ಬೆಂಗಳೂರು : ಶಾಸ್ತ್ರೀಯ ನೃತ್ಯ ಕ್ಷೇತ್ರ ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಸಹಜವಾಗಿಯೇ ರಂಗಪ್ರವೇಶಗಳೂ ಮೇಲಿಂದ ಮೇಲೆ ಆಗುತ್ತಿರುತ್ತವೆ. ಆದರೆ ಎಲ್ಲೋ ಒಂದು ಕಡೆ ಈ ರಂಗಪ್ರವೇಶಗಳು ಏಕತಾನತೆಯಿಂದ ಕೂಡಿರುತ್ತವೆ ಎಂಬ ಅಸಮಾಧಾನ ಕೂಡ ಕೇಳಿಬರುತ್ತಿರುತ್ತದೆ. ಹಾಗೆಂದು ತೀರಾ ನಿರಾಸೆಗೊಳ್ಳುವ ಅವಶ್ಯಕತೆ ಖಂಡಿತ ಇಲ್ಲ. ಆಗಾಗೊಮ್ಮೊಮ್ಮೆ ವಿಶೇಷ ವಿನ್ಯಾಸದ ರಂಗಪ್ರವೇಶಗಳೂ ವೇದಿಕೆಗೆ ಬರುತ್ತಾ ಭರವಸೆಯನ್ನು ಮೂಡಿಸುತ್ತವೆ. ಅಂತಹ ಒಂದು ರಂಗಪ್ರವೇಶ ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.
ಮೈಸೂರಿನ ಶ್ರೀ ದುರ್ಗಾ ನೃತ್ಯ ಅಕಾಡೆಮಿಯ ಕಲಾನಿರ್ದೇಶಕಿ, ಗುರು ಶ್ರೀಮತಿ ಶ್ರೀವಿದ್ಯಾ ಶಶಿಧರ್, ತಮ್ಮ ಪ್ರತಿಭಾವಂತ ಶಿಷ್ಯೆ ಶ್ರೀಮತಿ ಪ್ರಣತಿ ಎಸ್. ವಾಟಾಳ್ ಅವರ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 23-07-2023ರಂದು ನಡೆಯಿತು. ಗುರುವಾಗಿ ಶ್ರೀವಿದ್ಯಾ ಅವರಿಗೂ ಇದು ರಂಗಪ್ರವೇಶವೇ. ಏಕೆಂದರೆ ಅವರ ಮಾರ್ಗದರ್ಶನದ ಮೊದಲ ರಂಗಪ್ರವೇಶ ಇದು.
ಆದರೆ ಪ್ರದರ್ಶನದ ಒಟ್ಟಂದವನ್ನು ಕಂಡಾಗ, ಪಾಂಡಿತ್ಯಪೂರ್ಣ ಗುರುಗಳ ಮಾರ್ಗದರ್ಶನದಲ್ಲಿ ಅನುಭವೀ ನರ್ತಕಿಯೊಬ್ಬಳ ಪ್ರದರ್ಶನದಂತಿತ್ತು ಅಂದಿನ ಕಾರ್ಯಕ್ರಮ.
ಮೂರು ಹೊಸಬಗೆಯ ವಿಭಿನ್ನ ಕೃತಿಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲ ಬಂಧಗಳೂ ಪರಿಚಿತವೇ. ರಾಗಮಾಲಿಕೆಯಲ್ಲಿ ಶ್ರೀ ಶಂಕರ ಭಗವತ್ಪಾದರ ಅರ್ಧನಾರೀಶ್ವರ ಸ್ತೋತ್ರ, ಲಾಲ್ಗುಡಿ ಜಿ. ಜಯರಾಮನ್ ಅವರ ದೇವೀ ನವರಸ ವರ್ಣ (ಅಂಗೈಯರ್ ಕನ್ನಿ), ಫರಸ್ ರಾಗದಲ್ಲಿ ಪಲ್ಲವಿ ದೊರೆಸ್ವಾಮಿಯವರ ಶಿವಪದ, ಆಡೇನಮ್ಮ ಹರುಡು, ಸುಬ್ಬರಾಮ ಅಯ್ಯರ್ ಅವರ ಹುಸೇನಿ ರಾಗದ ಪದಂ, ನೇಟ್ರಂದಿಲ್ ನೇರತ್ತಿಲೆ, ಇವೆಲ್ಲಾ ಪರಿವಿಡಿಯಲ್ಲಿದ್ದ ಬಂಧಗಳು.
