ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ’ದ 101ನೇ ಸರಣಿ ಕಾರ್ಯಕ್ರಮವು ದಿನಾಂಕ :01-07-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಕಡಬದ ವಿಶ್ವಮೋಹನ ಸಂಸ್ಥೆಯ ಗುರು ಮಾನಸ ಪುನೀತ್ ರೈಯವರ ಶಿಷ್ಯೆಯರಾದ ಕುಮಾರಿ ಪ್ರಣಮ್ಯಾ ಪಿ.ರಾವ್ ಮತ್ತು ಕುಮಾರಿ ಸ್ನೇಹಾ ಪಿ.ರಾವ್ ಇವರು ನೃತ್ಯ ಕಾರ್ಯಕ್ರಮ ನೀಡಿದರು.
ಅಕಾಡಮಿಯ ಪುಟಾಣಿ ವಿದ್ಯಾರ್ಥಿಗಳಾದ ಆದ್ಯ, ವೃದ್ಧಿ ರೈ, ಆರುಷಿ ರೈ, ಮೇಧಾ ಘಾಟೆ, ಯಶ್ವಿ, ಧನ್ವಿ ಮತ್ತು ತಪಸ್ಯಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೃತ್ಯಾಶಾಲೆಯ ರೂಢಿಯಂತೆ ಮಂಗಳಮಯ ಓಂಕಾರ ನಾದವು ವಿದುಷಿ ಪ್ರೀತಿಕಲಾ ಹಾಗೂ ಶಂಖನಾದ ವಿದ್ವಾನ್ ಗಿರೀಶ್ ಕುಮಾರ್ ಇವರಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದಂತಹ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹೇಶ್ ನಿಟಿಲಾಪುರ ಇವರು ದೀಪ ಬೆಳಗಿ ಕಾರ್ಯಕ್ರಮ ಪ್ರಾರಂಭಿಸಿದರು. ಕುಮಾರಿ ಮಾತಂಗಿಯವರು ಪಂಚಾಂಗ ಪಠಣವನ್ನು ನಡೆಸಿಕೊಟ್ಟರು. ನಂತರ ಈ ಕಲಾ ಶಾಲೆಯ ಮತ್ತೊಂದು ಪುಟಾಣಿಗಳ ತಂಡದಲ್ಲಿರುವ ಶಾರ್ವರಿ ರೈ, ನಿಯತಿ, ನಿನಾದ, ಸ್ನಿಗ್ಧಾ ಕಿರಣ್, ಬೃಂದಾ ಮತ್ತು ಸೃಷ್ಟಿ ಇವರುಗಳು ನವಗ್ರಹ ಹಸ್ತಗಳ ಬಗ್ಗೆ ವಿಷಯ ಮಂಡಣೆ ಪ್ರಸ್ತುತಪಡಿಸಿದರು. ಭರತನಾಟ್ಯ ಕಾರ್ಯಕ್ರಮವು ಕುಮಾರಿಯರಾದ ಸ್ನೇಹಾ ಮತ್ತು ಪ್ರಣಮ್ಯಾರ ಪುಷ್ಪಾಂಜಲಿಯಿಂದ ಆರಂಭಗೊಂಡಿತು.
