ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕಾರ್ಕಳ ತಾಲೂಕು ಘಟಕದ ಸಹಯೋಗದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ನಗರದ ಪ್ರಕಾಶ್ ಹೊಟೇಲ್‌ನಲ್ಲಿ ದಿನಾಂಕ 17-07-2023ರಂದು ‘ಕಾರ್ಕಳ ಕುಂದಾಪ್ರ ಕನ್ನಡ ಹಬ್ಬ 2023’ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆಯವರು ಮಾತನಾಡುತ್ತಾ “ಭಾಷೆ ಯಾವುದೇ ಇರಲಿ ಒಟ್ಟಾಗಿ ಭಾಷೆಯ ಬೆಳವಣಿಗೆಗೆ ನಾವೆಲ್ಲ ಶ್ರಮಿಸಬೇಕು. ಭಾಷೆಗಳ ಅಧ್ಯಯನ ಇಂದಿನ ಅಗತ್ಯ. ಕುಂದಾಪ್ರ ಕನ್ನಡ ಭಾಷೆಯ ಇನ್ನು ಹೆಚ್ಚಿನ ಅಧ್ಯಯನಕ್ಕಾಗಿ ಅಧ್ಯಯನ ಪೀಠ ಹಾಗೂ ಆಕಾಡೆಮಿ ಸ್ಥಾಪನೆ ಸಂಬಂಧ ಸರಕಾರ ಮಟ್ಟದಲ್ಲಿ ಶ್ರಮಿಸಲಾಗುವುದು. ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಬಹುದು. ಆದರೆ ಮಗುವಿಗೆ ಸಂಸ್ಕಾರ ಕೊಡುವವರೇ ತಾಯಿ. ಆದ್ದರಿಂದ ಮಾತೃಭಾಷೆ ಮೊದಲು ಕಲಿಯುವ ಭಾಷೆಯಾಗಬೇಕು. ಭಾಷೆಯ ಆಚರಣೆ ಒಂದು ದಿನಕ್ಕೆ ಸೀಮಿತವಾಗದಿರಲಿ” ಎಂದು ಹೇಳಿದರು.
ಸಾಹಿತಿ ಶ್ರೀ ಓಂ ಗಣೇಶ್ ಉಪ್ಪುಂದ ‘ಭಾಷಿ ಅಲ್ಲ ಬದ್ಕ್’ ಕುರಿತ ಉಪನ್ಯಾಸ ನೀಡಿ “ಭಾಷೆಯೇ ನಮಗೆ ಐಡೆಂಟಿಟಿ. ನಾವು ಎಲ್ಲೇ ಇದ್ದರೂ ಕುಂದಾಪ್ರ ಭಾಷೆಯೇ ನಮ್ಮನ್ನು ಒಂದೆಡೆ ಬೆಸೆಯುವುದು. ಕುಂದಾಪ್ರ ಭಾಷೆಗೆ ಹೊಸತನ್ನು ಸೇರಿಸೋಕೆ ನಮ್ಮಿಂದ ಸಾಧ್ಯವಿಲ್ಲ. ಆದರೆ ಆ ಭಾಷೆ ಉಳಿಸುವ ಕಾರ್ಯ ಮಾಡಬಹುದಾಗಿದೆ. ಮಕ್ಕಳನ್ನು ಮಾತೃ ಭಾಷಾ ಶಿಕ್ಷಣದಿಂದ ದೂರ ಮಾಡದಿರಿ.” ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ರಂಗ ಸಂಸ್ಕೃತಿಯ ಅಧ್ಯಕ್ಷ ನಿತ್ಯಾನಂದ ಪೈ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜನಪದ ಕಲಾವಿದ ಶ್ರೀ ನಾಗ ಪಾಣಾರ ವಾಲ್ಲೂರು, ರಂಗಭೂಮಿ ಕಲಾವಿದೆ ಪ್ರತಿಮಾ ನಾಯಕ್ ಅಮಾಸೆಬೈಲು ಉಪಸ್ಥಿತರಿದ್ದರು. ಶಿಕ್ಷಕ ಹೈಕಾಡಿ ರಾಜಾರಾಮ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರೆ ಶಿಕ್ಷಕ ಸಂತೋಷ್ ಶೆಟ್ಟಿ ವಂದಿಸಿದರು.
ಧಾರಿಣಿ ಮತ್ತು ಸುಬ್ರಹ್ಮಣ್ಯ ಉಪಾಧ್ಯಾಯ ಭಾಷಾ ಹಾಡು ಹಾಡಿದರು. ಅತಿಥಿಗಳಾದ ಜಯಪ್ರಕಾಶ್ ಹೆಗ್ಡೆ ಹಾಗೂ ಶ್ರೀ ನಾಗ ಪಾಣಾರ ಇವರನ್ನು ಸಮ್ಮಾನಿಸಲಾಯಿತು. ಪಾಣಾರ ಇವರು ಪಾಡ್ದನ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.