ಮೈಸೂರು : ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ.
ತನ್ನ ಚಟುವಟಿಕೆಯ ಭಾಗವಾಗಿ ಕನ್ನಡ ಆಧುನಿಕ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ ರಂಗ ಸಂಘಟಕ, ಚಿಂತಕ ಕೆ.ವಿ. ಸುಬ್ಬಣ್ಣ ಅವರ ಸ್ಮರಣಾರ್ಥ ‘ಸುಬ್ಬಣ್ಣ ಸ್ಮರಣೆ’ ಕಾರ್ಯಕ್ರಮವನ್ನು ಪ್ರತಿವರ್ಷ ಜುಲೈ ತಿಂಗಳಲ್ಲಿ ನಡೆಸುತ್ತಾ ಬಂದಿದ್ದು, 20232ನೇ ಸಾಲಿನ ನಟನದ ಜುಲೈ ತಿಂಗಳ ಎಲ್ಲಾ ಕಾರ್ಯಕ್ರಮಗಳನ್ನು ಸುಬ್ಬಣ್ಣರ ಸ್ಮರಣೆಗೆ ಅರ್ಪಿಸಿದೆ. ಜುಲೈ 01ರಿಂದ ಆರಂಭವಾಗಿ ಪ್ರತಿ ವಾರಾಂತ್ಯಗಳಲ್ಲಿ ವಿವಿಧ ನಾಟಕಗಳ ಪ್ರದರ್ಶನ, ರಂಗ ಕಾರ್ಯಾಗಾರ ನಡೆದಿದ್ದು, 2023ರ ಸುಬ್ಬಣ್ಣ ಸ್ಮರಣೆಯ ಕಡೆಯ ಕಾರ್ಯಕ್ರಮವಾಗಿ ಜುಲೈ 30ರಂದು ಬೆಳಗ್ಗೆ 10ಕ್ಕೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ‘ರಂಗಶಿಕ್ಷಣ; ವರ್ತಮಾನ ಮತ್ತು ಭವಿಷ್ಯದ ಅವಕಾಶಗಳು’ ಎಂಬ ವಿಷಯದ ಕುರಿತು ರಂಗಚರ್ಚೆಯನ್ನು ಆಯೋಜನೆ ಮಾಡಲಾಗಿದೆ.
ಈ ರಂಗಚರ್ಚೆಯಲ್ಲಿ ಹಿರಿಯ ರಂಗಕರ್ಮಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ರಾಜಪ್ಪ ದಳವಾಯಿ, ಬೆಂಗಳೂರಿನ ಪಿ.ಇ.ಎಸ್ ವಿಶ್ವವಿದ್ಯಾನಿಲಯದ ರಂಗಭೂಮಿ ವಿಭಾಗದ ಮುಖ್ಯಸ್ಥರಾದ ಡಾ.ಸುಷ್ಮಾ ಎಸ್ ವಿ, ಕಲಾವಿದರು ಹಾಗೂ ರಂಗ ಶಿಕ್ಷಕರೂ ಆದ ಶ್ರೀ ಸಂತೋಷ್ ಗುಡ್ಡಿಯಂಗಡಿ ಅವರು ವಿಷಯದ ಕುರಿತು ಮಾತನಾಡಲಿದ್ದು, ಪ್ರಖ್ಯಾತ ರಂಗತಜ್ಞರು, ರಂಗ ಶಿಕ್ಷಕರು ಮತ್ತು ಹೆಗ್ಗೋಡಿನ ನೀನಾಸಂನ ರಂಗ ಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲರಾದ ಶ್ರೀ ಬಿ.ಆರ್.ವೆಂಕಟರಮಣ ಐತಾಳ ಅವರು ರಂಗಚರ್ಚೆಯನ್ನು ಸಮನ್ವಯಗೊಳಿಸಲಿದ್ದಾರೆ. ಈ ಚರ್ಚೆಯ ನಿರೂಪಣೆಯನ್ನು ರಂಗಕರ್ಮಿ ಶ್ರೀ ಎನ್.ಧನಂಜಯ ಅವರು ನಡೆಸಿಕೊಡಲಿದ್ದು, ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘ ಸಮೀರ ಅವರು ಪ್ರಾಸ್ತಾವಿಕ ಮಾತನಾಡಲಿದ್ದಾರೆ. ನಟನದ ನಿರ್ಮಾತೃ ಶ್ರೀ ಮಂಡ್ಯ ರಮೇಶ್ ಅವರು ಉಪಸ್ಥಿತರಿದ್ದು, ಇದೇ ಸಂದರ್ಭದಲ್ಲಿ ನಟನ ರಂಗಶಾಲೆಯ 2023-24ನೇ ಸಾಲಿನ ರಂಗಭೂಮಿ ಡಿಪ್ಲೊಮಾದ ಹೊಸ ವಿದ್ಯಾರ್ಥಿಗಳ ‘ರಂಗ ಸ್ವಾಗತ’ ಸಮಾರಂಭವೂ ನಡೆಯಲಿದೆ.
ರಂಗಾಸಕ್ತರಿಗೆ ಆತ್ಮೀಯವಾದ ಸ್ವಾಗತ.