ಚನ್ನರಾಯಪಟ್ಟಣ: ಪ್ರತಿಮಾ ಟ್ರಸ್ಟ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯದಲ್ಲಿ ಒಂದು ತಿಂಗಳ ಸೋಬಾನೆ ಪದಗಳ ಕಲಿಕಾ ತರಬೇತಿ ದಿನಾಂಕ 16-07-2023 ರಂದು ಪ್ರಾರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನೀನಾಸಂ ರಂಗ ನಿರ್ದೇಶಕ ಶಿವಶಂಕರ್ “ಜಾನಪದ ಪ್ರಕಾರಗಳಲ್ಲಿ ಒಂದಾದ ಸೋಬಾನೆ ಪದಗಳ ಬಗ್ಗೆ ಇತ್ತೀಚಿನ ಮಕ್ಕಳಿಗೆ ಪರಿಚಯವೇ ಇಲ್ಲದಿರುವುದು ವಿಪರ್ಯಾಸ. ಈ ಸಂದರ್ಭದಲ್ಲಿ ಪ್ರತಿಮಾ ಟ್ರಸ್ಟ್ ಸೋಬಾನೆ ಪದಗಳನ್ನು ಪರಿಚಯಾತ್ಮಕ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಒಂದು ತಿಂಗಳ ತರಬೇತಿ ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ” ಎಂದರು.
ಉಮೇಶ್ ತೆಂಕನಹಳ್ಳಿ ಮಾತನಾಡಿ “ಪ್ರತಿಮಾ ಟ್ರಸ್ ಜಾನಪದ ಸೊಗಡಿನ ಬಹಳಷ್ಟು ತರಬೇತಿ ಶಿಬಿರ ಆಯೋಜನೆ ಮಾಡುತ್ತಿದ್ದು, ಈ ಬಾರಿ ಸೋಬಾನೆ ಪದಗಳನ್ನು ತರಬೇತಿಗೊಳಿಸುವುದು ಶಿಬಿದ ವಿಶೇಷತೆ. ಬಹಳ ದಿನಗಳಿಂದ ಈ ಸೋಬಾನೆ ಪದಗಳ ತರಬೇತಿ ಶಿಬಿರ ಆಯೋಜನೆ ಮಾಡಬೇಕು ಎಂದು ಅಂದುಕೊಂಡಿದ್ದರೂ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಅದರಲ್ಲೂ ನಮ್ಮ ಹಳ್ಳಿ ಹಿರಿಯರಿಂದ ಸೋಬಾನೆ ಪದಗಳನ್ನು ಕಲಿಯುವುದು ಬಹಳ ವಿಶೇಷ. ಈ ಶಿಬಿರದಲ್ಲಿರುವ ಮಕ್ಕಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.
ಇದೇ ಸಂದರ್ಭದಲ್ಲಿ ನೀನಾಸಂ ರಂಗ ನಿರ್ದೇಶಕ ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು.
ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಮಂಜುನಾಥ್ ಮಾತನಾಡಿದರು. ಪ್ರತಿಮಾ ಟ್ರಸ್ಟ್ ಸಂಚಾಲಕ ಎ.ಎಲ್.ನಾಗೇಶ್, ಕಾರ್ಯದರ್ಶಿ ಡಿ.ಜಗದೀಶ್ ಚಂದ್ರ, ವಿದ್ಯಾರ್ಥಿನಿಲಯದ ಪಾಲಕರಾದ ಆಶಾರಾಣಿ, ಪ್ರತಿಮಾ ಉಪಸ್ಥಿತರಿದ್ದರು.