ಅಂಕೋಲಾ ಶಹರದಿಂದ ತುಸು ದೂರದಲ್ಲಿರುವ ‘ವಂದಿಗೆಯೆಂಬ ಪುಟ್ಟ ಗ್ರಾಮವು ಅಂಕೋಲಾದ ಸುತ್ತಲಿನ ಹತ್ತೂರುಗಳಲ್ಲಿ ಸುಪರಿಚಿತಗೊಳ್ಳುವಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದ ನಾಯಕದಯರಾದ ವಿ.ಜೆ ಹಾಗೂ ವಿಠೋಬ ನಾಯಕರವರಿಂದ ಎನ್ನುವಲ್ಲಿ ಕೊಂಚವೂ ಉತೇಕ್ಷೆಯಿಲ್ಲ.
ವಿಠೋಬ ನಾಯಕರವರು ಎಂಬತ್ತೆಂಟು ಸಂವತ್ಸರಗಳ ತುಂಬು ಬದುಕನ್ನು ಕಂಡವರು. ಅವರದು ನಾಡವರ ಕಟ್ಟುಮಸ್ತಾದ ಗಟ್ಟುಮುಟ್ಟಿನ ಮೈಕಟ್ಟು, ಉದ್ದನೆಯ ಆಳು, ನೀಳವಾದ ತೋಳು, ಹವಳದಂತೆ ಹೊಳೆಯುವ ಕವಳ ತುಂಬಿದ ತುಟಿಯ ನಗು, ಅಗಲವಾದ ಹಣೆ, ಆಕರ್ಷಕ ಕಂಗಳು, ವಿಸ್ತಾರವಾಗಿರುವ ಎದೆ, ಸುಮ್ಮನೆ ಮಾತನಾಡಿದರೂ ‘ಝಲ್’ ಎನ್ನಿಸುವ ಸಿರಿಕಂಠ ಮತ್ತು ರಾಜಗಾಂಭೀರ್ಯದ ನಡೆ… ಹೀಗೆ ಕಣ್ಣಿಗೆ ಕಟ್ಟುವ ಅವರು ರಂಗದಲ್ಲಿ ಹಾಗೂ ರಂಗದಾಚೆಯೂ ರಂಗಾಗಿಯೇ ಇದ್ದ ಯಕ್ಷಗಾನದ ಅಭಿಜಾತ ಕಲಾವಿದ.
ನಾವೆಲ್ಲ ಪ್ರವರ್ಧಮಾನಕ್ಕೆ ಬರುವ ಹೊತ್ತಿನಲ್ಲಿ ವಿಠೋಬಣ್ಣ ರಂಗದಿಂದ ದೂರ ಸುರಿದು ಸಾಕಷ್ಟು ಸಮಯವೇ ಸಂದಿತ್ತು. ಅವರೊಂದಿಗೆ ಒಡನಾಡಿದ ಅವರ ಕಿರಿಯ ಸಮಕಾಲೀನ ಸಹ ಕಲಾವಿದರು ವೇಷ ಮಾಡಿಕೊಳ್ಳುವಾಗಲೆಲ್ಲ “ಇದು ವಂದಿಗೆಯ ವಿಠೋಬ ನಾಯಕರವರು ಮಾಡುತ್ತಿದ್ದ ವೇಷ, ವಿಠೋಬ ನಾಯಕರವರ ನಡೆ ಹಾಗಿತ್ತು. ಅವರ ಪಾತ್ರವನ್ನು ಕಂಡವರು ಈ ಪಾತ್ರವನ್ನೆಲ್ಲಾ ಕಂಡರೆ ಏನೆನ್ನುತ್ತಾರೋ? ವಿಠೋಬ ನಾಯಕರವರು ಆಟ ನೋಡಲು ಬಂದು ಕುಳಿತಿದ್ದಾರೆ. ಪಾತ್ರ ನೋಡಿ ಏನೆಂದುಕೊಳ್ಳುತ್ತಾರೋ” ಎಂದಾಡಿದ್ದನೆಲ್ಲ ಕೇಳಿದಾಗ ಪುಳಕಗೊಂಡಿದ್ದೆ.