ಗ್ರಾಮೀಣ ಪ್ರದೇಶವಾದ ಕಡಬದಿಂದ ಬಂದು ಅತ್ಯಂತ ಸಾಧನೆ ಮಾಡಿ ತನ್ನ 10ನೇ ತರಗತಿಯ ವಿದ್ಯಾಭ್ಯಾಸದ ನಡುವೆಯೂ ಸಹೋದರಿ ಪ್ರಣಮ್ಯಾ ಪಿ. ರಾವ್ ಇವರಿಗೆ ಸವಾಲಾಗುವಂತೆ ಕಿರಿಯ ಪ್ರತಿಭೆಯಾದ ಕುಮಾರಿ ಸ್ನೇಹಾ ಪಿ. ರಾವ್ ಇವರು ಆದಿತಾಳದ ರಾಗಮಾಲಿಕೆಯಲ್ಲಿರುವ ಮೂರು ದೇವಿಯರನ್ನು ಕುರಿತಾದ ‘ತ್ರಿಮಾತಕೌತ್ವಂ’ ಅನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ನಂತರ ಅಂಗಶುದ್ಧ ಹಾಗೂ ಅಭಿನಯ ಸಮತೋಲನವನ್ನು ಕಾದುಕೊಂಡಂತಹ ಹಿರಿಯ ಕಲಾವಿದೆ ಕುಮಾರಿ ಪ್ರಣಮ್ಯಾ ಪಿ. ರಾವ್ ಇವರು ಶ್ರೀಯುತ ಮಹೇಶ್ ಸ್ವಾಮಿ ಬೆಂಗಳೂರು ರಚಿಸಿದ ‘ಬಾರೇ ರಘುವಂಶ ಚಂದ್ರನೇ ಬಾ’ ಎಂಬ ಕನ್ನಡದ ವಿಶಿಷ್ಟ ಮತ್ತು ನವರಸಭರಿತವಾದ ‘ಪದವರ್ಣ’ವನ್ನು ಸುಮಾರು 30 ನಿಮಿಷಗಳ ಕಾಲ ವಿವಿಧ ಜತಿಗಳಿಂದ ಮನೋಜ್ಞವಾಗಿ, ಭಕ್ತರು ರಾಮನನ್ನು ಭಜಿಸುವ ಹಾಗೆ ಪ್ರಸ್ತುತಪಡಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅಭ್ಯಾಗತರು ಕಾರ್ಯಕ್ರಮದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪುತ್ತೂರಿನ ಹಿರಿಯ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈಯವರು ಅವರ ಶಿಷ್ಯೆಯಾದ ಮಾನಸ ರೈಯವರ ಸಾಧನೆಯನ್ನು ಹೊಗಳುತ್ತಾ ಮತ್ತು ಅವರ ಶಿಷ್ಯೆಯರಾದ ಪ್ರಣಮ್ಯಾ ಮತ್ತು ಸ್ನೇಹಾ ಇವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. ಅಭ್ಯಾಗತರು ಕಲಾವಿದರಿಗೆ ಗಿಡಗಳನ್ನು ಸ್ಮರಣಿಕೆಯಾಗಿ ನೀಡುವುದರ ಮೂಲಕ ಕೃತಜ್ಞತೆಯನ್ನು ಅರ್ಪಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಮಂಗಳದೊಂದಿಗೆ ‘ವಿಶ್ವಕ್ಕೆ ಮಂಗಳವಾಗಲಿ’ ಎಂಬ ಹಾರೈಕೆಯಿರುವ ಶ್ಲೋಕಕ್ಕೆ ಹೆಜ್ಜೆ ಹಾಕುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಈ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದವರೆಲ್ಲ ಕಾರ್ಯಕ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು.
ಕಲಾವಿದರ ಗುರುಗಳಾದ ವಿದುಷಿ ಶ್ರೀಮತಿ ಮಾನಸ ಪುನೀತ್ ರೈಯವರನ್ನು ಕುಮಾರಿ ಮನಿಷಾ ಕಜೆ ಮತ್ತು ಅಭ್ಯಾಗತರಾಗಿ ಆಗಮಿಸಿದ ಶ್ರೀ ಮಹೇಶ್ ನಿಟಿಲಾಪುರ ಇವರನ್ನು ಪ್ರೀತಿ ಪ್ರಭು ಪರಿಚಯಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಕುಮಾರಿ ವರ್ಷ ನಿರ್ವಹಿಸಿ, ಕಲಾವಿದರ ಪರಿಚಯವನ್ನು ಕುಮಾರಿ ನಿಶಿ ನಡೆಸಿಕೊಟ್ಟರು. ಈ ಕಾರ್ಯಕ್ರಮದ ಒಟ್ಟು ನಿರ್ವಹಣೆ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ, ಸಹಕಾರ ವಿದ್ವಾನ್ ಗಿರೀಶ್ ಕುಮಾರ್ ಮತ್ತು ಶ್ರೀಮತಿ ಶಶಿಪ್ರಭಾ.