ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಪ್ರೊ. ಎ.ವಿ. ನಾವಡ ಅವರಿಗೆ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಹಾಗೂ ಡಾ. ಸಾಯಿಗೀತಾ ಅವರಿಗೆ ಡಾ. ಯು.ಪಿ. ಉಪಾಧ್ಯಾಯ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿಯನ್ನು ದಿನಾಂಕ : 01-07-2023, ಶನಿವಾರ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಪ್ರೊ. ನಾವಡ ಮಾತನಾಡಿ, “ಸೇಡಿಯಾಪು ಕೃಷ್ಣಭಟ್ಟರು ಮಹಾಪಂಡಿತರು. ಅವರ ವಿದ್ವತ್ತನ್ನು ಬೆಳಕಿಗೆ ತಂದವರಲ್ಲಿ ಪಾದೇಕಲ್ಲು ವಿಷ್ಣು ಭಟ್ಟರ ಕೊಡುಗೆಯೂ ದೊಡ್ಡದಿದೆ. ಮುಂದೆ ಸೇಡಿಯಾಪು ಅವರ ಸಂಪುಟಗಳು ರಚನೆಯಾಗಬೇಕು. ಪರಿಭಾಷೆಗಳನ್ನು ನಿಶ್ಚಯಿಸುವಲ್ಲಿ ಅವರ ಕೊಡುಗೆ ಅಪಾರ. ಜ್ಞಾನ ಸ್ಫೋಟವಾಗುವುದು ವಿಶ್ವವಿದ್ಯಾನಿಲಯಗಳಲ್ಲಿ ಅಲ್ಲ. ಪಿ.ಎಚ್.ಡಿ. ಪಡೆಯದೆ ಸಾಧನೆ ಮಾಡಿದ ಹಲವಾರು ಮಂದಿ ಪಂಡಿತರಿದ್ದಾರೆ. ಸೇಡಿಯಾಪು ಅವರ ವಿಚಾರಗಳನ್ನು ಪಿಎಚ್.ಡಿ.ಗೆ ತೆಗೆದು ಕೊಳ್ಳಬಹುದಾಗಿದೆ. ದೇಸೀಯ ದೃಷ್ಟಿಕೋನವನ್ನು ಬರೆವಣಿಗೆಯಲ್ಲಿ ಅಳವಡಿಸಬೇಕು ಎಂಬುವುದನ್ನು ಅವರು ತಿಳಿದುಕೊಂಡಿದ್ದರು. ದ.ಕ. ಜಿಲ್ಲೆಯಲ್ಲಿ ಪಂಡಿತರ ಸೇವೆ ಹಾಗೂ ಸಾಹಿತ್ಯ ಬೆಳೆಸುವಲ್ಲಿ ವಿದ್ವಾಂಸರ ಕೊಡುಗೆ ಅಪಾರವಾದುದು. 1928ರಿಂದ 1943ರ ಅವಧಿಯಲ್ಲಿ ಮಂಗಳೂರಿನ ಮಿತ್ರಮಂಡಳಿ ಮಾಡಿದ ಕೆಲಸ ಶ್ಲಾಘನೀಯ. ಮಾವಿನ ಮರದ ಕಟ್ಟೆಯಲ್ಲಿ ಹುಟ್ಟಿದ ಸಂಸ್ಥೆಗೆ ವಿದ್ಯಾರ್ಥಿಗಳೇ ಕಾರಣ. ಅಲ್ಲಿ ಮಾಡಲಾಗುತ್ತಿದ್ದ ಪಂಚಾಯತ್ ಗೆ ಸೇಡಿಯಾಪು ಅವರೇ ನೇತೃತ್ವ ವಹಿಸುತ್ತಿದ್ದರು. ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಇಲ್ಲಿ ಸೇರುತ್ತಿದ್ದರು. ಈ ಮೂಲಕ ಪಂಡಿತರು ಮಂಗಳೂರಿನಲ್ಲಿ ಕನ್ನಡವನ್ನು ಉಳಿಸುವ ಕೆಲಸ ಮಾಡಿದ್ದರು ಎಂದರು.
ಸಂಶೋಧಕಿ ಡಾ. ಸಾಯಿಗೀತಾ ಮಾತನಾಡಿ “ಪಿಎಚ್.ಡಿ. ಮಾಡಿದ ಬಳಿಕವೂ ಸಂಶೋಧನೆಯಲ್ಲಿನ ಆಸಕ್ತಿ ಪ್ರತಿಯೊಬ್ಬರಲ್ಲಿಯೂ ಮುಂದುವರಿಯುವಂತಾಗಬೇಕು” ಎಂದರು.
ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್. ಜಯರಾಮ ಭಟ್ ಉಪಸ್ಥಿತರಿದ್ದರು. ವರದರಾಯ ಪೈ ಪ್ರಶಸ್ತಿ ಪ್ರದಾನಿಸಿ, ಡಾ. ಆರ್.ನರಸಿಂಹಮೂರ್ತಿ ಅಭಿನಂದನ ಭಾಷಣಗೈದರೆ ಡಾ. ಧನಂಜಯ ಕುಂಬಳೆ ವಿಶೇಷ ಉಪನ್ಯಾಸ ನೀಡಿದರು. ಸುಲೋಚನಾ ರಾಘವೇಂದ್ರ ಪ್ರಶಸ್ತಿ ವಾಚನ ಮಾಡಿದರೆ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದು, ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.