ಮಂಗಳೂರು: ಸಾಯಿಶಕ್ತಿ ಯಕ್ಷಕಲಾ ಬಳಗದಿಂದ ನಗರದ ಪುರಭವನದಲ್ಲಿ ದಿನಾಂಕ : 03-07-2023ರಂದು ಸೀನ್ ಸೀನರಿಯ ಯಕ್ಷನಾಟಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉದ್ಘಾಟಿಸಿ ಮಾತನಾಡುತ್ತಾ “ಯಾವುದೇ ಕಲೆಯ ಮೂಲ ಆಶಯ ಮತ್ತು ಮೌಲ್ಯಕ್ಕೆ ಚ್ಯುತಿ ಬಾರದಂತೆ ವಿಭಿನ್ನ ರೀತಿಯ ಪ್ರಯೋಗಗಳು ಸ್ವಾಗತಾರ್ಹವಾಗಿರುವುದರೊಂದಿಗೆ, ಪ್ರಸ್ತುತ ಕಾಲಘಟಕ್ಕೆ ಅದರ ಅನಿವಾರ್ಯತೆಯೂ ಇದೆ. ಯಕ್ಷಗಾನದಲ್ಲೂ ಅನೇಕ ಪ್ರಯೋಗಗಳು ನಡೆಯುತ್ತಿದ್ದು, ಈ ಮೂಲಕ ಜಗತ್ತಿಗೆ ಕಲೆಯ ಹಿರಿಮೆಯನ್ನು ತೋರಿಸಿಕೊಟ್ಟಿದೆ. ಸೀನ್ ಸೀನರಿಯೂ ಕೂಡಾ ಅಂತಹ ಪ್ರಯೋಗಗಳಲ್ಲಿ ಒಂದಾಗಿದ್ದು ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.
ಕಟೀಲು ಯಕ್ಷಗಾನ ಮೇಳಗಳ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಸಾಲಿಗ್ರಾಮ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ, ಸಾಯಿಶಕ್ತಿ ಕಲಾ ಬಳಗ ಮುಂಬಯಿ ಸಂಚಾಲಕ ಬಾಲಕೃಷ್ಣ ಶೆಟ್ಟಿ ಅಜೆಕಾರು, ಶಿರಡಿ ಸಾಯಿ ಮಂದಿರದ ಮುಖ್ಯಸ್ಥ ವಿಶ್ವಾಸ್ ಕುಮಾರ್ ದಾಸ್, ಯಕ್ಷನಾಟಕದ ನಿರ್ಮಾಪಕಿ ಲಾವಣ್ಯ ವಿಶ್ವಾಸ ಕುಮಾರ್, ಕದ್ರಿ ನವನೀತ ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ಕಲಾವಿದರಾದ ಪೆರುವಾಯಿ ನಾರಾಯಣ ಶೆಟ್ಟಿ, ಬಾಯಾರು ರಘುನಾಥ್ ಶೆಟ್ಟಿ ಹಾಗೂ ಮಂಜು ವಿಟ್ಲ ಅವರನ್ನು ಸನ್ಮಾನಿಸಲಾಯಿತು. ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷನಾಟಕ ‘ಶ್ವೇತಕುಮಾರ ಚರಿತ್ರೆ’ ಸೀನು ಸೀನರಿಯ ಯಕ್ಷಗಾನ ಪ್ರದರ್ಶನಗೊಂಡಿತು.
ಕರಾವಳಿಯ ಜಾನಪದ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನದಲ್ಲಿ ಹೊಸ ಹೊಸ ಪ್ರಯೋಗಗಳು ಹೊಸತಲ್ಲ, ಪ್ರತಿ ಪ್ರಯೋಗವೂ ಒಂದಕ್ಕಿಂತ ವಿಭಿನ್ನ. ಅದಕ್ಕೀಗ ಹೊಸ ಸೇರ್ಪಡೆ ‘ಸೀನ್ ಸೀನರಿಯ ಯಕ್ಷನಾಟಕ ವೈಭವ’, ವಿನೂತನ ಪರಿಕಲ್ಪನೆಯೊಂದಿಗೆ ಮೂಡಿಬಂದ ಈ ಯಕ್ಷನಾಟಕ ಯಕ್ಷಗಾನ ಲೋಕದಲ್ಲಿ ಸಂಚಲನ ಮೂಡಿಸುವುದರಲ್ಲಿ ಸಂದೇಹವಿಲ್ಲ ಎಂಬ ಭರವಸೆ ಪ್ರೇಕ್ಷಕರಲ್ಲಿ ಮೂಡಿತು.
ಸುಮಾರು 60 ವರ್ಷಗಳ ಹಿಂದೆ ಟೆಂಟ್ ಮೇಳವಾದ ಕರ್ನಾಟಕ ಯಕ್ಷಗಾನ ನಾಟಕ ಸಭಾವು ನಳ ದಮಯಂತಿ (100 ಪ್ರದರ್ಶನ) ಮತ್ತು ಶ್ವೇತಕುಮಾರ ಚರಿತ್ರೆ ಸೇರಿದಂತೆ ಹಲವು ಪ್ರಸಂಗಗಳನ್ನು ದೃಶ್ಯಾವಳಿಗಳೊಂದಿಗೆ ಪ್ರದರ್ಶಿಸಿ ಮನೆಮಾತಾಗಿತ್ತು. ಅದೇ ಮಾದರಿಯಲ್ಲಿ ಪ್ರದರ್ಶನಗೊಂಡ ಈ ಯಕ್ಷನಾಟಕ ಪ್ರೇಕ್ಷಕರ ಮನಸೂರೆಗೊಳಿಸುವಲ್ಲಿ ಯಶಸ್ವಿಯಾಯಿತು.