ವಿಠೋಬ ನಾಯಕರವರು ಖಳ ಪಾತ್ರಗಳಿಗೆ ಹೆಸರಾದವರು. ಅವರ ಆಕಾರ, ಬಣ್ಣ, ಸ್ವರ-ಎಲ್ಲವೂ ದೈತ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು. ಕಾಲಜಂಘನ ಪಾತ್ರಕ್ಕಂತೂ ಅವರಿಗವರೇ ಸಾಟಿಯಾಗಿದ್ದರು. ಹಿಂದೆ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದ ನಾನು ಅಪರೂಪಕ್ಕೆ ಕಾಲಜಂಘನ ಪಾತ್ರವನ್ನು ಮಾಡಿದಾಗ ನೋಡಲು ಬಂದಿದ್ದ ಅವರು ಚೌಕಿ(ಬಣ್ಣದ) ಮನೆಗೆ ಬಂದು “ಮಂಜು ಭೇಷ್!” ಎಂದು ಬೆನ್ನು ತಟ್ಟಿ ಮತ್ತೊಬ್ಬರನ್ನು ಒಪ್ಪುವ ಹಾಗೂ ಬೆಂಬಲಿಸುವ ನಿಜವಾದ ಕಲಾವಿದನಲ್ಲಿರಬೇಕಾದ ಸಜ್ಜನಿಕೆಯನ್ನು ಸಾದರಪಡಿಸಿದ್ದು ಮರೆಯುವ ವಿಷಯವೇ ಅಲ್ಲ. ಅವರ ವಲಲ, ದುಷ್ಟಬುದ್ದಿ, ಭೀಮ, ಘಟೋತ್ಕಚ ಹಾಗೂ ಕಂಸ ಮೊದಲಾದ ಪಾತ್ರಗಳು ಇಂದಿಗೂ ಇತಿಹಾಸವಾಗಿದೆ.
ಕುಂದಾಪುರದಲ್ಲಿರುವ ಬೇಲೇಕೇರಿಯ ಉಪನ್ಯಾಸಕ ಮಿತ್ರ ಹರೀಶಣ್ಣ-ವಿಠೋಬ ನಾಯಕರವರ ‘ಶನಿ’ಯ ಪಾತ್ರವನ್ನು ನೆನೆದು, ಮೇಳದ ಆಟಗಳಲ್ಲಿ ತಮ್ಮ ಕಲಾ ಪ್ರೌಢಿಮೆಯ ಮೂಲಕ ‘ಅಭಿನವ ಶನೀಶ್ವರ’ ಎಂದೇ ಖ್ಯಾತರಾಗಿದ್ದ ದಿ. ಜಲವಳ್ಳಿ ವೆಂಕಟೇಶ ರಾವ್ ರಂತೆ ಬಯಲಾಟಗಳಲ್ಲಿ ತನ್ನ ವಿಭಿನ್ನ ಶೈಲಿಯಿಂದ ‘ನಿಜ ಶನಿ’ಯಾಗಿ ಮಹೋನ್ನತವಾಗಿ ಪಾತ್ರವನ್ನು ಪೋಷಿಸಿದ್ದರು.ಆದರೂ ಆ ಕಾಲಘಟ್ಟದಲ್ಲಿನ ಕೊರತೆಯ ಕಾರಣಕ್ಕೆ ಅಂಕೋಲಾದ ಪರಿಸರದಾಚೆ ಅಷ್ಟಾಗಿ ಪ್ರಚಾರವಾಗದಿರುವುದಕ್ಕೆ ವಿಷಾದಿಸುತ್ತಾರೆ.
ನಾಯಕರು ಓದಿದವರಲ್ಲ, ಯಕ್ಷಗಾನವನ್ನೂ ಶಾಸ್ತ್ರೀಯವಾಗಿ ಅಭ್ಯಸಿಸಿದವರೂ ಅಲ್ಲ. ಹಾಗೆಯೇ ಗೆಜ್ಜೆಯನ್ನು ಕಟ್ಟಿದವರು. ರಂಗದಲ್ಲೇ ಕಲಿತವರು. ಗತ್ತು-ಸುತ್ತು-ಗಮ್ಮತ್ತುಗಳಲ್ಲಿಯೇ ಕಟ್ಟಿದ ಪಾತ್ರಗಳಿಗೆ ಕಳೆಗಟ್ಟಿದವರು. ರಂಗದಲ್ಲಾಗಲಿ ರಂಗದಾಚೆಯಾಗಲಿ ಇತಿ-ಮಿತಿಯಲ್ಲಿದ್ದವರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಜೊತೆಯಲ್ಲಿ ಹಲವು ಸಂಘಟನೆಗಳ ಮಾನ-ಸಮ್ಮಾನಗಳಿಗೆ ಭಾಜನರಾದರೂ, ಬೀಗದೇ-ಅಭಿಮಾನಿಗಳ ಅಂತರಂಗದಲ್ಲಿ ನೆಲೆಯಾಗಿದ್ದವರು. ವಿಠೋಬಣ್ಣ ಸಾವಿರದ ಕಲಾವಿದ ಎಂಬ ಯಕ್ಷಮುಖಿಯ ಸಂಚಾಲಕರಾದ ಗೆಳೆಯ ಸೂರ್ವೆಯ ರಾಜೇಶಣ್ಣನ ಉದ್ಘಾರದಲ್ಲಿ ಹುರುಳಿದೆ!.
- ಮಂಜುನಾಥ ಗಾಂವಕರ್, ಎಂ.ಎ.,ಎಂ.ಇಡಿ.,
ಸಂಸ್ಕೃತ ಅಧ್ಯಾಪಕರು, ಸರ್ಕಾರಿ ಪ್ರೌಢ ಶಾಲೆ, ಬರ್ಗಿ ,ಕುಮಟಾ, ಉ. ಕ