ಮಂಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದ.ಕ.ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ದಯಾನಂದ ರಾಮಚಂದ್ರ ನಾಯ್ಕ್ ರನ್ನು ದಿನಾಂಕ 21-07-2023 ರಂದು ಭೇಟಿಯಾಗಿ ದ.ಕ.ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಾಹಿತ್ಯ ಪ್ರೇರಣಾ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತಾಗಿ ಶಿಕ್ಷಣ ಇಲಾಖೆಯ ಮೂಲಕ ಮಾರ್ಗದರ್ಶನ ನೀಡಲು ಮನವಿ ಪತ್ರವನ್ನು ನೀಡಲಾಯಿತು.
ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವಲ್ಲಿ ಕನ್ನಡ ಭಾಷೆಯೇ ಆಧಾರ. ಈ ನಿಟ್ಟಿನಲ್ಲಿ ಭಾಷೆಯ ಸಬಲೀಕರಣಕ್ಕೆ ದ.ಕ.ಜಿಲ್ಲೆಯಾದ್ಯಂತ ಪ್ರತೀ ಶಾಲೆಗಳಲ್ಲಿ ವರ್ಷದಲ್ಲಿ ಕನಿಷ್ಠ ಒಂದಾದರೂ ಕನ್ನಡ ಪರ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು.
ಸಾಹಿತಿಗಳ ಪರಿಚಯ, ಸಾಹಿತ್ಯಿಕ ಉಪನ್ಯಾಸ, ವಾಚನಾಲಯ ಬಳಕೆ, ಕತೆ ಮತ್ತು ಕವನ ಬರವಣಿಗೆ ಕಮ್ಮಟ, ಕನ್ನಡ ಗೀತೆಗಳ ಗಾಯನ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಈ ಬಗ್ಗೆ ಕ್ರಮ ಕೈಗೊಳ್ಳಲು ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆ ಶಾಲೆಗಳಿಗೆ ಸೂಕ್ತ ನಿರ್ದೇಶನ ನೀಡುವ ಬಗ್ಗೆ ಉಪನಿರ್ದೇಶಕರು ಭರವಸೆ ನೀಡಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಸನತ್ಕುಮಾರ ಜೈನ್ ಇವರು ಈ ಮನವಿಯನ್ನು ಉಪನಿರ್ದೇಶಕರಿಗೆ ಸಲ್ಲಿಸಿದರು.