ಶ್ರೀಮತಿ ಶ್ರೀವಿದ್ಯಾ ಶಶಿಧರ್ ಅವರ ಸಂದರ್ಭೋಚಿತ ನೃತ್ಯ ಸಂಯೋಜನೆ ಮತ್ತು ಶ್ರೀಮತಿ ಪ್ರಣತಿಯವರ ಪ್ರಬುದ್ಧ ನಿರ್ವಹಣೆ, ಪ್ರದರ್ಶನವನ್ನು ಚೆಂದವಾಗಿಸಿತು. ಶ್ರೀವಿದ್ಯಾ ಅವರ ಖಚಿತ ನಟುವಾಂಗ ನಿರ್ವಹಣೆ ಹಾಗೂ ಜತಿಗಳ ಸಮರ್ಥ ಉಚ್ಚಾರಣೆ ಮೆಚ್ಚೆನಿಸಿತು. ಪ್ರಣತಿ ನೃತ್ತ ಮತ್ತು ಅಭಿನಯ ಎರಡರಲ್ಲೂ ತಾವು ಬಹಳ ಪ್ರತಿಭಾವಂತರು ಎಂಬುದನ್ನು ಸಾಬೀತುಪಡಿಸಿದರು.
ಅಂದಿನ ಪ್ರಸ್ತುತಿ ಆರಂಭವಾದದ್ದು ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಅವರ ರಚನೆಯ ಮೇಳಪ್ರಾಪ್ತಿಯೊಂದಿಗೆ. ಮೇಳಪ್ರಾಪ್ತಿ ಭರತನ ನಾಟ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಶುದ್ಧ ನೃತ್ಯ ವಿನ್ಯಾಸ. ಶೊಲ್ಲುಕಟ್ಟುಗಳ ವಿಶೇಷ ವಿನ್ಯಾಸ. ಈ ಮೇಳಪ್ರಾಪ್ತಿಯ ಬಳಕೆ ನೃತ್ಯ ಕ್ಷೇತ್ರದಲ್ಲಿ ವಿರಳವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಂಜುನಾಥ್ ಅವರು ತಮ್ಮ ಅಧ್ಯಯನದ ಆಧಾರದಲ್ಲಿ ಒಂದು ಸುಂದರ ವಿನ್ಯಾಸವನ್ನು ರೂಪಿಸಿದ್ದಾರೆ. ಈ ವಿನ್ಯಾಸಕ್ಕೆ ಅವರು ಆದಿತಾಳ, ಮಿಶ್ರಜಾತಿ ಏಕತಾಳ, ಚತುರಶ್ರ ಜಾತಿ ರೂಪಕ ತಾಳ, ಖಂಡಜಾತಿ ಏಕ ತಾಳಗಳನ್ನು ಬಳಸಿಕೊಂಡಿದ್ದಾರೆ. ಶೊಲ್ಲುಗಳ ಉಚ್ಚಾರವೇ ಕೇಳಲು ಆನಂದವನ್ನು ನೀಡುತ್ತದೆ. ವಿವಿಧ ತಾಳಗಳ ಬಳಕೆ ಉಚ್ಚಾರಣೆಗೆ ಘನತೆಯನ್ನು ತಂದಿವೆ. ಸಹಜವಾಗಿಯೇ ಈ ವಿನ್ಯಾಸಕ್ಕೆ ನೃತ್ಯ ಸಂಯೋಜನೆ ಮತ್ತು ನರ್ತನ ಸವಾಲಿನ ಕೆಲಸ. ಆದರೆ ಗುರು ಶ್ರೀಮತಿ ಶ್ರೀವಿದ್ಯಾ ಶಶಿಧರ್ ಬಹಳ ಚತುರತೆಯಿಂದ ಈ ಮೇಳ ಪ್ರಾಪ್ತಿಗೆ ನೃತ್ಯ ಸಂಯೋಜಿಸಿದ್ದರು. ಶ್ರೀಮತಿ ಪ್ರಣತಿ ಅಷ್ಟೇ ಲವಲವಿಕೆಯಿಂದ ನರ್ತಿಸಿದರು.
