ಮಂಗಳೂರು : ವಿಜಯ ಕರ್ನಾಟಕ ಮತ್ತು ಸಂಗೀತ ಭಾರತಿ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಆಷಾಢ ಏಕಾದಶಿಯ ‘ಬೋಲಾದ ವಿಠಲ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ : 01-07-2023ರಂದು ನಗರದ ಪುರಭವನದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು.
ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದ ಶ್ರೇಷ್ಠ ಕಲಾವಿದರಾದ ಪಂಡಿತ್ ಆನಂದ್ ಭಾಟೆ ಮತ್ತು ವಿದುಷಿ ಭಾಗ್ಯಶ್ರೀ ದೇಶಪಾಂಡೆ ಅವರ ಅಭಂಗ, ಭಜನಾ ಸಂಕೀರ್ತನೆಗಳು, ದಾಸರ ರಚನೆಗಳು, ಕಲಾವಿದರ ಏರಿಳಿತದ ಆಲಾಪನೆಯೊಂದಿಗೆ ಪ್ರೇಕ್ಷಕರನ್ನು ಭಕ್ತಿಗಾನದಲ್ಲಿ ತೇಲಾಡುವಂತೆ ಮಾಡಿ ಮಂತ್ರಮುಗ್ಧಗೊಳಿಸಿತು.
ಭಾಗ್ಯಶ್ರೀ ದೇಶಪಾಂಡೆ ತಮ್ಮ ಅಮೋಘ ಕಂಠಸಿರಿಯಿಂದ ಜನರ ಗಮನ ಸೆಳೆದರು. ತಮ್ಮ ಸ್ವಂತ ರಚನೆಯಾಗಿರುವ ಜ್ಞಾನಾಚೆ ಸಾಗರ್, ಸಖಾ ಮಾಜ್ಹಾ ಜ್ಞಾನೇಶ್ವರ್ … ಗೀತೆಯನ್ನು ಏರಿಳಿತದ ಆಲಾಪನೆಯೊಂದಿಗೆ ಹಾಡಿದಾಗ ಭಜನೆಗೆ ಪ್ರೇಕ್ಷಕರೂ ತಲೆತೂಗಿ ಪ್ರೋತ್ಸಾಹಕರ ಕರತಾಡನದೊಂದಿಗೆ ಮೆಚ್ಚಗೆ ಸೂಚಿಸಿದರು. ಕೊನೆಗೆ ಸಂತ ತುಕಾರಾಮರ ಬೋಲಾವ ವಿಠಲ, ಪಹಾವ ವಿಠಲವನ್ನು ಭಕ್ತಿ ಭಾವ ತುಂಬಿ ಹಾಡಿದರು. ಪಂಡಿತ್ ಆನಂದ್ ಭಾಟೆಯವರ ಸಂತ ತುಕಾರಾಮರ ಅಭಂಗ್ ಮತ್ತು ಶಿವ ಹಾಗೂ ವಿಠಲ ಒಬ್ಬರೇ ಎಂದು ಸಾರುವ ಪ್ರಸಿದ್ಧ ಮರಾಠಿ ಭಕ್ತಿ ಹಾಡುಗಳನ್ನು ಭಕ್ತಿಯಿಂದ ಹಾಡಿದಾಗ ಪ್ರೇಕ್ಷಕರು ಭಕ್ತಿಪರವಶರಾಗಿ ಆಸ್ವಾದಿಸಿದರು.
ತಬ್ಲಾದಲ್ಲಿ ಪ್ರಸಾದ್ ಪಾದೆ, ಪಕ್‌ವಾಜ್ ನಲ್ಲಿ ಸುಖದ್ ಮುಂಡೆ, ಹಾರ್ಮೋನಿಯಂನಲ್ಲಿ ಆದಿತ್ಯ ಓಕೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಕೊಳಲಿನಲ್ಲಿ ಶದಾಜ್ ಗೋಡ್ಕಿಂಡಿ ಹಿನ್ನೆಲೆ ಸಾಥ್ ನೀಡಿದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಕೆ., ಲೆಕ್ಕ ಪರಿಶೋಧಕ ಜಗನ್ನಾಥ ಕಾಮತ್, ಬೋಲಾವ ವಿಠಲ ತಂಡದ ಗೀತಾ ವ್ಯಾಸ್, ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಜೀವ ವಿಮಾ ನಿಗಮದ ಅಧಿಕಾರಿಗಳಾದ ಪೂರ್ಣಿಮಾ ಬಂಗೇರ, ಚಂದ್ರನ್, ಉದಯ್, ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಬಿ.ರವೀಂದ್ರ ಶೆಟ್ಟಿ, ರೆಸ್ಟಾನ್ಸ್ ವಿಭಾಗದ ಎಜಿಎಂ ರಾಮಕೃಷ್ಕ ಆರ್., ಆರ್.ಎಂ.ಡಿ. ವಿಭಾಗದ ಚೀಫ್ ಮ್ಯಾನೇಜರ್ ನಾರಾಯಣ ಉಪಸ್ಥಿತರಿದ್ದರು. ಎಕ್ಸ್ಪೆರ್ಟ್ ಸಮೂಹದ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಉಷಾಪ್ರಭಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.