ಮಂಗಳೂರು : ಉರ್ವದ ‘ಯಕ್ಷಾರಾಧನಾ ಕಲಾ ಕೇಂದ್ರ’ವು 14ನೇ ವರ್ಷಾಚರಣೆ ಸಂಭ್ರಮವು ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ : 15-07-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣರು “ಯಕ್ಷಗಾನದಲ್ಲಿ ಸಾತ್ವಿಕ ಭಾವದ ಅವಶ್ಯಕತೆ ಇದೆ. ಅದರ ಪ್ರತಿಪಾದನೆ ಕಲಾವಿದನ ಮೂಲಕ ಆಗಿ ಪಾತ್ರದ ಪರಕಾಯ ಪ್ರವೇಶದಿಂದ ಕಲಾವಿದ ಮತ್ತು ಕಲೆ ಬೆಳಗುತ್ತದೆ. ಸುಮಂಗಲಾರತ್ನಾಕರ ರಾವ್ ಇವರ ನಿರಂತರ ಪ್ರಯತ್ನದಿಂದಾಗಿ ಅನೇಕ ಕಲಾವಿದರು ಸಿದ್ಧರಾಗಿದ್ದಾರೆ. ಯಕ್ಷಗಾನದ ಪ್ರತಿಯೊಬ್ಬ ಗುರು ಮತ್ತು ಕಲಾವಿದ ಸಾತ್ವಿಕ ಅಭಿಯನದ ಬಗ್ಗೆ ತಿಳಿದು ರಂಗದಲ್ಲಿ ಪ್ರದರ್ಶನ ನೀಡಬೇಕು. ಯಕ್ಷಗಾನ ಅಲೌಕಿಕವಾದ ಪೌರಾಣಿಕ ಕಲ್ಪನೆ ನೀಡುವ ಕಲೆ. ಒಳ್ಳೆಯ ಸಂಗತಿ ಹಾಗೂ ಕೆಟ್ಟ ವಿಚಾರ ಯಾವುದು ಎಂಬುದನ್ನು ಯಕ್ಷಗಾನದ ಮೂಲಕ ನಾವು ತಿಳಿಯಬಹುದು. ಧರ್ಮ- ಅಧರ್ಮದ ಕುರಿತು ಯಕ್ಷಗಾನ ನಮಗೆ ತಿಳಿ ಹೇಳುತ್ತದೆ. ಯಕ್ಷಗಾನದಲ್ಲಿ ರಾಮಾಯಣ ಪ್ರಸಂಗ ವೀಕ್ಷಿಸಿದಾಗ ರಾಮನಂತೆ ನಾವೂ ಜೀವನ ನಡೆಸಬೇಕು ಎಂಬ ಭಾವನೆ ಮೂಡುತ್ತದೆ. ಆದರೆ, ಇಂದು ಯಕ್ಷಗಾನದ ಸಾತ್ವಿಕ ಅಭಿನಯ ಮೊದಲಿನಂತಿಲ್ಲ. ಯಕ್ಷಾರಾಧನಾ ಕಲಾ ಕೇಂದ್ರ ಕಳೆದ 14 ವರ್ಷಗಳಿಂದ ಮಕ್ಕಳಿಗೆ ಯಕ್ಷಗಾನ ಕಲಿಸುತ್ತಿರುವುದು ಶ್ಲಾಘನೀಯ. ಕಮ್ಮಟಗಳ ಮೂಲಕ ಯಕ್ಷಗಾನ ಕಲೆಯ ಉಳಿವಿಗೆ ಶ್ರಮಿಸುತ್ತಿರುವ ಸಂಸ್ಥೆಗೆ ಇನ್ನಷ್ಟು ಯಶಸ್ಸು ಲಭಿಸಲಿ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸರಯೂ ಯಕ್ಷಕಲಾ ಕೇಂದ್ರದ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಅವರಿಗೆ ‘ಯಕ್ಷ ಶಿಕ್ಷಣ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ರವಿ ಅಲೆವೂರಾಯ ಮಾತನಾಡಿ “ಕಲೆಗಳಲ್ಲಿ ಬದಲಾವಣೆಗಳು ಸಹಜ. ಆದರೆ ಪ್ರೇಕ್ಷಕನಿಗಾಗಿ ಈ ಬದಲಾವಣೆ ಬೇಡ. ಕಲೆಗಳು ಸ್ವತಂತ್ರವಾಗಿರುತ್ತವೆ. ಕಲಾವಿದ ಅದಕ್ಕೆ ಅನಿವಾರ್ಯ ಅಲ್ಲ. ಕಲಾವಿದ ಕಲೆಯಿಂದಾಗಿ ಬೆಳೆಯುತ್ತಾನೆ. ಗುರುಸ್ಥಾನದಲ್ಲಿ ನಿಂತು ಯಕ್ಷಗಾನ ಕ್ಷೇತ್ರಕ್ಕೆ ಮಾಡಿದ ಸತ್ಕಾರ್ಯವನ್ನು ಗುರುತಿಸಿ ಯಕ್ಷಾರಾಧನಾ ಕೇಂದ್ರದ ನಿರ್ದೇಶಕಿ ಶ್ರೀಮತಿ ಸುಮಂಗಲಾ ರತ್ನಾಕರ ರಾವ್ ಮತ್ತು ಅವರ ಬಳಗ ನನ್ನನ್ನು ‘ಯಕ್ಷ ಶಿಕ್ಷಣ ಪುರಸ್ಕಾರ’ವನ್ನು ನೀಡಿ ಗೌರವಿಸಿದೆ. ಇಂತಹಾ ಗುರು ಪರಂಪರೆಯನ್ನು ಎಲ್ಲರೂ ಮುಂದುವರಿಸಲಿ” ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ.