಯನಾರಾಯಣ ಭಟ್ಟರಿಗೆ ನನ್ನನ್ನು ಪರಿಚಯಿಸಿ ಆಕಾಶವಾಣಿಯಲ್ಲಿ ಚಿಂತನವನ್ನು ನಡೆಸಿಕೊಡುವಂತೆ ಪ್ರೋತ್ಸಾಹಿಸಿದ ರೀತಿ ಅನನ್ಯ. ಇಂತಹ ಅವಕಾಶವನ್ನು ಇತರರಿಗೆ ಕೊಡುವ ಉದಾರ ಹೃದಯ ಶಾಸ್ತ್ರೀಯವರನ್ನು ಉಳಿದು ಇನ್ನು ಯಾರಿಗೆ ಇರಲು ಸಾಧ್ಯ?
ಈ ಬಾರಿ ಉಜಿರೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಧೂರು ಮೋಹನ ಕಲ್ಲೂರಾಯರನ್ನು ಗುರುತಿಸಿ ಸನ್ಮಾನಿಸುವಲ್ಲಿ ಪ್ರಮುಖ ಮಾರ್ಗದರ್ಶನ ಶಾಸ್ತ್ರಿಗಳದ್ದು. ತನ್ನ ಸಿದ್ದಾಂತಕ್ಕೆ ವಿರುದ್ಧವಾದ ಘಟನೆಗಳು ಜರುಗಿದಾಗ ಸಾತ್ವಿಕವಾದ ಕಟು ಪ್ರತಿಭಟನೆ ತೋರ್ಪಡಿಸಿದ್ದನ್ನೂ ನಾನು ಕಂಡಿದ್ದೇನೆ. ಅಧರ್ಮದ ಮಾರ್ಗದಲ್ಲಿ ನಡೆದಾಗ ಬಂಧುಗಳೂ ಶಿಕ್ಷಾರ್ಹರು ಎಂದು ಅರ್ಜುನನಿಗೆ ಬೋಧಿಸಿದ ಕೃಷ್ಣನ ಮಾತುಗಳು, ಶಾಸ್ತ್ರಿಯವರಿಗೆ ಅನುಕರಣೀಯ ಆದರ್ಶವೆಂಬುದು ಅವರ ನಡೆಯಲ್ಲಿ ಕಂಡುಬರುತ್ತದೆ!.
ದಿನಗಳು ಕಳೆದಂತೆ ಅವರೊಂದಿಗಿನ ವೈಯಕ್ತಿಕ ಪರಿಚಯದ ಜೊತೆಗೆ ಕೌಟುಂಬಿಕ ಪರಿಚಯವೂ ಗಾಢವಾಗುತ್ತಾ ಸಾಗಿತು. ಶಾಸ್ತ್ರಿ ದಂಪತಿಗಳು ಕಾಲಕ್ರಮೇಣ ನನ್ನ ಕುಟುಂಬದ ಜೊತೆ ತುಂಬಾ ಹತ್ತಿರವಾಗುತ್ತಾ ನಮ್ಮನ್ನು ಅವರ ಮನೆಯ ಮಕ್ಕಳಂತೆ ಕಾಣುತ್ತಿರುವುದು ಅನುಪಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಮಗುವಿರದಿದ್ದ ನಮಗೆ ಮಗುವೊಂದು ಆಗಲಿ ಎಂಬ ಅವರ ಪ್ರಾರ್ಥನೆ ದೇವರಿಗೆ ತಲುಪಿದ ಫಲವೋ ಎಂಬಂತೆ ಎರಡು ವರ್ಷಗಳ ಹಿಂದೆ ಗಂಡು ಮಗು ಆಯಿತು. ಆ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಸಂತೋಷಪಟ್ಟವರಲ್ಲಿ ಶಾಸ್ತ್ರಿ ದಂಪತಿಗಳು ಪ್ರಮುಖರು. ಅವರ ಸುಖದ ಹಾರೈಕೆ ನಮ್ಮ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆ.
