ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನಾ ಸಮಿತಿಯ ವತಿಯಿಂದ ದಿನಾಂಕ : 08-07-2023ರಂದು ನಡೆದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ 70 ವರ್ಷ ತುಂಬಿದ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿಗಳನ್ನು ಅಭಿನಂದಿಸಿ, ಪುಸ್ತಕ ಬಿಡುಗಡೆಗೊಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ “ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಮಾತನಾಡಿ “ಬರವಣಿಗೆ ಮೂಲಕ ಬದುಕು ಕಟ್ಟಿಕೊಂಡವರು ಪ.ರಾ.ಶಾಸ್ತ್ರಿಗಳು. ಅವರು ನೆಲದ ಸ್ಪರ್ಶವನ್ನು ಬದುಕಿನುದ್ದಕ್ಕೂ ಇಟ್ಟುಕೊಂಡವರು. ಮಾಹಿತಿಗಳನ್ನು ಬೇರೆ ಬೇರೆ ಆಕರಗಳಿಂದ ಸಂಗ್ರಹಿಸಿ ತನ್ನ ಜ್ಞಾನದಲ್ಲಿರಿಸಿಕೊಂಡು ಲೇಖನವಾಗಿ ಬರೆಯುವುದು ಅವರಿಗೆ ಸಿದ್ದಿಸಿದೆ” ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, “ಪ.ರಾ.ಶಾಸ್ತ್ರಿಗಳ ಸಾಹಿತ್ಯ ಬದುಕನ್ನು ರೂಪಿಸುವಂತಹುದು. ಪಠ್ಯ ಪುಸ್ತಕಗಳಲ್ಲಿ ಅವರ ಬರಹಗಳು ಇನ್ನಷ್ಟು ಬರುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದು, ಅವರ ಬರಹಗಳ ಪ್ರೇರಣೆಯಿಂದ ಇನ್ನಷ್ಟು ಮಂದಿ ಹುಟ್ಟಿ ಬರಲಿ” ಎಂದರು.
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕರಾದ ಶ್ರೀ ಎನ್. ಅಶೋಕ್ ಭಟ್ ಉಜಿರೆ ಅಭಿನಂದನ ಮಾತುಗಳನ್ನಾಡಿ “ಪ.ರಾಮಕೃಷ್ಣ ಶಾಸ್ತ್ರಿಗಳ ಬರಹಗಳು ನೈಜ ಚಿತ್ರಣಗಳಾಗಿವೆ. ಅವರ ಬರಹ ಮತ್ತು ಬದುಕಿನಲ್ಲಿ ತಪಸ್ಸಿದೆ” ಎಂದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಪ.ರಾಮಕೃಷ್ಣ ಶಾಸ್ತ್ರಿಗಳ ಪತ್ನಿ ಶ್ರೀಮತಿ ಶಾರದಾ ಆರ್.ಶಾಸ್ತ್ರಿ ಉಪಸ್ಥಿತರಿದ್ದರು.
ಶಾಸ್ತ್ರಿಗಳು ಬರೆದ ಮಳೆ ಮಳೆ, ನಟನ ಮನೋಹರಿ, ರೋಚಕ ಲೋಕ, ಪ್ರಪಂಚದ ಸೋಜಿಗಗಳು ಹಾಗೂ ಲಕ್ಷ್ಮೀ ಮಚ್ಚಿನ ಬರೆದ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಬದುಕು ಬರಹ ಬವಣೆ ಕೃತಿಗಳನ್ನು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಪ.ರಾಮಕೃಷ್ಣ ಶಾಸ್ತ್ರಿಗಳನ್ನು ಅಭಿನಂದಿಸಲಾಯಿತು. ಸಂಚಾಲಕ ಸಂಪತ್ ಬಿ. ಸುವರ್ಣ ಸ್ವಾಗತಿಸಿ, ವಿಭಾ ಕೃಷ್ಣ ಪ್ರಕಾಶ ಉಳಿತ್ತಾಯ ಸಮ್ಮಾನ ಪತ್ರ ವಾಚಿಸಿ, ನ್ಯಾಯವಾದಿ ಧನಂಜಯ ರಾವ್ ನಿರೂಪಿಸಿದರು.
ಇದೇ ಕಾರ್ಯಕ್ರಮದಲ್ಲಿ ಅಭಿನಂದನೆಯ ಮೊದಲು ‘ಯಕ್ಷಗಾನ ಭಾಗವತಗಾನ’ ಮತ್ತು ‘ಪ.ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಅವಲೋಕನ’ ಕಾರ್ಯಕ್ರಮಗಳು ನಡೆದವು.