ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಾಗೂ ಮಂಡೆಚ್ಚ ಪ್ರಶಸ್ತಿ ಸಮಿತಿ ಆಶ್ರಯದಲ್ಲಿ ಕಟೀಲು ಸರಸ್ವತೀ ಸದನದಲ್ಲಿ ದಿನಾಂಕ : 15-07-2023ರಂದು ಪ್ರಸಿದ್ಧ ಭಾಗವತರಾಗಿದ್ದ ದಾಮೋದರ ಮಂಡೆಚ್ಚ ಸ್ಮರಣಾರ್ಥ ‘ಮಂಡೆಚ್ಚ ಪ್ರಶಸ್ತಿ’ ಪ್ರದಾನ ಮತ್ತು ‘ಕುಬಣೂರು ಸಂಸ್ಮರಣೆ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಂಡೆಚ್ಚ ಪ್ರಶಸ್ತಿಯನ್ನು ಸ್ವೀಕರಿಸಿದ ಖ್ಯಾತ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ ಮಾತನಾಡುತ್ತಾ “ಯಕ್ಷಗಾನೀಯ ಚೌಕಟ್ಟು ಪಾಲಿಸಿಕೊಂಡು ಕಲೆಯನ್ನು ಗೌರವದಿಂದ ಬೆಳೆಸಿದಾಗ ಹಿಮ್ಮೇಳ, ಮುಮ್ಮೇಳಗಳು ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಉಳಿಯಲು ಸಾಧ್ಯ” ಎಂದು ಹೇಳಿದರು.
ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ್ ಶೆಟ್ಟಿ ಪ್ರಶಸ್ತಿಯನ್ನು ಪ್ರಾಯೋಜಿಸಿದ್ದು ಪ್ರಶಸ್ತಿಯು ರೂ.10,000/- ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳನ್ನು ಒಳಗೊಂಡಿತ್ತು. ಕಟೀಲು ದೇವಳದ ಭಾಗವತ ಹಾಗೂ ಪ್ರಸಂಗಕರ್ತರಾಗಿದ್ದ ಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣೆ ನಡೆಯಿತು.
ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಂಡೆಚ್ಚ ಪ್ರಶಸ್ತಿ ಪುರಸ್ಕೃತ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ ಅವರನ್ನು ಅಭಿನಂದಿಸಲಾಯಿತು.
ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ್ ಶೆಟ್ಟಿ, ಕುಬಣೂರು ಶ್ರೀಧರ ರಾಯರ ಸಹೋದರ ಕುಬಣೂರು ರಮೇಶ್ ರಾವ್, ಕಲಾಪೋಷಕ ದೊಡ್ಡಯ್ಯ ಮೂಲ್ಯ ಉಪಸ್ಥಿತರಿದ್ದರು.
ಕಲಾವಿದ ಡಾ.ಶ್ರುತಕೀರ್ತಿರಾಜ ಕಾರ್ಯಕ್ರಮ ಸಂಯೋಜಿಸಿ, ಮಿಥುನ ಕೊಡೆತ್ತೂರು ಸಹಕರಿಸಿದರು. ಕಟೀಲು ಮೇಳಗಳ ಕಲಾವಿದರಿಂದ ಕೃಷ್ಣ ಸಂಧಾನ, ದುಶ್ಯಾಸನ ವಧೆ, ಸೈಂಧವ ವಧೆ, ಕರ್ಣಪರ್ವ ಪ್ರಸಂಗಗಳ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.