ಹೂವುಗಳ ಜೊತೆ ನೂಲು ಕೂಡ ದೇವರ ಮಸ್ತಕಕ್ಕೆ ಹೇಗೆ ಏರುವುದೋ; ಹಾಗೆಯೇ ಉತ್ತಮ ಗುಣವಿರುವ ವ್ಯಕ್ತಿಯ ಸಂಪರ್ಕದಿಂದ ಸಾಮಾನ್ಯ ವ್ಯಕ್ತಿಯು ಸಹ ಗೌರವಕ್ಕೆ ಪಾತ್ರನಾಗುತ್ತಾನೆ ಎನ್ನುವುದಕ್ಕೆ ಶಾಸ್ತ್ರಿಯವರೊಂದಿಗೆ ನನ್ನ ಒಡನಾಟ ಉದಾಹರಣೆಯಾಗುತ್ತದೆ. ಸಮಯಾವಕಾಶ ಇದ್ದಾಗ ಶಾಸ್ತ್ರಿಗಳ ಮನೆಗೆ ಭೇಟಿ ನೀಡುವುದು ಸಾಮಾನ್ಯ. ತನ್ನೆಲ್ಲ ಕೆಲಸಗಳನ್ನು ಬದಿಗೊತ್ತಿ ಒಂದಷ್ಟು ಹೊತ್ತು ನನ್ನೊಡನೆ ಆರೋಗ್ಯ ಪೂರ್ಣ ಹರಟೆ ಹೊಡೆಯುತ್ತಾರೆ. ಸಮಾಜದ ಆಗುಹೋಗುಗಳ ಬಗ್ಗೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಾಗ ಆದ ಜೀವನದ ಅನುಭವಗಳನ್ನು ಬಿಚ್ಚಿಡುತ್ತಾ, ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸುತ್ತಾ ಆ ಸಮಯವನ್ನು ರಸ ನಿಮಿಷಗಳಾಗಿಸುತ್ತಾರೆ. ತಾಯಿ ಶಾರದೆಯವರು ಆಗಾಗ ಕಾಫಿಯನ್ನು ನೀಡುತ್ತಾ, ಮನಸ್ಸಿಗೂ, ದೇಹಕ್ಕೂ ಉತ್ತೇಜನವನ್ನು ನೀಡುತ್ತಾರೆ. ಕೊನೆಗೊಮ್ಮೆ “ಈ ದಿನ ಉತ್ತಮವಾದ ಸತ್ಸಂಗವಾಯಿತು. ನನ್ನ ಜೀವನದಲ್ಲಿ ಆತ್ಮೀಯರೆಂದರೆ ಬೆರಳೆಣಿಕೆಯ ಮಂದಿ ಮಾತ್ರ. ಅಂತಹವರಲ್ಲಿ ಒಬ್ಬರಾದ ನೀವು ನನ್ನೊಂದಿಗೆ ಇಷ್ಟು ಹೊತ್ತು ಇದ್ದದ್ದು ತುಂಬಾ ಚೆನ್ನಾಗಿತ್ತು” ಎನ್ನುತ್ತಾ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುತ್ತಾರೆ. ಇಂತಹ ಹಿರಿಯರ ಒಡನಾಟವನ್ನು ಹೊಂದಿದ್ದೇನೆ ಎಂಬ ಹಮ್ಮಿನಲ್ಲಿ ನನ್ನ ಕಾಲವು ಸವೆಯುತ್ತದೆ. ಆದರೆ ನಾನು ತಿಳಿದಂತೆ ಅವರಿಗೆ ಬೇಕೆಂದವರೊಂದಿಗೆ ಶೃತಿ-ಕೃತಿಯೊಂದಿಗೆ ಬಾಂಧವ್ಯ ಗಟ್ಟಿಗೊಳಿಸುತ್ತಾರೆ. ಅನಗತ್ಯವೆಂದು ಕಂಡು ಬಂದಾಗ ಬಾಡಿದ ಹೂವು ಒಂದು ಗಿಡದಿಂದ ತಾನೇ ತಾನಾಗಿ ಉದುರಿ ಬೀಳುವಂತೆ, ಸಂಬಂಧಗಳನ್ನು ಕಳಚಿಕೊಳ್ಳುತ್ತಾರೆ. ತಾವರೆಯ ಎಲೆಯ ಮೇಲಿನ ನೀರಿನಂತೆ ಆಂಟಿಯೂ ಅಂಟಿಕೊಳ್ಳದಿರುವಂತೆ ಬದುಕುವ ಈ ಕ್ರಮ ನಿಜಕ್ಕೂ ಜೀವನಕ್ಕೆ ಒಂದು ಒಳ್ಳೆಯ ಪಾಠವೇ ಹೌದು. ನನ್ನನ್ನು ನಾನು ತಿದ್ದಿಕೊಳ್ಳುವುದಕ್ಕೆ ಶಾಸ್ತ್ರಿಯವರ ಪ್ರೇರಣೆಯ ಋಣ ನನ್ನ ಮೇಲೆ ಸದಾ ಇರುತ್ತದೆ.