ರಂಗಸ್ಥಳವಿಲ್ಲದೆ ವೇದಿಕೆ ಮೇಲೆಯೇ ಕ್ಷಣಮಾತ್ರದಲ್ಲಿ ವಿವಿಧ ಸನ್ನಿವೇಶಗಳನ್ನು ಬಿಂಬಿಸುವ ಆಕರ್ಷಕ ದೃಶ್ಯಗಳು ಮತ್ತು ಬೆಳಕಿನ ಚಿತ್ತಾರ ಇದು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಯಕ್ಷಗಾನದಲ್ಲಿ ಹಿಮ್ಮೇಳ, ಪಾತ್ರಧಾರಿಗಳ ವಿಶ್ಲೇಷಣೆ ಸನ್ನಿವೇಶವನ್ನು ಪ್ರಸ್ತುತಪಡಿಸಿದರೆ, ಸೀನ್ ಸೀನರಿಯ ಯಕ್ಷನಾಟಕದ ಪ್ರತಿ ದೃಶ್ಯವೂ ಅರಮನೆಯಿಂದ ಹಿಡಿದು ಕೈಲಾಸ, ಯುದ್ಧರಂಗ, ಕಾಡು, ಅಂತಃಪುರ, ಯಮಲೋಕ, ರಾಜಬೀದಿ, ಸ್ಮಶಾನದವರೆಗೂ ಆಯಾ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ರೀತಿ ಅಮೋಘವಾದುದು ಮತ್ತು ಯಕ್ಷನಾಟಕದ ವೈಭವವನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಪ್ರತೀಯೊಂದು ದೃಶ್ಯವೂ ಪ್ರೇಕ್ಷಕನ ಏಕಾಗ್ರತೆಗೆ ಒಡ್ಡುವ ಸವಾಲಿನಂತಿತ್ತು. ಯಕ್ಷಗಾನದಲ್ಲಿ ಸಾಮಾನ್ಯವಾಗಿ ಹಿಮ್ಮೇಳದವರು ರಂಗಸ್ಥಳದಲ್ಲಿದ್ದರೆ, ಯಕ್ಷನಾಟಕದಲ್ಲಿ ವೇದಿಕೆಯ ಮುಂಭಾಗದಲ್ಲಿ ಕೆಳಗಿರುತ್ತಾರೆ. ಯಕ್ಷಗಾನದಲ್ಲಿ ಪ್ರವೇಶ, ನಿರ್ಗಮನ ಎರಡು ದ್ವಾರಗಳಿದ್ದರೆ, ಯಕ್ಷನಾಟಕದಲ್ಲಿ ಎಂಟು ದ್ವಾರಗಳಿದ್ದು ಆಯಾಯ ಸನ್ನಿವೇಶಕ್ಕೆ ತಕ್ಕಂತೆ ಅದನ್ನು ಬಳಸಲಾಗಿದೆ.
ಕಿರೀಕ್ಕಾಡು ವಿಷ್ಣು ಭಟ್ ಅವರ ‘ಶ್ವೇತಕುಮಾರ ಚರಿತ್ರೆ’ ಪ್ರಸಂಗಕ್ಕೆ ಹಿಮ್ಮೇಳದಲ್ಲಿ ಸಂಗೀತ ಸುಧೆ ಹರಿಸಿದ ಹನುಮಗಿರಿ ಮೇಳದ ಭಾಗವತ ಚಿನ್ಮಯ ಭಟ್ ಕಲ್ಲಡ್ಕ ಭಾಗವತಿಕೆ, ಅದೇ ರೀತಿ ಮದ್ದಳೆ ಹಾಗೂ ತಬಲಾ, ಎರಡು ಚೆಂಡೆ ಮತ್ತು ಕೊಳಲು ವಾದನ ಇವುಗಳು ಸೀನ್ ಸೀನರಿಯ ಯಕ್ಷನಾಟಕದ ವೈಭವವನ್ನು ಹೆಚ್ಚಿಸಿವೆ. ಶೃಂಗಾರ ರಸಧಾರೆಯ ನಾಟ್ಯ ವೈಭವ, ಸಕಾಲಿಕ ಹಾಸ್ಯ, ಆಶುಸಾಹಿತ್ಯ ಕ್ಷಣಕ್ಷಣಕ್ಕೂ ಬದಲಾಗುವ ದೃಶ್ಯಗಳು ಹೊಸತನವನ್ನು ತೆರೆದಿಟ್ಟವು.
ಕದ್ರಿ ನವನೀತ ಶೆಟ್ಟಿಯ ಪರಿಕಲ್ಪನೆ, ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶನ, ಲಾವಣ್ಯ ವಿಶ್ವಾಸ್ ಕುಮಾರ್ ಇವರ ನಿರ್ಮಾಣ-ನಿರ್ವಹಣೆಯಲ್ಲಿ ಯಕ್ಷನಾಟಕದ ಪ್ರಸ್ತುತಿ ಅದ್ಭುತವಾಗಿತ್ತು. ಆಳ್ವಾಸ್‌ನ ಉಪನ್ಯಾಸಕಿ, ಎಸ್‌ಡಿಎಂ ಲಾ ಕಾಲೇಜು ಮತ್ತು ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿ ಕಲಾವಿದರ ಅಭಿನಯ ಅಭಿನಂದನಾರ್ಹವಾದುದು. ತಸ್ಮೈ ಕೊಡಿಯಾಲ್ ಬೈಲ್ ಬೆಳಕಿನ ವ್ಯವಸ್ಥೆ ಹಾಗೂ ರಂಜನ್ ದಿವ್ಯಜ್ಯೋತಿ ಧ್ವನಿವರ್ಧಕ ವ್ಯವಸ್ಥೆ ನಾಟಕದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದವು.