ಬೆಂಗಳೂರು : ಜತಿನ್ ಅಕಾಡಮಿ ಆಫ್ ಡ್ಯಾನ್ಸ್ (ರಿ.) ಪ್ರಸ್ತುತ ಪಡಿಸುವ ವಿದುಷಿ ಶ್ರೀಮತಿ ಅರ್ಚನಾ ಪುಣ್ಯೇಷ್ ಇವರ ಶಿಷ್ಯೆಯಾದ ಕುಮಾರಿ ಪ್ರಜ್ಞಾ.ಪಿ.ಶರ್ಮ ಇವರ ಭರತನಾಟ್ಯ ರಂಗಪ್ರವೇಶವು ದಿನಾಂಕ 29-07-2023ರ ಸಂಜೆ 5.30ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಚಾವ್ಯ ನೃತ್ಯ ನಿಕೇತನದ ನಿರ್ದೇಶಕಿಯಾದ ರಾಜ್ಯೋತ್ಸವ ಹಾಗೂ ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಶ್ರೀಮತಿ ಸುನಂದ ದೇವಿ ಹಾಗೂ ಮುಖ್ಯ ಅತಿಥಿಗಳಾಗಿ ಅಂಧ ನೃತ್ಯ ಕಲಾವಿದರ ಮಾರ್ಗದರ್ಶಕಿ, ನೃತ್ಯ ಶಿಕ್ಷಕಿ ಮತ್ತು ಸಂಯೋಜಕಿ, ಭರತನಾಟ್ಯ ಮತ್ತು ಕಥಕ್ ಕಲಾವಿದೆಯಾದ ಕರ್ನಾಟಕ ಕಲಾಶ್ರೀ ಡಾ. ಸುಪರ್ಣಾ ವೆಂಕಟೇಶ್, ಕಲಾಯೋಗಿ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಕಲಾವಿದರ ಸಂಘದ ಯುವ ಬರಹಗಾರ ಹಾಗೂ ಕಲಾ ವಿಮರ್ಶಕ ಶ್ರೀ.ಎಸ್.ನಂಜುಂಡ ರಾವ್, ಬೆಂಗಳೂರಿನ ಐ.ಸಿ.ಸಿ.ಆರ್. ದಕ್ಷಿಣ ವಲಯ ಕಚೇರಿಯ ವಲಯ ನಿರ್ದೇಶಕರರಾದ ಶ್ರೀ.ಕೆ.ಅಯ್ಯನಾರ್, ಕಲಬುರ್ಗಿಯ ಎಸ್.ಎಂ.ಎನ್.ಕೆ.ಎಸ್.ಇದರ ಭರತನಾಟ್ಯ ಕಲಾವಿದರಾದ ವಿದ್ವಾನ್ ಶ್ರೀ.ಮಂಜುನಾಥ್ ಎನ್ ಪುತ್ತೂರು ಭಾಗವಹಿಸಲಿದ್ದಾರೆ.
ಶ್ರೀಮತಿ ಪ್ರಸನ್ನ ಕುಮಾರಿ ಮತ್ತು ಶ್ರೀ. ಪ್ರಸನ್ನ ಕುಮಾರ್ ದಂಪತಿಗಳ ಪುತ್ರಿಯಾದ ಕು.ಪ್ರಜ್ಞಾ ಪಿ. ಶರ್ಮ ತನ್ನ 8ನೇ ವಯಸ್ಸಿನಲ್ಲಿ ಭರತನಾಟ್ಯದ ಹೆಜ್ಜೆಗಳನ್ನು ಪ್ರಾರಂಭಿಸಿದರು. ವಿದುಷಿ ಶ್ರೀಮತಿ ಅರ್ಚನಾ ಪುಣ್ಯೇಶ್ ಇವರ ಮಾರ್ಗದರ್ಶನದಲ್ಲಿ ಜತಿನ್ ಅಕಾಡೆಮಿ ಆಫ್ ಡ್ಯಾನ್ಸ್ ನಲ್ಲಿ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯಗಳನ್ನು ಅಭ್ಯಾಸ ಮಾಡಿದರು.
