ಕಾಸರಗೋಡು: ಕಾಸರಗೋಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು(ರಿ.) ಇದರ ಮಹಿಳಾ ಘಟಕ ನಾರಿ ಚಿನ್ನಾರಿಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಶ್ರಾವಣ ಧಾರಾ’ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ದಿನಾಂಕ 30-07-2023ರಂದು ಅಪರಾಹ್ನ 2.30ರಿಂದ ಕಾಸರಗೋಡಿನ ಬ್ಯಾಂಕ್ ರಸ್ತೆಯ ಜಿ.ಯು.ಪಿ ಶಾಲೆಯ ಮುಂಭಾಗದ ಟೌನ್ ಬ್ಯಾಂಕ್ ಹಾಲ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕಾಸರಗೋಡಿನ ಮಾನವ ಹಕ್ಕು ಸಂಘಟನೆಯ ರಾಜ್ಯಾಧ್ಯಕ್ಷೆಯಾದ ಜುಲೇಖಾ ಮಾಹಿನ್ ಉದ್ಘಾಟಿಸಲಿದ್ದು, ಖ್ಯಾತ ಲೆಕ್ಕ ಪರಿಶೋಧಕರೂ ಹಾಗೂ ನಾರಿಚಿನ್ನಾರಿಯ ಗೌರವಾಧ್ಯಕ್ಷೆಯೂ ಆದ ಶ್ರೀಮತಿ ತಾರಾ ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆರೋಗ್ಯ ತಜ್ಞೆ ಡಾ. ಸಂಗೀತ ಸಚ್ಚಿದಾನಂದ್, ಬಿ.ಎ.ಎಂ.ಎಸ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕಿಯಾದ ಮಂಜುಳಾ ರಾವ್ ಹಾಗೂ ಸಮಾಜ ಸೇವಕಿ ಚಂದ್ರಾವತಿ ಇವರಿಗೆ ಗೌರವಾರ್ಪಣೆ ನಡೆಯಲಿರುವುದು.
ಸಭಾಕಾರ್ಯಕ್ರಮದ ಬಳಿಕ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಆರೋಗ್ಯ ತಜ್ಞೆಯಾದ ಡಾ.ಸಂಗೀತ ಸಚ್ಚಿದಾನಂದ್ ಎಮ್.ಬಿ.ಬಿ.ಎಸ್ ಇವರು ‘ಮಳೆಗಾಲದ ಆಹಾರ ಮತ್ತು ಆರೋಗ್ಯ’ ಎಂಬ ವಿಷಯದಲ್ಲಿ ಹಾಗೂ ಮಾಲತಿ ಮಾಧವ್ ಕಾಮತ್ ಇವರು ‘ಕೊಂಕಣಿ ಭಾಷಿಗರ ಶ್ರಾವಣ ಮಾಸದ ಆಚರಣೆಗಳು’ ಎಂಬ ವಿಷಯದಲ್ಲಿ ವಿಚಾರ ಮಂಡಿಸಲಿದ್ದಾರೆ. ಕಾಸರಗೋಡಿನ ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಆಶಾಲತಾ ‘ಆಟಿಯ ವಿಶೇಷ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿರುವರು.
ಉಪನ್ಯಾಸದ ಬಳಿಕ ಕನ್ನಡ ಮತ್ತು ತುಳು ಭಾಷೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ರಂಜಿತ್ ಪ್ರಾರ್ಥನೆ ಹಾಡಲಿದ್ದು, ಸಮಿತಿಯ ಸದಸ್ಯೆಯಾದ ಶ್ರೀಲತಾ ಮೈಲಾಟ್ಟಿ ಸ್ವಾಗತಿಸಿ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ ಧನ್ಯವಾದ ಸಮರ್ಪಿಸಿ, ಪ್ರಧಾನ ಕಾರ್ಯದರ್ಶಿಯಾದ ದಿವ್ಯಾಗಟ್ಟಿ ಪರಕ್ಕಿಲ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಾರಿ ಚಿನ್ನಾರಿಯ ಅಧ್ಯಕ್ಷೆಯಾದ ಸವಿತಾ ಟೀಚರ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ದಿವ್ಯಾಗಟ್ಟಿ ಪರಕ್ಕಿಲ ಮತ್ತು ರಂಗಚಿನ್ನಾರಿ ಕಾಸರಗೋಡಿನ ನಿರ್ದೇಶಕರುಗಳಾದ ಕಾಸರಗೋಡು ಚಿನ್ನಾ, ಸತ್ಯನಾರಾಯಣ ಕೆ, ಕೆ.ಸತೀಶ್ಚಂದ್ರ ಭಂಡಾರಿ ಹಾಗೂ ಮನೋಹರ ಶೆಟ್ಟಿ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.

