ಸುಂಕದಕಟ್ಟೆ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜೈ ತುಳುನಾಡು ಸಂಸ್ಥೆಗಳ ಸಹಯೋಗದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 15-07-2023ರಂದು ‘ತುಳು ಅಧ್ಯಯನ ಕೇಂದ್ರ’ ಹಾಗೂ ‘ಬಲೆ ತುಳು ಲಿಪಿ ಕಲ್ಲುಗ’ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ನಡೆಯಿತು.
ಈ ಕಾರ್ಯಕ್ರಮವನ್ನು ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಳದ ಆಡಳಿತ ಸಮಿತಿಯ ಸದಸ್ಯ ಸುಕೇಶ್ ಮಾಣೈ ಉದ್ಘಾಟಿಸಿ ಮಾತನಾಡುತ್ತಾ “ತುಳು ಲಿಪಿಯ ಅಕ್ಷರಾಭ್ಯಾಸ ಮಾಡುವುದರ ಜೊತೆಗೆ ತುಳು ಲಿಪಿ ಕಲಿತು ತುಳು ಭಾಷೆಯನ್ನು ಉಳಿಸಬೇಕು. ತುಳು ಭಾಷೆಯನ್ನು ನಾವು ಮಾತನಾಡುತ್ತಿದ್ದರೂ ತುಳು ಲಿಪಿಯ ಬಗ್ಗೆ ಜ್ಞಾನ ಇಲ್ಲ. ಈ ಬಗ್ಗೆ ನಾವು ಕಲಿಯುವಂತಹ ಅಗತ್ಯತೆ ಇದೆ” ಎಂದು ಹೇಳಿದರು.
ಈ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುಧಾಕರ ಶೆಟ್ಟಿಯವರು “ವಿದ್ಯಾರ್ಥಿಗಳು ತುಳು ಭಾಷೆ – ಸಾಹಿತ್ಯ -ಸಂಸ್ಕೃತಿಯ ಬಗ್ಗೆ ಅಧ್ಯಯನದ ಬಗ್ಗೆ ಆಸಕ್ತಿ ಬೆಳೆಸಿಕೊಂಡಲ್ಲಿ ನಶಿಸುವ ಹಂತದಲ್ಲಿರುವ ಸಂಸ್ಕೃತಿ ಮೌಲ್ಯಗಳು ಮುಂದಿನ ಪೀಳಿಗೆಗೂ ಪರಿಚಯವಾಗಲು ಸಾಧ್ಯ” ಎಂದು ಹೇಳಿದರು.
ಸಂಸ್ಥೆಗಳ ಟ್ರಸ್ಟಿ ಶ್ರೀ ದೀಪಕ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜೈ ತುಳುನಾಡು ಸಂಸ್ಥೆಯ ಉಪಾಧ್ಯಕ್ಷ ಶ್ರೀ ಉದಯ ಪೂಂಜ ತಾಳಿಪಾಡಿಗುತ್ತು, ತುಳು ಲಿಪಿಯ ತರಬೇತುದಾರರಾದ ಶ್ರೀ ಕಿರಣ್ ತುಳುವ, ಶ್ರೀ ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಕೀರ್ತನ್ ಎಸ್.ಜಿ. ವಂದಿಸಿ, ಶ್ರೀ ವಿನಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.