ಕು.ಪ್ರಜ್ಞಾ.ಪಿ.ಶರ್ಮ ಪ್ರಸ್ತುತ ಎಸ್.ಜೆ.ಆರ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ ವ್ಯಾಸಂಗದ ಜೊತೆಗೆ ತಮ್ಮ ನೃತ್ಯದ ಅನ್ವೇಷಣೆಯನ್ನು ಮುಂದುವರಿಸಲು ಉತ್ಸುಕರಾಗಿರುವ ಇವರು ಭವಿಷ್ಯದಲ್ಲಿ ಈ ಕಲಾ ಪ್ರಕಾರಕ್ಕೆ ಗಣನೀಯವಾದ ಕೊಡುಗೆ ನೀಡುವಲ್ಲಿ ಕಾರ್ಯಪ್ರವೃತರಾಗಿದ್ದಾರೆ.
ಕುಮಾರಿ ಪ್ರಜ್ಞಾ ಪಿ.ಶರ್ಮ ಇವರು ಭರತನಾಟ್ಯ ಮತ್ತು ಕೂಚಿಪುಡಿಯಲ್ಲಿ ಶಾಲಾ ಮತ್ತು ಕಾಲೇಜು ಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ ಹಾಗೂ ಅಂತರರಾಷ್ಟ್ರೀಯ ವಿಶ್ವ ನೃತ್ಯ ಚಾಂಪಿಯನ್‌ನಲ್ಲಿ ದ್ವಿತೀಯ ಸ್ಥಾನದಲ್ಲಿ (ಕೂಚಿಪುಡಿ) ವಿಜೇತರಾಗಿದ್ದಾರೆ.
ಕೆ.ಎಸ್.ಇ.ಇ.ಬಿ. ಬೋರ್ಡ್ ನಡೆಸಿದ ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಮತ್ತು ಕೂಚಿಪುಡಿ ಜೂನಿಯರ್ ಪರೀಕ್ಷೆಯನ್ನು (ರಾಜ್ಯದಲ್ಲಿ 4 ನೇ ರ್ಯಾಂಕ್) ಯಶಸ್ವಿಯಾಗಿ ಪೂರ್ಣಗೊಳಿಸಿ, ಈ ವರ್ಷ ಕೂಚಿಪುಡಿ ಸೀನಿಯರ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಇವರ ಸಾಧನೆಗೆ ಪ್ರತಿಷ್ಠಿತ ‘ಹವ್ಯಕ ಪಲ್ಲವ ಪುರಸ್ಕಾರ’, ಶ್ರೀ.ರಾಘವೇಶ್ವರ ಭಾರತೀ ಸ್ವಾಮೀಜಿ ಶ್ರೀಗಳಿಂದ ಪ್ರತಿಭಾ ಪುರಸ್ಕಾರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಡೆಸಿದ ಶಿಷ್ಯವೇತನ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಿದ್ಯಾರ್ಥಿವೇತನ (ಭರತನಾಟ್ಯ)ಕ್ಕೆ 2021ನೇ ಸಾಲಿನಲ್ಲಿ ಆಯ್ಕೆ, ಕಿಶೋರ ಪ್ರತಿಭೆಯಲ್ಲಿ ಪ್ರಥಮ ಸ್ಥಾನ, ಸರ್ಕಾರ ನಡೆಸಿದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸ್ಥಾನ, ಸಂಸ್ಕೃತ ಸಂಘ ಆಯೋಜಿಸಿದ ಗೀತಾ ಗೋವಿಂದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ದೀಕ್ಷಾ ಪೂರ್ಣಗೊಳಿಸುವಿಕೆಯಲ್ಲಿ ಪ್ರಥಮ ಸ್ಥಾನ, ಚಿಗುರು ಕಲರವ ಮತ್ತು ಚಾರಿಟೇಬಲ್ ಟ್ರಸ್ಟ್ ನಡೆಸಿದ ಹೆಜ್ಜೆ ಗೆಜ್ಜೆ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಅವರ ಕೆಲವು ಪ್ರಮುಖ ಪ್ರದರ್ಶನಗಳು
