ಮಂಗಳೂರು : ಸಂಸ್ಕಾರ ಭಾರತಿಯ ವತಿಯಿಂದ ಗುರುಪೂರ್ಣಿಮೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಅತೀವ ಸಾಧನೆ ಮಾಡಿದ ಮತ್ತು ಯಾರೂ ಗುರುತಿಸದೇ ಉಳಿದ ಎಪ್ಪತ್ತು ವರ್ಷಗಳಿಗೆ ಮೇಲ್ಪಟ್ಟ ಕಲಾ ಸಾಧಕರನ್ನು ಗುರುತಿಸಿ, ಅವರಿರುವಲ್ಲಿಗೆ ಹೋಗಿ ಗೌರವಿಸುವ ಕಾರ್ಯಕ್ರಮ ಸುಮಾರು 20 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದದ್ದು ಅಭಿನಂದನಾರ್ಹವಾಗಿದೆ.
ಪ್ರಸ್ತುತ ವರ್ಷ ದಿನಾಂಕ : 03-07-2023ರಂದು ಗುರು ಪೂರ್ಣಿಮೆಯ ಪುಣ್ಯ ದಿನದಂದು ಹೊಸದಿಗಂತ ದಿನಪತ್ರಿಕೆಯ ಸ್ಥಾನೀಯ ಸಂಪಾದಕರಾದ ಪ್ರಕಾಶ್ ಇಳ0ತಿಲ ಗುರುವಂದನೆ ಮಾಡುತ್ತಾ “ಗುರು ಪೂರ್ಣಿಮೆಯ ಪುಣ್ಯ ದಿನದಂದು ವಿವಿಧ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಅವರ ಮನೆಗೆ ತೆರಳಿ ಗೌರವ ಸಮರ್ಪಣೆ ಮಾಡುವ ಸಂಸ್ಕಾರ ಭಾರತೀಯ ಕೆಲಸ ಶ್ಲಾಘನೀಯ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿರಂತರ ಸೇವೆ ಗೈಯುತ್ತಿರುವವರನ್ನು ಗುರುತಿಸಿ ಗುರು ಪೂರ್ಣಿಮೆ ಪುಣ್ಯ ದಿನದಂದು ಗೌರವಿಸುವುದು ಔಚಿತ್ಯ ಪೂರ್ಣವಾದುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದು, ಸಮಾಜಮುಖಿ ಹೋರಾಟ, ಅನೇಕ ಸೇವಾ ಚಟುವಟಿಕೆಯಲ್ಲಿ ಭಾಗವಹಿಸಿದ ಶ್ರೀ ಜೈ ಪ್ರಕಾಶ್ ಹೆಗ್ಡೆ, ಬೆಳ್ಳಿಯ ಕುಸುರಿ ಕೆಲಸದಲ್ಲಿ ಪರಿಣತರಾಗಿ ಸೇವೆ ಗೈಯುತ್ತಿರುವ ಶ್ರೀ ಕೆ. ಭವಾನಿ ಶಂಕರ ಆಚಾರ್ಯ, ದೈವ ನರ್ತನ ಮತ್ತು ಪಾಡ್ದನ ಕಲೆಯಲ್ಲಿ ಆಹರ್ನಿಷಿ ಸೇವೆ ಗೈಯುತ್ತಿರುವ ಬೈಲು ಶ್ರೀ ಸಂಜೀವ ನಲಿಕೆ, ಕಸೂತಿ ಕಾರ್ಯದಲ್ಲಿ ನಿಪುಣರಾದ ಶತಾಯುಷಿ ಶ್ರೀಮತಿ ಗಂಗಮ್ಮ ಉಪಾಧ್ಯಾಯ, ಕುಂಬಾರಿಕೆಯಲ್ಲಿ ಸಾಂಪ್ರದಾಯಿಕದ ಜೊತೆಗೆ ಆಧುನಿಕತೆಯನ್ನೂ ಮೈಗೂಡಿಸಿಕೊಂಡು ನಿಷ್ಠೆಯಿಂದ ಕಾಯಕ ಮಾಡುತ್ತಿರುವ ಶ್ರೀಮತಿ ವಾರಿಜ ದೂಮಪ್ಪ ಬಂಗೇರ ಇವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕ್ ಡಾ. ಸತೀಶ್ ರಾವ್, ಕಾರ್ಪೊರೇಟರ್ ಶ್ರೀಮತಿ ರಂಜನಿ ಕೋಟ್ಯಾನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಅರವಿಂದ ಬಿಜೂರ್, ಭೋಜರಾಜ ಪ್ರಾಂತ ಕಾರ್ಯಕಾರಿಣಿ ಕ್ರೀಡಾ ಭಾರತೀ, ಮಹಾ ನಗರ ಪ್ರಚಾರಕ್ ಹರ್ಷವರ್ಧನ, ಮಹಾನಗರ ಸಹ ಪ್ರಚಾರ ಪ್ರಮುಖ ಚಂದ್ರ ಮೋಹಿತ್, ಹಿರಿಯ ಸ್ವ. ಸ್ವೇ. ಮುರಳಿಧರ ಪ್ರಭು, ನಾರಾಯಣ ಮೂರ್ತಿ ಹಾಗೂ ಸಂಸ್ಕಾರ ಭಾರತೀಯ ಮಂಗಳೂರು ಮಹಾನಗರ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್, ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಾಂತ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಉಪಾಧ್ಯಕ್ಷ ಧನ್ ಪಾಲ್ ಶೆಟ್ಟಿಗಾರ್, ಪ್ರಾಂತ ಕೋಶಾಧಿಕಾರಿ ರಘುವೀರ್ ಗಟ್ಟಿ, ವಿಭಾಗ ಸಂಯೋಜಕರರಾದ ಮಾಧವ ಭಂಡಾರಿ, ಕಾರ್ಯದರ್ಶಿ ಗಣೇಶ್ ಬೋಳೂರು, ಕಿರಣ್, ಮಂಗಳೂರು ವಿಭಾಗ ಕೋಶಾಧಿಕಾರಿ ಶ್ರೀಮತಿ ಪ್ರಭಾ ಕುಲಾಲ್, ಪ್ರಚಾರ್ ಪ್ರಮುಖ್ ಸುಜೀರ್ ವಿನೋದ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯೆ ಶ್ರೀಮತಿ ಶಾರದಾಮಣಿ ಶೇಖರ್, ನೃತ್ಯ ವಿಧಾ ಪ್ರಮುಖ್ ಶ್ರೀಮತಿ ಶ್ರೀಲತಾ ನಾಗರಾಜ್, ನೃತ್ಯ ಗುರು ರಾಜಶ್ರೀ, ಉಳ್ಳಾಲ್, ಶ್ರೀಮತಿ ನಿರ್ಮಲಾ ಶೆಟ್ಟಿ, ಶ್ರೀಮತಿ ರತ್ನಾವತಿ ಜೆ. ಬೈಕಾಡಿ, ಚಂದ್ರಿಕಾ, ಕದ್ರಿ ನವನೀತ್ ಶೆಟ್ಟಿ, ಮಂದಾರಬೈಲು ಶ್ರೀ ವೆಂಕಟ್ರಮಣ ದುರ್ಗಾ ಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಲಕ್ಷ್ಮಣ್ ದೇವಾಡಿಗ, ತುಳು ಅಕಾಡೆಮಿ ಮಾಜಿ ಸದಸ್ಯ ನಾಗೇಶ್ ಕುಲಾಲ್, ಮಾಜಿ ಕಾರ್ಪೊರೇಟರ್ ರಾಜೇಶ್, ದ.ಕ. ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.) ನಿರ್ದೆಶಕರಾದ ಪದ್ಮನಾಭ ಬಂಗೇರ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ( ನಿ.) ಕಾರ್ಯದರ್ಶಿ ವಿನಯ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