70 ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಕೈಗೊಂಡ ಅಭಿನಂದನಾ ಕಾರ್ಯಕ್ರಮದ ಕುರಿತಾಗಿ ಯಾವುದೇ ನಿರೀಕ್ಷೆಗಳು, ಫಲಾಪೇಕ್ಷೆಗಳು ಇವರಿಗಿಲ್ಲ. ‘ಇಂದಿನ ಕಾಲದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು, ಹಲವು ಬಾವಿಗಳ ಕಪ್ಪೆಗಳನ್ನು ಒಂದೆಡೆ ಸೇರಿಸಿದಂತೆ ಕಠಿಣವಾದ ಕೆಲಸ. ಇದು ಹಲವು ಸಂಬಂಧಗಳನ್ನು ಬೆಳೆಸುತ್ತದೆ ಮತ್ತು ಮುರಿಸುತ್ತದೆ, ಹಲವು ಭಾವನೆಗಳನ್ನು ಅರಳಿಸುತ್ತದೆ ಮತ್ತು ಕೆರಳಿಸುತ್ತದೆ, ಎಂದು ನನ್ನ ಮಗನಿಗೆ ಹೇಳಿದ್ದೇನೆ. ಕಾರ್ಯಕ್ರಮವನ್ನು ಮಾಡಲಿ. ಅವನಿಗೆ ಜೀವನದ ಪಾಠವನ್ನು ಇದು ಕಲಿಸುತ್ತದೆ’ ಎನ್ನುವಾಗ, ತನಗಾಗಿ ಮಾಡುವ ಕಾರ್ಯಕ್ರಮವು ಮಗನಿಗೊಂದು ಪಾಠ ಕಲಿಸಲಿ ಎಂಬ ಅಪೇಕ್ಷೆಯು ಶಾಸ್ತ್ರಿಯವರಂತಹ ತಂದೆಗೆ ಮಾತ್ರ ಇರಲು ಸಾಧ್ಯ. ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡ ಶಾಸ್ತ್ರಿಯವರಿಂದ ಗೌರವವು – ತೆಗಳಿಕೆಯು, ಮಿತ್ರತ್ವವು – ಶತೃತ್ವವು, ಸುಖವು – ದುಃಖವು ಸಮಾನ ರೀತಿಯಲ್ಲಿ ಸ್ವೀಕೃತಗೊಳ್ಳುತ್ತದೆ.