ದ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ವಹಿಸಿದ್ದರು. ಉದ್ಯಮಿ ಡಿ. ಚಂದ್ರಹಾಸ ಶೆಟ್ಟಿ, ಯಕ್ಷಗಾನ ಕಲಾವಿದ ರಾಕೇಶ್ ರೈ ಅಡ್ಕ, ಮನಪಾ ಸದಸ್ಯರಾದ ರಾಧಾಕೃಷ್ಣ ಜಗದೀಶ್ ಶೆಟ್ಟಿ, ತಾಳಮದ್ದಳೆ ಕಲಾವಿದೆ ಕೆ. ಕಲಾವತಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಲಾವಿದೆ ಪೂರ್ಣಿಮಾ ಶಾಸ್ತ್ರಿ ಅಭಿನಂದನಾ ಭಾಷಣ ಮಾಡಿದರು.
ರಂಗೋಲಿಯ ಮಾಲಕರಾದ ಚಂದ್ರಹಾಸ ಶೆಟ್ಟಿ, ಮ.ನ.ಪಾ. ಸದಸ್ಯರಾದ ಜಗದೀಶ ಶೆಟ್ಟಿ, ರಾಧಾಕೃಷ್ಣ, ನಿವೃತ್ತ ಅಧ್ಯಾಪಕಿ ಕಲಾವತಿ, ಯಕ್ಷ ಕಲಾವಿದ ರಾಕೇಶ್ ರೈ ಅಡ್ಕ, ಸಂಸ್ಥೆಯ ಟ್ರಸ್ಟಿ ಬಿ.ರತ್ನಾಕರ ರಾವ್ ಉಪಸ್ಥಿತರಿದ್ದರು. ಯಕ್ಷಾರಾಧನಾ ಕಲಾ ಕೇಂದ್ರದ ಪ್ರಧಾನ ಟ್ರಸ್ಟಿ ವಿ. ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿ, ಶಶಿರಾಜ ಕಾವೂರು ವಂದಿಸಿದರು. ಸೌಮ್ಯ ಹಂದೆ ನಿರೂಪಿಸಿದರು.
ಈ ಸಂದರ್ಭ ಯಕ್ಷಾರಾಧನಾ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ವಿ. ಸುಮಂಗಲಾ ರತ್ನಾಕರ ರಾವ್ ಇವರ ನಿರ್ದೇಶನದಲ್ಲಿ ಕವಿ ಅಮೃತ ಸೋಮೇಶ್ವರ ವಿರಚಿತ ‘ಮಹಾಕಲಿ ಮಗಧೇಂದ್ರ’ ಯಕ್ಷಗಾನ ಪ್ರದರ್ಶನಗೊಂಡಿತು.
5 Comments
Thank you for the nice coverage 🙏😊
All the veshas were very perfectly dressed and they performed very well.delighted to see even kids perform so well.Congratulations to one and all
Thank you for the nice coverage of YKK anniversary 🙏😊
Appreciation to the Roovari.com for the exceptional coverage of our beautiful Yakshagana program. Your support has been instrumental in preserving and promoting our cultural heritage.
ಯಕ್ಷಾರಾಧನಾ ಕಲಾ ಕೇಂದ್ರದ ಯಶಸ್ವೀ ವರ್ಷಾಚರಣೆಯ ಪ್ರದರ್ಶನವನ್ನು ಯಥಾವತ್ತಾಗಿ ಪ್ರಕಟಿಸಿದ ತಮಗೆ ಕೃತಜ್ಞತೆಗಳು😊🙏