ಮೈಸೂರು: ಕರ್ನಾಟಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ಗುರು ಶ್ರೀ ಕೆ.ವಿ. ಸುಬ್ಬಣ್ಣನವರ ನೆನಪಿನಲ್ಲಿ ತಿಂಗಳಿಡೀ ನಟನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ 01-07-2023ರಂದು ನಾಡಿನ ಪ್ರಖ್ಯಾತ ರಂಗಕರ್ಮಿ ಕಲ್ಕತ್ತಾದ ಮನೀಶ್ ಮಿತ್ರ ಅವರಿಂದ ‘ಸಾವಯವ ರಂಗಭೂಮಿ’ಯ ಕುರಿತಾದ ಕಾರ್ಯಾಗಾರ ನಡೆಯಿತು.
“ತಿಂಗಳಿಡೀ ನಡೆಯುವ ನಾಟಕ ಪ್ರದರ್ಶನಗಳು, ರಂಗಕಾರ್ಯಾಗಾರ, ರಾಷ್ಟ್ರೀಯ ವಿಚಾರ ಸಂಕಿರಣ, ರಂಗಚರ್ಚೆ, ರಂಗಗೀತೆಗಳು, ಸಾಕ್ಷಚಿತ್ರ ಪ್ರದರ್ಶನಗಳನ್ನು ಗುರು ಸುಬ್ಬಣ್ಣ ಅವರಿಗೆ ಅರ್ಪಿಸಲಾಗಿದೆ” ಎಂದು ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘಸಮೀರ ಅವರು ತಿಳಿಸಿದರು.
ಮನೀಶ್ ಮಿತ್ರ ಅವರು ಭಾರತದಾದ್ಯಂತ ಹುಟ್ಟುಹಾಕಿರುವ ರಂಗಾಂದೋಲನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಪಾಲ್ಗೊಂಡ ಆಸಕ್ತ ಶಿಬಿರಾರ್ಥಿಗಳು ಅಭಿನಯದ ಹೊಸ ಹೊಸ ಮಜಲುಗಳನ್ನು ಹಾಗೂ ಸಾವಯವ ರಂಗಭೂಮಿಯ ಕುರಿತಾಗಿ ಪ್ರಾತ್ಯಕ್ಷಿಕೆಗಳ ಮೂಲಕ, ಉಸಿರಾಟದ ನಿಯಂತ್ರಣದ ಮೂಲಕ ಮತ್ತು ಮಾತಿನ ಗ್ರಹಿಕೆಗಳ ಮೂಲಕ ಮನೀಶ್ ಮಿತ್ರ ಅವರಿಂದ ಶಿಬಿರದಲ್ಲಿ ಅಭ್ಯಾಸ ಮಾಡಿ ತಿಳಿದುಕೊಂಡರು. ಇದೊಂದು ಅಪರೂಪದ ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ನಟನದ ಸಂಸ್ಥಾಪಕರಾದ ಶ್ರೀ ಮಂಡ್ಯ ರಮೇಶ್, ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘ ಸಮೀರ, ಉಪನ್ಯಾಸಕಿ ಕುಮಾರಿ ದಿಶಾ ರಮೇಶ್, ಹಾಗೂ 40ಕ್ಕೂ ಹೆಚ್ಚಿನ ನಟನದ ಹಿರಿಯ ಮತ್ತು ಈ ವರ್ಷದ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು.