ಉಡುಪಿ : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಹಾಗೂ ಇದರ ಆಶ್ರಯದಲ್ಲಿ ನಡೆಯುತ್ತಿರುವ ಸಂಗೀತ ಶಾಲೆಯ 11ನೇ ವಾರ್ಷಿಕೋತ್ಸವದ ಅಂಗವಾಗಿ ಪೆರ್ಡೂರಿನ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ದಿನಾಂಕ : 16-07-2023ರಂದು ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯ ಉದ್ಘಾಟನಾ ಹಾಗೂ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಜನೆ ಕಾರ್ಯಕ್ರಮ ಜರಗಿತು. ನಂತರ ಇದೇ ವೇದಿಕೆಯಲ್ಲಿ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ಹಾಗೂ ಸಂಗೀತ ಶಾಲೆಯ ವಿದ್ಯಾರ್ಥಿಗಳಿಗೆ ಸಂಗೀತ ಸ್ಪರ್ಧೆಗಳು ನಡೆದವು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಶ್ರೀ ಕೆ. ಶಾಂತಾರಾಮ್ ಸೂಡ “ಒಂದು ಸಮಿತಿ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಜನರನ್ನು ತಲುಪುವಲ್ಲಿ ಹಾಗೂ ಜನರ ಹೃದಯದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡು ಮುಂದುವರೆಯುತ್ತಾ ಸಾಗುವುದು ಒಂದು ಮಹಾನ್ ತಪಸ್ಸು. ಅಂತಹ ಕಾರ್ಯವನ್ನು ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಕಳೆದ ಹನ್ನೊಂದು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಭಜನಾ ತಂಡಗಳಿಗೆ ಸ್ಪರ್ಧೆಯನ್ನು ಏರ್ಪಡಿಸಿ ಆ ಮುಖೇನ ಯುವ ಜನಾಂಗಕ್ಕೆ ಸ್ಪೂರ್ತಿಯನ್ನು ತುಂಬಿ ಭಜನಾ ಕ್ಷೇತ್ರಕ್ಕೆ ಸೆಳೆಯುವಲ್ಲಿ ಮತ್ತು ಭಜನೆಯನ್ನು ಉತ್ತುಂಗಕ್ಕೆ ಏರಿಸುವಲ್ಲಿ ಮಾಡುತ್ತಿರುವ ಪ್ರಯತ್ನ ಅಭಿನಂದನೀಯ. ಈ ಸಮಿತಿಯು ಅಧ್ಯಕ್ಷರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಶ್ರಮವಹಿಸುತ್ತಿರುವುದು ಶ್ಲಾಘನೀಯ” ಎಂದರು.
ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಕೋಟ್ಯಾನ್ ಮಾತನಾಡುತ್ತಾ “ಮನದಾಳದಿಂದ ಭಜಿಸಿ ದೇವರ ಗುಣಗಾನ ಮಾಡುತ್ತ ಭಕ್ತಿಪರವಶದಿಂದ ಕುಣಿದು ಸಂಭ್ರಮಿಸುವುದರಿಂದ ಭಜಕನ ಮನಸ್ಸಿಗೆ ಆನಂದ ದೇಹಕ್ಕೆ ಸಂಪೂರ್ಣ ಆರೋಗ್ಯ ದೊರಕುವುದಲ್ಲದೆ ಆ ತಲ್ಲೀನತೆಗೆ ಭಗವಂತ ಖಂಡಿತವಾಗಿಯೂ ಒಲಿಯುತ್ತಾನೆ. ಮಕ್ಕಳು ಹಾಗೂ ಯುವಪೀಳಿಗೆ ಇದನ್ನು ಅನುಸರಿಸಿ ಜೀವನದಲ್ಲಿ ಸಾರ್ಥಕತೆಯನ್ನು ಗಳಿಸಬೇಕು. ಇದರಿಂದ ಲೋಕದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿ ಲೋಕಕಲ್ಯಾಣವಾಗಬೇಕು” ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುಬ್ರಾಯ ಕಲ್ಯಾಣ ಮಂಟಪದ ಮಾಲಕ ಶ್ರೀ ರಘುಪ್ರಸಾದ ಅಡಿಗರು ಮಾತನಾಡಿ “ಒಂದು ಸಂಸ್ಥೆ ಇಂತಹ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟಕರ. ಆದರೆ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮ ಗುರಿಯಿಂದ ಹಿಮ್ಮೆಟ್ಟದೆ ಸತತ ಹನ್ನೊಂದು ವರ್ಷ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ. ಸದಸ್ಯರ ಸೇವಾ ಮನೋಭಾವ ಶ್ಲಾಘನಾರ್ಹ” ಎಂದರು.