101 ವರ್ಷ ಪ್ರಾಯದ ಶತಾಯುಷಿ ಶ್ರೀಮತಿ ಗಂಗಮ್ಮ ಉಪಾಧ್ಯಾಯ ಇವರು ಕಸೂತಿ ಕಾಯಕದಲ್ಲಿ ನಿಷ್ಠಾತರಾಗಿ, ಎಂಬ್ರಾಯಿಡರಿ ಹಾಗೂ ರಂಗೋಲಿಯಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದಾರೆ. ಸಿದ್ಧ ಸಮಾಧಿ ಯೋಗದ ಅಭ್ಯಾಸಕರಾಗಿ, ಯೋಗ-ಪ್ರಾಣಾಯಾಮ ಧ್ಯಾನದಲ್ಲಿ ನಿರತರಾಗಿರುವ ಇವರು ಹಳೆಯ ಚಿಂದಿ ಬಟ್ಟೆ ಹಾಗೂ ಮಕ್ಕಳ ತುಂಡಾದ ಆಟಿಕೆಗಳನ್ನು ಜೋಡಿಸಿ ಅದರಿಂದ ಮನೆಯ ಅಂದವಾದ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುತ್ತಾರೆ. ಯಾವುದೇ ಫಲಾಪೇಕ್ಷೆಯಿಲ್ಲದೇ ತಾನು ಮಾಡಿದ ಕಸೂತಿಯನ್ನು ಹಲವಾರು ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡುವುದು ಮಾತ್ರವಲ್ಲದೇ ಇತರರಿಗೂ ಶೃದ್ಧೆಯಿಂದ ಕಸೂತಿಯನ್ನು ಕಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗೆ ಬಂದ ಅತಿಥಿಗಳಿಗೆ ಅನ್ನಪೂರ್ಣೆಯಾಗಿರುವ ಇವರಿಗೆ ಅವರ ನಿವಾಸದಲ್ಲಿ ಗುರು ಪೂರ್ಣಿಮೆಯಂದು ಸಮಾಜ ಸೇವಕರು ಧಾರ್ಮಿಕ ಮುಖಂಡರು ಜನಪ್ರತಿನಿಧಿಗಳು ಮತ್ತು ಕಲಾವಿದರ ಸಮ್ಮುಖದಲ್ಲಿ ಸನ್ಮಾನಗೈದು ಶುಭ ಹಾರೈಸಲಾಗಿದೆ.
ಶ್ರೀ ಕೆ. ಭವಾನಿ ಶಂಕರ್ ಆಚಾರ್ಯ ಇವರು 84 ಸಂವತ್ಸರಗಳನ್ನು ಪೂರೈಸಿದ್ದು ಚಿನ್ನ ಹಾಗೂ ಬೆಳ್ಳಿಯ ಕುಸುರಿ ಕೆಲಸಗಳಲ್ಲಿ ಪರಿಣತರಾಗಿದ್ದಾರೆ. 12ನೇ ಎಳವೆಯಲ್ಲಿ ಅಣ್ಣ ರಾಘವೇಂದ್ರ ಆಚಾರ್ಯರ ಬಳಿ ಕೆಲಸ ಮಾಡಿದ ಇವರು ಗೋಪು ನೇಯ್ಗೆ, ದೃಷ್ಟಿಮಣಿ, ಕಾಲುಂಗುರ ಮುಂತಾದ ತಯಾರಿಕೆಯಲ್ಲಿ ಸತತ 72 ವರ್ಷಗಳಿಂದ ಅನುಭವ ಹೊಂದಿದ್ದಾರೆ. ದುಬಾಯಿ, ಮುಂಬೈ ಹಾಗೂ ಹಲವಾರು ಸ್ಥಳಗಳಲ್ಲಿ ತಮ್ಮ ಕಾಯಕವನ್ನು ಅತ್ಯಂತ ನಿಷ್ಠೆಯಿಂದ ಪೂರೈಸಿ ಯಶಸ್ವಿಯಾದ ಕಾರಣ ಬಹುಬೇಡಿಕೆಯ ಶಿಲ್ಪಿ ಎಂಬ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಇವರನ್ನು ತಮ್ಮ ಮನೆಯಲ್ಲಿಯೇ ಸೇರಿದ ಸರ್ವ ಪ್ರತಿಷ್ಟಿತರ ಸಮ್ಮುಖದಲ್ಲಿ ಸಕಲ ಗೌರವದಿಂದ ಅಭಿಮಾನ ಪೂರ್ವಕವಾಗಿ ಸಂಸ್ಕಾರ ಭಾರತಿ ವತಿಯಿಂದ ಗೌರವಿಸಿ ಶುಭ ಕೋರಲಾಗಿದೆ.
