ಮಂಗಳೂರು : ಕೊಂಕಣಿ ಸಾಂಸ್ಕೃತಿಕ ಸಂಘ ಮಂಗಳೂರು ವತಿಯಿಂದ ‘ಸಂತ ಜ್ಞಾನೇಶ್ವರ -2 ಸಂಜೀವನ ಸಮಾಧಿ’ ಎಂಬ ಕೊಂಕಣಿ ಐತಿಹಾಸಿಕ ನಾಟಕ ದಿನಾಂಕ : 17-06-2023ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರದರ್ಶನಗೊಂಡಿತು.
ಸಂತ ಜ್ಞಾನೇಶ್ವರರ ಜೀವನದ ಬಗ್ಗೆ ಸರಣಿ ನಾಟಕ ಪ್ರದರ್ಶನ ಮಾಡುವ ಉದ್ದೇಶವಿಟ್ಟುಕೊಂಡಿರುವ ರಾಮ್ ದಾಸ್ ದತ್ತಾತ್ರೇಯ ಗುಲ್ವಾಡಿ ಇವರ ‘ಜ್ಞಾತಿ ಜನಾಂಗೆಲೊ ರಾಯೋ ಜ್ಞಾನೇಶ್ವರು’ ಎಂಬ ನಾಟಕ 2018ರಲ್ಲಿ ಪುರಭವನದಲ್ಲಿ ಪ್ರದರ್ಶನಗೊಂಡಿತು. ಇದು ಸರಣಿ ಕಾರ್ಯಕ್ರಮದ ಪ್ರಥಮ ಕುಸುಮ. ಸಂತ ಜ್ಞಾನೇಶ್ವರರ 16ನೆಯ ಮಯಸ್ಸಿನವರೆಗಿನ ಜೀವನದ ಸಾರ ಇದರಲ್ಲಿದೆ. ಅವರು ಮಾಡಿದ ಸಮಾಜ ಸುಧಾರಣೆ ಮತ್ತು ಬದುಕಿನ ಬವಣೆಯೊಂದಿಗೆ 4 ವರ್ಷಗಳ ಅವಧಿಯಲ್ಲಿ ‘ಜ್ಞಾನೇಶ್ವರಿ’ ಕೃತಿ ರಚನೆ ಮಾಡಿ ತಮ್ಮ 16ನೆಯ ಮಯಸ್ಸಿನಲ್ಲಿ ಮುಗಿಸಿದ ವಿಚಾರವೂ ಈ ನಾಟಕದಲ್ಲಿದೆ.
ಈಗ ಮತ್ತೆ ಪುರಭವನದಲ್ಲಿ ಪ್ರದರ್ಶನಗೊಂಡದ್ದು ಸಂತ ಜ್ಞಾನೇಶ್ವರ ಸರಣಿ ನಾಟಕ ಪ್ರದರ್ಶನ ಕುಸುಮ -2. ಇದರಲ್ಲಿ ಜ್ಞಾನೇಶ್ವರರು ಸಮಾಧಿಯಾಗುವವರೆಗಿನ ಕತೆ ಇದೆ. ಸಮಾಧಿಯಾಗುವಾಗ ಜ್ಞಾನೇಶ್ವರರು ತಾವು ರಚಿಸಿದ ಕೃತಿ ‘ಜ್ಞಾನೇಶ್ವರಿ’ಯನ್ನು ಜೊತೆಗೆ ಕೊಂಡು ಹೋಗುತ್ತಾರೆ. ಮುಂದೆ ಅದು ಏನಾಗುತ್ತದೆ ಎಂಬಲ್ಲಿಂದ ಕುಸುಮ -3 ಮತ್ತು ಕುಸುಮ -4 ಪ್ರದರ್ಶನಗೊಳ್ಳಲಿದೆ ಎಂಬುದು ರಾಮ್ ದಾಸ್ ಗುಲ್ವಾಡಿಯವರ ಕನಸು.