ಈ ಸಂದರ್ಭದಲ್ಲಿ ಭಜನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಾದ ಬೆಳ್ಳಂಪಳ್ಳಿಯ ಶ್ರೀ ಬಾಲು ಕೋಟ್ಯಾನ್ ಹಾಗೂ ದೊಂಡೇರಂಗಡಿಯ ಶ್ರೀ ಎಸ್. ರಾಘವೇಂದ್ರ ನಾಯಕ್ ಹಾಗೂ ವಿಶ್ವದಾಖಲೆಯ ಈಜುಪಟು ಶ್ರೀ ಗಂಗಾಧರ ಜಿ. ಕಡೇಕಾರು ಮತ್ತು ಪೆರ್ಡೂರಿನ ರಂಗಕರ್ಮಿ ಮತ್ತು ಚಲನಚಿತ್ರ ನಟ ಶ್ರೀ ಸತೀಶ್ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರ ಪರವಾಗಿ ಎಸ್. ರಾಘವೇಂದ್ರ ನಾಯಕ್, ಗಂಗಾಧರ ಜಿ. ಕಡೇಕಾರು ಹಾಗೂ ಸತೀಶ್ ಆಚಾರ್ಯ ಮಾತನಾಡಿದರು.
ತೀರ್ಪುಗಾರರ ಪರವಾಗಿ ಶ್ರೀ ರಮೇಶ್ ಕಲ್ಮಾಡಿ ಅವರು ಮಾತನಾಡಿ “ಸ್ಪರ್ಧೆ ಹಾಗೂ ಕಾರ್ಯಕ್ರಮದ ಸರ್ವಾಂಗೀಣ ಅಚ್ಚುಕಟ್ಟುತನವನ್ನು ಪ್ರಶಂಸಿಸಿ ಇಂತಹ ವೇದಿಕೆಯಲ್ಲಿ ಭಾಗವಹಿಸುವುದೇ ತಂಡಗಳಿಗೆ ಉತ್ತಮ ಬಹುಮಾನ. ಇಲ್ಲಿ ಹರಿಯುವ ಭಕ್ತಿ ತರಂಗದಿಂದ ಸಿಗುವ ಆನಂದ ಬೇರೆಲ್ಲೂ ಸಿಗದು. ಇಲ್ಲಿ ನಡೆಯುವ ಸ್ಪರ್ಧೆಯನ್ನು ಮಾದರಿಯಾಗಿಟ್ಟುಕೊಂಡು ಅವಿಭಜಿತ ದಕ್ಷಿಣ ಜಿಲ್ಲೆಯ ಹಲವೆಡೆ ಸಮಿತಿಗಳು ಸ್ಪರ್ಧೆ ಆಯೋಜಿಸುತ್ತಿರುವುದು ಸಂತಸದ ಸಂಗತಿ” ಎಂದರು. ಮತ್ತೋರ್ವ ತೀರ್ಪುಗಾರರಾದ ಚಂದ್ರಶೇಖರ ಎರ್ಮಾಳು ಅವರು ಸ್ಪರ್ಧಿಗಳು ಹಾಗೂ ಸ್ಪರ್ಧಾ ತಂಡಗಳನ್ನು ಉದ್ದೇಶಿಸಿ ಕುಣಿತ ಭಜನೆಯ ಕುರಿತು ಹಿತವಚನಗಳನ್ನಾಡಿದರು.
ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಉಪಾಧ್ಯಕ್ಷ ಪ್ರಮೋದ್ ರೈ ಪಳಜೆ, ಅರುಣ್ ಕುಮಾರ್ ಹೇರೂರು, ಸಂಗೀತ ಶಿಕ್ಷಕಿ ಅಕ್ಷತಾ ಹಾವಂಜೆ, ಸಮಿತಿಯ ಕಾರ್ಯದರ್ಶಿ ರವೀಂದ್ರ ನಾಡಿಗ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಭಾಕರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಳೆದ ಹತ್ತು ವರ್ಷಗಳಲ್ಲಿ ಸಮಿತಿಯೊಂದಿಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಹುಮಾನ ವಿಜೇತರು:
ಪ್ರಥಮ ಬಹುಮಾನ – ಶ್ರೀ ರಾಧಾಕೃಷ್ಣ ಭಜನಾ ಮಂಡಳಿ, ನೀರ್ಕೆರೆ, ತೆಂಕಮಿಜಾರು
ದ್ವಿತೀಯ ಬಹುಮಾನ – ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಸಿರಿಬೈಲು, ಕಡ್ತಲ
ತೃತೀಯ ಬಹುಮಾನ – ಬಾಲವಿಕಾಸ ಭಜನಾ ಮಂಡಳಿ, ಕುಳಾಯಿ, ಹೊಸಬೆಟ್ಟು
ಶ್ರೀ ದುರ್ಗಾ ಕುಣಿತ ಭಜನಾ ಮಂಡಳಿ, ಮುದರಂಗಡಿ (ಸಮಾಧಾನಕರ)
ಉತ್ತಮ ತಬಲಾ ವಾದಕ: ಪ್ರಥಮ್ ಆಚಾರ್ಯ, ಬಾಲವಿಕಾಸ ಭಜನಾ ಮಂಡಳಿ, ಕುಳಾಯಿ, ಹೊಸಬೆಟ್ಟು
ಉತ್ತಮ ಹಾರ್ಮೋನಿಯಂ ವಾದಕ: ನಿತ್ಯಾನಂದ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಸಿರಿಬೈಲು, ಕಡ್ತಲ
ಸಂಗೀತ ಶಾಲೆ ಸ್ಪರ್ಧೆ ವಿಜೇತರು: (ಕಿರಿಯರ ವಿಭಾಗ) ತನ್ವಿ ಜಿ. ಪೂಜಾರಿ (ಪ್ರಥಮ), ಸಿಂಚನ ಮೆಂಡನ್ (ದ್ವಿತೀಯ), ನೀರಜ್ (ತೃತೀಯ), (ಹಿರಿಯರ ವಿಭಾಗ) ಅಂಜಲಿ ಭಟ್ (ಪ್ರಥಮ), ಆಕಾಶ್ (ದ್ವಿತೀಯ), ವಿಖ್ಯಾತ್ ಕುಲಾಲ್ (ತೃತೀಯ), ಪ್ರಭಾವತಿ ಮೆಂಡನ್ (ವಿಶೇಷ ಬಹುಮಾನ)
ಶೈಕ್ಷಣಿಕ ಪುರಸ್ಕಾರ: ಸುಜನ್ಯ, ಸ್ಪೂರ್ತಿ ಆಚಾರ್ಯ (ಪದವಿ ಪೂರ್ವ), ಪವಿತ್ರಾ ಭಟ್, ವಾಣಿಶ್ರೀ ಕುಲಾಲ್, ರಂಜಿತಾ ಶೆಟ್ಟಿ (ಪದವಿ)