ಮಂಗಳೂರು : ಮಂಗಳೂರಿನ ಹಿಂದಿ ಪ್ರಚಾರ ಸಮಿತಿಯ ಆವರಣದಲ್ಲಿರುವ ‘ನಾದನೃತ್ಯ ಕಲಾ ಶಾಲೆ’ಯಲ್ಲಿ ದಿನಾಂಕ : 30-06-2023ರಂದು ತಿಂಗಳ ಸರಣಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ನೂಪುರ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ಸುಲೋಚನಾ ವಿ. ಭಟ್ ಇವರು ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದು ಅನುಭವದ ಮಾತುಗಳನ್ನು ಆಡಿದರು.
ನೃತ್ಯ ಶಾಲೆಯ ಗುರುಗಳಾದ ಭ್ರಮರಿ ಶಿವಪ್ರಕಾಶರ ಶಿಷ್ಯೆಯಾದ ಸುಪುತ್ರಿ ಶುಕೀ ರಾವ್ ಇವರು ನೃತ್ಯ ಕಾರ್ಯಕ್ರಮವನ್ನು ನೀಡಿದರು. ಮೊದಲಿಗೆ ತಾಳ ಮಾಲಿಕೆಯ ಅಲರಿಪು, ಗಣಪತಿಯ ಸ್ತುತಿಯಿರುವ ಶಬ್ದಂ, ಗಂಗಾವತರಣದ ಕತೆಯಿರುವ ಮಹಾದೇವ ಶಿವ ಶಂಭೋ ಎಂಬ ಕೀರ್ತನೆ ಹಾಗೂ ಭಾವಯಾಮಿ ರಘುರಾಮಂ ಎಂಬ ಕೀರ್ತನೆಗೆ ನರ್ತಿಸಿದರು.
ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ಎಂ.ಎಚ್. ಇವರು ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾತೃಭಾಷೆಯ ಬಗ್ಗೆ ಹೊಂದಬೇಕಾದ ಪ್ರೀತಿಯ ಬಗ್ಗೆ ಅರಿವು ಮೂಡಿಸಿ, ನೃತ್ಯ ಪ್ರದರ್ಶಿಸಿದ ಶುಕೀ ರಾವ್ ಇವರನ್ನು ಅಭಿನಂದಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು. ಶ್ರದ್ಧೆ ಹಾಗೂ ಕರ್ತವ್ಯ ನಿಷ್ಠೆಯಿಂದ ಶಾಸ್ತ್ರೀಯ ನೃತ್ಯವನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಗುರುಗಳಾದ ಭ್ರಮರಿ ಶಿವಪ್ರಕಾಶರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಕಾರ್ಯಕ್ರಮದಲ್ಲಿ ನೃತ್ಯ ತರಗತಿಯ ಎಲ್ಲಾ ವಿದ್ಯಾರ್ಥಿಗಳೂ ಹಾಗೂ ಅವರ ಹೆತ್ತವರು ಭಾಗವಹಿಸಿ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.