ಧಾರವಾಡ: ಅಲನ್ ಅಲ್ದಾ ರಚನೆಯ ಸುಮನಾ ಡಿ ಮತ್ತು ಶಶಿಧರ್ ಡೋಂಗ್ರೆ ಕನ್ನಡಕ್ಕೆ ಅನುವಾದಿಸಿದ ‘ಪ್ರಭಾಸ’ ನಾಟಕದ ಪ್ರದರ್ಶನವು ದಿನಾಂಕ 03-07-2023 ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ‘ಅಭಿನಯ ಭಾರತಿ’ ಪ್ರಸ್ತುತಪಡಿಸಿತು.
ವಿಜ್ಞಾನ, ಪ್ರೇಮ ಮತ್ತು ಜೀವನದ ದೌರ್ಬಲ್ಯಗಳ ಉತ್ತಮವಾದ ಮಿಶ್ರಣವನ್ನು ಅಭಿನಯ ಭಾರತಿಯು ತನ್ನ ಕಲಾವಿದರ ಅಪ್ರತಿಮ ಪ್ರತಿಭೆಯ ಆಧಾರದಿಂದ ತನ್ನದೇ ಆದ ಎತ್ತರಕ್ಕೇರಲು ‘ಪ್ರಭಾಸ’ ನಾಟಕ ಪ್ರಥಮ ಪ್ರದರ್ಶನದಲ್ಲಿ ಯಶಸ್ವಿಯಾಯಿತು.
ನೋಬಲ್ ಪ್ರಶಸ್ತಿ ವಿಜೇತರ ಜೀವನ ಸಂಘರ್ಷಗಳ ಮಧ್ಯೆಯೂ ತಮ್ಮ ಸಂಶೋಧನೆಯ ಗುರಿ ಮುಟ್ಟುವ ಮನೋಬಲ ಮತ್ತು ಛಲವನ್ನು ನವಿರಾದ ಹಾಸ್ಯ ಲೇಪನದಿಂದ ಪ್ರಸ್ತುತಪಡಿಸುವಲ್ಲಿ ನಿರ್ದೇಶಕ ಉಮೇಶ್ ಸಾಲಿಯಾನ್ ಯಶಸ್ವಿಯಾದರು. 95 ನಿಮಿಷಗಳಕಾಲ ವಿಜ್ಞಾನ ವಿಚಾರ, ಸಾಮಾಜಿಕ ಆಚಾರ ವಿಚಾರ, ಪ್ರಶಸ್ತಿಗಳ ಹಿಂದಿರುವ ಅಂತರಾಷ್ಟ್ರೀಯ ರಾಜಕೀಯ ವಿಚಾರಗಳನ್ನು ಎಳೆ ಎಳೆಯಾಗಿ ನಾಟಕದಲ್ಲಿ ಮೂಡಿಸಿ ನೋಡುಗರಿಗೆ ವಿಜ್ಞಾನದ ಬಗ್ಗೆ ಕುತೂಹಲ ಆಸಕ್ತಿ ಹುಟ್ಟಿಸುವಲ್ಲಿ ತಕ್ಕಮಟ್ಟಿಗೆ ಸಫಲವಾಯಿತು.
ವಿಜ್ಞಾನದ ಕಥಾವಸ್ತು ಇದ್ದ ಕಠಿಣವಾದ ನಾಟಕವನ್ನು ಸಾಮಾನ್ಯ ಪ್ರೇಕ್ಷಕರ ಮುಂದೆ ಯಶಸ್ವೀ ಪ್ರಯತ್ನ ಮಾಡಿದ ‘ಅಭಿನಯ ಭಾರತಿ’ ತಂಡ ಅಭಿನಂದನಾರ್ಹವಾಗಿದೆ. ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಈ ತಂಡ ‘ನಿಜದ ನೆಲೆ ನಿಜಕಿಲ್ಲ’ ನಾಟಕವನ್ನು ಮೊದಲು ಪ್ರದರ್ಶಿಸಿದರೆ, ಎರಡನೇ ಬಾರಿ ಈಗ ‘ಪ್ರಭಾಸ’. ಇದಕ್ಕಾಗಿಯೇ ಅಭಿನಯ ಭಾರತಿ ನಾವಿನ್ಯತೆಗೆ ಹೆಸರಾದದ್ದು.