ಶ್ರೀಮತಿ ವಾರಿಜ ದೂಮಪ್ಪ ಬಂಗೇರ ಇವರು ಕುಂಬಾರಿಕೆಯ ಕಾಯಕದಲ್ಲಿ ನಿಷ್ಣಾತರಾಗಿದ್ದಾರೆ. 81 ವರ್ಷ ಪ್ರಾಯದ ಇವರು ಬಾಲ್ಯದಲ್ಲಿಯೇ ಕುಂಬಾರಿಕೆಯಲ್ಲಿ ಪರಿಣತಿ ಹೊಂದಿ, ಸಾಂಪ್ರದಾಯಿಕ ಕುಂಬಾರಿಕೆಯ ಜೊತೆಗೆ ಆಧುನಿಕತೆಯನ್ನು ಮೈಗೂಡಿಸಿಕೊಂಡವರು. ಯಾಂತ್ರೀಕೃತ ಚಕ್ರ ಅಲ್ಲದೇ ಹೊಸ ಮಾದರಿಯ ಹೂದಾನಿ, ಕಲಾತ್ಮಕ-ಆಕರ್ಷಕ ಮಣ್ಣಿನ ಪಾತ್ರೆಗಳು, ತಂದೂರಿ ಮಡಕೆಗಳ ತಯಾರಿಕೆಯಲ್ಲಿ ಬಹಳ ಅನುಭವಿಯಾಗಿದ್ದಾರೆ. ಕುಂಬಾರಿಕೆಯ ಮೇಲೆ ಅತಿಯಾದ ಅಭಿಮಾನ ಇರುವ ಇವರು ತಮ್ಮ ಮಕ್ಕಳನ್ನು ತರಬೇತುಗೊಳಿಸಿ ಅಳಿವಿನ ಅಂಚಿನಲ್ಲಿರುವ ಕುಂಬಾರಿಕೆಯನ್ನು ನಿಷ್ಠೆ, ಶೃದ್ಧಾ-ಭಕ್ತಿಯಿಂದ ಉಳಿಸಿ ಬೆಳೆಸುವಳ್ಳಿ ಸಹಕಾರಿಯಾಗಿದ್ದಾರೆ. ಇವರಿಗೆ ಸಂಸ್ಕಾರ ಭಾರತಿಯಿಂದ ಸರ್ವ ಸದಸ್ಯರ ಮುಂದೆ ಪ್ರೀತ್ಯಾಧರದಿಂದ ಗೌರವಿಸಿ ಶುಭ ಕೋರಲಾಗಿದೆ.