ಸಿ.ಡಿ. ಕಾಮತ್ ಹಾಗೂ ಅವರ ಪತ್ನಿ ಗೀತಾ ಕಾಮತ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಅಧ್ಯಕ್ಷ ಹಾಗೂ ಗೋವಿಂದರಾಯ ಪ್ರಭು ಉಪಸ್ಥಿತರಿದ್ದರು. ನಾಟಕ ಬರೆದು ನಿರ್ದೇಶಿಸಿದ ರಾಮದಾಸ್ ದತ್ತಾತ್ರೇಯ ಗುಲ್ವಾಡಿ ದಂಪತಿಯನ್ನು ಸನ್ಮಾನಿಸಲಾಯಿತು. ಗಜಾನನ ಶೆಣೈ ಮಣೇಲ್ ಸ್ವಾಗತಿಸಿ, ಕಾರ್ಯದರ್ಶಿ ಎನ್. ಕೃಷ್ಣ ಕಾಮತ್ ವಂದಿಸಿ, ರತ್ನಾಕರ ಕುಡ್ಲ ಕಾರ್ಯಕ್ರಮ ನಿರೂಪಿಸಿದರು.
ರಾಮ್ ದಾಸ್ ದತ್ತಾತ್ರೇಯ ಗುಲ್ವಾಡಿಯವರ ಬಗ್ಗೆ :
ಇವರು ಶ್ರೀ ಗುಲ್ವಾಡಿ ದತ್ತಾತ್ರೇಯ ಭಟ್ ಮತ್ತು ಶ್ರೀಮತಿ ಶಾರದಾ ಬಾಯಿಯವರ ಸುಪುತ್ರ. ತಂದೆ ಹರಿದಾಸರು ಹಾಗೂ ಕನ್ನಡ ಮತ್ತು ಕೊಂಕಣಿ ನಾಟಕದ ಹಾಸ್ಯ ಕಲಾವಿದರಾಗಿದ್ದರು. ಇವರ ಸಹೋದರರಾದ ಶ್ರೀ ಓಂಕಾರ್ ನಾಥ್ ಗುಲ್ವಾಡಿ ಅಂತರಾಷ್ಟ್ರೀಯ ಖ್ಯಾತಿಯ ತಬಲಾ ಕಲಾವಿದ, ಶ್ರೀ ಮಂಗಲ್ ದಾಸ್ ಗುಲ್ವಾಡಿ ಅವರೂ ಖ್ಯಾತ ತಬಲಾ ವಾದಕರು ಹಾಗೂ ಶ್ರೀ ಸಂತೋಷ್ ಕುಮಾರ್ ಗುಲ್ವಾಡಿ ಇವರು ತರಂಗ ವಾರಪತ್ರಿಕೆಯ ಸಂಪಾದಕರಾಗಿದ್ದರು. ಸಹೋದರಿಯರಿಬ್ಬರೂ ಗಾಯಕಿಯರು ಹಾಗೂ ಆಕಾಶವಾಣಿ ಕಲಾವಿದೆಯರು. ಗುಲ್ವಾಡಿಯವರ ಅಜ್ಜ ಹರಿಕಥೆ ಮಾಡುವುದರೊಂದಿಗೆ ನಾಟಕ ರಚನೆಯನ್ನೂ ಮಾಡುತ್ತಿದ್ದರು. ಶ್ರೀ ರಾಮ್ ದಾಸ್ ಗುಲ್ವಾಡಿಯವರು ಮುಂಬೈಯಲ್ಲಿ ಟೆಕ್ಸ್ಟೈಲ್ ಇಂಜಿನಿಯರ್ ಆಗಿದ್ದರೂ ನಾಟಕದ ಸೆಟ್ಟಿಂಗ್ ಮತ್ತು ಲೈಟಿಂಗ್ ಮಾಡುತ್ತಿದ್ದು, ನಿವೃತ್ತಿಯ ನಂತರ ನಾಟಕ ಕೃತಿಗಳ ರಚನೆಗೆ ಹೆಚ್ಚು ಒತ್ತು ಕೊಟ್ಟರು. ಇವರು ಸುಮಾರು 30ಕ್ಕಿಂತಲೂ ಅಧಿಕ ನಾಟಕ ರಚನೆ ಮಾಡಿದ್ದು, ಹೆಚ್ಚಿನದು ಪೌರಾಣಿಕ ನಾಟಕಗಳಾಗಿವೆ.