ತೆಕ್ಕಟ್ಟೆ: ಯಕ್ಷಾಂತರಂಗ (ರಿ.) ವ್ಯವಸಾಯಿ ಯಕ್ಷತಂಡ ಕೋಟ ಇವರ ಸಪ್ತಮ ವಾರ್ಷಿಕೋತ್ಸವ ಹಾಗೂ ‘ಯಕ್ಷ ವಿಭೂಷಣ- 2023’ ನೂತನ ಯಕ್ಷಾಭರಣ ಅನಾವರಣ ಕಾರ್ಯಕ್ರಮವು ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಇವರ ಸಹಕಾರದೊಂದಿಗೆ 01-07-2023ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು “ತೆಂಕು, ಬಡಗು, ಬಡಾಬಡಗು ತಿಟ್ಟಿನ ಯಕ್ಷ ನೆಲದಲ್ಲಿ ಸಚಿವನಾಗಿ ಒಂದಿಷ್ಟು ಕೆಲಸ ಮಾಡಿದ ಸಾರ್ಥಕತೆ, ಧನ್ಯತೆ ನನಗಿದೆ. ಈ ಮೂರು ನೆಲದ ಮನೆ ಮನೆಗಳಲ್ಲಿ ಯಕ್ಷಗಾನ ಸದ್ದು ಮಾಡುತ್ತಿರುವುದನ್ನು ಕಂಡಿದ್ದೇನೆ. ಹಾಗಾಗಿ ಯಕ್ಷಗಾನ ಮನುಷ್ಯರಲ್ಲಿ ಶಕ್ತಿಯನ್ನು, ಶೃದ್ದೆಯನ್ನು, ಆಸಕ್ತಿಯನ್ನು ಮತ್ತು ಆತ್ಮವಿಶ್ವಾಸವನ್ನು ಇಮ್ಮಡಿಯಾಗಿಸುತ್ತದೆ. ಉತ್ತಮ ವಾಕ್ಚಾತುರ್ಯವು ಯಕ್ಷಗಾನದಿಂದ ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಯಕ್ಷಗಾನ ತನ್ನ ಪರಿಧಿಯನ್ನು ಮೀರಿ ಬೆಳೆಯುತ್ತಿದೆ. ಯಕ್ಷಗಾನದಲ್ಲಿ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ. ಅಂಥವರ ಗರಡಿಯಲ್ಲಿ ಬೆಳೆದ ಕಲಾವಿದರನೇಕರನ್ನು ಒಡಗೂಡಿ ಕೃಷ್ಣಮೂರ್ತಿ ಉರಾಳರು ತಂಡವೊಂದನ್ನು ಕಟ್ಟಿ ಕಾರಂತ ಥೀಂ ಪಾರ್ಕಿನಲ್ಲಿ ನೆಲೆಸಿ, ಅವರ ಹೆಸರಿನ ಪ್ರಶಸ್ತಿಯನ್ನು ಕೊಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ” ಎಂದರು.
ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಮಾತನಾಡಿದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು “ಯಕ್ಷಗಾನದ ಮಹಾನ್ ಕಲಾವಿದರಿಂದ ಕೂಡಿದ ತಂಡ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಯಕ್ಷ ತರಗತಿಯನ್ನು ಮಾಡಿ ಅನೇಕ ಕಲಾವಿದರನ್ನು ಯಕ್ಷ ರಂಗಭೂಮಿಗೆ ಕೊಡುಗೆಯಾಗಿ ನೀಡುತ್ತಿರುವುದು ಶ್ಲಾಘ್ಯಯೋಗ್ಯ ವಿಚಾರ. ಪರಿಪೂರ್ಣತೆಯನ್ನು ಸಾಧಿಸುವುದಕ್ಕೆ ಈ ತಂಡಕ್ಕೆ ವೇಷಭೂಷಣದ ಕೊರತೆ ಈವರೆಗೆ ತೊಡಕಾಗಿದ್ದು ಮಾನ್ಯ ಶ್ರೀನಿವಾಸ ಪೂಜಾರಿಯವರಿಂದ ಸಾಧ್ಯವಾದದ್ದು ಸಂತಸ ತಂದಿದೆ” ಎಂದರು. ಇದೇ ಸಂಭ್ರಮದಲ್ಲಿ ಹಿರಿಯ ಹಾಸ್ಯಗಾರರಾದ ಕಮಲಶಿಲೆ ಮಹಾಬಲ ದೇವಾಡಿಗರಿಗೆ ‘ಕಾರಂತ ಯಕ್ಷಾಂತರಂಗ’ ಪ್ರಶಸ್ತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿ, ಗೌರವ ಉಪಸ್ಥಿತಿಯಲ್ಲಿ ಮಾನ್ಯ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಡಾ. ಜಗದೀಶ್ ಶೆಟ್ಟಿ ಬ್ರಹ್ಮಾವರ, ಕೆ.ಪಿ. ಶೇಖರ್, ಸುಬ್ರಾಯ ಆಚಾರ್ ಮಣೂರು, ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆಯ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಉಪಸ್ಥಿತರಿದ್ದರು. ಯಕ್ಷಕವಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅಭಿನಂದನಾ ನುಡಿಗಳನ್ನಾಡಿದರು. ಕಲಾವಿದ ಕೃಷ್ಣಮೂರ್ತಿ ಉರಾಳ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಾಂತರಂಗ ಕೋಟದ ಸದಸ್ಯರಿಂದ ಕವಿ ನಿತ್ಯಾನಂದ ಅವಧೂತ ವಿರಚಿತ ಯಕ್ಷಗಾನ “ಕನಕಾಂಗಿ ಕಲ್ಯಾಣ” ಪ್ರಸ್ತುತಿಗೊಂಡಿತು.