ಸಮಾಜ ಸೇವಕರಾದ ಶ್ರೀ ಜೈ ಪ್ರಕಾಶ್ ಹೆಗ್ಡೆ ಇವರು ಸುದರ್ಶನ ಶಾಖೆಯ ಸ್ವಯಂ ಸೇವಕರಾಗಿ ಮತ್ತು ಮುಖ್ಯ ಶಿಕ್ಷಕರಾಗಿ, ಶಾಖಾ ಮತ್ತು ಮಂಡಲ ಕಾರ್ಯವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ನಗರದ 24 ಶಾಖೆಗಳನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. 76 ವರ್ಷ ಪ್ರಾಯದ ಇವರು ಸಂಘದ ಕಾರ್ಯಕ್ರಮಗಳಲ್ಲಿ ಪ್ರಬಂಧಕರಾಗಿ, ರಕ್ಷಕರಾಗಿ ಕಾರ್ಯನಿರ್ವಹಿಸಿ, ಅಪಾರ ರಾಷ್ಟ್ರಭಕ್ತಿ, ಹಿಂದುತ್ವ, ಯಾವುದಕ್ಕೂ ಹಿಂಜರಿಯದೆ ಸಾಮಾಜಿಕ ತುಡಿತದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದವರು. ಸಮಾಜಮುಖಿ ಹೋರಾಟ ಮತ್ತು ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಇವರು ತನ್ನ ಧರ್ಮಪತ್ನಿಯೊಂದಿಗೆ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡದ್ದು ಶ್ಲಾಘನೀಯ. ಸಂಘ ಪರಿವಾರ ಮತ್ತು ಸಾಮಾಜಿಕ ವಲಯಗಳಲ್ಲಿ ಜೆ.ಪಿ. ಮಾಮ್ ಎಂದೇ ಪ್ರಸಿದ್ಧಿ ಹೊಂದಿರುವ ಇವರನ್ನು ಶ್ರದ್ಧಾಪೂರ್ವಕ ಆತ್ಮೀಯತೆಯಿಂದ ಸೇರಿದ ಸರ್ವರ ಸಮ್ಮುಖದಲ್ಲಿ ಸ್ವಗೃಹದಲ್ಲಿ ಗೌರವಿಸಿಲಾಗಿದೆ.
ದೈವಾರಾಧನೆಯಲ್ಲಿ 72 ವರ್ಷ ಪ್ರಾಯದ ಬೈಲು ಶ್ರೀ ಸಂಜೀವ ನಲಿಕೆಯವರು ಅದ್ವಿತೀಯರು. ದೈವ ನರ್ತನ ಮತ್ತು ಸಂಧಿ ಪಾಡ್ಡನ ಕಲೆಗಳನ್ನು ಕರಗತಗೊಳಿಸಿಕೊಂಡು ಅನೇಕ ಮಂದಿ ಶಿಷ್ಯರಿಗೆ ದೈವದ ಕೆಲಸ ಮಾಡುವ ವಿಧಾನ ಹಾಗೂ ಸಂಧಿ ಪಾಡ್ಡನಗಳನ್ನು ಕಲಿಸಿದ ದೈವಾಂಶ ಸಂಭೂತರು. ದೈವದ ಕಲದ ಚೌಕಟ್ಟನ್ನು ಮೀರದೆ, ನಿಯಮಬದ್ಧವಾಗಿ ಪರಕಾಯ ಪ್ರವೇಶ ಮಾಡಿ ನೈಜ ಗಾಂಭೀರ್ಯದೊಂದಿಗೆ ಮೈಮೇಲೆ ದೈವಗಳನ್ನು ಸಾಕ್ಷಾತ್ಕರಿಸುತ್ತಿದ್ದ ಓರ್ವ ಅಪೂರ್ವ ಭಕ್ತ. ಬಬ್ಬುಸ್ವಾಮಿ, ಕಲ್ಲುರ್ಟಿ, ಮಂತ್ರದೇವತೆ, ಗುಳಿಗ, ಜುಮಾದಿ, ಪಂಜುರ್ಲಿ ದೈವಗಳ ನರ್ತನವನ್ನು ಶ್ರದ್ಧಾ ಭಕ್ತಿಯಿಂದ ನಡೆಸಿದವರು. ಪ್ರಮುಖವಾಗಿ ಕಂದಾವರ, ಉಳಿಪಾಡಿ, ಮೂಡಿಕೆರೆ, ಕಳವಾರು, ಅದ್ಯಪಾಡಿ, ಬಾಂದೊಟ್ಟು ಮುಂತಾದೆಡೆಗಳಲ್ಲಿ ಕೋರ್ದಬ್ಬು ದೈವದ ಸೇವೆಯನ್ನು ನಿಷ್ಠೆಯಿಂದ ನಡೆಸಿಕೊಂಡು ಬಂದಿರುವ ಇವರನ್ನು ಸ್ವಗೃಹದಲ್ಲಿ ಶ್ರದ್ಧಾ ಭಕ್ತಿಯಿಂದ ವಿಶೇಷವಾಗಿ ಗೌರವಿಸಲಾಗಿದೆ.