ಮುಖ್ಯ ಪಾತ್ರದಲ್ಲಿ ಮೇರಿಕ್ಯೂರಿಯಾಗಿ ಶ್ರೀಮತಿ ಜ್ಯೋತಿ ದೀಕ್ಷಿತ್ ಅವರು ಅತ್ಯಂತ ಪ್ರೌಢ ಅಭಿನಯ ನೀಡಿ ಹವ್ಯಾಸಿ ರಂಗ ಭೂಮಿಯ ಹೊಸ ಮಿನುಗು ತಾರೆಯಾದರು. ಪಿಯರ್ ಕ್ಯೂರಿ ವಿಜ್ಞಾನಿಯ ಪಾತ್ರದಲ್ಲಿ ವಿಶ್ವನಾಥ ರಾಯದುರ್ಗ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಲೇ ಗಮನ ಸೆಳೆಯುವ ಅಭಿನಯ ನೀಡಿದರು. ಸಹವಿಜ್ಞಾನಿ ಎಮಿಲ್ ಬೊರೆಲ್ ಪಾತ್ರದಲ್ಲಿ ಗಿರೀಶ್ ದೊಡ್ಡಮನಿ ಹಾಗೂ ಅವರ ಪತ್ನಿಯಾದ ಮಾರ್ಗರೆಟ್ ಬೋರೆಲ್ ನ ಪಾತ್ರವನ್ನು ಶ್ರೀಮತಿ ಜಯಶ್ರೀ ಜೋಶಿ ನಿರ್ವಹಿಸಿ ಉತ್ತಮ ಪ್ರದರ್ಶನ ನೀಡಿದರು. ಟೆರ್ರಿ ಬೋಗಿ ಪತ್ರಕರ್ತನಾಗಿ ವೀರಣ್ಣ ಹೊಸಮನಿ ಫ್ರಾನ್ಸ್ ನ ಆ ಕಾಲದ ಪತ್ರಿಕಾ ರಂಗದ ಹಿಟ್ಲರ್ ಶಾಹಿ ಲೇಖನ ಸಾಮ್ರಾಜ್ಯದ ಕೌರ್ಯದ ಮುಖವನ್ನು ಕಪ್ಪು ಕಾಮಿಡಿಯಾಗಿ ಹಾಸ್ಯದ ಹೊನಲು ಹರಿಸಿ ಮಿಂಚಿದರು. ಇನ್ನೊಬ್ಬ ಸಹವಿಜ್ಞಾನಿ ಮೇರಿಯ ಪ್ರೇಮಿ ಪಾಲ್ ಲಾಂಗೆವಿನ್ ಆಗಿ ಸುನಿಲ್ ಗಿರಡ್ಡಿ ವೈಯಕ್ತಿಕ ಜೀವನದ ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಪ್ರತಿಫಲಿಸಿದರು. ಜಿನ್ ಲ್ಯಾ0ಗೆವಿನ್ ಆಗಿ ಭೂಮಿ ಪತ್ತಾರ್ ಅವರು ತಾನೊಬ್ಬ ಸಮರ್ಥ ಪ್ರತಿಭಾ ಕಣಜ ಎಂದು ತೋರಿಸಿ ಕೊಟ್ಟರು .
ಈ ನಾಟಕ ಪ್ರದರ್ಶನದ ಹಿನ್ನೆಲೆಯಲ್ಲಿ ತಾಂತ್ರಿಕ ನಿರ್ವಹಣೆಯನ್ನು ನಾಗರಾಜ್ ಪಾಟೀಲ ನಿರ್ವಹಿಸಿದ್ದು ಬೆಳಕು ಸಂಯೋಜನೆ ಯೋಗೀಶ್ ಬಿ ಮತ್ತು ಹಿನ್ನೆಲೆ ಪಾಶ್ಚಾತ್ಯ ಸಂಗೀತವನ್ನು ಹೊಸ ಪ್ರತಿಭೆ ವಿಶ್ವಜಿತ್ ಹಂಪಿಹೊಳಿ ಎಲ್ಲರಿಗೂ ಮುಟ್ಟುವಂತೆ ಮಾಡಿ, ಫ್ರಾನ್ಸ್ ಮತ್ತು ಪೋಲ್ಯಾಂಡ್ ದೇಶಗಳ ವಾತಾವರಣ ಪರಿಣಾಮಕಾರಿಯಾಗಿ ಮುಟ್ಟುವಂತೆ ಮಾಡಿದರು. ಅನುಭವಿ ವಿಜಯೇಂದ್ರ ಅರ್ಚಕ ತಮಗೆ ನೀಡಿದ ರಂಗ ನಿರ್ವಹಣೆ, ಸಂಘಟನೆಗಳ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರು. ಒಟ್ಟಿನಲ್ಲಿ ಉತ್ತರ ಕರ್ನಾಟಕದ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ಗಾಳಿಯ ಮುನ್ಸೂಚನೆ ನೀಡುತ್ತಾ, ‘ಅಭಿನಯ ಭಾರತಿ’ ಮುಂಚೂಣಿಯಲ್ಲಿರುವುದು ಸಂತೋಷದ ಸಂಗತಿ.
-ಅರವಿಂದ ಕುಲಕರ್ಣಿ