- 6ನೇ ಕರಕುಶಲ ಮತ್ತು ಸಾಂಸ್ಕೃತಿಕ ಗ್ರಾಮದ ಪಯುಕ್ತ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ, ಬೆಂಗಳೂರಿನ ಶ್ರೀ ಅಖಿಲ ಹವ್ಯಕ ಮಹಾಸಭಾದಲ್ಲಿ, ಲಾಸ್ಯ ವರ್ಧನ ಟ್ರಸ್ಟ್ ನಡೆಸಿದ ಕೇಶವ ಕಲ್ಪದಲ್ಲಿ,
- ಚೆನ್ನಪಟ್ಟಣದ ಯುವ ಸೌರಭದಲ್ಲಿ ಮತ್ತು ಬೆಂಗಳೂರಿನ ಕಲಾ ಸ್ಪಂದನದಲ್ಲಿ ಇತ್ಯಾದಿ ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ನಾಟ್ಯಗುರು ವಿದುಷಿ ಶ್ರೀಮತಿ ಅರ್ಚನಾ ಪುಣ್ಯೇಷ್
ನಾಟ್ಯಗುರು ವಿದುಷಿ ಶ್ರೀಮತಿ ಅರ್ಚನಾ ಪುಣ್ಯೇಷ್ ಇವರು ಒಬ್ಬ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯದ ಅತ್ಯುತ್ತಮ ನೃತ್ಯ ಗುರುವಾಗಿದ್ದು, ಪ್ರಸಿದ್ದ ನೃತ್ಯ ಗುರುಗಳಾದ ಶ್ರೀಮತಿ ಸುನಂದಾ ದೇವಿ, ಶ್ರೀಮತಿ ಧರಣಿ ಕಶ್ಯಪ್ ಮತ್ತು ಡಾ. ಸುಪರ್ಣ ವೆಂಕಟೇಶ್ ಇವರ ನೃತ್ಯ ಗರಡಿಯಲ್ಲಿ ಪಳಗಿದ್ದಾರೆ. ಇವರು ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿ, ಭರತನಾಟ್ಯ ರಂಗಪ್ರವೇಶ ಮಾಡಿದರು. ಉದಯಪುರ ಮತ್ತು ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯುವ ಉತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವರ ಈ ಸಾಧನೆಯಿಂದ ದೇಶ ಮತ್ತು ಹೊರದೇಶಗಳಲ್ಲಿ ನೃತ್ಯ ಪ್ರಸ್ತುತಪಡಿಸುವ ಅವಕಾಶ ಲಭಿಸಿತು.
2012ರಲ್ಲಿ ಬೆಂಗಳೂರಿನಲ್ಲಿ “ಜತಿನ್ ಅಕಾಡೆಮಿ ಆಫ್ ಡ್ಯಾನ್ಸ್” ಎಂಬ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿ ಈಗ ಕೂಚಿಪುಡಿ ಮತ್ತು ಭರತನಾಟ್ಯಂ ಎರಡೂ ನೃತ್ಯ ಪ್ರಕಾರಗಳಲ್ಲಿ ತರಬೇತಿ ನೀಡುತ್ತಿದ್ದಾರೆ.
ದೇಶ ವಿದೇಶಗಳ ಅದರಲ್ಲೂ ಅಮೇರಿಕಾದ 10 ಪ್ರಮುಖ ನಗರಗಳ ಮತ್ತು ಯುರೋಪಿಯನ್ ರಾಷ್ಟ್ರಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಯಶಸ್ವೀ ಪ್ರದರ್ಶನಗಳನ್ನು ನೀಡಿದ್ದಾರೆ.