ಮಂಗಳೂರು : ಭರತಾಂಜಲಿ ಕೊಟ್ಟಾರ ಮಂಗಳೂರು ಇದರ ವತಿಯಿಂದ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ‘ಗುರು ನಮನ ಮತ್ತು ಮಾತಾಪಿತರ ಚರಣ ಪೂಜನ’ ಕಾರ್ಯಕ್ರಮ ದಿನಾಂಕ 23-07-2023ರಂದು ನಡೆಯಿತು. ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಇಲ್ಲಿನ ಪ್ರಾಂಶುಪಾಲರಾದ ವಿದ್ವಾನ್ ರವಿಶಂಕರ್ ಹೆಗಡೆಯವರು ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಾ “ಭಾರತದ ಎಲ್ಲಾ ಕಲಾಪ್ರಕಾರಗಳಲ್ಲಿಯೂ ಗುರು ಪರಂಪರೆ ನಡೆದುಕೊಂಡು ಬಂದಿರುವುದರಿಂದ ಇಲ್ಲಿನ ಸಂಸ್ಕೃತಿ ಭದ್ರವಾಗಿದೆ. ನಮ್ಮ ದೇಶದ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಪಟ್ಟರು. ಆಚಾರ್ಯ ಎಂದರೆ ವಿದ್ಯೆಯನ್ನು ತಾನು ಆಳವಾಗಿ ಅಭ್ಯಾಸ ಮಾಡಿ ಅದನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಪಾಠ ಮಾಡುವುದಷ್ಟೇ ಅಲ್ಲ ಅದನ್ನು ತಾನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವನಾಗಿರಬೇಕು. ಆಗ ಮಾತ್ರ ಆತ ಆಚಾರ್ಯ ಅಥವಾ ಗುರು ಎಂದು ಕರೆಸಿಕೊಳ್ಳುತ್ತಾನೆ. ಒಬ್ಬ ಶಿಕ್ಷಕ ಕೇವಲ ಜ್ಞಾನವನ್ನು ನೀಡುತ್ತಾನೆ, ಆದರೆ ಗುರುವು ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಜವಾಬ್ದಾರನಾಗಿರುತ್ತಾನೆ. ನಮ್ಮೊಳಗಿನ ಬುದ್ಧಿವಂತಿಕೆಯನ್ನು ಜಾಗೃತಗೊಳಿಸಿ ನಮ್ಮನ್ನು ಒಳಕ್ಕೆ ತಿರುಗಿಸಲು ಪ್ರೋತ್ಸಾಹಿಸುತ್ತಾನೆ. ಕರೋನ ನಂತರದ ಕಾಲಘಟ್ಟದಲ್ಲಿ ಯುಟ್ಯೂಬ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಸಹಾಯದಿಂದ ವಿದ್ಯೆಯನ್ನು ಕಲಿಯುವ ಪದ್ಧತಿ ಆರಂಭವಾಗಿದೆ. ಈ ಸಾಮಾಜಿಕ ಜಾಲತಾಣಗಳು ಉತ್ತಮವಾದ ಜ್ಞಾನವನ್ನು ನೀಡುತ್ತವೆಯಾದರೂ, ತಪ್ಪನ್ನು ತಿದ್ದಿ ಕಲಿಸುವ ಗುರು ಸ್ಥಾನಕ್ಕೆ ನಿಲ್ಲಲಾರವು. ಕಳೆದ ಹಲವಾರು ವರ್ಷಗಳಿಂದ ಸಮಾಜಕ್ಕೆ ಮಾದರಿಯಾದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಭರತಾಂಜಲಿಯ ಕಾರ್ಯ ಶ್ಲಾಘನೀಯ” ಎಂದರು.
‘ಗುರು ನಮನ’ವನ್ನು ಸ್ವೀಕರಿಸಿದ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಇದರ ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ್ ನಾವಡ ಇವರು “ಶಿಷ್ಯರು ಪ್ರಾಮಾಣಿಕವಾಗಿ ಮತ್ತು ನಿಜವಾಗಿ ಗುರುವಿನ ಮಾರ್ಗದರ್ಶನದಂತೆ ನಡೆಯುವುದರಿಂದ ಅವರ ಅಸಹಜ ಪ್ರವೃತ್ತಿಗಳು ಕ್ರಮೇಣ ಕರಗುತ್ತವೆ. ಜ್ಞಾನೋದಯ, ವಿಮೋಚನೆ ಹಾಗೂ ವೈಯುಕ್ತಿಕ ಸನ್ಮಾರ್ಗದ ಹಾದಿಯಲ್ಲಿ ಮುನ್ನಡೆಯಲು ಅನುವು ಮಾಡಿಕೊಡುತ್ತದೆ. ಪ್ರೀತಿ ಅಭಿಮಾನದಿಂದ, ಗೌರವದಿಂದ ಗುರು ನಮನವನ್ನು ಮಾಡಿದ ನೃತ್ಯ ಗುರುಗಳಾದ ಪ್ರತಿಮಾ ಶ್ರೀಧರ್ ಅವರಿಗೆ ಮನ ಪೂರ್ವಕ ಆಶೀರ್ವಾದಗಳನ್ನು ಸಲ್ಲಿಸುತ್ತೇನೆ” ಎಂದರು.
ವಿದ್ಯಾರ್ಥಿನಿಯರು ಈ ಸಂದರ್ಭ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿಯರಾದ ಪ್ರಕ್ಷಿಲಾ ಜೈನ್ ಹಾಗೂ ಮನಸಾ ಕೆ. ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ್ ಹೊಳ್ಳ ಸ್ವಾಗತಿಸಿ, ನಿರೂಪಿಸಿದರು.