ಮಂಗಳೂರು: ಎಲ್ಲ ಬಗೆಯ ಕಲೆಗಳ ಶಾಸ್ತ್ರ-ಪ್ರಯೋಗ-ಸೌಂದರ್ಯಗಳ ಆಯಾಮಗಳನ್ನು ವೈಜ್ಞಾನಿಕ ಹಾಗೂ ತಾತ್ತ್ವಿಕ ನೆಲೆಯಲ್ಲಿ ಅರ್ಥೈಸಿ-ಆಸ್ವಾದಿಸಿ-ಅನುಭವವನ್ನು ಬರಹಕ್ಕಿಳಿಸಲು ತರಬೇತಿ ನೀಡುವ ಉದ್ದೇಶವನ್ನು ಹೊತ್ತು ಹೊಸ ಬಗೆಯ ಶೈಕ್ಷಣಿಕ ಹಾಗೂ ವೃತ್ತಿಸಾಧ್ಯತೆಗಳನ್ನು ಹೊಂದಿರುವ ಪದವಿ ಕೋರ್ಸ್ ಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ದಿನಾಂಕ 13-07-2023 ರಂದು ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು. ಪ್ರೊ. ವರದೇಶ ಹಿರೇಗಂಗೆಯವರು ನೆರೆದ ಕಲಾವಿದರಿಗೆ ಹಾಗೂ ಕಲಾಸಂಘಟನೆಗಳ ಸಹೃದಯರಿಗೆ ಮಾಹಿತಿ ನೀಡಿದರು.
ಸಾಹಿತ್ಯದಿಂದ ತೊಡಗಿ ಸಿನೆಮಾದವರೆಗೂ, ಯಾವುದೇ ಬಗೆಯ ಕಲೆಗಳಲ್ಲಿ ಆಸಕ್ತಿಹೊಂದಿದ ವಿದ್ಯಾರ್ಥಿಗಳಿಗೆ ಬಿ.ಎ.(ಏಸ್ಥಟಿಕ್ಸ್ ಎಂಡ್ ಪೀಸ್ ಸ್ಟಡೀಸ್), ಎಂ. ಎ.(ಇಕೊಸೊಫಿಕಲ್ ಏಸ್ಥಟಿಕ್ಸ್) ಹಾಗೂ ಎಂ.ಎ.(ಆರ್ಟ್ ಎಂಡ್ ಪೀಸ್ ಸ್ಟಡೀಸ್) ಎಂಬ ಕೋರ್ಸ್ ಗಳ ಪ್ರವೇಶ ಪಡೆದು, ತಮ್ಮ ಕಲಾಜ್ಞಾನವನ್ನು ಸಮಗ್ರವಾಗಿ ವಿಸ್ತರಿಸಿಕೊಂಡು, ಸೂಕ್ತ ಉದ್ಯೋಗವನ್ನೂ ಪಡೆಯುವ ಅವಕಾಶವಿದೆ ಎಂದು ಪ್ರೊ. ಹಿರೇಗಂಗೆಯವರು ವಿವರಿಸಿದರು.
ಮಣಿಪಾಲ ಎಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಗಾಂಧಿಯನ್ ಸೆಂಟರ್ ಫಾರ್ ಫಿಲೊಸಾಫಿಕಲ್ ಆರ್ಟ್ಸ್ ಎಂಡ್ ಸಯನ್ಸಸ್’ ಎಂಬ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ವರದೇಶ ಹಿರೇಗಂಗೆಯವರು ಸುಮಾರು ಇಪ್ಪತ್ತೈದು ವರ್ಷಗಳ ಜರ್ನಲಿಸಮ್ ಹಾಗೂ ಅಧ್ಯಾಪನ ವೃತ್ತಿಯ ತಮ್ಮ ಸ್ವತಃ ಅನುಭವದಿಂದ ಪ್ರಸಕ್ತ ಕಾಲಕ್ಕೆ ಇದು ಅಗತ್ಯವೆಂದು ಮನಗಂಡು ಈ ಕೋರ್ಸ್ ಗಳನ್ನು ಹುಟ್ಟುಹಾಕಿರುತ್ತಾರೆ. ಒಂದೊಮ್ಮೆ ಪ್ರಕೃತಿಯಿಂದ ಸ್ಫೂರ್ತಿಪಡೆದು ಹುಟ್ಟಿ ಬೆಳೆದ ಎಲ್ಲ ಕಲೆಗಳ ಬಗೆಗಿನ ಸರ್ವತೋಮುಖ ಅರಿವು ಮೂಡಿ ತಮ್ಮೊಳಗೂ ಮತ್ತು ಸಮಾಜದಲ್ಲೂ ಅಂದರೆ ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಗೂ ಈ ಪದವಿ ಶಿಕ್ಷಣ ಸಹಕರಿಸಲಿದೆ.
