ಮೂಲ್ಕಿ : ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸಮಹರ್ಷಿ ವೇದಪಾಠ ಶಾಲೆಯಲ್ಲಿ ಮಧ್ವ ಸಿದ್ಧಾಂತ ತಂತ್ರಸಾರದ ತಾಳೆಗರಿಯ ಮೂಲ ಪಠ್ಯವನ್ನು ವಿಶೇಷ ತಂತ್ರಜ್ಞಾನದ ಮೂಲಕ ಪುಸ್ತಕದಲ್ಲಿ ಪ್ರಕಟಿಸುವ ಮೂಲಕ ಮಾಧ್ವ ತಂತ್ರಸಾರದಿಂದ ಅರ್ಚಿತ ದೇವಾಲಯಗಳಿಗೆ ನೀಡುವ ಧ್ಯೇಯದಿಂದ ‘ಮೆಮೆರಾಂಡಮ್ ಆಫ್ ಅಂಡರ್ ಸ್ಟ್ಯಾಂಡಿಂಗ್’ ಕಾರ್ಯಕ್ರಮ ದಿನಾಂಕ 24-07-2023ರಂದು ನಡೆಯಿತು.
ಅಮೆರಿಕಾದಲ್ಲಿ ವಿಜ್ಞಾನಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ತಾರಾ ಪ್ರಕಾಶನ ಮುಖ್ಯಸ್ಥ ಪ್ರೊ.ಮುಕುಂದ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ “ಸನಾತನ ಭಾರತೀಯ ಜ್ಞಾನ ಭಂಡಾರಗಳು ತಾಳೆಗರಿಯಲ್ಲಿ ಅಡಕವಾಗಿದ್ದು, ಅವುಗಳನ್ನು ಅಧ್ಯಯನಕಾರರು ಮತ್ತು ಯುವ ಪೀಳಿಗೆಗೆ ನಿಸ್ವಾರ್ಥವಾಗಿ ಮುಟ್ಟಿಸುವ ಕಾರ್ಯ ಅಗತ್ಯವಿದೆ. ತಾಳೆಗರಿಯಲ್ಲಿ ಬರವಣಿಗೆಯು ಕೊರೆದು ಮಾಡಲ್ಪಟ್ಟಿದ್ದು, ಸುಮಾರು ಸಾವಿರ ವರ್ಷ ಪುರಾತನವಾದ ತಾಳೆಗರಿಗಳು ಶಿಥಿಲವಾಗಿ, ಪುಡಿಯಾಗುವ ಕಾರಣ ವಿಶೇಷ ಕಾಂತೀಯ ತಂತ್ರಜ್ಞಾನದ ಮೂಲಕ ವಿವಿಧ ಆಯಾಮಗಳಲ್ಲಿ ಅವುಗಳ ಪಡಿಯಚ್ಚು ಪಡೆದು ವಿದ್ವಾಂಸರಿಂದ ಅಧ್ಯಯನ ನಡೆಸಿದ ಬಳಿಕ ಮುದ್ರಿಸಲಾಗುತ್ತದೆ. ಭಾರತೀಯ ತಾಳೆಗರಿಗಳು ಕೇವಲ ಶಾಸ್ತ್ರಕ್ಕೆ ಸೀಮಿತವಾಗದೆ ವಿಜ್ಞಾನ ತಂತ್ರಜ್ಞಾನ ಹಾಗೂ ವೈದ್ಯಕೀಯ ಅಗಾಧ ಜ್ಞಾನವನ್ನು ತನ್ನೊಳಗೆ ಅಡಕಗೊಳಿಸಿದೆ. ಹೆಚ್ಚಿನವು ಓದಲಾಗದೆ ಹಿರಿಯರ ಮನೆ ಮಹಡಿ ಸೇರಿದ್ದರೆ ಇನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಸಂಗ್ರಹಿಸಿದ್ದ ತಾಳೆಗರಿ ಸಂಗ್ರಹವು ಆಕ್ಸ್ ವರ್ಡ್ ಸಹಿತ ಇಂಗ್ಲೆಂಡ್ ಹಾಗೂ ಹಾಗೂ ಅಮೆರಿಕಾ ಯುನಿವರ್ಸಿಟಿಗಳಲ್ಲಿದೆ. ಈ ಜ್ಞಾನ ಭಂಡಾರವು ಭಾರತೀಯ ಯುವ ಜನತೆಗೆ ಲಭ್ಯವಾಗಬೇಕು ಎಂಬ ಸ್ವಾರ್ಥರಹಿತ ಚಿಂತನೆಯಲ್ಲಿ ತಾರಾ ಪ್ರಕಟಣಾಲಯ ದುಡಿಯುತ್ತಿದೆ” ಎಂದರು.
ಮೂಲ್ಕಿ ದೇವಳದ ಆಡಳಿತ ಮಂಡಳಿ ಸದಸ್ಯ ಅತುಲ್ ಕುಡ್ವಾ ಮಾಹಿತಿ ನೀಡಿ, “ಮೂಲ್ಕಿ ದೇವಳ ಸುಮಾರು 600 ವರ್ಷ ಇತಿಹಾಸವುಳ್ಳ, ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ವಿಜಯೇಂದ್ರ ತೀರ್ಥ ಸ್ವಾಮೀಜಿ ಹೆಸರಿನಲ್ಲಿ ಸಂಸ್ಕೃತ ಶಾಲೆ ಮತ್ತು ವೇದ ಪಾಠ ಶಾಲೆ ನಡೆಯುತ್ತಿತ್ತು ಎಂಬುದಕ್ಕೆ ದೇವಳದಲ್ಲಿ ಪೂರ್ವ ದಾಖಲೆಗಳು ಲಭ್ಯವಾಗಿವೆ. ದೇವಳ ಹಾಗೂ ವೈದಿಕರಲ್ಲಿ ಸಂಗ್ರಹಿಸಿದ ತಾಳೆಗರಿಗಳಲ್ಲಿ ಅಡಕವಾಗಿರುವ ಬಹಳಷ್ಟು ಮಾಹಿತಿ ಸಂಗ್ರಹವನ್ನು ತಾರಾ ಪ್ರಕಟಣಾಲಯದ ಸಹಕಾರದಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಿ, ಮಾಧ್ವ ತಂತ್ರಸಾರ ದೇವಾಲಯಗಳಿಗೆ ಮೂಲ್ಕಿ ದೇವಳದ ವತಿಯಿಂದ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ” ಎಂದರು.
ಪ್ರೊ.ಮುಕುಂದ್ ಅವರನ್ನು ಗೌರವಿಸಲಾಯಿತು. ಶ್ರೀವ್ಯಾಸ ಮಹರ್ಷಿ ವೇದಪಾಠ ಶಾಲೆಯ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಪ್ರಥ್ವೀಶ ಭಟ್, ಸಂಚಾಲಕ ಎಂ. ಪಾಂಡುರಂಗ ಭಟ್, ಸದಸ್ಯರಾದ ವಿ. ಹರಿಕಾಮತ್, ವಿ. ಶಿವರಾಮ ಕಾಮತ್, ಶ್ಯಾಮ್ ಅನಂತ್, ಅನಿಲ್ ಯಾವಗಲ್ ಇದ್ದರು.