ಅಭಿನಂದನಾ ಕಾರ್ಯಕ್ರಮವನ್ನು ಶಾಸ್ತ್ರಿಯವರು ಸಮಚಿತ್ತದಿಂದ ಸ್ವೀಕರಿಸಬಲ್ಲರು. ಅಭಿನಂದಿಸಿದವರಿಗೆ ಇದೊಂದು ಸಾರ್ಥಕ ಕಾರ್ಯವೆಂಬ ಸಂತೃಪ್ತಿಯು ದೊರೆಯುತ್ತದೆ. ಸತ್ಸಂಪ್ರದಾಯಗಳನ್ನು ಅನುಸರಿಸುತ್ತಾ, ದೈವಭಕ್ತಿಯನ್ನು ಹೊಂದಿರುವ ಶಾಸ್ತ್ರಿಗಳಿಗೆ ಆರೋಗ್ಯ ಪೂರ್ಣವಾದ ದೀರ್ಘಾಯುಷ್ಯ ಲಭಿಸಲೆಂದು ಅವರು ನಂಬಿದ ದೇವರಲ್ಲಿ ಪ್ರಾರ್ಥಿಸುವುದಷ್ಟೇ ನಮ್ಮ ಕೆಲಸ. ದೈವ ಕೃಪೆಯು ಹಾಗಾದಲ್ಲಿ, ಹಾಗಿದ್ದಲ್ಲಿ ಶಾಸ್ತ್ರಿಗಳಿಂದ ಸಮಾಜಕ್ಕೆ ಲಾಭದಾಯಕವಾದ ಉತ್ತಮ ಕೊಡುಗೆ ಸದಾ ಲಭಿಸುತ್ತಿರುತ್ತದೆ ಎಂಬುದಕ್ಕೆ ಅನುಮಾನವಿಲ್ಲ.
- ರಾಮಕೃಷ್ಣ ಭಟ್, ನಿನ್ನಿಕಲ್ಲು, ಉಜಿರೆ
ದಿ. ಕೇಶವ ಮಡಪುಳಿತ್ತಾಯ ಮತ್ತು ಶ್ರೀಮತಿ ಶ್ಯಾಮಲಾ ಭಟ್ ದಂಪತಿಗಳ ಸುಪುತ್ರರಾಗಿರುವ ಶ್ರೀ ರಾಮಕೃಷ್ಣ ಎಸ್.ಕೆ. ಇವರು ಯಕ್ಷಗಾನ, ಗಮಕ, ಕಾರ್ಯಕ್ರಮ ಸಂಘಟನೆ, ಲೇಖನ, ಕವನ ಬರೆಯುವುದು, ಇತ್ಯಾದಿ ಹವ್ಯಾಸಗಳನ್ನು ಹೊಂದಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದರು. ಕಳೆದ ಏಳೆಂಟು ವರ್ಷಗಳಿಂದ ಯಕ್ಷಗಾನ ತಾಳಮದ್ದಳೆಯಲ್ಲಿ ಹವ್ಯಾಸಿ ಕಲಾವಿದರಾಗಿ ಅರ್ಥಗಾರಿಕೆಯನ್ನು ಮಾಡುತ್ತಿದ್ದಾರೆ. ತುಳು ಶಿವಳ್ಳಿ ಭಾಷೆಗೆ ಯಕ್ಷಗಾನದ ಎರಡು ಪ್ರಸಂಗಗಳನ್ನು ಅನುವಾದಿಸಿ ಅದರ ತಾಳಮದ್ದಲೆ ಪ್ರದರ್ಶನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 17 ವರ್ಷಗಳಿಂದ ಗಮಕದ ಸೇವೆ ಮಾಡುತ್ತಿದ್ದು, ಬೆಳ್ತಂಗಡಿ ತಾಲೂಕಿನ ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸಲು ಗಮಕದ ಬೇರೆ ಬೇರೆ ಕಾರ್ಯಕ್ರಮಗಳನ್ನು ಮಾಡಿದ ಇವರು ಬೆಳ್ತಂಗಡಿ ತಾಲೂಕಿನ ಪ್ರಥಮ ಗಮಕ ಸಮ್ಮೇಳನವನ್ನು ನಡೆಸಿದ್ದಾರೆ. ಪ್ರಸ್ತುತ ತಾಲೂಕು ಗಮಕಗಳ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅ.ಭಾ.ಸಾ.ಪ.ದ ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.