ಆರ್ಟ್ ಜರ್ನಲಿಸಂಗೆ ಸಂಬಂಧಪಟ್ಟಂತೆ ಇರುವ ಈ ಕೋರ್ಸ್ ಗಳಿಂದ ಎಲ್ಲ ಬಗೆಯ ಕಲೆಗಳ ವಿಧಾನವನ್ನು ಅರ್ಥೈಸಿಕೊಳ್ಳುವುದರಿಂದ ಹಿಡಿದು ಆಸ್ವಾದಿಸಿ ಅವುಗಳ ಅನುಭವವನ್ನು ಬರಹರೂಪಕ್ಕಿಳಿಸಲು ಈ ಶಿಕ್ಷಣ ನೀಡುವುದು. ಅದರೊಂದಿಗೆ ಆ ಎಲ್ಲ ಕಲೆಗಳಿಗೂ ಮತ್ತು ಸಮಾಜಕ್ಕೂ ಇರುವ ಸಂಬಂಧವನ್ನು ತಾತ್ತ್ವಿಕ ನೋಟಗಳಿಂದ ವಿಶ್ಲೇಷಿಸುವ ಮತ್ತು ಕಲೆಗಳ ಹಾಗೂ ಪ್ರಕೃತಿಯ ಅನುಸಂಧಾನ ಮತ್ತು ವಿಶ್ವಶಾಂತಿಗೆ ಕಲೆಗಳಿಂದಾಗುವ ಕೊಡುಗೆಯ ವಿಷಯಗಳನ್ನೂ ತಿಳಿಸಿಕೊಡಲಾಗುವುದು. ಇದು ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡು ಪಿ. ಯು. ಸಿ ಮುಗಿಸಿದ ಯಾ ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳು ಇದಕ್ಕೆ ಸೇರಿಕೊಳ್ಳಬಹುದು. ಕಲೆಗಳ ಬಗ್ಗೆ ಆಸಕ್ತಿ ಇದ್ದರೆ ಸಾಕು. ನಾಲ್ಕು ವರ್ಷಗಳ ಡಿಗ್ರಿ ಕೋರ್ಸ್ ನಿಂದ ಬಿ.ಎ. ಹಾನರ್ಸ್ ಪದವಿ ದೊರಕುತ್ತದೆ. ಮತ್ತೆ ಎರಡು ವರ್ಷದ ಸ್ನಾತಕೋತ್ತರ ಪದವಿಯನ್ನೂ ಗಳಿಸಿ ವಿವಿಧ ಬಗೆಯ ಉದ್ಯೋಗಗಳನ್ನೂ ಪಡೆಯುವ ಅವಕಾಶವಿದೆ. ಹೆಚ್ಚಿನ ವಿವರಗಳಿಗಾಗಿ ಮಾಹೆಯ ವೆಬ್ಸೈಟ್ https://manipal.edu/gandhian-centre.html ಕ್ಲಿಕ್ ಮಾಡಿ.
ಪ್ರಸಾದ್ ಆರ್ಟ್ ಗ್ಯಾಲರಿಯ ಸ್ಥಾಪಕ ಮತ್ತು ಕಲಾವಿದ ಕೋಟಿಪ್ರಸಾದ ಆಳ್ವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಕಲಾ ಚಾವಡಿಯ ಹಿರಿಯ ಕಲಾವಿದರಾದ ಪ್ರೊ. ಶಿವಪ್ರಕಾಶರು ಕಾರ್ಯಕ್ರಮವನ್ನು ನಿರ್ವಹಿಸಿ, ಹಿರಿಯ ಕಲಾವಿದ ಗಣೇಶ ಸೋಮಯಾಜಿಯವರು ವಂದಿಸಿದರು. ನಗರದ ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇನ್ನಿತರ ಕಲಾಸಹೃದಯರು ಈ ಮಾಹಿತಿ ಸಭೆಯಲ್ಲಿ ಪಾಲ್ಗೊಂಡರು.