ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ದಿನಾಂಕ : 08-07-2023ರಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ನಾಗಮಣಿ ಎಸ್. ರಾವ್ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾ ಹಂಪನಾ ಅವರು ಪತ್ರಕರ್ತೆ ಆರ್. ಪೂರ್ಣಿಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ “ಹಿಂದೆ ದೇವಾಲಯಗಳಲ್ಲಿ ಪಂಚಾಯಿತಿ ತೀರ್ಮಾನ ಹಾಗೂ ನ್ಯಾಯದಾನ ನಡೆಯುತ್ತಿತ್ತು. ಅಲ್ಲಿ ಸರಿ ತಪ್ಪುಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಅವುಗಳ ಮಹತ್ವ ಅರಿತುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ನಮ್ಮ ನಡೆ ಇತರರಿಗೆ ಮಾದರಿಯಾಗುವಂತಿರಬೇಕು. ಪತ್ರಿಕೆಗಳು ಜನತೆಯನ್ನು ತಿದ್ದುವ ಕಡೆಗೆ, ಸತ್ಯ ಸಂಗತಿ ಪ್ರಚಾರ ಮಾಡುವ ಕಡೆಗೆ ಹೋಗಬೇಕು” ಎಂದು ನುಡಿದರು.
ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಮಾತನಾಡಿ, “ನಾಗಮಣಿ ಅವರು ವಿಧಾನಮಂಡಲ ಅಧಿವೇಶನದ ವರದಿ ಮಾಡಿದ ಮೊದಲ ಪತ್ರಕರ್ತೆ, ರಾಜ್ಯದ ಯಾವುದೇ ಭಾಗದಲ್ಲಿ ಪ್ರಧಾನಿ ಭಾಷಣವಿದ್ದರೂ ಅವರು ವರದಿಗೆ ಹೋಗುತ್ತಿದ್ದರು. ಅವರ ಅನುಭವ ರೋಮಾಂಚಕಾರಿಯಾಗಿದೆ” ಎಂದು ಹೇಳಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಮಾತನಾಡಿ, “ಎಲ್ಲಾ ಪತ್ರಿಕೆಗಳ ಆಸಕ್ತಿ, ಆದ್ಯತೆ ಒಂದೇ ರೀತಿಯಲ್ಲಿ ಇರುವುದಿಲ್ಲ. ಮಾಧ್ಯಮಗಳು ಜಾಹೀರಾತುಗಳಿಂದ ನಡೆಯಬೇಕಾಗಿದೆ. ಇದರಿಂದಾಗಿ ಮಹಿಳೆಯನ್ನು ತುಚ್ಛೀಕರಿಸುವ ಜಾಹೀರಾತುಗಳು ಸಹ ಪ್ರಸಾರವಾಗುತ್ತಿವೆ. ಇದು ನಿಲ್ಲಬೇಕು” ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ‘ಪತ್ರಿಕೆಗಳಲ್ಲಿ ಸಾಹಿತ್ಯದ ಪಾತ್ರ, ಅಂದು-ಇಂದು’ ಎಂಬ ವಿಷಯ ಬಗ್ಗೆ ಮತ್ತು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮೋಹನಬಾಬು ಅವರು ‘ಪತ್ರಿಕೋದ್ಯಮದಲ್ಲಿ ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.