ಬೆಂಗಳೂರು : ಆಸ್ಟ್ರೇಲಿಯಾ ದೇಶದ ವಿಕ್ಟೋರಿಯಾ ರಾಜ್ಯದ ರಾಜಧಾನಿಯಾದ ಪಶ್ಚಿಮ ಮೆಲ್ಬೋರ್ನಿನಲ್ಲಿ ವಿಂಡ್ಯಮ್ ಪ್ರದೇಶದ ಕನ್ನಡಿಗರು ಸೇರಿ ಕಟ್ಟಿರುವ ʻವಿಂಡ್ಯಮ್ ಕನ್ನಡ ಬಳಗʼವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ದಿನಾಂಕ : 13-07-2023ರಂದು ವಿಲಿಯನ್ಸ್ ಲ್ಯಾಂಡಿಂಗ್ ನಲ್ಲಿ ಉದ್ಘಾಟಿಸಿದರು.
ʻವಿಂಡ್ಯಮ್ ಕನ್ನಡ ಬಳಗʼವನ್ನು ಉದ್ದೇಶಿಸಿ ಮಾತನಾಡಿದ ಡಾ. ಜೋಶಿಯವರು “ಉದ್ಯೋಗ ಅರಸಿ ದೇಶ ಬಿಟ್ಟು ವಿದೇಶಕ್ಕೆ ಬಂದರೂ ಸ್ವಂತಿಕೆಯನ್ನು ಬಿಡದೇ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಳ್ಳುವ ಮೂಲಕ ನಿಜವಾದ ಕನ್ನಡ ಭಾಷೆಯ ರಾಯಭಾರಿಗಳು ಪಶ್ಚಿಮ ಮೆಲ್ಬೋರ್ನಿನಲ್ಲಿ ನೆಲೆಸಿರುವ ‘ವಿಂಡ್ಯಮ್ ಕನ್ನಡ ಬಳಗ’ದ ಸದಸ್ಯರು ಎಂದು ಶ್ಲಾಘಿಸಿದರು. ಕಳೆದ 15 ವರ್ಷಗಳಿಂದ ಇಲ್ಲಿ ನೆಲೆ ನಿಂತಿರುವ ಕನ್ನಡಿಗರು ಪ್ರತೀ ವರ್ಷವೂ ರಾಜ್ಯೋತ್ಸವವನ್ನು ಆಚರಿಸುತ್ತಾ ಕನ್ನಡದ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಇರುವ ಕನ್ನಡಿಗರ ಮಕ್ಕಳಿಗೆ ಹಾಗೂ ಕನ್ನಡ ಭಾಷಾಭಿಮಾನ ಇರುವ ಇತರರಿಗೂ ಕನ್ನಡ ಕಲಿಸುವ ಕೆಲಸವನ್ನು ವಿಂಡ್ಯಮ್ ಕನ್ನಡ ಬಳಗ ಮಾಡುತ್ತ ಬಂದಿದೆ. ಇಂತಹ ಕನ್ನಡಿಗರ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮೆಯನ್ನು ವ್ಯಕ್ತ ಪಡಿಸುತ್ತದೆ.” ಎಂದರು. ಮಂಡ್ಯದಲ್ಲಿ ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆಲ್ಬೋರ್ನಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಗೌರವಪೂರ್ವಕ ಆಹ್ವಾನವನ್ನು ನೀಡಿದರು.
ವಿಂಡ್ಯಮ್ ಕನ್ನಡ ಬಳಗ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಚೇತನಾ ಪ್ರಭಾಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಬಳಗದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕನ್ನಡ ಬಳಗದ ಕೋಶಾಧ್ಯಕ್ಷ ಶ್ರೀ ಅನಿಲ ಕುಮಾರ ಮಾತನಾಡಿ, ಭಾಷೆ ಕಟ್ಟಿ ಬೆಳೆಸುವ ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ಒಪ್ಪಿಕೊಂಡು ಕನ್ನಡ ಕಟ್ಟುವ ಕೆಲಸದಲ್ಲಿ ನಾವೆಲ್ಲಾ ಸಾಹಿತ್ಯ ಪರಿಷತ್ತಿನ ಜೊತೆ ಕೈಜೋಡಿಸುತ್ತೇವೆ.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೆಲ್ಬೋರ್ನಿನ ಕನ್ನಡ ಬಳಗದ ಗೌರವ ಕಾರ್ಯದರ್ಶಿಗಳಾದ ವನಿತಾ ಗಣೇಶ ರಾವ್, ನಿರ್ದೇಶಕರುಗಳಾದ ಶ್ರೀ ಮುಕುಂದ ವೆಂಕಟಾಚಾರ್, ಕೀರ್ತನಾರಾವ್ ಸಿಂಧ್ಯಾ, ಸದಸ್ಯರುಗಳಾದ ಪ್ರಭಾಕರ ಯಾದವಾಡ, ಗಣೇಶ ಕೃಷ್ಣಯ್ಯ, ರಮೇಶ ರಾಮಕೃಷ್ಣಯ್ಯ, ಕೃಪಾ ಕೃಷ್ಣಯ್ಯ, ಉಷಾ ಗೌಡ ಮತ್ತಿತರರು ಉಪಸ್ಥಿತರಿದ್ದರು.