ಅಂದಿನ ಪ್ರಸ್ತುತಿಯ ಮತ್ತೊಂದು ಅಪರೂಪದ ಬಂಧ ಅಲರಿಪು. ಮಂಜುನಾಥ್ ಪುತ್ತೂರು ದೇಸೀ ತಾಳಮಾಲಿಕೆಯಲ್ಲಿ ಈ ಅಲರಿಪು ವಿನ್ಯಾಸಗೊಳಿಸಿದ್ದಾರೆ. ಲಯ ಪರಂಪರೆಯಲ್ಲಿ ಸುಳಾದಿ ಸಪ್ತತಾಳಗಳನ್ನು ಪುರಾತನ ತಾಳಗಳು ಎಂದು ಗುರುತಿಸಲಾಗಿದೆ. ಆದರೆ ದೇಸೀತಾಳಗಳು ಅವುಗಳಿಗಿಂತ ಪುರಾತನದವು ಎಂಬುದು ವಿಶೇಷ. ಮಾರ್ಗೀ ತಾಳಗಳೂ ಅಷ್ಟೇ ಪುರಾತನ ಹಿನ್ನೆಲೆಯನ್ನು ಹೊಂದಿವೆ. ಇವಲ್ಲದೆ ಚಂದತಾಳ ಮತ್ತು ನವಸಂಧಿತಾಳ ಎಂಬ ಮತ್ತೂ ಕೆಲವು ಪ್ರಕಾರಗಳೂ ಬಳಸಲ್ಪಡುತ್ತಿದ್ದವು ಎಂಬ ಐತಿಹ್ಯವಿದೆ. ನವಸಂಧಿ ತಾಳಗಳನ್ನು, ದೇವಾಲಯ ನೃತ್ಯ ಪದ್ಧತಿಯಲ್ಲಿ ಅಷ್ಟ ದಿಗ್ಬಂಧನ ಮಾಡುವಾಗ, ಬ್ರಹ್ಮ ಸ್ತುತಿ ಮತ್ತು ದಿಕ್ಪಾಲಕ ಸ್ತುತಿಗೆ ಬಳಸಲಾಗುತ್ತಿತ್ತು. ಈ ಎಲ್ಲ ಅಂಶಗಳನ್ನು ಅಧ್ಯಯನ ಮಾಡಿರುವ ಮಂಜುನಾಥ್ ಅಷ್ಟೋತ್ತರ ತಾಳಪದ್ಧತಿಯ ಪ್ರಕಾರ ಇರುವ 103 ದೇಸೀ ತಾಳಗಳಲ್ಲಿ ಮುಕುಂದ ತಾಳ, ಅಭಂಗ ತಾಳ ಮತ್ತು ರತಿ ತಾಳಗಳನ್ನು ತಿಶ್ರ ನಡೆಯಲ್ಲಿ ಬಳಸಿಕೊಂಡು ಈ ಅಲರಿಪು ವಿನ್ಯಾಸಗೊಳಿಸಿದ್ದಾರೆ. ಇಂತಹ ಒಂದು ಕ್ಲಿಷ್ಟ ಪ್ರಯೋಗವನ್ನು ಬಹಳ ಸುಂದರವಾಗಿ ನೃತ್ಯಕ್ಕೆ ಗುರು ಶ್ರೀಮತಿ ಶ್ರೀವಿದ್ಯಾ ಶಶಿಧರ್ ಅಳವಡಿಸಿದ್ದರು. ಲಯದಲ್ಲಿ ವಿಶೇಷ ಪರಿಣತಿ ಹೊಂದಿರುವ ಪ್ರಣತಿ ಬಹಳ ಅಚ್ಚುಕಟ್ಟಾಗಿ ಸಾದರಪಡಿಸಿದರು.
ಅಂದಿನ ಪ್ರದರ್ಶನದ ಕೊನೆಯ ತಿಲ್ಲಾನವನ್ನೂ ಮಂಜುನಾಥ್ ಪುತ್ತೂರು, ಖಂಡಜಾತಿ ಧೃವ ತಾಳದಲ್ಲಿ ಸಂಯೋಜಿಸಿದ್ದು, ದೇವಿಯ ಕುರಿತಾದ ಅವರ ಸಾಹಿತ್ಯ ಕೂಡ ಸರಳವಾದರೂ ಸುಂದರವಾಗಿತ್ತು. ಇನ್ನು ವರ್ಣದಲ್ಲಿ ಅಳವಡಿಸಲಾಗಿದ್ದ ಎಲ್ಲ ಜತಿಗಳನ್ನೂ ಮಂಜುನಾಥ್ ಅವರೇ ವಿನ್ಯಾಸಗೊಳಿಸಿದ್ದರು. ಅದು ದೇವಿ ನವರಸ ವರ್ಣವಾದ್ದರಿಂದ, ಮೊದಲ ತ್ರಿಕಾಲ ಜತಿಯ ಸಂಯೋಜನೆಯಲ್ಲಿ ದೇವಿನಾಮಗಳನ್ನು ಶೊಲ್ಲುಕಟ್ಟುಗಳಿಗೆ ಹೊಂದಿಸಿದ್ದ ಮಂಜುನಾಥರ ಚಿಂತನೆ ಮೆಚ್ಚೆನಿಸಿತು.
ಒಟ್ಟಿನಲ್ಲಿ ಒಂದು ವಿಶೇಷ ಅನುಭವವನ್ನು ಕಟ್ಟಿಕೊಟ್ಟ ಸುಂದರ ರಂಗಪ್ರವೇಶ ಅದು.
- ಸುಗ್ಗನಹಳ್ಳಿ ಷಡಕ್ಷರಿ,
ಶಾಸ್ತ್ರೀಯ ನೃತ್ಯ ಕಲಾವಿದ, ನೃತ್ಯ ವಿಮರ್ಶಕ, ಸಾಹಿತಿ ಮತ್ತು ನಿರೂಪಕ.